ಪುಲ್ವಾಮಾ ಹಿಂದೆ ಜೈಷ್ ಕೈವಾಡವಿಲ್ಲ! ಪಾಕ್ ಖುರೇಶಿಯ ಸುಳ್ಳು
Recommended Video

ಇಸ್ಲಾಮಾಬಾದ್, ಮಾರ್ಚ್ 02 : ತಮ್ಮ ಮಡಿಲಿನಲ್ಲಿಯೇ ಉಗ್ರರನ್ನು ಬಚ್ಚಿಟ್ಟುಕೊಳ್ಳಲು ಪಾಕಿಸ್ತಾನದ ವಿದೇಶಾಂಗ ಸಚಿವ ಶಾಹ್ ಮಹಮೂದ್ ಖುರೇಶಿ ಅವರು ಎಂಥ ಸುಳ್ಳು ಹೇಳಲು ನಾಚಿಕೆಪಟ್ಟುಕೊಳ್ಳುವುದಿಲ್ಲ ಎಂಬುದನ್ನು ಮತ್ತೆ ಸಾಬೀತುಪಡಿಸಿದ್ದಾರೆ.
ಪಾಕಿಸ್ತಾನ ಸರಕಾರವೇ ಭಯೋತ್ಪಾದಕ ಸಂಘಟನೆಗಳ ಹಿಡಿತದಲ್ಲಿದೆ ಎಂಬುದು ಕೂಡ ಖುರೇಶಿ ಅವರು ನೀಡಿದ ಹೇಳಿಕೆಗೆ ಸಾಕ್ಷಿಯಾಗಿದೆ. ನಮ್ಮ ದೇಶದಲ್ಲಿ ಉಗ್ರರಿಗೆ ಆಶ್ರಯತಾಣ ನೀಡುತ್ತಿಲ್ಲ ಹೇಳುತ್ತಲೇ ಪಾಕಿಸ್ತಾನ ಇಡೀ ವಿಶ್ವದ ದಿಕ್ಕು ತಪ್ಪಿಸುತ್ತಿರುವುದು ಸೂರ್ಯ ಚಂದ್ರರಷ್ಟೇ ನಿಜ.
"ಪುಲ್ವಾಮಾದಲ್ಲಿ ನಡೆದ ದಾಳಿಯ ಹಿಂದೆ ಜೈಷ್-ಎ-ಮೊಹಮ್ಮದ್ ಸಂಘಟನೆಯ ಕೈವಾಡ ಇಲ್ಲವೇ ಇಲ್ಲ. ಈ ಸಂಘಟನೆ ಪುಲ್ವಾಮಾ ದಾಳಿಯ ಹೊಣೆಯನ್ನು ಹೊತ್ತಿಲ್ಲ. ಆ ದಾಳಿಯ ಹಿಂದೆ ಜೈಷ್ ಕೈವಾಡವಿದೆ ಎಂಬ ಗೊಂದಲ ಸೃಷ್ಟಿಸಲಾಗಿದೆ" ಎಂದು ಬಿಬಿಸಿಗೆ ನೀಡಿರುವ ಸಂದರ್ಶನದಲ್ಲಿ ಖುರೇಶಿ ಹಸಿಹಸಿ ಸುಳ್ಳನ್ನು ಹೇಳಿದ್ದಾರೆ.

