Israel-Palestine War: ಗಾಜಾ ಪಟ್ಟಿಯ ಮೇಲೆ ಸಂಪೂರ್ಣ ದಿಗ್ಬಂಧನ- ವಿದ್ಯುತ್, ಆಹಾರ, ಇಂಧನಕ್ಕೂ ತಡೆಯೊಡ್ಡಿದ ಇಸ್ರೇಲ್
ಮಧ್ಯಪ್ರಾಚ್ಯದಲ್ಲಿ ಮತ್ತೊಮ್ಮೆ ರಕ್ತಸಿಕ್ತವಾಗಿದೆ. ಹಮಾಸ್ ಉಗ್ರರು ಭೀಕರ ದಾಳಿ ಆರಂಭಿಸಿದ ಬಳಿಕ ಇಸ್ರೇಲ್ ಯುದ್ಧವನ್ನು ಘೋಷಿಸಿದೆ. ಈಗ ಹಮಾಸ್ ನಿಯಂತ್ರಿತ ಗಾಜಾ ಪಟ್ಟಿಯ ಮೇಲೆ ಇಸ್ರೇಲ್ 'ಸಂಪೂರ್ಣ ದಿಗ್ಬಂಧನ' ಘೋಷಿಸಿದೆ. ವಿದ್ಯುತ್, ಆಹಾರ ಹಾಗೂ ಇಂದನ ಸರಬರಾಜಿಗೆ ತಡೆಯೊಡ್ಡಿದೆ.
ಈ ಕುರಿತು ಹೇಳಿಕೆ ಬಿಡುಗಡೆ ಮಾಡಿರುವ ಇಸ್ರೇಲ್ ರಕ್ಷಣಾ ಸಚಿವ ಯೋವ್ ಗ್ಯಾಲಂಟ್, ಗಾಜಾ ಪಟ್ಟಿಯ ಮೇಲೆ 'ಸಂಪೂರ್ಣ ದಿಗ್ಬಂಧನ ಹೇರಿದ್ದೇವೆ. ಆಹಾರ, ವಿದ್ಯುತ್ ಹಾಗೂ ಇಂದನ ಸರಬರಾಜಿಗೆ ತಡೆಯೊಡ್ಡಲಾಗಿದೆ. ಮೃಗೀಯ ಮನಸ್ಥಿತಿಯ ಜನರ ವಿರುದ್ಧದ ನಾವು ತೆಗೆದುಕೊಂಡ ಕಠಿಣ ಕ್ರಮ ಇದಾಗಿದೆ ಎಂದು ಹೇಳಿದ್ದಾರೆ.
ಹಮಾಸ್ ಹಠಾತ್ ದಾಳಿಯನ್ನು ಪ್ರಾರಂಭಿಸಿದ ಎರಡು ದಿನಗಳ ನಂತರ, ಇಸ್ರೇಲ್ ಸಂಪೂರ್ಣ ದಿಗ್ಬಂಧನದ ನಿರ್ಧಾರವನ್ನು ಕೈಗೊಂಡಿದೆ.

ಇಸ್ರೇಲ್‌ಗೆ ಅಂಟಿಕೊಂಡಿರುವ ಗಾಜಾ ಪಟ್ಟಿಗೆ ಸಾಗುವ ಎಲ್ಲಾ ಮಾರ್ಗಗಳಿಗೂ ಇಸ್ರೇಲ್ ಸೇನೆ ದಿಗ್ಬಂಧನ ಹೇರಿದೆ ಎಂದು ವರದಿಯಾಗಿದೆ.
ಹಮಾಸ್ ಉಗ್ರಗಾಮಿಗಳು ಶನಿವಾರ ಗಾಜಾದಿಂದ ಹಠಾತ್ ದಾಳಿಯನ್ನು ಪ್ರಾರಂಭಿಸಿದ್ದಾರೆ. ಎರಡೂ ಕಡೆಯ ಒಟ್ಟಾರೆ ಸಾವಿನ 1,100 ಕ್ಕಿಂತ ಹೆಚ್ಚಾಗಿದೆ ಎಂದು ವರದಿಯಾಗಿದೆ. ಇಸ್ರೇಲ್ ಮಾರಣಾಂತಿಕ ದಾಳಿಯಿಂದ ತತ್ತರಿಸಿದ್ದು, ಯುದ್ಧವನ್ನು ಘೋಷಿಸಿದೆ.
ಹಮಾಸ್ ಇಸ್ರೇಲ್‌ನ ಮೇಲೆ ಸಾವಿರಾರು ರಾಕೆಟ್‌ಗಳ ಸುರಿಮಳೆಗೈದಿತು. ಇದರಲ್ಲಿ ಅಮಾಯಕ ನಾಗರಿಕರು ಹತರಾಗಿದ್ದಾರೆ. ಈಗ ಹಮಾಸ್ ಬಂಡುಕೋರರು ಇಸ್ರೇಲ್‌ನ ಕನಿಷ್ಠ 100 ಒತ್ತೆಯಾಳುಗಳನ್ನು ತೆಗೆದುಕೊಂಡು ಹೋಗಿದೆ.
