ರಷ್ಯಾ ಪ್ರವಾಸದ ಹಿಂದಿರುವ ಗುಟ್ಟು ಬಿಚ್ಚಿಟ್ಟ ರಾಜನಾಥ್ ಸಿಂಗ್!
ಮಾಸ್ಕೋ, ಜೂನ್.24: ಎರಡನೇ ಮಹಾಯುದ್ಧದಲ್ಲಿ ವಿಜಯೋತ್ಸವದ 75ನೇ ವರ್ಷಾಚರಣೆಯ ಸಂದರ್ಭದಲ್ಲಿ ಚೀನಾ ರಕ್ಷಣಾ ಸಚಿವರ ಜೊತೆಗೆ ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಯಾವುದೇ ರೀತಿಯ ಮಾತುಕತೆ ನಡೆಸಿಲ್ಲ ಎಂದು ಕೇಂದ್ರ ಸರ್ಕಾರವು ಸ್ಪಷ್ಟಪಡಿಸಿದೆ.
ಜೂನ್ 24, 2020 ರಂದು ಮಾಸ್ಕೋದ ವಿಕ್ಟರಿ ಪೆರೇಡ್‌ನಲ್ಲಿ ಎರಡನೇ ಮಹಾಯುದ್ಧದಲ್ಲಿ ವಿಜಯೋತ್ಸವದ 75ನೇ ವರ್ಷಾಚರಣೆಯ ನೆನಪಿಗಾಗಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಭಾರತ ಮತ್ತು ಚೀನಾ ರಕ್ಷಣಾ ಸಚಿವರು ಮುಖಾಮುಖಿ ಆಗಲಿದ್ದಾರೆ. ಈ ವೇಳೆ ಎರಡು ರಾಷ್ಟ್ರಗಳ ನಡುವಿನ ಗಡಿ ಸಂಘರ್ಷದ ಕುರಿತು ಚರ್ಚಿಸುವ ಸಾಧ್ಯತೆಗಳಿವೆ ಎನ್ನಲಾಗಿತ್ತು.
2ನೇ ಮಹಾಯುದ್ಧದ 75 ನೇ ವಿಜಯೋತ್ಸವ ಆಚರಣೆಗೆ ಮಾಸ್ಕೋಗೆ ತೆರಳಲಿರುವ ರಾಜನಾಥ್ ಸಿಂಗ್
ಭಾರತದ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಮತ್ತು ಚೀನಾದ ರಕ್ಷಣಾ ಸಚಿವ ವೀ ಫೆಂಗ್ ನಡುವೆ ಚರ್ಚಿಸಬಹುದು ಎಂದು ಚೀನಾದ ಮುಖವಾಣಿ ಗ್ಲೋಬಲ್ ಟೈಮ್ಸ್ ವರದಿ ಮಾಡಿತ್ತು. ಇದಕ್ಕೆ ಪ್ರತಿಯಾಗಿ ಉಭಯ ನಾಯಕರ ನಡುವೆ ಯಾವುದೇ ಮಾತುಕತೆ ನಡೆದಿಲ್ಲ ಎಂದು ಎಎನ್ಐ ವರದಿಯಲ್ಲಿ ಸ್ಪಷ್ಟಪಡಿಸಿದೆ.

ಚೀನಾ ರಕ್ಷಣಾ ಸಚಿವ ವೀ ಫೆಂಗ್ ಹಾಜರಿ ಅನಿರೀಕ್ಷಿತವಲ್ಲ
1945ರಲ್ಲಿ ನಡೆದ ಎರಡನೇ ಮಹಾಯುದ್ಧದಲ್ಲಿ ಜರ್ಮನಿ ಒಕ್ಕೂಟದ ರಾಷ್ಟ್ರಗಳ ವಿರುದ್ಧ ವಿಜಯೋತ್ಸವವನ್ನು ಸಾಧಿಸಲಾಗಿತ್ತು. ಅಂದು ರಷ್ಯಾ ಒಕ್ಕೂಟದ ಜೊತೆಗೆ ಭಾರತ, ಚೀನಾ ರಾಷ್ಟ್ರಗಳು ಕೂಡಾ ಕೈ ಜೋಡಿಸಿದ್ದವು. ಈ ಹಿನ್ನೆಲೆ ಚೀನಾ ರಕ್ಷಣಾ ಸಚಿವರು ವಿಜಯೋತ್ಸವದಲ್ಲಿ ಭಾಗಿಯಾಗುವುದನ್ನು ಮೊದಲೇ ನಿರೀಕ್ಷಿಸಲಾಗಿತ್ತು. ಇದರಲ್ಲಿ ಯಾವುದೇ ಹೊಸ ಬೆಳವಣಿಗಳಿಲ್ಲ. ಭಾರತೀಯ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರ ಮೂರು ದಿನಗಳ ಮಾಸ್ಕೋ ಪ್ರವಾಸ ಕೂಡಾ ಚೀನಾ-ಭಾರತ ಸೇನಾ ಸಂಘರ್ಷಕ್ಕೂ ಮೊದಲೇ ನಿಗದಿಯಾಗಿತ್ತು.

