Luna 25 Crashed: ಭಾರತವೇ ಬೆಸ್ಟ್, ರಷ್ಯಾಗೆ ಎದುರಾಯ್ತು ಶಾಕ್!
ಇದಕ್ಕೆ ಅಲ್ವಾ ಹೇಳೋದು ತಾಳಿದವನು ಬಾಳಿಯಾನು ಅಂತಾ, ತಾಳ್ಮೆ ಇಲ್ಲದೆ ನುಗ್ಗಿದರೆ ಎಡವಟ್ಟು ಪಕ್ಕಾ. ಈಗ ರಷ್ಯಾ ಕಥೆ ಕೂಡ ಹೀಗೆ ಆಗಿದೆ. ದಿಢೀರ್ ಚಂದ್ರನ ಅಧ್ಯಯನ ನಡೆಸಲು ನೌಕೆ ಹಾರಿಸಿ ಕೈಸುಟ್ಟುಕೊಂಡಿದೆ. ರಷ್ಯಾದ 'ಲುನಾ-25' ಚಂದ್ರನ ಮೇಲ್ಮೈಗೆ ಅಪ್ಪಳಿಸಿ ಛಿದ್ರವಾಗಿದೆ. ಖುದ್ದು ರಷ್ಯಾ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ಈ ಕಟುಸತ್ಯ ಹೊರಹಾಕಿದ್ದು, ಅದರ ಸಂಪೂರ್ಣ ಮಾಹಿತಿ ಇಲ್ಲಿದೆ.
ನಿನ್ನೆ ಸಂಜೆ ವೇಳೆಗೆ 'ಲುನಾ-25' ಸಮಸ್ಯೆಯ ಸುಳಿಗೆ ಸಿಲುಕಿತ್ತು. ಚಂದ್ರನ ಮೇಲ್ಮೈನಲ್ಲಿ ಲ್ಯಾಂಡಿಂಗ್ ಪ್ರಕ್ರಿಯೆಗೂ ಮುನ್ನ ರಷ್ಯಾದ ಲುನಾ-25 ತಾಂತ್ರಿಕ ಸಮಸ್ಯೆ ಎದುರಿಸಿತ್ತು. ಈ ಕಾರಣಕ್ಕೆ ತುರ್ತಾಗಿ ಸಮಸ್ಯೆ ಬಗೆಹರಿಸಲು ರಷ್ಯಾ ವಿಜ್ಞಾನಿಗಳು ಪರದಾಡಿದ್ದರು. ಎಲ್ಲವೂ ಅಂದುಕೊಂಡಂತೆ ನಡೆದಿದ್ದರೆ ನಾಳೆ ಲುನಾ-25 ಚಂದ್ರನ ಮೇಲೆ ಲ್ಯಾಂಡ್ ಆಗಬೇಕಿತ್ತು. ಆದರೆ ದಿಢೀರ್ ಅಂತಾ ಆಘಾತಕಾರಿ ಸುದ್ದಿ ಹೊರಬಿದ್ದಿದ್ದು, ಚಂದ್ರನ ಮೇಲೆ ಬಿದ್ದಿರುವ ರಷ್ಯಾ 'ಲುನಾ-25' ಛಿದ್ರವಾಗಿದೆ ಎನ್ನಲಾಗಿದೆ. ಹೀಗಾಗಿ ರಷ್ಯಾ ಬಾಹ್ಯಾಕಾಶ ಲೋಕಕ್ಕೆ ದೊಡ್ಡ ಶಾಕ್ ಸಿಕ್ಕಂತಾಗಿದೆ.

