ಕಾಬೂಲ್ ಏರ್‌ಪೋರ್ಟ್ ದಾಳಿ ಹಿಂದೆ ISISನ ಫಾರೂಖಿ ಕೈವಾಡ?
ಕಾಬೂಲ್, ಆಗಸ್ಟ್ 27: ಅಫ್ಘಾನಿಸ್ತಾನದ ಕಾಬೂಲ್‌ನಲ್ಲಿ ಗುರುವಾರ ನಡೆದ ಸರಣಿ ಬಾಂಬ್ ಸ್ಫೋಟದ ಹಿಂದೆ ಐಎಸ್‌ಐಎಸ್‌ನ ಮವಲವಿ ಅಬ್ದುಲ್ಲಾ ಫಾರೂಖಿ ಕೈವಾಡವಿದೆ ಎನ್ನುವ ಅನುಮಾನ ವ್ಯಕ್ತವಾಗಿದೆ.
ಫಾರೂಖಿ ಪಾಕಿಸ್ತಾನದವನು ಈ ಹಿಂದೆ ಲಷ್ಕರ್ ಎ ತೊಯ್ಬಾ, ತೆಹ್ರೀಕ್ ಇ ತಾಲಿಬಾನ್ ಉಗ್ರ ಸಂಘಟನೆಗಳಲ್ಲಿ ಗುರುತಿಸಿಕೊಂಡಿದ್ದ, 2019ರ ಏಪ್ರಿಲ್‌ನಿಂದ ಐಎಸ್‌ಐಎಸ್ ಉಗ್ರ ಸಂಘಟನೆಯ ಖೊರಾಸನ್ ಪ್ರಾಂತ್ಯದ ನಾಯಕನಾಗಿ ಗುರುತಿಸಿಕೊಂಡಿದ್ದಾನೆ ಎಂದು ಮೂಲಗಳು ತಿಳಿಸಿವೆ.
ಕಾಬೂಲ್‌ನಲ್ಲಿ 2020ರಲ್ಲಿ ನಡೆದ ಗುರುದ್ವಾರದ ಬಳಿ ಆತ್ಮಾಹುತಿ ಬಾಂಬ್ ಸ್ಫೋಟಕ್ಕೆ ಸಂಬಂಧಿಸಿದಂತೆ ಫಾರೂಖಿಯನ್ನು ಬಂಧಿಸಲಾಗಿತ್ತು.
ಕಾಬೂಲ್‌ನ ಹೃದಯಭಾಗದ ಶೋರ್ ಬಜಾರ್ ಪ್ರದೇಶದಲ್ಲಿರುವ ಗುರುದ್ವಾರದ ಮೇಲೆ 2020ರಮಾರ್ಚ್ 25ರಂದು ನಡೆದಿದ್ದ ಆತ್ಮಾಹುತಿ ದಾಳಿಯಲ್ಲಿ 25 ಮಂದಿ ಮೃತಪಟ್ಟು ಹತ್ತಾರು ಮಂದಿ ಗಾಯಗೊಂಡಿದ್ದರು. ದಾಳಿ ಗುರುದ್ವಾರದಲ್ಲಿ 150ಕ್ಕೂ ಹೆಚ್ಚು ಮಂದಿ ಪ್ರಾರ್ಥನೆ ಸಲ್ಲಿಸುತ್ತಿದ್ದರು.
ಇದೀಗ ಮತ್ತೆ ಕಾಬೂಲ್‌ನಲ್ಲಿ ಆತ್ಮಾಹುತಿ ಬಾಂಬ್ ದಾಳಿ ನಡೆದಿದ್ದು, 60 ಮಂದಿ ಮೃತಪಟ್ಟಿದ್ದು ಹಲವು ಮಂದಿ ಗಾಯಗೊಂಡಿದ್ದಾರೆ.

