Gen-Z ಹೋರಾಟ ಅಂತ್ಯ, ನೆಮ್ಮದಿಯ ನಿಟ್ಟುಸಿರು ಬಿಟ್ಟ ನೇಪಾಳ ಜನ...
ನೇಪಾಳದ ಜನರು ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ, ನೇಪಾಳದಲ್ಲಿ ಕೆಲ ತಿಂಗಳ ಹಿಂದಷ್ಟೇ ದೊಡ್ಡ ಹೋರಾಟ ನಡೆದು ಹಿಂಸಾಚಾರ ಭುಗಿಲೆದ್ದಿತ್ತು. ಈ ಗಲಾಟೆ ಇನ್ನೇನು ನಿಂತು ಹೋಗಿದೆ ಅನ್ನುವಾಗಲೇ ಮತ್ತೆ ಕಿರಿಕ್ ಶುರುವಾಗಿತ್ತು. ಹೀಗಾಗಿ ಸಹಜವಾಗಿ ಮತ್ತೆ ಆತಂಕ ಮನೆಮಾಡಿತ್ತು, ಆದರೆ ಇದೀಗ ಹೋರಾಟದ ಬೆಂಕಿಯನ್ನು ತಣ್ಣಗೆ ಮಾಡಲಾಗಿದೆ. Gen-Z ಹೋರಾಟಗಾರರು & ಸರ್ಕಾರದ ನಡುವೆ ಶಾಂತಿ ಮಾತುಕತೆ ನಡೆದಿದೆ. ಈ ಮೂಲಕ ಹೋರಾಟಕ್ಕೆ ಗುಡ್‌ಬೈ ಹೇಳಿ, ಶಾಂತಿ ಕಾಪಾಡಲು Gen-Z ಹೋರಾಟಗಾರರು ನಿರ್ಧರಿಸಿದ್ದಾರೆ.
ನೇಪಾಳ ದೇಶದ ಬಾರಾ ಜಿಲ್ಲೆಯಲ್ಲಿ ಶಾಂತಿ ಮಾತುಕತೆ ಮಾಡಲಾಗಿದ್ದು, ಸಶಸ್ತ್ರ ಪೊಲೀಸ್ ಪಡೆ ಪ್ರಧಾನ ಕಚೇರಿಯಲ್ಲಿ Gen-Z ಹೋರಾಟಗಾರರು ಹಾಗೂ ಅಧಿಕಾರಿಗಳು ನಿರಂತರವಾಗಿ ಸಭೆಗಳನ್ನ ನಡೆಸಿದ್ದಾರೆ. ಸಭೆ ಯಶಸ್ವಿಯಾದ ಕಾರಣ ಹೋರಾಟ ನಿಲ್ಲಿಸಲು ಒಪ್ಪಿಗೆ ಸೂಚಿಸಿರುವ Gen-Z ನಾಯಕರು, ತಮ್ಮ ಹಲವು ಬೇಡಿಕೆಗಳನ್ನು ಈಡೇರಿಸುವಂತೆ ಸರ್ಕಾರಕ್ಕೆ ಆಗ್ರಹ ಮಾಡಿದ್ದಾರೆ. ಈ ಮೂಲಕ 18 Gen-Z ಹೋರಾಟಗಾರರ ನಾಯಕರು ಮತ್ತು ಅಧಿಕಾರಿಗಳ ಮಾತುಕತೆ ಯಶಸ್ವಿ ಆಗಿ ಕೊನೆಗೆ ನಿಷೇಧಾಜ್ಞೆ ವಾಪಸ್ ಪಡೆಯಲಾಗಿದೆ. ಹೀಗಾಗಿ ನೇಪಾಳ ಮತ್ತೆ ಸಹಜ ಪರಿಸ್ಥಿತಿಗೆ ಬರುತ್ತಿದೆ.

