Mohamed Muizzu: ಬೆಂಗಳೂರಿಗೆ ಬರಲಿದ್ದಾರೆ ಮಾಲ್ಡೀವ್ಸ್ ಅಧ್ಯಕ್ಷ, ಯಾಕೆ?
ಭಾರತದ ಬಗ್ಗೆ ಕೆಂಡಕಾರುತ್ತಿದ್ದ ಮಾಲ್ಡೀವ್ಸ್ ಅಧ್ಯಕ್ಷ ಮೊಹಮ್ಮದ್ ಮುಯಿಝು (Mohamed Muizzu) ಇದೀಗ ಭಾರತಕ್ಕೆ ಮೂರು ದಿನ ಪ್ರವಾಸ ಕೈಗೊಂಡಿದ್ದಾರೆ ಎಂದು ಮಾಧ್ಯಮಗಳಲ್ಲಿ ವರದಿಯಾಗಿದೆ. ದೇಶದ ಪ್ರಮುಖ ಮೂರು ನಗರಗಳಿಗೆ ಮುಯಿಝು ಭೇಟಿ ನೀಡಲಿದ್ದು, ಇದರಲ್ಲಿ ನಮ್ಮ ಸಿಲಿಕಾನ್ ಸಿಟಿ ಬೆಂಗಳೂರು ಕೂಡ ಇದೆ ಎನ್ನಲಾಗಿದೆ.
ಈ ಹಿಂದೆ ಪ್ರಧಾನಿ ಮೋದಿ ಅವರ ಪ್ರಮಾಣವಚನ ಕಾರ್ಯಕ್ರಮಕ್ಕೆ ಮೊಹಮ್ಮದ್ ಮುಯಿಝು ಅತಿಥಿಯಾಗಿ ಬಂದಿದ್ದರು. ಈಗ ಮತ್ತೆ ಅವರು ಅಧಿಕೃತ ಪ್ರವಾಸ ಕೈಗೊಳ್ಳುತ್ತಿದ್ದಾರೆ. ದೆಹಲಿ, ಮುಂಬೈ ಹಾಗೂ ಬೆಂಗಳೂರಿಗೆ ಅವರು ಭೇಟಿ ನೀಡಲಿದ್ದು, ಮಹತ್ವದ ಸಭೆಗಳಲ್ಲಿ ಪಾಲ್ಗೊಳ್ಳಲಿದ್ದಾರಂತೆ.

ಮೂಲಗಳ ಪ್ರಕಾರ ಅವರು ಅಕ್ಟೋಬರ್ 7ರಿಂದ 10ರವರೆಗೆ ಭಾರತದಲ್ಲೇ ಇರಲಿದ್ದು ಪ್ರಧಾನಿ ಮೋದಿ ಅವರೊಂದಿಗೆ ದ್ವಿಪಕ್ಷೀಯ ಮಾತುಕತೆ ನಡೆಸಲಿದ್ದಾರೆ. ಕಳೆದ ವರ್ಷ ನವೆಂಬರ್‌ನಲ್ಲಿ ಚೀನಾ ಪರ ಒಲವು ಹೊಂದಿರುವ ಮುಯಿಝು ಅವರು ಮಾಲ್ಡೀವ್ಸ್ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡಿದ್ದರು. ಇದಾದ ನಂತರ ಭಾರತ ಮತ್ತು ಮಾಲ್ಡೀವ್ಸ್ ನಡುವಿನ ಸಂಬಂಧಗಳು ತೀವ್ರ ಒತ್ತಡಕ್ಕೆ ಒಳಗಾಯಿತು. ಭಾರತದ ಬಗ್ಗೆ ಮುಯಿಝು ವಿರೋಧದ ಮಾತುಗಳನ್ನಾಡಿದ್ದರು.
ಭಾರತ ವಿರೋಧಿ ನಿಲುವು ಪ್ರದರ್ಶಿಸಿದ್ದ ಮುಯಿಝು ಮಾಲ್ಡೀವ್ಸ್‌ನಲ್ಲಿ ಗೆದ್ದ ನಂತರ ಅಲ್ಲಿದ್ದ ಭಾರತೀಯ ಯೋಧರಿಗೆ ಮಾಲ್ಡೀವ್ಸ್ ತೊರೆಯುವಂತೆ ಡೆಡ್‌ಲೈನ್ ನೀಡಿದ್ದರು. ಭಾರತ ವಿರೋಧಿ ಚೀನಾ ಜೊತೆಗೆ ಮುಯಿಝು ಸ್ನೇಹ ಬೆಸೆದುಕೊಂಡು ಕೆಂಗಣ್ಣಿಗೆ ಗುರಿಯಾಗಿದ್ದರು.