ದಾಳಿ ಹಿಂದೆ ಐಎಸ್‌ಐಎಸ್ ಕೈವಾಡ
ಕಾಬೂಲ್ ವಿಮಾನ ನಿಲ್ದಾಣದ ಸಂಕೀರ್ಣದಲ್ಲಿ ನಡೆದ ಸರಣಿ ಬಾಂಬ್ ಸ್ಫೋಟ ಪ್ರಕರಣದಲ್ಲಿ ಇಸ್ಲಾಮಿಕ್ ಸ್ಟೇಟ್ ನ ಕೈವಾಡವಿರುವ ಸಾಧ್ಯತೆ ಖಂಡಿತವಾಗಿಯೂ ಇದೆ ಎಂದು ಅಮೆರಿಕದ ಅಧಿಕಾರಿಯೊಬ್ಬರು ಹೇಳಿದ್ದಾರೆ.
ಗುರುವಾರ ನಡೆದ ದಾಳಿಯಲ್ಲಿ ಅಮೆರಿಕದ ಸೇನೆಯ ಸಿಬ್ಬಂದಿಗಳಿಗೂ ಗಾಯಗಳಾಗಿದೆ. ಅಫ್ಘಾನಿಸ್ತಾನದಿಂದ ಅಮೆರಿಕ ಸೇನೆ ಹಿಂತೆಗೆತಕ್ಕೆ ಆ.31 ವರೆಗೂ ಗಡುವು ವಿಧಿಸಲಾಗಿದೆ. ಗಡುವು ವಿಸ್ತರಣೆ ಮಾಡಲು ಯತ್ನಿಸಿದರೆ ಅದರ ಪರಿಣಾಮವನ್ನು ಅಮೆರಿಕ ಎದುರಿಸಬೇಕಾಗುತ್ತದೆ ಎಂದು ತಾಲೀಬಾನ್ ಎಚ್ಚರಿಕೆ ನೀಡಿತ್ತು. ಆದರೆ ಇದಕ್ಕೂ ಮುನ್ನ ಆ.26 ರಂದು ಕಾಬೂಲ್ ನಲ್ಲಿ ಅವಳಿ ಆತ್ಮಹತ್ಯಾ ಬಾಂಬ್ ಸ್ಫೋಟ ನಡೆದಿದೆ.
ತಾಲಿಬಾನ್ ಗಿಂತಲೂ ಇಸ್ಲಾಮಿಕ್ ಸ್ಟೇಟ್ ಉಗ್ರವಾಗಿದ್ದು, ನಾಗರಿಕರನ್ನು ಟಾರ್ಗೆಟ್ ಮಾಡಿ ಈ ದಾಳಿ ನಡೆಸಿರುವ ಸಾಧ್ಯತೆ ಇದೆ ಎಂದು ಅಮೆರಿಕ ಹೇಳಿದೆ.
ಅಫ್ಘಾನಿಸ್ತಾನ ತಾಲೀಬಾನ್ ವಶವಾದ ನಂತರ ಕಾಬೂಲ್ ವಿಮಾನ ನಿಲ್ದಾಣದ ಮೂಲಕ ಬೃಹತ್ ಪ್ರಮಾಣದಲ್ಲಿ ದೇಶಗಳು ತಮ್ಮ ತಮ್ಮ ನಾಗರಿಕರನ್ನು ರಾಯಭಾರಿ ಅಧಿಕಾರಿಗಳನ್ನು ಕರೆಸಿಕೊಳ್ಳಲು ಕಾರ್ಯಾಚರಣೆ ನಡೆಸುತ್ತಿದೆ.

ಕಾಬೂಲ್ ದಾಳಿ ಹೊಣೆ
ಅಘ್ಘಾನಿಸ್ತಾನದಲ್ಲಿ ನೆತ್ತರಕೋಡಿ ಹರಿಸಿದ್ದು ನಾವೇ ಎಂದು ಇಸ್ಲಾಮಿಕ್ ಸ್ಟೇಟ್ ಐಎಸ್‍ಕೆಪಿ(ISKP) ಸಂಘಟನೆ ದಾಳಿಯ ಹೊಣೆ ಹೊತ್ತುಕೊಂಡಿದೆ.
