ಮಸ್ಕ್ ಆಫರ್‌ಗೆ ಮುನ್ನ ಟ್ವಿಟ್ಟರ್ ಮಾರಾಟಕ್ಕಿತ್ತಾ? ಇಲ್ಲಿದೆ ಡೀಟೇಲ್ಸ್
ನವದೆಹಲಿ, ಏ. 25: ಸೋಷಿಯಲ್ ಮೀಡಿಯಾ ಕಂಪನಿ ಟ್ವಿಟ್ಟರ್‌ನ ಖರೀದಿಗೆ ಇಲಾನ್ ಮಸ್ಕ್ ಇನ್ನಿಲ್ಲದ ಕಸರತ್ತು ನಡೆಸುತ್ತಿರುವ ಘಟನೆ ಇತ್ತೀಚೆಗೆ ದಿನನಿತ್ಯ ಸದ್ದು ಮಾಡುತ್ತಿದೆ. ವಿಶ್ವದ ಅತಿ ಶ್ರೀಮಂತ ವ್ಯಕ್ತಿ ಎನಿಸಿರುವ ಹಾಗೂ ನಾಸಾಗೆ ರಾಕೆಟ್ ತಯಾರಿಸಿಕೊಡುವ ಇಲಾನ್ ಮಸ್ಕ್ ಅವರು 43 ಬಿಲಿಯನ್ ಡಾಲರ್ ಹಣಕ್ಕೆ ಟ್ವಿಟ್ಟರ್ ಖರೀದಿಸುವುದಾಗಿ ಇತ್ತಿಚೆಗೆ ದಿಢೀರನೇ ಆಫರ್ ಕೊಟ್ಟಿದ್ದರು. ಅದಾದ ಬಳಿಕ ಟ್ವಿಟ್ಟರ್ ಸಂದಿಗ್ದತೆಗೆ ಸಿಲುಕಿದೆ. ಮಸ್ಕ್ ಅವರಿಗೆ ಮಾರಾಟ ಮಾಡದಿರಲು ಟ್ವಿಟ್ಟರ್‌ನ ಕೆಲ ಷೇರುದಾರರು ಪ್ರಯತ್ನಿಸಿದ್ದುಂಟು. ಆದರೆ, ಮಸ್ಕ್ ತಮ್ಮ ಪ್ರಯತ್ನ ನಿಲ್ಲಿಸಿಲ್ಲ.
ಅಮೆರಿಕದ ಇಲಾನ್ ಮಸ್ಕ್ ಅವರು ಟ್ವಿಟ್ಟರ್ ಖರೀದಿಗೆ ತಾನು ತೆಗೆದುಕೊಂಡ ನಿರ್ಧಾರ ತಮಾಷೆಯಲ್ಲ ಎಂದು ಜಗಜ್ಜಾಹೀರುಗೊಳಿಸಲು ಅಮೆರಿಕದ ಪ್ರಾಧಿಕಾರದ ಬಳಿಕ ಅರ್ಜಿ ಗುಜರಾಯಿಸಿದ್ದಾರೆ. ಸುಮಾರು 46 ಬಿಲಿಯನ್ ಡಾಲರ್‌ನಷ್ಟು ಹಣವನ್ನೂ ಹೊಂದಿಸಿ ತಾನು ಟ್ವಿಟ್ಟರ್ ಖರೀದಿಗೆ ಸಿದ್ಧ ಎಂದು ಸ್ಪಷ್ಟಪಡಿಸಿದ್ದಾರೆ.
ಮಸ್ಕ್ ಇಷ್ಟಕ್ಕೆ ಸುಮ್ಮನಾಗದೆ ಟ್ವಿಟ್ಟರ್ ಕಂಪನಿಯ ಹಲವು ಷೇರುದಾರರನ್ನ ಖಾಸಗಿಯಾಗಿ ಭೇಟಿ ಮಾಡಿದ್ದಾರೆ. ಇದರಿಂದ ಟ್ವಿಟ್ಟರ್ ಕಿವಿ ನಿಮಿರಿಸುವುದು ಅನಿವಾರ್ಯವಾಗಿದೆ. ಟ್ವಿಟ್ಟರ್ ಸಂಸ್ಥೆ ಇಲಾನ್ ಮಸ್ಕ್ ಅವರ ಈ ಖರೀದಿ ಆಫರ್ ಅನ್ನು ಪರಿಗಣಿಸಲೇಬೇಕಾಗಿದೆ.

ವಾಲ್ ಸ್ಟ್ರೀಟ್ ಜರ್ನಲ್ ಮೊದಲಾದ ಮಾಧ್ಯಮಗಳ ವರದಿಗಳ ಪ್ರಕಾರ ಇಲಾನ್ ಮಸ್ಕ್ ಮತ್ತು ಟ್ವಿಟ್ಟರ್ ಮಧ್ಯೆ ಈ ವಿಚಾರದ ಬಗ್ಗೆ ಚರ್ಚೆಗಳು ನಡೆಯುತ್ತಿವೆ ಎನ್ನಲಾಗುತ್ತಿದೆ.