ಭಾರತದ ಬಗ್ಗೆ ಅಗೌರವ ತೋರಿದ ಕಾರಣ ಭಾರತೀಯರ ಕೆಂಗಣ್ಣಿಗೆ ಮುಯಿಜು ಕೂಡ ಗುರಿಯಾಗಿದ್ದರು. ಬಳಿಕ ಪ್ರಧಾನಿ ಮೋದಿ ಅವರು ಲಕ್ಷದ್ವೀಪಕ್ಕೆ ಭೇಟಿ ನೀಡಿ ಗಮನ ಸೆಳೆದಿದ್ದರು. ಇದಾದ ಕೆಲವೇ ದಿನಗಳಲ್ಲಿ ಬಾಯ್ಕಾಟ್ ಮಾಲ್ಡೀವ್ಸ್ ಎನ್ನುವ ಅಭಿಯಾನ ಎಲ್ಲೆಡೆ ಜೋರಾಗಿ ಸದ್ದು ಮಾಡಿತು.
ದ್ವೀಪರಾಷ್ಟ್ರ ಮಾಲ್ಡೀವ್ಸ್‌ಗೆ ಹೋಗಬೇಕಿದ್ದ ಪ್ರವಾಸಗಳನ್ನು ರದ್ದು ಮಾಡುವ ಮೂಲಕ ಮುಯಿಝುಗೆ ಭಾರತೀಯರು ತಕ್ಕ ಉತ್ತರ ನೀಡಿದ್ದರು. ಇದರಿಂದಾಗಿ ಜಾಗತಿಕವಾಗಿ ಮಾಲ್ಡೀವ್ಸ್ ಪ್ರವಾಸೋದ್ಯಮ ನೆಲಕಚ್ಚುವ ಹಂತಕ್ಕೆ ತಲುಪಿತ್ತು. ಬಳಿಕ ಮುಯಿಝು ಸೈಲೆಂಟ್ ಆಗಿದ್ದರು.
ಭಾರತದ ಜೊತೆಗಿನ ಮಾಲ್ಡೀವ್ಸ್ ಸಂಬಂಧ ಬಗ್ಗೆ ಯೂಟರ್ನ್ ಹೊಡೆದಿದ್ದ ಮೊಹಮ್ಮದ್ ಮುಯಿಝು, ಮಾಲ್ಡೀವ್ಸ್ ನೆಲದಲ್ಲಿ ವಿದೇಶಿ ಸೇನೆ ಇರುವುದು ನಮ್ಮಲ್ಲೇ ಒಂದು ಗಂಭೀರ ಸಮಸ್ಯೆಯಾಗಿತ್ತು. ಆದರೆ ಭಾರತ ಮಾಲ್ಡೀವ್ಸ್‌ನಿಂದ ಹೊರಹೋಗಬೇಕು ಎನ್ನುವ ಉದ್ದೇಶವನ್ನು ನಾವು ಹೊಂದಿಲ್ಲ ಎಂದು ಮುಯಿಝು ಹೇಳಿದ್ದಾಗಿ ವರದಿಯಾಗಿತ್ತು.
ಇದಾದ ಕೆಲವೇ ತಿಂಗಳಲ್ಲಿ ನರೇಂದ್ರ ಮೋದಿ ಅವರು ಭಾರತದ ಪ್ರಧಾನಿಯಾಗಿ ಮೂರನೇ ಬಾರಿಗೆ ಅಧಿಕಾರಕ್ಕೇರಿದರು. ಈ ಪ್ರಮಾಣವಚನದ ಕಾರ್ಯಕ್ರಮಕ್ಕೆ ಮುಯಿಝು ಅವರನ್ನು ಆಹ್ವಾನಿಸಲಾಗಿತ್ತು. ಅದರಂತೆ ನವದೆಹಲಿಗೆ ಮುಯಿಝು ಆಗಮಿಸಿ, ಮೋದಿ ಅವರ ಪ್ರಮಾಣವಚನದಲ್ಲಿ ಭಾಗಿಯಾಗಿದ್ದರು. ಇದೀಗ ಎರಡನೇ ಬಾರಿ ಭಾರತಕ್ಕೆ ಬರುತ್ತಿದ್ದಾರೆ.
ಬೆಂಗಳೂರು ಜಾಗತಿಕವಾಗಿ ಗುರುತಿಸಿಕೊಂಡಿರುವ ನಗರ ಆಗಿರುವುದರಿಂದ ಮಾಲ್ಡೀವ್ಸ್ ಅಧ್ಯಕ್ಷ ಇಲ್ಲಿಗೂ ಭೇಟಿ ನೀಡುತ್ತಿರುವುದು ಕುತೂಹಲ ಮೂಡಿಸಿದೆ. ಉದ್ಯಾನನಗರಿಯನ್ನು ಸುತ್ತಿ, ಅವರು ಕೆಲವು ಮಹತ್ವದ ಸಭೆಗಳಲ್ಲಿ ಭಾಗಿಯಾಗಲಿದ್ದಾರೆ ಎಂದು ಹೇಳಲಾಗಿದೆ.












Click it and Unblock the Notifications