2ನೇ ದಿನವೂ ಮುಂದುವರಿದ ಮೈಕ್ರೋಸಾಫ್ಟ್ ಸರ್ವರ್ ಸಮಸ್ಯೆ: ವಿಮಾನಯಾನ, ಬ್ಯಾಂಕಿಂಗ್, ಸರ್ಕಾರಿ ಸೇವೆಗಳು ಸಂಪೂರ್ಣ ಅಸ್ತವ್ಯಸ್ತ
ನವದೆಹಲಿ: ವಿಶ್ವದಾದ್ಯಂತ ಲಕ್ಷಾಂತರ ವೃತ್ತಿಪರರು ತಮ್ಮ ಪ್ರತಿದಿನದ ಆಫೀಸ್ ಕೆಲಸಗಳಿಗಾಗಿ ನಂಬಿಕೊಂಡಿರುವ ಪ್ರಮುಖ ಐಟಿ ಕಂಪನಿಯಾದ ಮೈಕ್ರೋಸಾಫ್ಟ್ ಸೇವೆಗಳಲ್ಲಿ ಭಾರಿ ವ್ಯತ್ಯಯ ಉಂಟಾಗಿದೆ. ಔಟ್‌ಲುಕ್, ಟೀಮ್ಸ್ ಮತ್ತು ಕೋಪೈಲಟ್ ಸೇರಿದಂತೆ ಮೈಕ್ರೋಸಾಫ್ಟ್ 365 ಸೇವೆಗಳು ದಿಢೀರ್ ಸ್ಥಗಿತಗೊಂಡಿದೆ. ಇಂದಿಗೆ ಇದೂ (ನವೆಂಬರ್ 13, 2026) ಎರಡನೇ ದಿನಕ್ಕೂ ಕಾಲಿಟ್ಟಿದೆ.
ಇದರ ಪರಿಣಾಮವಾಗಿ ಭಾರತ ಸೇರಿದಂತೆ ಅಮೆರಿಕ, ಆಸ್ಟ್ರೇಲಿಯಾ, ಜಪಾನ್‌ನಂತಹ ದೇಶಗಳಲ್ಲಿ ವಿಮಾನಯಾನ ಸಂಸ್ಥೆಗಳು, ಸರ್ಕಾರಿ ಏಜೆನ್ಸಿಗಳು, ಹಣಕಾಸು ಮಾರುಕಟ್ಟೆಗಳು ಸೇರಿದಂತೆ ಪ್ರಮುಖ ವ್ಯವಹಾರಗಳು ಸಂಪೂರ್ಣವಾಗಿ ಅಸ್ತವ್ಯಸ್ತಗೊಂಡಿವೆ.

ವಿಮಾನಯಾನ ಸೇವೆಗಳ ಮೇಲೆ ಮೈಕ್ರೋಸಾಫ್ಟ್ ಔಟೇಜ್ ಪ್ರಭಾವ
ಈ ಜಾಗತಿಕ ಮೈಕ್ರೋಸಾಫ್ಟ್ ಔಟೇಜ್ ಭಾರತೀಯ ವಿಮಾನಯಾನ ವಲಯಕ್ಕೆ ಭಾರಿ ಹೊಡೆತ ನೀಡಿದೆ. ಇಂಡಿಗೋ ಏರ್‌ಲೈನ್ಸ್‌ನ ಇಮೇಲ್ ಸೇವೆಗಳು ಸ್ಥಗಿತಗೊಂಡಿದ್ದು, ತುರ್ತು ನೆರವಿಗಾಗಿ ವೆಬ್‌ಸೈಟ್ ಅಥವಾ ಆ್ಯಪ್ ಮೂಲಕ '6E Skai' ಅನ್ನಾ ಸಂಪರ್ಕಿಸುವಂತೆ ಪ್ರಯಾಣಿಕರಿಗೆ ಸೂಚಿಸಿದೆ. ಮತ್ತೊಂದೆಡೆ, ದೆಹಲಿಯ ಇಂದಿರಾಗಾಂಧಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಹೊರಡಬೇಕಿದ್ದ ಪುಣೆ, ಲೇಹ್ ಮತ್ತು ಮುಂಬೈ ಮಾರ್ಗದ ಮೂರು ವಿಮಾನಗಳನ್ನ ಸ್ಪೈಸ್‌ಜೆಟ್ ರದ್ದುಗೊಳಿಸಿದೆ.