ಪೊಲೀಸ್ ಅಧಿಕಾರಿ ದಿಢೀರ್ ವರ್ಗಾವಣೆ
ಇನ್ನು ನೇಪಾಳ ಪೊಲೀಸ್ ಪ್ರಧಾನ ಕಚೇರಿ ಮಹತ್ವದ ನಿರ್ಧಾರ ಪ್ರಕಟಿಸಿದೆ. ಸ್ಥಳೀಯರು ಮತ್ತು ಪೊಲೀಸ್ ಅಧಿಕಾರಿ ನಡುವೆ ಮನಸ್ಥಾಪ ಇರುವುದನ್ನು ಗಮನಿಸಿ ಕ್ರಮ ಕೈಗೊಳ್ಳಲಾಗಿದೆ. ಇದೀಗ ದಿಢೀರ್ ಬಾರಾದ ಪೊಲೀಸ್ ವರಿಷ್ಠಾಧಿಕಾರಿ ಸಂತೋಷ್ ತಮಾಂಗ್ ಅವರನ್ನು ಪೊಲೀಸ್ ಪ್ರಧಾನ ಕಚೇರಿಗೆ ವರ್ಗಾವಣೆ ಮಾಡಿ ಆದೇಶ ಹೊರಡಿಸಲಾಗಿದೆ. ಈ ಮೂಲಕ ನೇಪಾಳ ಮತ್ತೆ ಸೈಲೆಂಟ್ ಆಗುತ್ತಿದೆ. ಪ್ರತಿಭಟನೆ ಭಯದಲ್ಲಿ ಸ್ಥಳೀಯರು ಕೂಡ ನಲುಗಿ ಹೋಗಿದ್ದರು, ಆದರೆ ಎಲ್ಲ ಈಗ ಸೈಲೆಂಟ್ ಆಗಿರುವ ಕಾರಣಕ್ಕೆ ಖುಷಿಯಾಗಿದ್ದಾರೆ.
ಭಾರತ ಕೂಡ ಸೂಕ್ಷ್ಮವಾಗಿ ಗಮನಿಸುತ್ತಿತ್ತು...
ಈಗ ಕೇಳಿ ಬರುತ್ತಿರುವ ಆರೋಪ ನೋಡಿದರೆ ನೇಪಾಳದಲ್ಲಿ ದಿಢೀರ್ ಗಲಾಟೆ ಶುರುವಾಗಿರುವುದರ ಹಿಂದೆ ಚೀನಾ ಕೈವಾಡ ಇದೆ ಎನ್ನಲಾಗಿದೆ. ಅದರಲ್ಲೂ ನೇಪಾಳದ ಕಮ್ಯುನಿಸ್ಟ್ ಪಕ್ಷದ ಲಕ್ಷಲಕ್ಷ ಕಾರ್ಯಕರ್ತರು ಬೀದಿಗಿಳಿದು ಹೋರಾಟ ನಡೆಸಲು ಮುಂದಾಗಿದ್ದರು. ಈ ಬೆನ್ನಲ್ಲೇ, ಇನ್ನೊಂದು ಕಡೆ ನೇಪಾಳದಲ್ಲಿ Gen-Z ಹೋರಾಟ ನಡೆಸಿದ್ದ ಹೋರಾಟಗಾರರು ತೊಡೆತಟ್ಟಿ ಅಖಾಡ ಪ್ರವೇಶ ಮಾಡುತ್ತಿದ್ದರು. ಹೀಗೆ ಇಬ್ಬರ ನಡುವೆ ರಕ್ತಪಾತವಾಗುವ ಮುನ್ಸೂಚನೆ ಸಿಕ್ಕ ಹಿನ್ನೆಲೆಯಲ್ಲಿ ಕ್ರಮ ಕೈಗೊಳ್ಳಲಾಗಿತ್ತು. ಮತ್ತೊಂದು ಕಡೆ ಪರಿಸ್ಥಿತಿಯನ್ನು ಭಾರತ ಕೂಡ ಹತ್ತಿರದಿಂದ ಅವಲೋಕನ ಮಾಡುತ್ತಿತ್ತು.












Click it and Unblock the Notifications