
ನೆಟ್‌ಫ್ಲಿಕ್ಸ್ ವಿರುದ್ಧ ಷೇರುದಾರನಿಂದಲೇ ಕೇಸ್- ಕಾರಣ ಇದು
ಸ್ಯಾನ್ ಫ್ರಾನ್ಸಿಸ್ಕೋ, ಮೇ 5: ಆನ್‌ಲೈನ್‌ನಲ್ಲಿ ಜನಪ್ರಿಯ ಮನರಂಜನಾ ತಾಣವಾಗಿರುವ ನೆಟ್‌ಫ್ಲಿಕ್ಸ್ ಇತ್ತೀಚೆಗೆ ತನ್ನ ಸಬ್‌ಸ್ಕ್ರೈಬರ್‌ಗಳ ಸಂಖ್ಯೆ ಇಳಿಮುಖವಾಗಿದೆ ಎಂದು ಹೇಳಿಕೊಂಡಿತ್ತು. ಇದಾದ ಬೆನ್ನಲ್ಲೇ ನೆಟ್‌ಫ್ಲಿಕ್ಸ್‌ನ ಷೇರು ಮೌಲ್ಯ ಕುಸಿಯತೊಡಗಿದೆ. ಇದೀಗ ಅದರ ಷೇರುದಾರರೊಬ್ಬರು ಕೋರ್ಟ್ ಮೊರೆ ಹೋಗಿದ್ದಾರೆ. ನೆಟ್‌ಫ್ಲಿಕ್ಸ್ ವಿರುದ್ಧ ಕ್ಲಾಸ್ ಆ್ಯಕ್ಷನ್ ಮೊಕದ್ದಮೆ (Class Action Lawsuit) ಹೂಡಿದ್ದಾರೆ.
ಅಮೆರಿಕದ ಸ್ಯಾನ್ ಫ್ರಾನ್ಸಿಸ್ಕೋದ ಫೆಡರಲ್ ಕೋರ್ಟ್‌ನಲ್ಲಿ ಮೊನ್ನೆ ಮಂಗಳವಾರ ದಾವೆ ಹಾಕಿರುವುದು ತಿಳಿದುಬಂದಿದೆ. ಸಬ್‌ಸ್ಕ್ರೈಬರ್‌ಗಳ ಸಂಖ್ಯೆ ವಿಚಾರದಲ್ಲಿ ಕಂಪನಿಯು ಹೂಡಿಕೆದಾರರಿಗೆ ಯಾವುದೇ ಮಾಹಿತಿ ನೀಡಲಿಲ್ಲ ಎಂಬುದು ಈ ಮೊಕದ್ದಮೆಯಲ್ಲಿ ಮಾಡಲಾಗಿರುವ ಪ್ರಮುಖ ಆರೋಪವಾಗಿದೆ.
3 ತಿಂಗಳಲ್ಲಿ 2 ಲಕ್ಷ ಗ್ರಾಹಕರನ್ನು ಕಳೆದುಕೊಂಡ Netflix; ಏನು ಕಾರಣ?
ಜನವರಿಯಿಂದ ಆರಂಭವಾಗುವ ತ್ರೈಮಾಸಿಕ ಅವಧಿಯಲ್ಲಿ ನೆಟ್‌ಫ್ಲಿಕ್ಸ್ ಸಬ್‌ಸ್ಕ್ರೈಬರ್‌ಗಳ ಸಂಖ್ಯೆ 2 ಲಕ್ಷದಷ್ಟು ಕಡಿಮೆಯಾಗಿದೆ ಎಂದು ಹೇಳಿತ್ತು. ಅಂದರೆ, ಅದರ ಒಟ್ಟು ಗ್ರಾಹಕರ ಸಂಖ್ಯೆಯಲ್ಲಿ ಕಡಿಮೆ ಆಗಿದ್ದು ಕೇವಲ ಶೇ. 0.1 ಮಾತ್ರ. ಆದರೆ, ಮುಂಬರುವ ತ್ರೈಮಾಸಿಕ ಅವಧಿಯಲ್ಲಿ 20 ಲಕ್ಷ ಗ್ರಾಹಕರು ಕೈತಪ್ಪಬಹುದು ಎಂದೂ ನೆಟ್‌ಫ್ಲಿಕ್ಸ್ ಅಂದಾಜು ಮಾಡಿದೆ. ಇದು ಷೇರುಪೇಟೆಯಲ್ಲಿ ನೆಟ್‌ಫ್ಲಿಕ್ಸ್ ನಡುಗಲು ಕಾರಣವಾಗಿದೆ. ಸಬ್‌ಸ್ಕ್ರೈಬರ್‌ಗಳ ಸಂಖ್ಯೆ ಕುಸಿಯುತ್ತಿರುವುದು ಹೂಡಿಕೆದಾರರ ವಿಶ್ವಾಸ ಕುಗ್ಗಿಸಿದಂತಾಗಿ ನೆಟ್‌ಫ್ಲಿಕ್ಸ್ ಷೇರುಗಳು ಒಂದೇ ವಾರದಲ್ಲಿ ಕಡಿಮೆ ಬೆಲೆಗೆ ಬಿಕರಿಯಾದಂತಿದೆ.