ಅಮೆರಿಕ ನೇತೃತ್ವದಲ್ಲಿ ಸೇನಾ ಪಡೆಗಳ ಹಿಂತೆಗೆತ ಕಾರ್ಯಾಚರಣೆ ವೇಳೆ ಅಘ್ಘಾನಿಸ್ತಾನದಲ್ಲಿ ಏಳು ಸರಣಿ ಬಾಂಬ್ ಸ್ಫೋಟ ಸಂಭವಿಸಿತ್ತು. ಬಳಿಕ ರಾತ್ರಿಯಿಡಿ ನೆತ್ತರು ಹರಿಸಿದ ಪಾಪಿಗಳು ನಾವು ಎಲ್ಲಾ ಭದ್ರತಾ ತಡೆಗೋಡೆಗಳನ್ನೂ ದಾಟಿ ಅಮೆರಿಕ ಭದ್ರತಾ ಪಡೆಗಳಿರುವ ಪ್ರದೇಶಕ್ಕಿಂತ 16 ಅಡಿ ದೂರದಲ್ಲಿ ಆತ್ಮಾಹುತಿ ಬಾಂಬ್ ದಾಳಿ ನಡೆಸುವುದಕ್ಕೆ ಒಬ್ಬ ಬಾಂಬರ್‍ನಿಂದ ಸಾಧ್ಯವಾಗಿದೆ ಎಂದು ದಾಳಿಯ ಹೊಣೆ ಹೊತ್ತ ಐಎಸ್‍ಕೆಪಿ ಸಂಘಟನೆ ಪ್ರಚಾರ ಪಡೆದುಕೊಂಡಿದೆ.
ಜಿಹಾದಿ ಸಂಘಟನೆಗಳಲ್ಲೇ ಅತೀ ಕ್ರೂರವಾದ ಸಂಘಟನೆಯಾಗಿ ಗುರುತಿಸಿಕೊಂಡಿರುವ ಐಎಸ್‍ಕೆಪಿ, ತಾಲಿಬಾನ್ ಮತ್ತು ಅಮೆರಿಕ ಸೇನೆಯನ್ನು ಟಾರ್ಗೆಟ್ ಮಾಡಿಕೊಂಡು ದಾಳಿ ನಡೆಸಿರುವುದು ಸ್ಪಷ್ಟವಾಗಿದೆ. ತಾಲಿಬಾನ್, ಹಕ್ಕಾನಿ ಸಂಘಟನೆಗಿಂತಲೂ ಐಎಸ್‍ಕೆಪಿ ಸಂಘಟನೆ ಬಲಿಷ್ಠವಾಗಿದ್ದು, ತಾಲಿಬಾನ್‍ನಿಂದ ಹೊರಬಿದ್ದವರೇ ಐಎಸ್‍ಕೆಪಿ ಜೊತೆ ಸೇರಿಕೊಂಡು ಉಗ್ರರಾಗಿದ್ದಾರೆ. ಈ ಪಾಪಿಗಳು ಶಾಲಾ ಮಕ್ಕಳು, ಗರ್ಭಿಣಿ, ಹಸುಗೂಸುಗಳಿಗೂ ಗುಂಡಿಕ್ಕಿದ್ದು, ಆಸ್ಪತ್ರೆಗಳಿಗೂ ನುಗ್ಗಿ ರಕ್ತ ಹರಿಸಿರುವ ಚರಿತ್ರೆಯನ್ನು ಐಎಸ್‍ಕೆಪಿ ಹೊಂದಿದೆ.

