ಕೊರೊನಾ ಆರ್ಭಟಕ್ಕೆ ಪ್ರಧಾನಿ ತಲೆದಂಡ, ಸಂಸತ್ ಸದಸ್ಯರ ಮಹತ್ವದ ತೀರ್ಪು
ಕಠ್ಮಂಡು, ಮೇ 10: ನೇಪಾಳ ಪ್ರಧಾನಿ ಕೆ.ಪಿ.ಶರ್ಮಾ ಓಲಿ ಅವರಿಗೆ ಶಾಕ್ ಸಿಕ್ಕಿದೆ. ನೇಪಾಳ ಸಂಸತ್‌ನಲ್ಲಿ ನಡೆದ ವಿಶ್ವಾಸ ಮತ ಯಾಚನೆಯಲ್ಲಿ ಓಲಿ ಸೋಲು ಅನುಭವಿಸಿದ್ದಾರೆ. ಈ ಮೂಲಕ ಬಹುದಿನದ ಗೊಂದಲವೂ ಕೊನೆಗೊಂಡಿದೆ.
ನೇಪಾಳ ಸಂಸತ್ ಕೆಳಮನೆಯಲ್ಲಿ 275 ಸದಸ್ಯರಿದ್ದಾರೆ. ಇವರಲ್ಲಿ ನಾಲ್ವರು ಅಮಾನತುಗೊಂಡಿದ್ದರು. ಹೀಗಾಗಿ ವಿಶ್ವಾಸ ಮತ ಯಾಚನೆಗೆ ಮುಂದಾಗಿದ್ದ ಕೆ.ಪಿ. ಶರ್ಮಾ ಓಲಿಗೆ ಕನಿಷ್ಠವೆಂದರೂ 136 ಮತಗಳು ಬೇಕಾಗಿತ್ತು. ಆದರೆ ಕೆ.ಪಿ.ಶರ್ಮಾ ಓಲಿಗೆ ಸಿಕ್ಕಿದ್ದು ಕೇವಲ 93 ಸಂಸತ್ ಸದಸ್ಯರ ಮತಗಳು. ಈ ಮೂಲಕ ಓಲಿ ಸೋಲು ಕಂಡಿದ್ದಾರೆ.
ವಿಶೇಷವೆಂದರೆ ಓಲಿ ವಿರುದ್ಧ 124 ಮತಗಳು ಬಿದ್ದಿದ್ದು, 15 ಮಂದಿ ನೇಪಾಳ ಸಂಸತ್ ಸದಸ್ಯರು ತಟಸ್ಥರಾಗಿ ಉಳಿದುಬಿಟ್ಟರು. ಇಷ್ಟೆಲ್ಲದರ ನಡುವೆ 3 ವರ್ಷಗಳ ಕೆ.ಪಿ.ಶರ್ಮಾ ಓಲಿ ಆಡಳಿತದ ಸುಖಾಂತ್ಯಕ್ಕೆ ಕೌಂಟ್‌ಡೌನ್ ಶುರುವಾಗಿದ್ದು, ಹಲವು ತಿಂಗಳಿಂದಲೂ ನೇಪಾಳದಲ್ಲಿ ಸೃಷ್ಟಿಯಾಗಿದ್ದ ರಾಜಕೀಯ ಗೊಂದಲ ಬಗೆಹರಿಯುವ ಲಕ್ಷಣ ಗೋಚರಿಸಿದೆ. ಆದರೆ ಮುಂದೆ ಯಾವ ಸಮಸ್ಯೆ ಸೃಷ್ಟಿಯಾಗುತ್ತೋ ಎಂಬ ಆತಂಕ ನೇಪಾಳದ ಪ್ರಜೆಗಳನ್ನ ಕಾಡುತ್ತಿದೆ.

ವಿಶ್ವಾಸ ಮತ ಏಕೆ..?
ಅಂದಹಾಗೆ ಓಲಿ ಪ್ರತಿನಿಧಿಸುತ್ತಿದ್ದ ಸಿಪಿಎನ್-ಯುಎಂಎಲ್ ಹಾಗೂ ಪುಷ್ಪಕಮಲ್ ದಹಾಲ್ (ಪ್ರಚಂಡ) ನೇತೃತ್ವದ ಸಿಪಿಎನ್ (ಮಾವೋವಾದಿ) ಮೈತ್ರಿಕೂಟ ಸರ್ಕಾರವನ್ನ ರಚಿಸಿದ್ದವು. ಆದರೆ ಸರ್ಕಾರಕ್ಕೆ ನೀಡಿದ್ದ ಬೆಂಬಲವನ್ನು ಪ್ರಚಂಡ ನೇತೃತ್ವದ ಪಕ್ಷ ಹಿಂಪಡೆದಿತ್ತು. ಇಷ್ಟಲ್ಲದೆ ಪ್ರಧಾನಿ ಕೆ.ಪಿ.ಶರ್ಮಾ ಓಲಿ ವಿರುದ್ಧವೇ ಸರ್ಕಾರದ ಮಿತ್ರಪಕ್ಷಗಳು ರೊಚ್ಚಿಗೆದ್ದಿದ್ದವು. ರಾಜಕೀಯ ಬಿಕ್ಕಟ್ಟು ಎದುರಿಸುತ್ತಿರುವ ಹಿನ್ನೆಲೆ ವಿಶ್ವಾಸ ಮತ ಯಾಚನೆಗೆ ನಿರ್ಧರಿಸಲಾಗಿತ್ತು. ಪ್ರಧಾನಿ ಓಲಿ ಶಿಫಾರಸಿನ ಹಿನ್ನೆಲೆಯಲ್ಲಿ ಅಧ್ಯಕ್ಷೆ ಬಿಡಿಯಾ ದೇವಿ ಭಂಡಾರಿ ಅಧಿವೇಶನ ಕರೆದಿದ್ದರು. ಓಲಿ ಸಂಸತ್ ಕೆಳಮನೆಯಲ್ಲಿ ವಿಶ್ವಾಸ ಮತಯಾಚನೆ ಮಾಡಿ ಸೋಲು ಕಂಡಿದ್ದಾರೆ.