50 ವರ್ಷಗಳ ಬಳಿಕ ಕನಸು ಛಿದ್ರ
ಒಂದಲ್ಲ.. ಎರಡಲ್ಲ.. ಬರೋಬ್ಬರಿ 50 ವರ್ಷಗಳ ಬಳಿಕ ರಷ್ಯಾ ಚಂದ್ರನ ಅಧ್ಯಯನಕ್ಕೆ ಯೋಜನೆ ಕೈಗೊಂಡಿತ್ತು. ಸೋವಿಯತ್ ರಷ್ಯಾ ಬಳಿಕ ರಷ್ಯಾ ಛಿದ್ರವಾಗಿ ಹೋಗಿತ್ತು. ಆ ನಂತರ ಯಾವುದೇ ಯೋಜನೆ ಚಂದ್ರನ ಅಧ್ಯಯನಕ್ಕೆ ರಷ್ಯಾ ಕೈಗೊಂಡಿರಲಿಲ್ಲ. ಚಂದ್ರನ ಬಗ್ಗೆ ರಷ್ಯಾ ತಲೆಕೆಡಿಸಿಕೊಂಡಿಲ್ಲ. ಈಗ 50 ವರ್ಷ ಬಳಿಕ ರಷ್ಯಾ ಚಂದ್ರನ ಅಧ್ಯಯನಕ್ಕೆ ಮುಂದಾಗಿದ್ದರೂ ಶಾಕ್ ಸಿಕ್ಕಿದೆ. ರಷ್ಯಾ ಹಾರಿಸಿದ್ದ 'ಲುನಾ-25' ಚಂದ್ರನ ಮೇಲೆ ಬಿದ್ದು ಸ್ಫೋಟಗೊಂಡಿದೆ. ಆದರೆ ಇದೇ ಹೊತ್ತಲ್ಲಿ ಭಾರತದ ಚಂದ್ರಯಾನ-3 ತನ್ನ ಲ್ಯಾಂಡಿಂಗ್ ಪ್ರಕ್ರಿಯೆಯಲ್ಲಿ ಮತ್ತೊಂದು ಹೆಜ್ಜೆ ಮುಂದಿಟ್ಟಿದೆ.
ಭಾರತಕ್ಕೆ ಗೆಲುವು.. ರಷ್ಯಾಗೆ ಸೋಲು..
ಆಗಸ್ಟ್ 18ರ ಶುಕ್ರವಾರ ಮೊದಲ ಡಿ-ಬೂಸ್ಟಿಂಗ್ ನಡೆದಿತ್ತು, ಇಂದು ಬೆಳಗ್ಗೆ ಮತ್ತೊಂದು ಹಾಗೂ ಕೊನೇ ಡಿ-ಬೂಸ್ಟಿಂಗ್ ಕಾರ್ಯ ನಡೆದಿದೆ. ಈ ಮೂಲಕ ಈಗ ಭಾರತದ ವಿಕ್ರಮ್ ಲ್ಯಾಂಡರ್ ಚಂದ್ರನಿಗೆ ಅತ್ಯಂತ ಸಮೀಪ ಇರುವ 134 ಕಿಮೀ ದೂರದ ಕಕ್ಷೆ ತಲುಪಿದೆ. ಈ ಕಕ್ಷೆಯಿಂದಲೇ ಚಂದ್ರನ ದಕ್ಷಿಣ ಧ್ರುವ ಪ್ರದೇಶದಲ್ಲಿ ಲ್ಯಾಂಡಿಂಗ್‌ಗೆ ಇಸ್ರೋ ಪ್ರಯತ್ನಿಸಲಿದೆ. 25 ಕಿಲೋ ಮೀಟರ್ x 134 ಕಿಲೋ ಮೀಟರ್ ಕಕ್ಷೆ ಚಂದ್ರನ ಸಮೀಪದ ಕಕ್ಷೆಯಾಗಿದ್ದು ಚಂದ್ರನ ಮೇಲೆ ಇಳಿಯುವ ಪ್ರಕ್ರಿಯೆ ಆಗಸ್ಟ್ 23ರಂದು ನಡೆಯಲಿದೆ. ಹೀಗಾಗಿ ಇಡೀ ಜಗತ್ತು ಭಾರತದ ಕಡೆ ಕಣ್ಣಿಟ್ಟು ಕಾಯುತ್ತಿದೆ. ಇದೇ ಸಂದರ್ಭದಲ್ಲಿ ರಷ್ಯಾಗೆ ಶಾಕ್ ಸಿಕ್ಕಿರುವುದು ಬಾಹ್ಯಾಕಾಶ ಲೋಕಕ್ಕೆ ಬೇಸರ ತರಿಸಿದೆ.
ಲೇಟ್ ಆದರೂ ಭಾರತ ಲೇಟೆಸ್ಟ್!
