ವಿಜಯ್ ಮಲ್ಯಗೆ ಕರ್ನಾಟಕದ ಚುನಾವಣೆಯಲ್ಲಿ ಮತ ಚಲಾಯಿಸುವ ಬಯಕೆ
ಲಂಡನ್, ಏಪ್ರಿಲ್ 27: ದೇಶದ ವಿವಿಧ ರಾಷ್ಟ್ರೀಯ ಬ್ಯಾಂಕ್‌ಗಳಿಗೆ ಸಾವಿರಾರು ಕೋಟಿ ರೂಪಾಯಿ ವಂಚಿಸಿದ ಆರೋಪ ಎದುರಿಸುತ್ತಿರುವ ಉದ್ಯಮಿ ವಿಜಯ್ ಮಲ್ಯ ಸದ್ಯ ಲಂಡನ್‌ನಲ್ಲಿದ್ದಾರೆ. ಅಲ್ಲಿ ವಿಚಾರಣೆ ಎದುರಿಸುತ್ತಿರುವ ಮಲ್ಯ ಅವರಿಗೆ ಮೇ 12ರಂದು ಕರ್ನಾಟಕದಲ್ಲಿ ನಡೆಯುವ ಚುನಾವಣೆಯಲ್ಲಿ ಮತದಾನದ ಹಕ್ಕನ್ನು ಚಲಾಯಿಸಲು ಅವಕಾಶವಿಲ್ಲ.
ಬ್ಯಾಂಕುಗಳಿಗೆ ಸುಮಾರು 9 ಸಾವಿರ ಕೋಟಿ ರೂಪಾಯಿ ವಂಚಿಸಿರುವ ಆರೋಪ ಎದುರಿಸುತ್ತಿರುವ ವಿಜಯ್ ಮಲ್ಯ ಅವರನ್ನು ಭಾರತಕ್ಕೆ ಗಡಿಪಾರು ಮಾಡಬೇಕು ಎಂಬ ಅರ್ಜಿಯ ವಿಚಾರಣೆ ಲಂಡನ್‌ನ ವೆಸ್ಟ್‌ಮಿನಿಸ್ಟರ್ ಕೋರ್ಟ್‌ನಲ್ಲಿ ನಡೆಯುತ್ತಿದೆ. ಶುಕ್ರವಾರ ಅರ್ಜಿ ವಿಚಾರಣೆ ನಡೆಸಿದ ಕೋರ್ಟ್, ಮುಂದಿನ ವಿಚಾರನೆಯನ್ನು ಜೂನ್ 11ಕ್ಕೆ ಮುಂದೂಡಿದೆ.
ಮತ ಹಾಕುವುದು ನನ್ನ ಹಕ್ಕು
ಕರ್ನಾಟಕ ಚುನಾವಣೆಯಲ್ಲಿ ಮತ ಚಲಾವಣೆ ಮಾಡುವುದು ನನ್ನ ಪ್ರಜಾತಾಂತ್ರಿಕ ಹಕ್ಕು. ಆದರೆ, ನಿಮಗೆ ತಿಳಿದಿರುವಂತೆ ನಾನು ಇಲ್ಲಿದ್ದೇನೆ. ನನಗೆ ನೀಡಿರುವ ಜಾಮೀನಿನ ಮೇಲೆ ವಿಧಿಸಿರುವ ಷರತ್ತಿನಂತೆ ನಾನು ಲಂಡನ್ ತೊರೆಯುವಂತಿಲ್ಲ ಎಂದು ಮಲ್ಯ ಹೇಳಿದ್ದಾರೆ.