ರಾಜನಾಥ್ ಸಿಂಗ್ ರಷ್ಯಾ ಪ್ರವಾಸದ ಉದ್ದೇಶವೇ ಬೇರೆ
ಭಾರತದಲ್ಲಿ ಕೊರೊನಾವೈರಸ್ ಸೋಂಕು ಹರಡುವಿಕೆ ಮತ್ತು ಲಾಕ್ ಡೌನ್ ಪ್ರಕ್ರಿಯೆಗಳ ನಂತರದಲ್ಲಿ ಮೊದಲ ಬಾರಿಗೆ ರಷ್ಯಾ ಪ್ರವಾಸ ಕೈಗೊಳ್ಳಲಾಗಿದೆ. ತಮ್ಮ ಈ ಪ್ರವಾಸದ ಉದ್ದೇಶ ರಷ್ಯಾದ ಜೊತೆಗಿನ ಸ್ನೇಹ-ಸೌಹಾರ್ದತೆ, ದ್ವಿಪಕ್ಷೀಯ ಬಾಂಧವ್ಯ ವೃದ್ಧಿಸಿಕೊಳ್ಳುವುದೇ ಆಗಿದೆ. ಇದರ ಜೊತೆಗೆ ಕೊರೊನಾವೈರಸ್ ಎಂಬ ಸಾಂಕ್ರಾಮಿಕ ಪಿಡುಗಿನ ವಿರುದ್ಧ ಯಾವ ರೀತಿ ಹೋರಾಡಬೇಕು ಎನ್ನುವುದರ ಕುರಿತು ಚರ್ಚಿಸುವುದಾಗಿದೆ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಸ್ಪಷ್ಟಪಡಿಸಿದ್ದಾರೆ.

ದೇಶದ ಯೋಧರ ಸಾಮರ್ಥ್ಯ ಹೊಗಳಿದ ರಕ್ಷಣಾ ಸಚಿವರು
2ನೇ ಮಹಾಯುದ್ಧದಲ್ಲೂ ಕೂಡಾ ಭಾರತೀಯ ಯೋಧರ ಸಾಮರ್ಥ್ಯ ಏನು ಎಂಬುದನ್ನು ವಿಶ್ವಕ್ಕೆ ತೋರಿಸಿದ್ದಾರೆ. ಅಂದು ನಡೆದ ಯುದ್ಧದಲ್ಲಿ ಸಾವಿರಾರು ಯೋಧರು ಹುತಾತ್ಮರಾಗಿದ್ದು, ಲಕ್ಷಾಂತರ ಯೋಧರು ಗಾಯಗೊಂಡಿದ್ದರು. ಅಂತಿಮವಾಗಿ ವಿಜಯೋತ್ಸವದ ಜ್ಞಾಪಕಾರ್ಥವಾಗಿ ಈ ವಿಜೃಂಭಣೆಯ ಆಚರಣೆಯನ್ನು ನಡೆಸಲಾಗುತ್ತಿದೆ. ಇದರಲ್ಲಿ 11 ರಾಷ್ಟ್ರಗಳ 75 ಪ್ರತಿನಿಧಿಗಳು ಭಾಗಿಯಾಗಲಿದ್ದು, ಭಾರತೀಯ ಸೇನಾ ಯೋಧರು ಈ ಪರೇಡ್ ನಲ್ಲಿ ಭಾಗವಹಿಸುತ್ತಿರುವುದು ದೇಶಕ್ಕೆ ಹೆಮ್ಮೆಯಾಗಿದೆ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಸಂತಸ ವ್ಯಕ್ತಪಡಿಸಿದ್ದಾರೆ.

ಗಡಿ ಪ್ರದೇಶದಲ್ಲಿ ಭಾರತ-ಚೀನಾ ಸೇನಾ ಸಂಘರ್ಷ
ಕಳೆದ ಮೇ.5ರಂದು ಮೊದಲ ಬಾರಿಗೆ ಭಾರತ-ಚೀನಾ ಸೇನೆಗಳು ಲಡಾಖ್ ಗಡಿ ಪ್ರದೇಶದಲ್ಲಿ ಮುಖಾಮುಖಿಯಾಗಿದ್ದವು. ಜೂನ್.15 ಮತ್ತು 16ರಂದು ಉಭಯ ರಾಷ್ಟ್ರಗಳ ಸೇನೆ ನಡುವೆ ನಡೆದ ಸಂಘರ್ಷದಲ್ಲಿ 20 ಭಾರತೀಯ ಯೋಧರು ಹುತಾತ್ಮರಾಗಿದ್ದು, 76 ಯೋಧರು ಗಾಯಗೊಂಡಿದ್ದರು. ಇದೊಂದು ಘಟನೆಯಿಂದ ಪರಿಸ್ಥಿತಿ ಮತ್ತಷ್ಟು ಉದ್ವಿಗ್ನಗೊಂಡಿದ್ದು, ಲಡಾಖ್ ಗಡಿಯು ಬೂದಿ ಮುಚ್ಚಿದ ಕೆಂಡದಂತೆ ಆಗಿತ್ತು. ಈ ಕುರಿತು ಉಭಯ ರಾಷ್ಟ್ರಗಳ ನಾಯಕರು ಚರ್ಚಿಸುವ ಸಾಧ್ಯತೆಗಳಿವೆ ಎಂದು ನಿರೀಕ್ಷಿಸಲಾಗಿತ್ತು.