ಗಾಜಾ ಶಾಂತಿ ಮಂಡಳಿಗೆ ಸೇರಲು ಉಕ್ರೇನ್‌ಗೆ ಟ್ರಂಪ್ ಆಹ್ವಾನ, ಝೆಲೆನ್ಸ್ಕಿಗೆ ಹೊಸ ತಲೆನೋವು!
ಡೊನಾಲ್ಡ್ ಟ್ರಂಪ್ ಹಾಗೂ ಉಕ್ರೇನ್ ನಡುವೆ ದೊಡ್ಡ ದೊಡ್ಡ ಒಪ್ಪಂದ ನಡೆಯುತ್ತಿವೆ. ಹೀಗಿದ್ದಾಗ ಉಕ್ರೇನ್ ಕೂಡ ತನಗೆ ಬೇಕಿರುವ ನೆರವು ಪಡೆಯಲು ಅಮೆರಿಕದ ಬಳಿ ಬೇಡುತ್ತಿದೆ. ಅಮೆರಿಕ ಅಧ್ಯಕ್ಷ ಟ್ರಂಪ್ ಕೂಡ ಇದೇ ಸಮಯವನ್ನು ಅಸ್ತ್ರ ಮಾಡಿಕೊಂಡು ಉಕ್ರೇನ್ ಬಳಿ ಏನೆಲ್ಲಾ ಪಡೆಯಬಹುದೋ ಅದನ್ನೆಲ್ಲಾ ಪಡೆದಿದ್ದಾರೆ. ಇಷ್ಟೆಲ್ಲದರ ನಡುವೆ ಅಮೆರಿಕ ಜೊತೆಯಲ್ಲಿ ಸ್ನೇಹ ಬೆಳೆಸಿರುವ ಉಕ್ರೇನ್‌ಗೆ ಮತ್ತೊಂದು ಟೆನ್ಷನ್ ಶುರುವಾಗಿದೆ, ಗಾಜಾ ಶಾಂತಿ ಮಂಡಳಿಗೆ ಸೇರಲು ಉಕ್ರೇನ್‌ಗೆ ಟ್ರಂಪ್ ಆಹ್ವಾನ ಕೊಟ್ಟಿರುವುದು ಬಿಸಿ ತುಪ್ಪವಾಗಿ ಪರಿಣಮಿಸಿದೆ.
ಅಮೆರಿಕ ಅಧ್ಯಕ್ಷರಾಗಿ 2ನೇ ಬಾರಿಗೆ ಆಯ್ಕೆಯಾದ ನಂತರ ಡೊನಾಲ್ಡ್ ಟ್ರಂಪ್ ತಮ್ಮ ಮಾತು ಕೇಳದ ಯಾರನ್ನೂ ಬಿಡುತ್ತಿಲ್ಲ. ತಮ್ಮ ಮಾತಿಗೆ ಸುಮ್ಮನೆ ಜೈಕಾರ ಹಾಕದೇ ಹೋದರೆ ಒಂದೋ ತೆರಿಗೆ ಬಾಣ ಪ್ರಯೋಗ ಮಾಡುತ್ತಾರೆ ಅಥವಾ ಆಕ್ರಮಣದ ಮುನ್ಸೂಚನೆ ಕೊಡುತ್ತಿದ್ದಾರೆ. ಹೀಗಿದ್ದಾಗ ಉಕ್ರೇನ್‌ಗೆ ಹೊಸ ತಲೆನೋವು ಶುರುವಾಗಿದ್ದು, ರಷ್ಯಾ ಜೊತೆಗೆ ತಿಕ್ಕಾಟ ನಡೆಸುವಾಗಲೇ ಟ್ರಂಪ್ ಇಟ್ಟಿರುವ ಹೊಸ ಡಿಮ್ಯಾಂಡ್ ಉಕ್ರೇನ್ ಅಧ್ಯಕ್ಷರ ನಿದ್ದೆ ಹಾರಿ ಹೋಗುವಂತೆ ಮಾಡಿದೆ. ಗಾಜಾ ಶಾಂತಿಗಾಗಿ ಹೊಸದಾಗಿ ಮಂಡಳಿ ರಚನೆ ಮಾಡಿ ಅದರಲ್ಲಿ ಹಲವು ದೇಶಗಳನ್ನು ಸದಸ್ಯರನ್ನಾಗಿ ಮಾಡಲು ಟ್ರಂಪ್ ಅವರು ಪ್ಲಾನ್ ಮಾಡಿದ್ದಾರೆ. ಈ ಮಂಡಳಿಗೆ ಇದೀಗ ಉಕ್ರೇನ್ ಕೂಡ ಸೇರಲೇಬೇಕಾದ ಅನಿವಾರ್ಯ ಪರಿಸ್ಥಿತಿ ನಿರ್ಮಾಣ ಆಗಿದ್ದು, ಇದೇ ವಿಚಾರ ಈಗ ಉಕ್ರೇನ್‌ಗೆ ನಡುಕ ತರಿಸಿದೆ.