ನೆಟ್‌ಫ್ಲಿಕ್ಸ್‌ನ ಸಬ್‌ಸ್ಕ್ರೈಬರ್‌ಗಳು ತಮ್ಮ ಅಕೌಂಟ್ ಅನ್ನು ಬೇರೆಯವರೊಂದಿಗೆ ಹಂಚಿಕೊಳ್ಳುತ್ತಿರುವುದು ಹಾಗು ಬೇರೆಯವರಿಂದ ಪೈಪೋಟಿ ಇರುವುದು ಇದಕ್ಕೆ ಕಾರಣ ಎಂದು ಕಂಪನಿ ಹೇಳಿಕೊಂಡಿದೆ. ಆದರೆ, ಈ ವಿಚಾರವನ್ನು ಕಂಪನಿಯು ಹೂಡಿಕೆದಾರರಿಗೆ ಮುಂಚಿತವಾಗಿ ಹೇಳಲಿಲ್ಲ ಎಂಬುದು ಫೆಡರಲ್ ಕೋರ್ಟ್‌ನಲ್ಲಿ ಸಲ್ಲಿಸಲಾಗಿರುವ ದಾವೆಯಲ್ಲಿ ದೂರಲಾಗಿದೆ.
IPL media rights : 50 ಸಾವಿರ ಕೋಟಿ IPL ಬಿಡ್ಡಿಂಗ್ ರೇಸ್‌ನಲ್ಲಿ Apple, FB, Amazon, Netflix?
"ಕಂಪನಿಯ ವ್ಯವಹಾರ, ಕಾರ್ಯಾಚರಣೆ ಮತ್ತು ಅಂದಾಜು ಬಗ್ಗೆ ನೀಡಲಾಗಿರುವ ಸಕಾರಾತ್ಮಕ ಹೇಳಿಕೆಗಳು ವಾಸ್ತವಕ್ಕೆ ದೂರವಾಗಿವೆ" ಎಂಬ ಅಂಶವನ್ನು ಮೊಕದ್ದಮೆಯಲ್ಲಿ ತಿಳಿಸಲಾಗಿದೆ.
ಏನಿದು ಕ್ಲಾಸ್ ಆ್ಯಕ್ಷನ್ ದಾವೆ?
ಒಂದು ಕಂಪನಿಯಿಂದ ಸಮಾನವಾಗಿ ಪೀಡಿತರಾದ ಜನರ ಪರವಾಗಿ ಒಬ್ಬ ವ್ಯಕ್ತಿ ಆ ಕಂಪನಿ ವಿರುದ್ಧ ಹಾಕಲಾಗುವ ದಾವೆ ಇದು. ಇಲ್ಲಿ ನೆಟ್‌ಫ್ಲಿಕ್ಸ್‌ನ ಎಲ್ಲಾ ಷೇರುದಾರರಿಗೂ ಸಮಾನವಾಗಿ ಅನ್ಯಾಯವಾಗಿದೆ. ಇತರ ಷೇರುದಾರರ ಪರವಾಗಿ ಒಬ್ಬ ಷೇರುದಾರ ಲಾಸ್ಯೂಟ್ ಹಾಕಿದ್ದಾರೆ. ಗ್ಲಾನ್ಸಿ ಪ್ರಾಂಗೇ ಅಂಡ್ ಮುರೆ ಎಂಬ ಗ್ರೂಪ್‌ನ ವಕೀಲರು ಈ ಷೇರುದಾರನ ಪರವಾಗಿ ಫೆಡರಲ್ ಕೋರ್ಟ್‌ನಲ್ಲಿ ಮೊಕದ್ದಮೆಗೆ ಅರ್ಜಿ ಹಾಕಿದ್ದಾರೆ.

ನೆಟ್‌ಫ್ಲಿಕ್ಸ್ ಒಟ್ಟು 10 ಕೋಟಿ ಗ್ರಾಹಕರನ್ನ ಹೊಂದಿದೆ. ಇವರಲ್ಲಿ ಅನೇಕರು ಪಾಸ್‌ವರ್ಡ್ ಹಂಚಿಕೊಳ್ಳುತ್ತಿರುವುದರಿಂದ ಆದಾಯದಲ್ಲಿ ಕಡಿಮೆ ಆಗಿದೆ. ಒಬ್ಬ ಗ್ರಾಹಕ ತನ್ನ ಪಾಸ್‌ವರ್ಡ್ ಅನ್ನು ಇತರರಿಗೆ ಹಂಚಿದರೆ ಇಂತಿಷ್ಟು ಶುಲ್ಕ ಕಟ್ಟಬೇಕೆಂಬ ನಿಯಮ ಸೇರಿದಂತೆ ಹಲವು ಕ್ರಮಗಳನ್ನ ಕೈಗೊಳ್ಳಲು ನೆಟ್‌ಫ್ಲಿಕ್ಸ್ ಯೋಜಿಸಿರುವುದು ತಿಳಿದುಬಂದಿದೆ.
(ಒನ್ಇಂಡಿಯಾ ಸುದ್ದಿ)