ಪ್ರತಿಷ್ಠೆ ಕದನಕ್ಕೆ ನೂರಾರು ಅಮಾಯಕರು ಬಲಿ, 3 ಧರ್ಮಗಳ ತವರೂರು ಈಗ ರಕ್ತಸಿಕ್ತ
ಇಸ್ರೇಲ್ ಹಾಗೂ ಪ್ಯಾಲೆಸ್ತೇನ್ ನಡುವೆ ಹೊತ್ತಿದ್ದ ದ್ವೇಷದ ಬೆಂಕಿ ನೂರಾರು ಅಮಾಯಕರನ್ನ ಬಲಿಪಡೆದಿದೆ. ನಿನ್ನೆವರೆಗೂ ಸಾವಿನ ಸಂಖ್ಯೆ 70ರ ಗಡಿಯಲ್ಲಿತ್ತು. ಆದರೆ ಒಂದೇ ದಿನದಲ್ಲಿ 30ಕ್ಕೂ ಹೆಚ್ಚು ಜನ ಮೃತಪಟ್ಟಿದ್ದು ಸಾವಿನ ಸಂಖ್ಯೆ 118ಕ್ಕೆ ಏರಿಕೆಯಾಗಿದೆ. ಪ್ಯಾಲೆಸ್ತೇನ್-ಇಸ್ರೇಲ್ ಮಧ್ಯೆ ಯುದ್ಧದ ಭೀತಿ ಎದುರಾಗಿದೆ.
Recommended Video
ಇನ್ನು ಗಾಜಾ ಪಟ್ಟಿಗೆ ಇಸ್ರೇಲ್ ಭಾರಿ ಪ್ರಮಾಣದ ಸೇನೆ, ಶಸ್ತ್ರಾಸ್ತ್ರ ರವಾನಿಸಿದೆ. ಇದರಿಂದಾಗಿ ಪರಿಸ್ಥಿತಿ ಕೈಮೀರುವ ಸಾಧ್ಯತೆ ದಟ್ಟವಾಗಿದ್ದು, ಗಲ್ಫ್ ರಾಷ್ಟ್ರಗಳ ನಾಯಕರಿಗೆ ಭಯ ಹುಟ್ಟುತ್ತಿದೆ. ಅತ್ತ ಹಮಾಸ್ ಉಗ್ರರು ಇಸ್ರೇಲ್ ಮೇಲೆ ರಾಕೆಟ್ ದಾಳಿ ನಡೆಸುತ್ತಿದ್ದರೆ, ಇಸ್ರೇಲ್ ಕೂಡ ಪ್ಯಾಲೆಸ್ತೇನ್ ಮೇಲೆ ಅಟ್ಯಾಕ್ ಮಾಡುತ್ತಿದೆ. ಇಬ್ಬರ ಜಗಳದಲ್ಲಿ ಅಮಾಯಕರ ರಕ್ತಪಾತ ನಡೆಯುತ್ತಿದೆ.
ಸಾವಿರಾರು ಜನ ನೆಲೆ ಕಳೆದುಕೊಂಡು ಬೀದಿಗೆ ಬಿದ್ದಿದ್ದಾರೆ. ಎಲ್ಲೆಂದರಲ್ಲಿ ರಾಕೆಟ್‌ಗಳು ಹಾರಿ ಬರುತ್ತಿದ್ದು, ಗಡಿ ಭಾಗದ ಜನ ಜೀವ ಕೈಲಿಡಿದು ಬದುಕುತ್ತಿದ್ದಾರೆ. ಈ ಮಧ್ಯೆ ಇಸ್ರೇಲ್ ಸೇನೆ ರಾಕೆಟ್ ದಾಳಿಗೆ 10ಕ್ಕೂ ಹೆಚ್ಚು ಹಮಾಸ್ ಬಂಡುಕೋರರು ಬಲಿಯಾಗಿದ್ದಾರೆ.