ಚಂದ್ರನ ಮೇಲೆ ನೀರು ಇದೆ ಎಂದು ಮೊದಲ ಬಾರಿಗೆ ಹೇಳಿದ್ದು ನಮ್ಮ ಇಸ್ರೋ. ಹೀಗೆ ಭಾರತದ ಹೆಮ್ಮೆ ಇಸ್ರೋ ಈ ಬಾರಿ ಚಂದ್ರನ ಮೇಲೆ ನೀರು ಇರುವ ಕುರುಹು ತೋರಿಸುವ ಮೂಲಕ ಜಗತ್ತಿಗೆ ಮಾದರಿಯಾಗಲು ಮುಂದಾಗಿದೆ. ಇದರ ಜೊತೆಗೆ ಮನಷ್ಯರು ಚಂದ್ರನ ಮೇಲೆ ವಾಸ ಮಾಡಲು ಅಗತ್ಯವಿರುವ ವಾತಾವರಣದ ಸಂಶೋಧನೆ ಕೂಡ ನಡೆಯಲಿದೆ. ಜೊತೆ ಜೊತೆಗೆ ಚಂದ್ರನ ಮೇಲೆ ಇರುವ ಖನಿಜಗಳ ಅಧ್ಯಯನ ಕೂಡ ನಡೆಯಲಿದ್ದು, ಈ ಮೂಲಕ ಚಂದ್ರನ ಮೇಲೆ ರೋವರ್ ಇಳಿಸಿರುವ ಕೆಲವೇ ದೇಶಗಳ ಪೈಕಿ ಭಾರತವು ಕೂಡ ಒಂದಾಗಲಿದೆ. ಅಲ್ಲದೆ ವಿಕ್ರಮ್ ಲ್ಯಾಂಡರ್ ಎಷ್ಟು ಶಕ್ತಿ ಹೊಂದಿದೆ ಅಂದರೆ, ಲ್ಯಾಂಡರ್ ತಾನಾಗಿಯೇ ತನ್ನ ಲ್ಯಾಂಡಿಂಗ್ ಸ್ಥಳ ನಿರ್ಧರಿಸುತ್ತದೆ. ಹೀಗೆ ಭಾರತ ಲೇಟ್ ಆದರೂ ಭಾರತ ಲೇಟೆಸ್ಟ್ ಎಂಟ್ರಿ ಕೊಡುತ್ತಿದೆ.

ಒಟ್ನಲ್ಲಿ ಚಂದ್ರನನ್ನ ತಲುಪಲು ಭಾರತ ಮತ್ತು ರಷ್ಯಾ ಮಧ್ಯೆ ಪೈಪೋಟಿ ಶುರುವಾಗಿತ್ತು. ಆದರೆ ಎರಡೂ ದೇಶಗಳ ನಡುವೆ ಉತ್ತಮ ಸಂಬಂಧ ಇದ್ದು, ಪರಸ್ಪರ ಯೋಜನೆಗಳಿಗೂ ಶುಭಾಶಯ ಕೋರಿದ್ದರು. ಹೀಗೆ ಕ್ರೀಡಾ ಮನೋಭಾವದಲ್ಲೇ ರಷ್ಯಾದ ಯೋಜನೆಗೆ ಇಸ್ರೋ ಬೆಂಬಲ ನೀಡಿತ್ತು. ಇದೀಗ ರಷ್ಯಾಗೆ ಆಘಾತಕಾರಿ ಸುದ್ದಿ ಸಿಕ್ಕಿದೆ. ಯಾವ ಕಾರಣಕ್ಕೆ ಹೀಗೆ ಎಡವಟ್ಟು ಎದುರಾಯ್ತು? ಅನ್ನೋದು ಸ್ವತಃ ಇನ್ನೂ ರಷ್ಯಾ ವಿಜ್ಞಾನಿಗಳಿಗೆ ಗೊತ್ತಾಗಿಲ್ಲ. ಈ ಹಿನ್ನೆಲೆ ತನಿಖೆ ಮುಂದುವರಿಸಿದೆ ರಷ್ಯಾ ಬಾಹ್ಯಾಕಾಶ ಸಂಸ್ಥೆ.












Click it and Unblock the Notifications