ಭಾರತಕ್ಕೆ ಮಲ್ಯ ಹಸ್ತಾಂತರ: ಸೆ. 18ಕ್ಕೆ ವಿಚಾರಣೆ ಮುಂದೂಡಿಕೆ
ಲಂಡನ್, ಸೆಪ್ಟೆಂಬರ್ 12: ಭಾರತದ ಬ್ಯಾಂಕುಗಳಿಂದ ಸಾವಿರಾರು ಕೋಟಿ ರೂ. ಸಾಲ ಮಾಡಿ ಲಂಡನ್‌ನಲ್ಲಿ ನೆಲೆಸಿರುವ ಉದ್ಯಮಿ ವಿಜಯ್ ಮಲ್ಯ ಅವರ ಗಡಿಪಾರು ಪ್ರಕರಣದ ವಿಚಾರಣೆಯನ್ನು ಅಲ್ಲಿನ ವೆಸ್ಟ್ ಮಿನಿಸ್ಟರ್ ಮ್ಯಾಜಿಸ್ಟ್ರೇಟ್ ಕೋರ್ಟ್ ಸೆ. 18ಕ್ಕೆ ಮುಂದೂಡಿದೆ.
ಮಲ್ಯ ಅವರನ್ನು ವಿಚಾರಣೆಗೆ ಒಳಪಡಿಸಲು ಹಸ್ತಾಂತರ ಮಾಡುವಂತೆ ಜಾರಿ ನಿರ್ದೇಶನಾಲಯ ಮತ್ತು ಸಿಬಿಐ ಲಂಡನ್ ನ್ಯಾಯಾಲಯವನ್ನು ಕೋರಿವೆ. ಆದರೆ, ಭಾರತದ ಜೈಲುಗಳ ಪರಿಸ್ಥಿತಿಯ ಬಗ್ಗೆ ನ್ಯಾಯಾಲಯ ಕಳವಳ ವ್ಯಕ್ತಪಡಿಸಿತ್ತು. ಮುಂಬೈ ಜೈಲಿನಲ್ಲಿ ಗಾಳಿ ಬೆಳಕು ಸರಿಯಾಗಿಲ್ಲ ಎಂದು ಮಲ್ಯ ತಮ್ಮನ್ನು ಭಾರತಕ್ಕೆ ಹಸ್ತಾಂತರ ಮಾಡುವುದರ ವಿರುದ್ಧ ಆಕ್ಷೇಪ ವ್ಯಕ್ತಪಡಿಸಿದ್ದರು.
ಮುಂಬೈನಲ್ಲಿರುವ ಆರ್ಥರ್ ರಸ್ತೆಯ ಜೈಲು ಸುಸಜ್ಜಿತವಾಗಿದೆ ಎಂಬುದನ್ನು ತೋರಿಸುವ ವಿಡಿಯೋವನ್ನು ತನಿಖಾ ಸಂಸ್ಥೆಗಳು ನ್ಯಾಯಾಲಯಕ್ಕೆ ನೀಡಿದ್ದವು. ಈ ವಿಡಿಯೋವನ್ನು ಕೋರ್ಟ್ ಪರಾಮರ್ಶಿಸುವ ನಿರೀಕ್ಷೆ ಇತ್ತು.

ಲಂಡನ್‌ನಲ್ಲಿ ಜಾಮೀನಿನ ಮೇಲೆ ಬಿಡುಗಡೆ ಹೊಂದಿರುವ ಮಲ್ಯ, ಭಾರತದಲ್ಲಿನ ತಮ್ಮ 14 ಸಾವಿರ ಕೋಟಿ ಮೌಲ್ಯದ ಆಸ್ತಿಗಳನ್ನು ಮಾರಿ ಸಾಲ ತೀರಿಸುವುದಾಗಿ ಹೇಳಿದ್ದಾರೆ.
ಮಲ್ಯರ ಹಸ್ತಾಂತರ ಪ್ರಕರಣದ ವಿಚಾರಣೆ ಡಿಸೆಂಬರ್ 4ರಿಂದಲೂ ನಡೆಯುತ್ತಿದೆ. ಸಾಲ ತೀರಿಸಲು ತಮ್ಮ ಆಸ್ತಿಗಳನ್ನು ಮಾರುವುದಾಗಿ ಈ ಹಿಂದೆಯೇ ಕರ್ನಾಟಕ ಹೈಕೋರ್ಟ್‌ಗೆ ತಿಳಿಸಿದ್ದಾಗಿ ಮಲ್ಯ ಕೋರ್ಟ್ ವಿಚಾರಣೆಗೂ ಮುನ್ನ ಪುನರುಚ್ಚರಿಸಿದ್ದಾರೆ.











Click it and Unblock the Notifications