ಮಧ್ಯಪ್ರವೇಶ ಮಾಡುತ್ತಾ ವಿಶ್ವಸಂಸ್ಥೆ..?
ಇಂಥದ್ದೊಂದು ಬಿಲಿಯನ್ ಡಾಲರ್ ಪ್ರಶ್ನೆ ಈಗ ಎಲ್ಲರನ್ನೂ ಕಾಡುತ್ತಿದೆ. ಇಸ್ರೇಲ್ ಮತ್ತು ಮಧ್ಯಪ್ರಾಚ್ಯದ ನಡುವೆ ಕಿರಿಕ್ ನಡೆಯುತ್ತಿರುವುದು ಇದೇ ಮೊದಲಲ್ಲ. ಹೊಡೆದಾಟ, ಬಡಿದಾಟಕ್ಕೆ ಶತಮಾನಗಳ ಇತಿಹಾಸ ಇದೆ. ಆದರೆ ಈಗ ಪರಿಸ್ಥಿತಿ ಸರಿ ಇಲ್ಲ, ಕೊರೊನಾ ಸಂಕಷ್ಟದಲ್ಲೇ ಇಡೀ ಜಗತ್ತು ಬೇಯುತ್ತಿದ್ದರೆ, ಇಸ್ರೇಲ್‌ಗೆ ಹಾಗೂ ಪ್ಯಾಲೆಸ್ತೇನ್ ಪಡೆಗಳಿಗೆ ಇದು ಪ್ರತಿಷ್ಠೆಯ ಕದನವಾಗಿದೆ. ಇವರಿಬ್ಬರ ಒಣ ಪ್ರತಿಷ್ಠೆಗೆ ಅಮಾಯಕರು ಬಲಿಯಾಗುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ವಿಶ್ವಸಂಸ್ಥೆ ಮಧ್ಯಪ್ರವೇಶ ಮಾಡಿ ಹಿಂಸಾಚಾರವನ್ನ ನಿಲ್ಲಿಸುತ್ತಾ? ಎಂಬ ಪ್ರಶ್ನೆ ಮಧ್ಯಪ್ರಾಚ್ಯದ ದೇಶಗಳನ್ನು ಕಾಡುತ್ತಿದೆ.

3ನೇ ಮಹಾಯುದ್ಧಕ್ಕೆ ನಾಂದಿ..?
ಜಗತ್ತು ಕೊರೊನಾ ಕಿಚ್ಚಿನಲ್ಲಿ ಬೇಯುತ್ತಿದ್ದರೆ ಮಧ್ಯಪ್ರಾಚ್ಯ ಕೋಮು ಘರ್ಷಣೆಯಲ್ಲಿ ತೊಡಗಿದೆ. ಮತ್ತೊಂದೆಡೆ ಇಸ್ರೇಲ್-ಪ್ಯಾಲೆಸ್ತೇನ್ ನಡುವೆ ದಾಳಿ-ಪ್ರತಿದಾಳಿ ನಡೆಯುತ್ತಿರುವುದನ್ನು ನೋಡಿದರೆ 3ನೇ ಮಹಾಯುದ್ಧದ ಭೀತಿ ಆವರಿಸುತ್ತಿದೆ. ಏಕೆಂದರೆ ಇಸ್ರೇಲ್ ಪರವಾಗಿ ಯುರೋಪ್ ಹಾಗೂ ಅಮೆರಿಕ ನಿಂತರೆ, ಪ್ಯಾಲೆಸ್ತೇನ್‌ನ ಪರವಾಗಿ ಇಸ್ರೇಲ್ ಶತ್ರುಗಳು ಹಾಗೂ ಅಮೆರಿಕ ಶತ್ರು ರಾಷ್ಟ್ರಗಳು ನಿಲ್ಲುವ ಸಾಧ್ಯತೆ ಇದೆ. ಇದೇ ಕಾರಣಕ್ಕೆ ಇಸ್ರೇಲ್-ಪ್ಯಾಲೆಸ್ತೇನ್ ಕಿತ್ತಾಟ 3ನೇ ಮಹಾಯುದ್ಧದ ಆತಂಕವನ್ನು ತಂದೊಡ್ಡಿದೆ. ಪರಸ್ಪರ ರಾಕೆಟ್ ದಾಳಿಗೆ ಎರಡೂ ದೇಶಗಳು ಮುಂದಾಗಿರುವುದು ಆತಂಕವನ್ನು ಮತ್ತಷ್ಟು ಹೆಚ್ಚು ಮಾಡಿದೆ.