ಟ್ವಿಟ್ಟರ್ ಮೊದಲೇ ಮಾರಾಟಕ್ಕಿತ್ತಾ?
ಇಲಾನ್ ಮಸ್ಕ್ ಅವರು ಖರೀದಿ ಆಫರ್ ಮುಂದಿಡುವ ಮುನ್ನವೇ ಟ್ವಿಟ್ಟರ್ ಮಾರಾಟಕ್ಕಿತ್ತಾ? ಮಸ್ಕ್ ಯಾಕೆ ಈ ಆಫರ್ ಕೊಟ್ಟರು ಎಂಬ ಪ್ರಶ್ನೆ ಸಹಜ. ಮಸ್ಕ್ ಅವರು ಆಫರ್ ಮುಂದಿಡುವ ಮುನ್ನ ಟ್ವಿಟ್ಟರ್ ಮಾರಾಟಕ್ಕಿರಲಿಲ್ಲ, ಅಂಥ ಆಲೋಚನೆ ಆ ಕಂಪನಿಗೆ ಇರಲಿಲ್ಲ.
ಇಲಾನ್ ಮಸ್ಕ್ ಅವರು ಟ್ವಿಟ್ಟರ್ ಕಂಪನಿಯ ಅತಿದೊಡ್ಡ ಷೇರುದಾರರಲ್ಲಿ ಒಬ್ಬರು. ಆ ಕಂಪನಿಯಲ್ಲಿ ಮಸ್ಕ್ ಶೇ. 9.2ರಷ್ಟು ಷೇರುಗಳನ್ನ ಹೊಂದಿದ್ದಾರೆ. ಇದರ ಜೊತೆಗೆ ಟ್ವಿಟ್ಟರ್‌ನ ಕೆಲ ನೀತಿಗಳ ಕಟು ಟೀಕಾಕಾರರಲ್ಲಿ ಮಸ್ಕ್ ಕೂಡ ಒಬ್ಬರು. ಟ್ವಿಟ್ಟರ್ ವೇದಿಕೆಯಲ್ಲಿ ವಾಕ್ ಸ್ವಾತಂತ್ರ್ಯ ಇಲ್ಲ. ಅಲ್ಲಿಯದ್ದು ವೋಕ್ ಸಂಸ್ಕೃತಿ ಎಂದೆಲ್ಲಾ ಮಸ್ಕ್ ಆಗಾಗ ಟೀಕಿಸುತ್ತಿರುತ್ತಾರೆ.
ಮಾಹಿತಿ ಹಂಚಿಕೆಗಾಗಿ ಟ್ವಿಟ್ಟರ್ ಅನ್ನು ಸಾಮಾನ್ಯವಾಗಿ ಬಳಸುವ ಇಲಾನ್ ಮಸ್ಕ್ ಅವರು ಒಂದು ದಿನ ತಾನು 43 ಬಿಲಿಯನ್ ಡಾಲರ್ ಹಣ ಕೊಟ್ಟು ಟ್ವಿಟರ್ ಖರೀದಿಸುತ್ತೇನೆ ಎಂದು ಕಂಪನಿಯ ಸಿಇಒಗೆ ಟ್ವೀಟ್ ಮಾಡಿದ್ದರು. ಅವರು ಸುಮ್ಮನೆ ತಮಾಷೆಗೆ ಅಥವಾ ಕುಚೋದ್ಯಕ್ಕೆ ಹೀಗೆ ಆಫರ್ ಕೊಟ್ಟಿರಬಹುದು ಎಂದು ನಿರ್ಲಕ್ಷಿಸಲಾಗಿತ್ತು. ಟ್ವಿಟ್ಟರ್ ಮಂಡಳಿ ನಿರ್ದೇಶಕರು ಮಸ್ಕ್ ಅವರಿಗೆ ಕಂಪನಿಯನ್ನ ಮಾರುವುದಕ್ಕೆ ವಿರೋಧ ಮಾಡಿದ್ದರು.

ಟ್ವಿಟ್ಟರ್ ಮುಂದೇನು ಮಾಡಬಹುದು?:
ಇಲಾನ್ ಮಸ್ಕ್ ಅವರು ಕೊಟ್ಟಿರುವ ಆಫರ್ ಅನ್ನು ಒಪ್ಪಿಕೊಳ್ಳುವುದು ಬಿಡುವುದು ಟ್ವಿಟ್ಟರ್ ನಿರ್ಧಾರಕ್ಕೆ ಬಿಟ್ಟಿದ್ದು. ಆಫರ್ ಅನ್ನು ತಿರಸ್ಕರಿಸುವ ಸಾಧ್ಯತೆ ಇದೆ. ಮಸ್ಕ್ ಕೊಟ್ಟಿರುವ 43 ಬಿಲಿಯನ್ ಡಾಲರ್ ಆಫರ್ ತೀರಾ ಕಡಿಮೆ ಆಯಿತು ಎಂದು ಟ್ವಿಟ್ಟರ್ ಸಬೂಬು ಹೇಳಬಹುದು.