ಇಸ್ರೇಲ್ ನೀಡಿರುವ ಮಾಹಿತಿ ಪ್ರಕಾರ, ಹಮಾಸ್ ದಾಳಿಯಲ್ಲಿ 700 ಕ್ಕೂ ಹೆಚ್ಚು ಇಸ್ರೇಲಿಗಳು ಕೊಲ್ಲಲ್ಪಟ್ಟಿದ್ದಾರೆ .
ಕನಿಷ್ಠ 413 ಸಾವುಗಳಾಗಿವೆ ಎಂದು ಗಾಜಾ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಒಟ್ಟು 80 ಸ್ಥಳಗಳನ್ನು ಗುರಿಯಾಗಿಸಿ ಇಸ್ರೇಲ್ ವೈಮಾನಿಕ ದಾಳಿ ನಡೆಸಿದೆ ಎಂದು ಹಮಾಸ್ ತಿಳಿಸಿದೆ.
ಹಮಾಸ್ ನಡೆಸಿರುವ ದಾಳಿ ಇತಿಹಾಸದಲ್ಲೇ ಅತ್ಯಂತ ಕ್ರೂರ ದಾಳಿಯಾಗಿದೆ. ಇಸ್ರೇಲ್ ಯುದ್ದವನ್ನು ಘೋಷಿಸಿದೆ. ನಾಗರಿಕರು ಈ ಸಂಕಷ್ಟವನ್ನು ಎದುರಿಸಲು ಸನ್ನದ್ಧರಾಗಿ. ಶತ್ರುಗಳನ್ನು ನಮ್ಮ ಮುಂದೆ ಮಂಡಿಯೂರಲಿದ್ದಾರೆ ಎಂದು ಪ್ರಧಾನಿ ಬೆಂಜಮಿನ್ ನೆತನ್ಯಾಹು ತಿಳಿಸಿದ್ದಾರೆ.
ಹಮಾಸ್ ದಾಳಿಯಲ್ಲಿ ಅಮೆರಿಕನ್ನರ ಸಾವು
ಇಸ್ರೇಲ್‌ನ ಮೇಲೆ ನಡೆದ ಅನಿರೀಕ್ಷಿತ ಭೂ-ಸಮುದ್ರ-ವಾಯು ದಾಳಿಯಲ್ಲಿ ಹಲವಾರು ಅಮೆರಿಕನ್ನರು ಸಾವನ್ನಪ್ಪಿದ್ದಾರೆ ಎಂದು ಯುಎಸ್ ಹೇಳಿದೆ. ಯುಎಸ್ ಯುದ್ಧನೌಕೆಗಳು ಮತ್ತು ಫೈಟರ್ ಜೆಟ್ ಸ್ಕ್ವಾಡ್ರನ್‌ಗಳನ್ನು ಇಸ್ರೇಲ್‌ಗೆ ಕಳುಹಿಸಿಕೊಡಲು ಬೈಡನ್ ಸರ್ಕಾರ ಮುಂದಾಗಿದೆ.
ತನ್ನ ದೇಶದ 12 ನಾಗರಿಕರು ಹತ್ಯೆಯಾಗಿದ್ದಾರೆ, 11 ಜನರನ್ನು ಅಪಹರಿಸಲಾಗಿದೆ ಎಂದು ಥೈಲ್ಯಾಂಡ್ ಹೇಳಿದೆ. ಇದಲ್ಲದೆ, ಬ್ರೆಜಿಲ್, ಬ್ರಿಟನ್, ಫ್ರಾನ್ಸ್, ಜರ್ಮನಿ, ಐರ್ಲೆಂಡ್, ಮೆಕ್ಸಿಕೊ, ನೇಪಾಳ ಮತ್ತು ಉಕ್ರೇನ್‌ನ ನಾಗರಿಕರು ಕೊಲ್ಲಲ್ಪಟ್ಟಿದ್ದಾರೆ. ಕೆಲವರು ಕಾಣೆಯಾಗಿದ್ದಾರೆ ಎಂದು ತಿಳಿದುಬಂದಿದೆ.
ಕತಾರ್ ಮಧ್ಯವರ್ತಿಗಳಿಂದ ಹಮಾಸ್ ಅಧಿಕಾರಿಗಳಿಗೆ ಕರೆ
ನೂರಾರು ಇಸ್ರೇಲಿಗಳನ್ನು ಹಮಾಸ್ ವಶಪಡಿಸಿದೆ. ಇವರನ್ನು ಬಿಡುಗಡೆ ಮಾಡುವ ಸಲುವಾಗಿ ಹಮಾಸ್ ಅಧಿಕಾರಿಗಳೊಂದಿಗೆ ಕತಾರ್ ಮಧ್ಯವರ್ತಿಗಳು ಮಾತುಕತೆ ನಡೆಸಿದ್ದಾರೆ ಎಂದು ತಿಳಿದುಬಂದಿದೆ.












Click it and Unblock the Notifications