ಗಲಾಟೆ ಶುರುವಾಗಿದ್ದು ಹೇಗೆ..?
1967 ರ ಅರಬ್-ಇಸ್ರೇಲಿ ಯುದ್ಧದ ಸಮಯದಲ್ಲಿ ಇಸ್ರೇಲಿ ಪಡೆಗಳು ಭೂಪ್ರದೇಶವನ್ನು ವಶಪಡಿಸಿಕೊಂಡ ನೆನಪಿಗೆ ಮೆರವಣಿಗೆ ಆಯೋಜಿಸಲಾಗಿತ್ತು. ವಿಜಯದ ದಿನವನ್ನ ನೆನಪಿಸಿಕೊಳ್ಳುವ ಸಲುವಾಗಿ ಯಹೂದಿಗಳು ಜೆರುಸಲೇಂನ ಓಲ್ಡ್ ಸಿಟಿಯಲ್ಲಿ ಮೆರವಣಿಗೆಗೆ ಸಿದ್ಧತೆ ನಡೆಸಿದ್ದರು. ಆದರೆ ಮೆರವಣಿಗೆ ಆಯೋಜನೆ ಮಾಡಿದ್ದ ಹಿನ್ನೆಲೆಯಲ್ಲಿ ಹಿಂಸಾಚಾರ ಭುಗಿಲೆದ್ದಿದೆ ಎನ್ನಲಾಗುತ್ತಿದೆ. ಹೀಗೆ ಹಿಂಸೆ ಭುಗಿಲೇಳುತ್ತಲೇ ಇಸ್ರೇಲಿ ಪೊಲೀಸರು ಬಲಪ್ರಯೋಗ ನಡೆಸಿದ್ದಾರೆ. ಇಸ್ರೇಲಿ ಪೊಲೀಸರು ಮಧ್ಯಪ್ರವೇಶ ಮಾಡಿದ್ದೇ ತಡ ಉರಿಯುವ ಬೆಂಕಿಗೆ ತುಪ್ಪ ಸುರಿದಂತಾಗಿ ಪರಿಸ್ಥಿತಿ ಮತ್ತಷ್ಟು ಬಿಗಡಾಯಿಸಿದೆ. ಘರ್ಷಣೆ ಸಂಭವಿಸಿ ನೂರಾರು ಜನರು ಗಾಯಗೊಂಡಿದ್ದರೆ, 24 ಮಂದಿ ಜೀವ ಕಳೆದುಕೊಂಡಿದ್ದಾರೆ.