ಉಗ್ರರ ವಿರುದ್ಧ ಗುಡುಗಿದ ಜೋ ಬೈಡನ್
ಅಫ್ಘಾನಿಸ್ತಾನದಲ್ಲಿ ರಕ್ತದೋಕುಳಿ ಹರಿಸಿದ ಐಸಿಸ್-ಕೆ ಉಗ್ರರ ವಿರುದ್ಧ ಅಮೆರಿಕ ಅಧ್ಯಕ್ಷ ಜೋ ಬೈಡನ್ ಗುಡುಗಿದ್ದಾರೆ. ನಿಮ್ಮನ್ನು ಸುಮ್ಮನೆ ಬಿಡುವ ಅಥವಾ ಕ್ಷಮಿಸುವ ಪ್ರಶ್ನೆಯೇ ಇಲ್ಲ ಎಂದು ಹೇಳಿದ್ದಾರೆ.
ಈ ದಾಳಿ ಮಾಡಿರುವ, ಅಮೆರಿಕಾಗೆ ಕೇಡು ಬಯಸುತ್ತಿರುವ ಶಕ್ತಿಗಳು ಇದನ್ನು ಗಮನಿಸಬೇಕು. ನಿಮ್ಮನ್ನು ಕ್ಷಮಿಸಲ್ಲ, ನಾವು ಮರೆಯಲ್ಲ. ನಿಮ್ಮನ್ನು ಬೇಟೆ ಆಡುತ್ತೆವೆ. ತಕ್ಕ ಶಾಸ್ತಿ ಮಾಡುತ್ತೇವೆ. ನಾವು ತೆರವು ಕಾರ್ಯಾಚರಣೆ ಮುಂದುವರಿಸುವುದಾಗಿ ಅಮೆರಿಕ ಹೇಳಿದೆ.
ಐಎಸ್‍ಕೆಪಿ ವಿರುದ್ಧ ಕಾರ್ಯಾಚರಣೆಗೆ ಪ್ಲಾನ್ ಮಾಡಿ. ಐಸಿಸ್‍ಕೆ ಆಸ್ತಿ, ನಾಯಕರು, ಸೌಲಭ್ಯಗಳ ಮೇಲೆ ಸ್ಟ್ರೈಕ್ ಮಾಡಲು ಪ್ಲಾನ್ ಮಾಡಿ. ನಾವು ನಮ್ಮ ಸೇನೆ ಮೂಲಕ, ಸೂಕ್ತ ಸಂದರ್ಭದಲ್ಲಿ ಪ್ರತ್ಯುತ್ತರ ನೀಡುತ್ತೇವೆ. ಸ್ಥಳ, ಸಮಯ ನಿಗದಿ ಮಾಡುತ್ತೇವೆ. ಐಸಿಸ್ ಭಯೋತ್ಪಾದಕರು ಗೆಲ್ಲಲು ಸಾಧ್ಯವಿಲ್ಲ ಎಂದು ಅಮೆರಿಕ ಹೇಳಿದೆ.
ತಾಲಿಬಾನ್ ತೆಕ್ಕೆಗೆ ಹೋಗಿರುವ ಆಫ್ಘಾನಿಸ್ತಾನದ ರಾಜಧಾನಿ ಕಾಬೂಲ್ ಆತ್ಮಾಹುತಿ ದಾಳಿಗಳಿಂದ ತತ್ತರಿಸಿದೆ. ಭಯೋತ್ಪಾದಕರ ನಗರದಲ್ಲಿನ ಹಮೀದ್ ಕರ್ಜೈ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಗುರುವಾರ ಸಂಜೆಯಿಂದ ಮಧ್ಯರಾತ್ರಿವರೆಗೆ ಸರಣಿ ಬಾಂಬ್ ಸ್ಫೋಟಗಳು ಸಂಭವಿಸಿವೆ.