ಅಕಾಸಾ ಏರ್ ಕೂಡ ವಿಮಾನಯಾನ ಮಾಹಿತಿಯನ್ನ ನಿರಂತರವಾಗಿ ಗಮನಿಸುವಂತೆ ಪ್ರಯಾಣಿಕರಿಗೆ ಸಲಹೆ ನೀಡಿದೆ. ಆದರೆ ಏರ್ ಇಂಡಿಯಾ ತನ್ನ ಇಮೇಲ್ ಟ್ರಾಫಿಕ್ ಅನ್ನಾ ಪರ್ಯಾಯ ಮಾರ್ಗಗಳಿಗೆ ವರ್ಗಾಯಿಸುವ ಮೂಲಕ ಸಮಸ್ಯೆಯನ್ನ ತಾತ್ಕಾಲಿಕವಾಗಿ ನಿಭಾಯಿಸಿದ್ದು, ವಿಮಾನ ಹಾರಾಟದ ಮೇಲೆ ಯಾವುದೇ ಪರಿಣಾಮ ಬೀರಿಲ್ಲ ಎಂದು ಸ್ಪಷ್ಟಪಡಿಸಿದೆ.
ಜಾಗತಿಕ ಬ್ಯಾಂಕಿಂಗ್ ಸೇವೆಗಳು ಮತ್ತು ಸರ್ಕಾರಿ ಕಚೇರಿಗಳ ಕೆಲಸ ಅಸ್ತವ್ಯಸ್ತ
ಐಟಿ ಸಮಸ್ಯೆಯು ಕೇವಲ ಕಾರ್ಪೊರೇಟ್ ವಲಯಕ್ಕೆ ಮಾತ್ರ ಸೀಮಿತವಾಗಿಲ್ಲ. ಭಾರತದ ಹಣಕಾಸು ಹಾಗೂ ಬ್ಯಾಂಕಿಂಗ್ ಸೇವೆಗಳು ಕೂಡ ಭಾರೀ ತೊಂದರೆ ಎದುರಿಸುತ್ತಿವೆ. ಉದ್ಯೋಗಿಗಳಿಗೆ ದೈನಂದಿನ ಸಂಶೋಧನಾ ವರದಿಗಳನ್ನ ಪಡೆಯಲು ಸಾಧ್ಯವಾಗುತ್ತಿಲ್ಲ ಹಾಗೂ ಮೈಕ್ರೋಸಾಫ್ಟ್ ಟೀಮ್ಸ್ ಮೂಲಕ ನಡೆಯಬೇಕಿದ್ದ ಕ್ಲೈಂಟ್ ಮೀಟಿಂಗ್‌ಗಳಿಗೆ ಅಡ್ಡಿಯಾಗಿದೆ.
ಆಸ್ಟ್ರೇಲಿಯಾದ ಗುಪ್ತಚರ ಸಂಸ್ಥೆ ಮತ್ತು ಫೆಡರಲ್ ಪೊಲೀಸ್, ಜಪಾನ್ ಮತ್ತು ಸಿಂಗಾಪುರದ ಸರ್ಕಾರಿ ಐಟಿ ಪ್ಲಾಟ್‌ಫಾರ್ಮ್‌ಗಳು ಹಾಗೂ ಫಿಲಿಪೈನ್ಸ್ ಸುಪ್ರೀಂ ಕೋರ್ಟ್‌ನ ಕಾರ್ಯಚಟುವಟಿಕೆಗಳ ಮೇಲೂ ಈ ಸ್ಥಗಿತ ಗಂಭೀರ ಪರಿಣಾಮ ಬೀರಿದೆ.
ಅಮೆರಿಕದ ಜೈಲಿಗೂ ತಟ್ಟಿದ ಪರಿಣಾಮ
ಈ ತಾಂತ್ರಿಕ ಸಮಸ್ಯೆಯಿಂದಾಗಿ ಅಮೆರಿಕದ ಕೊಲೊರಾಡೋದಲ್ಲಿರುವ ಅರಾಪಹೋ ಕೌಂಟಿ ಡಿಟೆನ್ಷನ್ ಫೆಸಿಲಿಟಿಯಲ್ಲಿ (ಜೈಲು) ವಿಚಿತ್ರ ಪರಿಸ್ಥಿತಿ ನಿರ್ಮಾಣವಾಗಿದೆ. ಜಾಮೀನು ಬಾಂಡ್ ಪಾವತಿಯನ್ನು ಔಟ್‌ಲುಕ್ ಇಮೇಲ್ ಮೂಲಕ ಪರಿಶೀಲಿಸಿ ಕೈದಿಗಳನ್ನ ಬಿಡುಗಡೆ ಮಾಡುವ ವ್ಯವಸ್ಥೆ ಇಲ್ಲಿದ್ದು, ಇಮೇಲ್ ಬಾರದೇ ಇರುವುದರಿಂದ ಕೈದಿಗಳ ಬಿಡುಗಡೆ ಪ್ರಕ್ರಿಯೆ ವಿಳಂಬವಾಗಿದೆ.