ಶತ್ರುಗಳ ಜೊತೆಗೆ ಕೂರುವ ಅನಿವಾರ್ಯತೆ
ಹೌದು, ಅಮೆರಿಕ ಅಧ್ಯಕ್ಷ ಟ್ರಂಪ್ ಅವರು ರಚಿಸಿರುವ ಗಾಜಾ ಶಾಂತಿ ಮಂಡಳಿಯಲ್ಲಿ ರಷ್ಯಾ ಮತ್ತು ಬೆಲಾರಸ್ ಕೂಡ ಕೂರಲಿವೆ. ಹೀಗಿದ್ದಾಗ ತಮ್ಮ ಶತ್ರುಗಳ ಜೊತೆಯಲ್ಲಿ ಕೂರಬೇಕಾದ ಅನಿವಾರ್ಯ ಸ್ಥಿತಿಗೆ ಇದೀಗ ಉಕ್ರೇನ್ ಬರಬೇಕಿದೆ. ಈ ಸತ್ಯವನ್ನು ಒಪ್ಪಿಕೊಂಡೇ ಉಕ್ರೇನ್ ಗಾಜಾ ಶಾಂತಿ ಮಂಡಳಿಗೆ ಸೇರುವ ಅನಿವಾರ್ಯತೆ ನಿರ್ಮಾಣ ಆಗಿದೆ. ಅಲ್ಲದೆ ಅಮೆರಿಕ ಕಡೆಯಿಂದ ಉಕ್ರೇನ್‌ಗೆ ಆಹ್ವಾನ ಬಂದ ಬಗ್ಗೆ ವೊಲೊಡಿಮಿರ್ ಝೆಲೆನ್ಸ್ಕಿ ದೃಢಪಡಿಸಿದ್ದು, ಆಹ್ವಾನದ ಬಗ್ಗೆ ಪರಿಶೀಲನೆ ನಡೆಯುತ್ತಿದೆ ಎಂಬ ಉತ್ತರ ನೀಡಿದ್ದಾರೆ. ಹಾಗಾದರೆ ಉಕ್ರೇನ್ ಈಗ ಟ್ರಂಪ್ ಅವರು ರಚಿಸಿರುವ ಗಾಜಾ ಶಾಂತಿ ಮಂಡಳಿಗೆ ಸೇರದೇ ಇದ್ದರೆ ಏನಾಗಬಹುದು?
ಬಿಸಿ ತುಪ್ಪ ನುಂಗಿರುವ ಉಕ್ರೇನ್
ಉಕ್ರೇನ್ ಅಧ್ಯಕ್ಷ ಈ ಬಗ್ಗೆ ಪ್ರತಿಕ್ರಿಯೆ ನೀಡುತ್ತಾ, ರಷ್ಯಾ ನಮ್ಮ ಶತ್ರು & ಬೆಲಾರಸ್ ಅದರ ಮಿತ್ರ ಎಂದು ಹೇಳಿದ್ದಾರೆ. ಈ ಮೂಲಕ ಉಕ್ರೇನ್‌ಗೆ ಗಾಜಾ ಶಾಂತಿ ಮಂಡಳಿ ಸೇರಿವುದು ಇಷ್ಟವೇ ಇಲ್ಲ, ಎನ್ನುವ ಮುನ್ಸೂಚನೆ ನೀಡಿದಂತೆ ಕಾಣುತ್ತಿದೆ. ಏಕೆಂದರೆ, ಈ ಬೆಲಾರಸ್ ಅಧ್ಯಕ್ಷ ಅಲೆಕ್ಸಾಂಡರ್ ಲುಕಾಶೆಂಕೊ ಉಕ್ರೇನ್‌ಗೆ ಕೊಟ್ಟ ಏಟು ಅಷ್ಟಿಷ್ಟಲ್ಲ. ಅದರಲ್ಲೂ ಉಕ್ರೇನ್ ವಿರುದ್ಧದ ರಷ್ಯಾ ಯುದ್ಧದ ಸಮಯದಲ್ಲಿ ಪುಟಿನ್ ಪಡೆಗೆ ಸಹಾಯ ಮಾಡಿದ್ದಾರೆ. ಅಲ್ಲದೇ ಯುದ್ಧ ಸಮಯದಲ್ಲಿ ಬೆಲಾರಸ್ ನೆಲವನ್ನು