ಸ್ಥಳಾಂತರ ಕಾರ್ಯ ಪೂರ್ಣಗೊಳಿಸಬೇಕು
ಅಫ್ಘಾನಿಸ್ತಾನದಿಂದ ತನ್ನ ಸ್ಥಳಾಂತರಿಸುವ ಕಾರ್ಯಾಚರಣೆಯನ್ನು ಆಗಸ್ಟ್ 31 ರೊಳಗೆ ಪೂರ್ಣಗೊಳಿಸುವತ್ತ ಗಮನ ಹರಿಸಿದ್ದೇವೆ. ನಾಗರಿಕರ ರಕ್ಷಣೆಗೆ ನಮ್ಮ ಮೊದಲ ಆದ್ಯತೆ ಎಂದು ಬೈಡನ್ ಆಡಳಿತ ಸೋಮವಾರ ಹೇಳಿದೆ.
ಆಫ್ಘಾನಿಸ್ತಾನ ದೇಶದಿಂದ ಎಲ್ಲಾ ಅಮೆರಿಕನ್ ಸೈನಿಕರನ್ನು ಸ್ಥಳಾಂತರ ಮಾಡಲು ಗಡುವು ವಿಧಿಸಿರುವ ತಾಲಿಬಾನ್ ಕುರಿತು ಹೇಳಿಕೆ ನೀಡಿರುವ ಜೋ ಬೈಡನ್ ಸರ್ಕಾರ, ಅಫ್ಘಾನಿಸ್ತಾನದಿಂದ ತನ್ನ ಸ್ಥಳಾಂತರಿಸುವ ಕಾರ್ಯಾಚರಣೆಯನ್ನು ಆಗಸ್ಟ್ 31 ರೊಳಗೆ ಪೂರ್ಣಗೊಳಿಸುವತ್ತ ಗಮನ ಹರಿಸಿದ್ದೇವೆ.
ನಾಗರಿಕರ ರಕ್ಷಣೆಗೆ ನಮ್ಮ ಮೊದಲ ಆದ್ಯತೆಯಾಗಿದೆ. ಆದಾಗ್ಯೂ, ಕಾಬೂಲ್ ವಿಮಾನ ನಿಲ್ದಾಣದಿಂದ ಸ್ಥಳಾಂತರಿಸುವ ಕಾರ್ಯಾಚರಣೆಯನ್ನು ವಿಸ್ತರಿಸುವ ಅಂತಿಮ ನಿರ್ಧಾರವನ್ನು ಅಧ್ಯಕ್ಷ ಜೋ ಬೈಡನ್ ತೆಗೆದುಕೊಳ್ಳುತ್ತಾರೆ ಎಂದು ಶ್ವೇತಭವನ, ವಿದೇಶಾಂಗ ಇಲಾಖೆ ಮತ್ತು ಪೆಂಟಗನ್ ಅಧಿಕಾರಿಗಳು ತಿಳಿಸಿದ್ದಾರೆ.
ತಾಲಿಬಾನ್‌ಗಳು ಯುಎಸ್ ಸೈನ್ಯವು ದೇಶವನ್ನು ತೊರೆಯಲು ಆಗಸ್ಟ್ 31 ರ ಗಡುವು ವಿಧಿಸಿದ ಪ್ರಶ್ನೆಗಳಿಗೆ ರಾಷ್ಟ್ರೀಯ ಭದ್ರತಾ ಸಲಹೆಗಾರ ಜೇಕ್ ಸುಲ್ಲಿವಾನ್ ಶ್ವೇತಭವನದ ಸುದ್ದಿಗೋಷ್ಠಿಯಲ್ಲಿ ಸುದ್ದಿಗಾರರಿಗೆ ಉತ್ತರಿಸಿದ್ದರು.. ಅಮೆರಿಕ ತೆರವು ಕಾರ್ಯಾಚರಣೆ ಕುರಿತು ಅಂತಿಮವಾಗಿ, ಇದು ಹೇಗೆ ಮುಂದುವರಿಯುತ್ತದೆ ಎಂಬುದು ಅಧ್ಯಕ್ಷರ ನಿರ್ಧಾರವಾಗಿರುತ್ತದೆ ಎಂದು ಹೇಳಿದರು.












Click it and Unblock the Notifications