ಕಾಯುತ್ತಿದ್ದಾರೆ ಇಸ್ರೇಲ್ ಶತ್ರುಗಳು
ಇಸ್ರೇಲ್ ಪುಟಾಣಿ ದೇಶವಾದರೂ ಅರಬ್ ಒಕ್ಕೂಟದ ಹತ್ತಾರು ದೇಶಗಳನ್ನು ಎದುರು ಹಾಕಿಕೊಂಡಿದೆ. ಅಲ್ಲಿ ತನ್ನ ನೆಲೆ ಖಚಿತ ಪಡಿಸಿಕೊಳ್ಳಲು ಇಸ್ರೇಲ್‌ಗೆ ಇದು ಅನಿವಾರ್ಯವೂ ಆಗಿದೆ. ಆದರೆ ಇದೀಗ ದೇಶದೊಳಗೆ ಘರ್ಷಣೆ ಆರಂಭವಾಗಿದೆ. ತನ್ನ ವೈರಿ ಪ್ಯಾಲೆಸ್ತೇನ್ ಬಗ್ಗುಬಡಿಯಲು ಇಸ್ರೇಲ್ ಪಡೆಗಳು ಬಲಪ್ರಯೋಗವನ್ನು ಮುಂದುವರಿಸಿದ್ದಾರೆ. ಇದು ಸಹಜವಾಗಿಯೆ ಇಸ್ರೇಲ್ ವಿರೋಧಿ ರಾಷ್ಟ್ರಗಳಿಗೆ ಪ್ರಚೋದನೆ ನೀಡಿದಂತಾಗಿದೆ. ಇಸ್ರೇಲ್‌ನಲ್ಲಿ ಈಗಾಗಲೇ ಪ್ರಧಾನಿಯ ವಿರುದ್ಧ ಪ್ರತಿಭಟನೆ ಭುಗಿಲೆದ್ದಿದೆ. ಈ ನಡುವೆ ಕೋಮು ಗಲಭೆಗಳೂ ಆರಂಭವಾಗಿದ್ದು ದ್ವೇಷ ಭಾವನೆಯನ್ನು ಕೆರಳುವಂತೆ ಮಾಡಿದೆ.

ಶಾಂತಿ ನೆಲೆಸುವುದೇ ಇಲ್ವಾ..?
ಇಸ್ರೇಲ್ ಹಾಗೂ ಗಾಜಾಪಟ್ಟಿ ಕಥೆ ಸಿರಿಯಾಗಿಂತ ಭಯಾನಕವಾಗಿದೆ. ಒಂದುಕಡೆ ಹಮಾಸ್ ಉಗ್ರರು ಅದು ನಮ್ಮ ನೆಲ ಅಂತಾ ಇಸ್ರೇಲ್ ಭೂಮಿ ಮೇಲೆ ಕಣ್ಣಿಟ್ಟಿದ್ದಾರೆ. ಆದರೆ ತಮ್ಮ ದೇಶದ ಭೂಭಾಗ ಉಳಿಸಿಕೊಳ್ಳಲು ಇಸ್ರೇಲ್ ಬಂಡುಕೋರರ ಮೇಲೆ ದಾಳಿ ನಡೆಸುತ್ತಲೇ ಬಂದಿದೆ. ಇವರಿಬ್ಬರ ಕಿತ್ತಾಟದಿಂದ ಸಾಮಾನ್ಯ ಜನರು ಬೀದಿಪಾಲಾಗಿದ್ದಾರೆ. ಗಾಜಾಪಟ್ಟಿಯಲ್ಲಿ ಲಕ್ಷಾಂತರ ಮಂದಿ ಮನೆ ಕಳೆದುಕೊಂಡು ಬೀದಿಗೆ ಬಿದ್ದಿದ್ದಾರೆ. ಹಾಗೇ ಲೆಕ್ಕವಿಲ್ಲದಷ್ಟು ಯುವಕರೂ ಪ್ರಾಣ ಕಳೆದುಕೊಂಡಿದ್ದಾರೆ. ಇನ್ನೂ ಹಲವರು ಹೋರಾಡುವಾಗ ಶಾಶ್ವತವಾಗಿ ಅಂಗವೈಕಲ್ಯಕ್ಕೆ ತುತ್ತಾಗಿದ್ದಿದೆ. ವಿಶ್ವಸಂಸ್ಥೆ ಕೂಡ ಹಲವು ದಶಕಗಳಿಂದ ಇಲ್ಲಿ ಶಾಂತಿ ನೆಲೆಸುವಂತೆ ಮಾಡಲು ಪ್ರಯತ್ನಪಟ್ಟರೂ ವರ್ಕೌಟ್ ಆಗುತ್ತಿಲ್ಲ.












Click it and Unblock the Notifications