Yes It is my democratic right to vote in Karnataka but conditions of my bail are such that I cannot leave the UK. I haven't been following the politics there so cannot comment on the political developments: Vijay Mallya pic.twitter.com/7IzWYS3mcQ
— ANI (@ANI) 27 April 2018
ಈ ಹಿಂದೆ ಲಂಡನ್‌ನ ಮ್ಯೂಸಿಯಂನಿಂದ ಟಿಪ್ಪು ಸುಲ್ತಾನನ ಖಡ್ಗವನ್ನು ಭಾರಿ ಮೊತ್ತದ ಹಣ ತೆತ್ತು ಹರಾಜಿನಲ್ಲಿ ಖರೀದಿಸಿ ತಂದಿದ್ದ ಮಲ್ಯ, ಅದನ್ನು ವಿಧಾನಸಭೆಯ ಚುನಾವಣೆಯ ಪ್ರಚಾರಕ್ಕೂ ಬಳಸಿಕೊಂಡಿದ್ದರು. ರಾಜಕೀಯದ ಬಗ್ಗೆ ಒಂದಷ್ಟು ಆಸಕ್ತಿ ಹೊಂದಿದ್ದ ಅವರು ಈಗ ರಾಜಕೀಯ ಚಟುವಟಿಕೆಗಳ ಕುರಿತು ಅವರು ತಲೆಕೆಡಿಸಿಕೊಳ್ಳುತ್ತಿಲ್ಲವಂತೆ.

ಕರ್ನಾಟಕ ಚುನಾವಣೆಯ ಕುರಿತು ಅವರ ಅಭಿಪ್ರಾಯ ಏನು ಎಂಬುದಕ್ಕೆ ಅವರು, 'ನಾನು ಅಷ್ಟೊಂದು ಸಮೀಪದಿಂದ ರಾಜಕೀಯವನ್ನು ಗಮನಿಸುತ್ತಿಲ್ಲ. ಚುನಾವಣೆ ಬಗ್ಗೆ ನನ್ನಲ್ಲಿ ಯಾವ ಅಭಿಪ್ರಾಯ ಇಲ್ಲ. ಅದರ ಬಗ್ಗೆ ಮಾತನಾಡಲು ಸಾಧ್ಯವಿಲ್ಲ' ಎಂದಿದ್ದಾರೆ.
ಮಲ್ಯ ಅವರನ್ನು ಭಾರತಕ್ಕೆ ಕರೆತರುವ ಪ್ರಯತ್ನಗಳು ನಡೆಯುತ್ತಿವೆ. 63 ವರ್ಷದ ಮಲ್ಯ, ತಮ್ಮ ಪ್ರೇಯಸಿ ಪಿಂಕಿ ಲಲ್ವಾನಿ ಅವರನ್ನು ಲಂಡನ್‌ನಲ್ಲಿಯೇ ಮದುವೆಯಾಗಲು ಸಿದ್ಧತೆ ನಡೆಸಿರುವ ಸುದ್ದಿಯೂ ವ್ಯಾಪಕವಾಗಿ ಹರಡಿದೆ.
ಮದ್ಯ ಉದ್ಯಮಿಯಾಗಿ, ರಾಯಲ್ ಚಾಲೆಂಜರ್ಸ್ ಬೆಂಗಳೂರು ಕ್ರಿಕೆಟ್ ತಂಡ ಮಾಲೀಕರಾಗಿ ಹೆಚ್ಚು ಪರಿಚಿತರಾಗಿರುವ ವಿಜಯ್ ಮಲ್ಯ, ರಾಜಕೀಯ ಕ್ಷೇತ್ರಕ್ಕೂ ಕಾಲಿಟ್ಟಿದ್ದರು. ಅಖಿಲ ಭಾರತ ಜನತಾ ದಳದ ಸದಸ್ಯರಾಗಿದ್ದ ಮಲ್ಯ, 2003ರಲ್ಲಿ ಸುಬ್ರಮಣಿಯನ್ ಸ್ವಾಮಿ ಅವರ ಜನತಾ ಪಾರ್ಟಿ ಸೇರಿಕೊಂಡಿದ್ದರು. 2002ರಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಬೆಂಬಲದೊಂದಿಗೆ ರಾಜ್ಯಸಭಾ ಸದಸ್ಯರಾಗಿ ಆಯ್ಕೆಯಾಗಿದ್ದರು. 2010ರಲ್ಲಿ ಬಿಜೆಪಿ ಮತ್ತು ಜೆಡಿಎಸ್ ಬೆಂಬಲ ಪಡೆದು ಮತ್ತೆ ರಾಜ್ಯಸಭೆಗೆ ಆಯ್ಕೆಯಾಗಿದ್ದರು. 2016ರಲ್ಲಿ ರಾಜ್ಯಸಭಾ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದ ಅವರು, ಬಳಿಕ ದೇಶವನ್ನು ತೊರೆದಿದ್ದರು.












Click it and Unblock the Notifications