ಇನ್ನು ಕೃತಕ ಬುದ್ಧಿಮತ್ತೆ ದೈತ್ಯ ಕಂಪನಿಗಳಾದ ಓಪನ್ ಎಐ ಮತ್ತು ಆಂಥ್ರೋಪಿಕ್ ಸಂಸ್ಥೆಗಳ ವ್ಯವಸ್ಥೆಯಲ್ಲೂ ಮೈಕ್ರೋಸಾಫ್ಟ್ ಸಂಪರ್ಕ ಕಡಿತದಿಂದಾಗಿ ತೊಂದರೆ ಕಾಣಿಸಿಕೊಂಡಿದೆ.
Service AdvisoryWhile the global Microsoft service disruption continues to impact email support, IndiGo's flight operations remain unaffected, with all other customer support channels fully operational.6E Skai continues to deliver uninterrupted, round-the-clock assistance, efficiently addressing customer queries and ensuring customers receive the support they need, whenever they need it.Our flight operations and other business functions continue to operate as usual, while proactive customer engagement and timely notifications ensure customers remain informed and connected with us throughout their journey.
— IndiGo (@IndiGo6E) November 13, 2026
ಸರ್ವರ್ ಸರಿಪಡಿಸಲು ಹರಸಾಹಸ ಪಡುತ್ತಿರುವ ಮೈಕ್ರೋಸಾಫ್ಟ್
ನೆಟ್‌ವರ್ಕ್ ಟ್ರಾಫಿಕ್‌ನಲ್ಲಿ ಉಂಟಾದ ಅನಿರೀಕ್ಷಿತ ದಟ್ಟಣೆಯಿಂದಾಗಿ ಮೂಲಸೌಕರ್ಯದ ಮೇಲೆ ಒತ್ತಡ ಬಿದ್ದಿದೆ, ಇದು ಯಾವುದೇ ಸೈಬರ್ ದಾಳಿಯಲ್ಲ ಎಂದು ಮೈಕ್ರೋಸಾಫ್ಟ್ ಸ್ಪಷ್ಟಪಡಿಸಿದೆ. ಶುಕ್ರವಾರ ಬೆಳಗಿನ ಜಾವದವರೆಗೂ ಸರ್ವರ್‌ಗಳನ್ನ ಸರಿಪಡಿಸುವ ಕಾರ್ಯ ಸಮರೋಪಾದಿಯಲ್ಲಿ ನಡೆಯುತ್ತಿದ್ದು, ಡೌನ್‌ಡಿಟೆಕ್ಟರ್ ವರದಿಗಳ ಪ್ರಕಾರ 74 ಕ್ಕೂ ಹೆಚ್ಚು ದೇಶಗಳಲ್ಲಿ ಒಂದೂವರೆ ಲಕ್ಷಕ್ಕೂ ಅಧಿಕ ದೂರುಗಳು ದಾಖಲಾಗಿವೆ.
ಟೆಕ್ ಸೇವೆಗಳಿಗಾಗಿ ಕೇವಲ ಒಂದೇ ಕಂಪನಿಯನ್ನ ನೆಚ್ಚಿಕೊಂಡರೆ ಜಾಗತಿಕ ಮಟ್ಟದಲ್ಲಿ ಎಂತಹ ಅಪಾಯ ಎದುರಾಗುತ್ತದೆ ಎಂಬುದಕ್ಕೆ ಈ ಘಟನೆಯೇ ಉದಾಹರಣೆ ಎಂದು ಸೈಬರ್ ಭದ್ರತಾ ತಜ್ಞರು ಎಚ್ಚರಿಸಿದ್ದಾರೆ.




Click it and Unblock the Notifications