ಜಮ್ಮು ಮತ್ತು ಕಾಶ್ಮೀರದ ಪುಲ್ವಾಮಾದಲ್ಲಿ ಫೆಬ್ರವರಿ 14ರಂದು ನೂರು ಕೆಜಿಯಷ್ಟು ಸುಧಾರಿತ ಸ್ಫೋಟಕಗಳನ್ನು ತುಂಬಿದ್ದ ಮಾರುತಿ ಇಕೋ ವಾಹನವನ್ನು, ಸಿಆರ್‌ಪಿಎಫ್ ಜವಾನರಿದ್ದ ಬಸ್ಸಿಗೆ ನುಗ್ಗಿಸಿ, ಆದಿಲ್ ಎಂಬಾತ ಭಯಾನಕ ಕೃತ್ಯ ಎಸಗಿದ್ದ. ಅದರಲ್ಲಿ 40ಕ್ಕೂ ಹೆಚ್ಚು ಜವಾನರು ಹುತಾತ್ಮರಾದರು. ಆ ದಾಳಿಗೆ ಜೈಷ್ ಸಂಘಟನೆಯೇ ಹೊಣೆ ಹೊತ್ತಿತ್ತು.
ಜೈಷ್ ತಾನೇ ಸ್ವತಃ ಪುಲ್ವಾಮಾ ಘಟನೆಯ ಹೊಣೆ ಹೊತ್ತಿದ್ದರೂ ಖುರೇಶಿ, ನಕಾರಾತ್ಮಕ ಹೇಳಿಕೆ ನೀಡಿದ್ದಾರೆ. ಜೈಷ್-ಎ-ಮೊಹಮ್ಮದ್ ಸಂಘಟನೆ ಪಾಕಿಸ್ತಾನದಲ್ಲಿಯೇ ಇದೆ ಎಂದು ಒಪ್ಪಿಕೊಂಡ ಮರುದಿನವೇ, ಪುಲ್ವಾಮಾ ದಾಳಿಗೂ ಜೈಷ್-ಎ-ಮೊಹಮ್ಮದ್ ಸಂಘಟನೆಗೂ ಸಂಬಂಧವೇ ಇಲ್ಲ ಎಂದು ಹೇಳಿದ್ದಾರೆ ಖುರೇಶಿ. ಜೈಷ್ ಮುಖ್ಯಸ್ಥ ಮಸೂದ್ ಅಜರ್ ಪಾಕಿಸ್ತಾನದಲ್ಲಿಯೇ ಇದ್ದು, ತೀರ ಅನಾರೋಗ್ಯದಿಂದ ಬಳಲುತ್ತಿದ್ದಾನೆ ಎಂದಿದ್ದಾರೆ.
ಭಾರತ ಸೇರಿದಂತೆ ಯಾವುದೇ ದೇಶದ ವಿರುದ್ಧ ಭಯೋತ್ಪಾದಕ ಕೃತ್ಯಗಳನ್ನು ಎಸಗಲು ಪಾಕಿಸ್ತಾನದ ನೆಲವನ್ನು ಭಯೋತ್ಪಾದಕರಿಗೆ ನೀಡುವುದಿಲ್ಲ ಎಂದು ಖುರೇಶಿ ಸಂದರ್ಶನದಲ್ಲಿ ನುಡಿದಿದ್ದಾರೆ. ಪುಲ್ವಾಮಾ ದಾಳಿಗೆ ಸಂಬಂಧಿಸಿದಂತೆ ಜೈಷ್-ಎ-ಮೊಹಮ್ಮದ್ ಸಂಘಟನೆ ಕೃತ್ಯ ಎಸಗಿರುವುದಕ್ಕೆ ಸಾಕ್ಷ್ಯ ನೀಡಬೇಕೆಂದು ಭಾರತವನ್ನು ಖುರೇಶಿ ಕೇಳಿದ್ದಾರೆ.
ಆದರೆ, ಪುಲ್ವಾಮಾ ದಾಳಿಗೆ ಸಂಬಂಧಿಸಿದಂತೆ ಭಾರತ ನೀಡಿರುವ ವರದಿಯನ್ನು ನಾವು ಅಧ್ಯಯನ ಮಾಡುತ್ತಿದ್ದೇವೆ. ಈ ನಿಟ್ಟಿನಲ್ಲಿ ಪಾಕಿಸ್ತಾನದೊಡನೆ ಭಾರತ ಮಾತುಕತೆಗೆ ಸಿದ್ಧವಿದ್ದರೆ ಮಾತಾಡಲು ನಾವೂ ಸಿದ್ಧ ಎಂದಿರುವ ಅವರು ಗಡಿ ನಿಯಂತ್ರಣಾ ರೇಖೆಯ ಬಳಿ ಭಾರತ ಫೆಬ್ರವರಿ 26ರಂದು ನಡೆಸಿದ ವೈಮಾನಿಕ ದಾಳಿಯನ್ನು ಕೂಡ ಖಂಡಿಸಿದರು.
ಮೂರು ಭಯೋತ್ಪಾದನಾ ನೆಲೆಗಳನ್ನು ಧ್ವಂಸಗೊಳಿಸಿದ್ದಾಗಿ ಭಾರತ ಹೇಳಿದೆ. ಎಲ್ಲಿವೆ ಆ ನೆಲೆಗಳು? 350 ಉಗ್ರರನ್ನು ಹತ್ಯೆಗೈದಿರುವುದಾಗಿ ಅವರು ಹೇಳುತ್ತಿದ್ದಾರೆ. ಎಲ್ಲಿವೆ ಆ ದೇಹಗಳು? ಎಂದು ಅವರು ಪ್ರಶ್ನಿಸಿದ್ದಾರೆ. ಇಂಥ ಪ್ರಶ್ನೆಗಳಿಗೆ ಬಾಯಿ ಮಾತಿನಿಂದ ಉತ್ತರಿಸಿ ಯಾವುದೇ ಪ್ರಯೋಜನವಿಲ್ಲ.












Click it and Unblock the Notifications