
ಬ್ರೆಜಿಲ್ ಹೆದ್ದಾರಿಯಲ್ಲಿ ಭೂಕುಸಿತ: 2 ಸಾವು- 30ಕ್ಕೂ ಹೆಚ್ಚು ಜನ ಕಾಣೆ
ದಕ್ಷಿಣ ಬ್ರೆಜಿಲ್‌ನಲ್ಲಿ ಹೆದ್ದಾರಿಯ ಒಂದು ಭಾಗದಲ್ಲಿ ಭೂಕುಸಿತ ಉಂಟಾಗಿದ್ದು ಭಾರೀ ಅನಾಹುತ ಸಂಭವಿಸಿದೆ. ಘಟನೆಯಲ್ಲಿ ಇಬ್ಬರು ಸಾವನ್ನಪ್ಪಿದ್ದು ಡಜನ್‌ಗಟ್ಟಲೆ ಜನರು ಕಾಣೆಯಾಗಿದ್ದಾರೆ. ಇದರೊಂದಿಗೆ ಸುಮಾರು 20 ಕಾರುಗಳು ಮತ್ತು ಟ್ರಕ್‌ಗಳು ಕಂದಕಕ್ಕೆ ಉರುಳಿ ಬಿದ್ದವೆ ಎಂದು ಅಧಿಕಾರಿಗಳು ಬುಧವಾರ ತಿಳಿಸಿದ್ದಾರೆ.
ಭಾರೀ ಮಳೆಯಿಂದಾಗಿ ಈ ಘಟನೆ ಸಂಭವಿಸಿದೆ ಎಂದು ಹೇಳಲಾಗುತ್ತಿದೆ. ಕಳೆದ ಕೆಲ ದಿನಗಳಿಂದ ಪರಾನಾ ರಾಜ್ಯದಲ್ಲಿ ಅಧಿಕ ಮಳೆಯಾಗುತ್ತಿದೆ. ಇದರ ಪರಿಣಾಮ ಸೋಮವಾರ ಬೆಟ್ಟದ ಮಣ್ಣು ಕುಸಿಯಲು ಆರಂಭಗೊಂಡಿದೆ. ಏಕಾಏಕಿ ಹೆದ್ದಾರಿ ಬಿಆರ್ 367 ನ ಅರ್ಧ ಭಾಗ ಕುಸಿದು ಬಿದ್ದಿದೆ. "ಕಾಣೆಯಾದವರ ನಿಖರವಾದ ಸಂಖ್ಯೆಯನ್ನು ತಿಳಿಯುವುದು ಕಷ್ಟ. ವಾಹನದಲ್ಲಿ ಒಂದರಿಂದ ಐದು ಜನರು ಇರಬಹುದು. ನಾವು 30 ರಿಂದ 50 ಜನರು ಕಾಣೆಯಾಗಿರುವ ಅಂದಾಜಿನೊಂದಿಗೆ ಕೆಲಸ ಮಾಡುತ್ತಿದ್ದೇವೆ" ಎಂದು ಸ್ಥಳೀಯ ತುರ್ತು ಪ್ರತಿಕ್ರಿಯೆ ಮುಖ್ಯಸ್ಥ ಮನೋಯೆಲ್ ವಾಸ್ಕೋ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.
ತುರ್ತು ಸೇವೆಗಳು ಬಿಡುಗಡೆ ಮಾಡಿದ ವೈಮಾನಿಕ ಚಿತ್ರಗಳು ಹೆದ್ದಾರಿ ಕುಸಿದಿರುವುದನ್ನು ಕಾಣಬಹುದು. ಅದು ಹೆದ್ದಾರಿಯ ದೊಡ್ಡ ಭಾಗವಾಗಿದ್ದು, ಅದರ ಮೇಲೆ ವಾಹನಗಳು ಸಂಚಾರ ಮಾಡುತ್ತಿರುವುದನ್ನು ಕಾಣಬಹುದು. ಇದರ ಮಧ್ಯೆ ಕೆಟ್ಟ ಹವಾಮಾನ ಮತ್ತು ದೂರದ ಸ್ಥಳವು ಶೋಧ ಕಾರ್ಯವನ್ನು ಸಂಕೀರ್ಣಗೊಳಿಸುತ್ತಿದೆ ಎಂದು ರಕ್ಷಣಾ ಕಾರ್ಯಕರ್ತರು ಹೇಳಿದ್ದಾರೆ.
ಆದರೂ ಬದುಕುಳಿದವರನ್ನು ಹುಡುಕುವ ಭರವಸೆಯಲ್ಲಿ ಅವರು ಸ್ಥಳ ಪತ್ತೆಹಚ್ಚುವ ಡ್ರೋನ್ ಕ್ಯಾಮೆರಾಗಳೊಂದಿಗೆ ಕಾರ್ಯ ಮಾಡುತ್ತಿರುವುದಾಗಿ ಹೇಳಿಕೊಂಡಿದ್ದಾರೆ. ಇಲ್ಲಿಯವರೆಗೆ ಎರಡು ಶವಗಳು ಪತ್ತೆಯಾಗಿದ್ದು ಕರಾವಳಿ ಪಟ್ಟಣವಾದ ಗೌರಾಟುಬಾ, ಹತ್ತಿರದ ನಗರ ಸೇರಿದಂತೆ ಒಟ್ಟು ಆರು ಜನರನ್ನು ರಕ್ಷಣೆ ಮಾಡಲಾಗಿದೆ.
"ಇದು ಭಯಾನಕವಾಗಿತ್ತು. ನಮ್ಮ ಕಾರು ಕಂದಕಕ್ಕೆ ಬಿತ್ತು, ಕಾರಿನ ಮೇಲೆ ಮಣ್ಣು ಬಿತ್ತು. ನಾವು ದೇವರ ದಯೆಯಿಂದ ಮಾತ್ರ ಜೀವಂತವಾಗಿದ್ದೇವೆ" ಎಂದು ಮೇಯರ್ ರಾಬರ್ಟೊ ಜಸ್ಟಸ್ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದ ವಿಡಿಯೊದಲ್ಲಿ ಹೇಳಿದ್ದಾರೆ.
ಬ್ರೆಜಿಲ್ ಆಗಾಗ್ಗೆ ಮಾರಣಾಂತಿಕ ಭೂಕುಸಿತಗಳಿಗೆ ಒಳಗಾಗುತ್ತದೆ. ಫೆಬ್ರವರಿಯಲ್ಲಿ, ಸುಂದರವಾದ ಆಗ್ನೇಯ ಪ್ರವಾಸಿ ಪಟ್ಟಣವಾದ ಪೆಟ್ರೋಪೊಲಿಸ್‌ನಲ್ಲಿ ಸರಣಿ ಭೂಕುಸಿತದಲ್ಲಿ 200 ಕ್ಕೂ ಹೆಚ್ಚು ಜನರು ಸಾವನ್ನಪ್ಪಿದರು.