ಪಕ್ಷದಿಂದಲೇ ಉಚ್ಛಾಟನೆ ಆಗಿದ್ದರು
2017ರಲ್ಲಿ ನೇಪಾಳ ಚುನಾವಣೆಯಲ್ಲಿ ಎಡಪಕ್ಷಗಳ ಮೈತ್ರಿಕೂಟ ಭರ್ಜರಿ ಜಯ ಸಾಧಿಸಿತ್ತು. ಜಯದೊಂದಿಗೆ ನೇಪಾಳದಲ್ಲಿ ರಾಜಕೀಯ ಸ್ಥಿರತೆ ಆಸೆ ಮತ್ತೆ ಚಿಗುರೊಡೆದಿತ್ತು. ಆದರೆ ಆಡಳಿತರೂಢ ಎನ್‌ಸಿಪಿಯಲ್ಲೇ ಓಲಿ ವಿರೋಧಿಗಳು ಹೆಚ್ಚಳವಾಗಿ, ಓಲಿ ಬೆಂಬಲ ಕಳೆದುಕೊಂಡರು. ನೇಪಾಳಿ ಕಮ್ಯೂನಿಸ್ಟ್ ಪಕ್ಷ(ಎನ್‌ಸಿಪಿ)ವನ್ನು ಬಿಟ್ಟು, ಬಂಡಾಯಗಾರ ಮಾವೋವಾದಿಗಳ ಓಲೈಸುತ್ತಾ ಬಂದ ಆರೋಪದಡಿ ಕೆ.ಪಿ ಶರ್ಮಾ ಓಲಿ ಅವರನ್ನು ಜನವರಿಯಲ್ಲಿ ಉಚ್ಛಾಟನೆ ಮಾಡಲಾಗಿತ್ತು. ಕಮ್ಯೂನಿಸ್ಟ್ ಪಕ್ಷ ಅಧಿಕೃತವಾಗಿ ಈ ಸುದ್ದಿ ಪ್ರಕಟಿಸಿತ್ತು. ಇದಾದ ಬಳಿಕ ಪರಿಸ್ಥಿತಿ ಬೂದಿ ಮುಚ್ಚಿದ ಕೆಂಡವಾಗಿತ್ತು.

‘ಕೊರೊನಾ’ ಕಾರಣವೂ ಇದೆ
ಮಹಾಮಾರಿ ಕೊರೊನಾ ಜಗತ್ತನ್ನು ಕಾಡುತ್ತಿರುವಂತೆ ನೇಪಾಳವನ್ನೂ ಕಾಡುತ್ತಿದೆ. ನೇಪಾಳದಲ್ಲಿ ಸುಮಾರು 4 ಲಕ್ಷ ಕೊರೊನಾ ಸೋಂಕಿತರು ಪತ್ತೆಯಾಗಿದ್ದರೆ, ಸಾವಿರಾರು ಜನ ಪ್ರಾಣಬಿಟ್ಟಿದ್ದಾರೆ. ಆದರೆ ಸರಿಯಾದ ಚಿಕಿತ್ಸೆ ಸಿಗುತ್ತಿಲ್ಲ, ಕೆ.ಪಿ.ಶರ್ಮಾ ಓಲಿ ಕೊರೊನಾ ಪರಿಸ್ಥಿತಿ ನಿಭಾಯಿಸಲು ವಿಫಲರಾಗಿದ್ದಾರೆ ಎಂಬ ಆರೋಪ ಇತ್ತು.

ಓಲಿ ಸಂಸತ್‌ನಲ್ಲಿ ವಿಶ್ವಾಸ ಕಳೆದುಕೊಂಡಿದ್ದಾರೆ
ಓಲಿ ಕೊರೊನಾ ಮತ್ತು ಪಕ್ಷ ಎರಡನ್ನೂ ನಿಭಾಯಿಸುವಲ್ಲಿ ಸೋತಿದ್ದಾರೆಂದು ಆರೋಪಿಸಲಾಗಿತ್ತು. ಎಲ್ಲದರ ಪರಿಣಾಮ ಕೆ.ಪಿ.ಶರ್ಮಾ ಓಲಿ ಸಂಸತ್‌ನಲ್ಲಿ ವಿಶ್ವಾಸ ಕಳೆದುಕೊಂಡಿದ್ದಾರೆ. ನೇಪಾಳದಲ್ಲಿ ಮತ್ತೆ ರಾಜಕೀಯ ಅಸ್ಥಿರತೆ ಮೂಡಿದ್ದು, ಕೊರೊನಾ ಕಂಟಕದ ನಡುವೆ ಜನರು ಮತ್ತಷ್ಟು ಗೊಂದಲಕ್ಕೆ ಸಿಲುಕುವಂತಾಗಿದೆ.












Click it and Unblock the Notifications