ಮಸ್ಕ್ ಆಫರ್ ನಂತರ ಬೇರೆ ಕೆಲ ಹೂಡಿಕೆ ಕಂಪನಿಗಳು ಟ್ವಿಟ್ಟರ್ ಖರೀದಿಗೆ ಆಸಕ್ತಿ ತೋರಿವೆ. ಆದರೆ, ಅವು ಎಷ್ಟು ಆಫರ್ ಕೊಡುತ್ತವೆ ಎಂಬುದರ ಮೇಲೆ ಟ್ವಿಟ್ಟರ್‌ನ ಮುಂದಿನ ದಾರಿ ನಿಂತಿದೆ.
ಮಸ್ಕ್ ಮುಂದಿರುವ ದಾರಿಗಳೇನು?
ಇಲಾನ್ ಮಸ್ಕ್ ಅವರು ತಮ್ಮ ಷೇರು ಪಾಲನ್ನು ಶೇ. 15ಕ್ಕಿಂತಲೂ ಹೆಚ್ಚಿಸಿಕೊಳ್ಳಲು ಪ್ರಯತ್ನಿಸಬಹುದು. ಇದಕ್ಕೆ ಈಗಿನ ಟ್ವಿಟ್ಟರ್ ಮಂಡಳಿ ಅಡ್ಡಿಹಾಕಿದೆ. ಆದರೆ, ಮಸ್ಕ್ ಅವರು ಟ್ವಿಟ್ಟರ್‌ನ ಅತಿದೊಡ್ಡ ಷೇರುದಾರರಲ್ಲೊಬ್ಬರಾಗಿರುವುದು ಅವರಿಗೆ ಅನುಕೂಲವಾಗಿದೆ. ಷೇರುದಾರರ ಸಭೆಯಲ್ಲಿ ಮಸ್ಕ್ ಅವರು ಈ ವಿಚಾರವನ್ನು ಪ್ರಸ್ತಾಪಿಸಿ ಟ್ವಿಟ್ಟರ್ ಆಡಳಿತ ಮಂಡಳಿ ಮೇಲೆ ಒತ್ತಡ ಹೇರಬಹುದು.

ಇತರ ಷೇರುದಾರರಿಂದಲೂ ಒತ್ತಡ ಹಾಕಿಸಬಹುದು:
ಟ್ವಿಟ್ಟರ್‌ನ ಇತರ ಷೇರುದಾರರು ಇಲಾನ್ ಮಸ್ಕ್ ಅವರ ಆಫರ್ ಅನ್ನು ಒಪ್ಪಿಕೊಳ್ಳುವಂತೆ ಆಡಳಿತ ಮಂಡಳಿಯನ್ನ ಒತ್ತಾಯಿಸುವ ಸಾಧ್ಯತೆ ಇಲ್ಲದಿಲ್ಲ. ಮಸ್ಕ್ ಕಳೆದ ವಾರಾಂತ್ಯದಲ್ಲಿ ಕೆಲವು ಷೇರುದಾರರೊಂದಿಗೆ ವಿಡಿಯೋ ಕಾನ್ಫೆರೆನ್ಸ್ ಮೂಲಕ ಮಾತನಾಡಿದ್ದಾರೆ. ಒಂದು ವೇಳೆ ಅವರು ಮಸ್ಕ್ ಮಾತಿಗೆ ಸರಿದೂಗಿ ಟ್ವಿಟ್ಟರ್ ಆಡಳಿತ ಮಂಡಳಿ ಮೇಲೆ ಒತ್ತಡ ಹಾಕಿದರೆ ಟ್ವಿಟ್ಟರ್‌ಗೆ ಬೇರೆ ದಾರಿ ಇರುವುದಿಲ್ಲ. ಮಸ್ಕ್ ಅವರಿಗಿಂತ ಯಾರು ಹೆಚ್ಚು ಬೆಲೆ ಮುಂದಿಡುತ್ತಾರೋ ಅದನ್ನು ಟ್ವಿಟ್ಟರ್ ಒಪ್ಪಿಕೊಳ್ಳಬಹುದು.
ಈ ಹಿನ್ನೆಲೆಯಲ್ಲಿ ಟ್ವಿಟ್ಟರ್ ವರ್ಸಸ್ ಮಸ್ಕ್ ನಡುವಿನ ಜಟಾಪಟಿ ಅಥವಾ ವ್ಯವಹಾರ ಮಾತುಕತೆ ಎಲ್ಲಿಗೆ ಹೋಗಿ ನಿಲ್ಲುತ್ತದೆ ಎಂಬುದು ಕುತೂಹಲ ಮೂಡಿಸುವ ಸಂಗತಿ.
(ಒನ್ಇಂಡಿಯಾ ಸುದ್ದಿ)












Click it and Unblock the Notifications