ರಷ್ಯಾ ಬಳಕೆ ಮಾಡಿಕೊಂಡಿದೆ. ಹೀಗಿದ್ದಾಗ ಉಕ್ರೇನ್ ತಮ್ಮ ಶತ್ರುಗಳ ಜೊತೆಗೆ ಗಾಜಾ ಶಾಂತಿ ಮಂಡಳಿಯಲ್ಲಿ ಒಟ್ಟಿಗೇ ಕೂರಬೇಕಾದ ಅನಿವಾರ್ಯ ಪರಿಸ್ಥಿತಿ ಎದುರಾಗಿದೆ. ಅಕಸ್ಮಾತ್ ಇದು ಸಾಧ್ಯವಾಗದೇ ಇದ್ದರೆ ಉಕ್ರೇನ್ ಟ್ರಂಪ್ ಅವರ ವಿರೋಧವನ್ನ ಕಟ್ಟಿಕೊಳ್ಳುವ ಸ್ಥಿತಿ ಇದೆ. ಈ ಮೂಲಕ ಉಕ್ರೇನ್ ಪರಿಸ್ಥಿತಿ ಬಿಸಿ ತುಪ್ಪ ನುಂಗಿದಂತೆ ಆಗಿದೆ.
ಏನಿದು ಗಾಜಾ ಶಾಂತಿ ಮಂಡಳಿ?
ಮಧ್ಯಪ್ರಾಚ್ಯ ಭಾಗದಲ್ಲಿ ಮೊದಲು ಕಿಚ್ಚು ಹೊತ್ತಿಸಿದ್ದೇ ಇಸ್ರೇಲ್ ಹಾಗೂ ಹಮಾಸ್ ಯುದ್ಧ. 2023ರ ಅಕ್ಟೋಬರ್ ತಿಂಗಳಲ್ಲಿ ಶುರುವಾಗಿದ್ದ ಈ ಇಬ್ಬರ ಬಡಿದಾಟ ಮುಂದೆ ದೊಡ್ಡ ಹಂತಕ್ಕೆ ಹೋಗಿತ್ತು, ಅಲ್ಲದೆ ಅಕ್ಕಪಕ್ಕದ ದೇಶಗಳು ಕೂಡ ಬಡಿದಾಡುವ ಸ್ಥಿತಿ ನಿರ್ಮಾಣ ಆಗಿತ್ತು. ಹೀಗಾಗಿ ಇಸ್ರೇಲ್ ಮತ್ತು ಹಮಾಸ್ ಯುದ್ಧಕ್ಕೆ ಬ್ರೇಕ್ ಹಾಕಲು, ಆ ಮೂಲಕ ಗಾಜಾ ಪಟ್ಟಿಯನ್ನು ಶಾಂತಗೊಳಿಸಲು ಟ್ರಂಪ್ ಪ್ಲಾನ್ ಮಾಡಿದ್ದಾರೆ. ಇದಕ್ಕೆ 20 ಅಂಶಗಳ ಯೋಜನೆ ರೂಪಿಸಿದ್ದು ಇದರ ಭಾಗವಾಗಿ ಗಾಜಾ ಶಾಂತಿ ಮಂಡಳಿ ರಚನೆ ಮಾಡಿದ್ದಾರೆ, ಈ ಮಂಡಳಿಗೆ ಯುರೋಪ್ ಒಕ್ಕೂಟದ ದೇಶಗಳು, ಅಮೆರಿಕ ಮತ್ತು ಮಧ್ಯಪ್ರಾಚ್ಯ ಮೂಲದ ದೇಶಗಳನ್ನು ಸದಸ್ಯರಾಗಿ ಬರಲು ಆಹ್ವಾನಿಸಿದ್ದಾರೆ ಟ್ರಂಪ್. ಈಗ ರಷ್ಯಾ ಕೂಡ ಈ ಮಂಡಳಿ ಸೇರಲು ಆಹ್ವಾನ ಪಡೆದಿದ್ದು, ಇಕ್ಕಟ್ಟಿನ ಸ್ಥಿತಿಯಲ್ಲಿ ಉಕ್ರೇನ್ ಇದೆ.












Click it and Unblock the Notifications