ಇಸ್ರೇಲ್ ಸರ್ಕಾರಕ್ಕೆ ಹೊಸ ಕಂಟಕ? ನಾಳೆ ಹೊರಬರಲಿದೆ ತೀರ್ಪು!
ಹಮಾಸ್ ವಿರುದ್ಧ ಯುದ್ಧ ಸಾರಿ, ಪ್ಯಾಲೆಸ್ತೀನ್ ಜನರನ್ನು ಹಿಂಸಿಸುತ್ತಿದೆ ಎಂಬ ಆರೋಪ ಹೊತ್ತಿರುವ ಇಸ್ರೇಲ್‌ಗೆ ಈಗ ಸಾಲು ಸಾಲು ಸವಾಲು ಎದುರಾಗುತ್ತಿದೆ. ಅದರಲ್ಲೂ ಇಸ್ರೇಲ್ ಸೇನೆ ಗಾಜಾ ಪಟ್ಟಿ ಭಾಗದ ರಫಾ ಮತ್ತಿತರ ಪ್ರದೇಶದ ಮೇಲೆ ಕೈಗೊಂಡ ಕಾರ್ಯಾಚರಣೆಯೇ ಈಗ ಕಂಟಕವಾಗಿ ಪರಿಣಮಿಸಿದೆ. ಈ ಕುರಿತು ನಾಳೆ ಮಹತ್ವದ ತೀರ್ಪು ಹೊರಬೀಳಲಿದೆ!
ಹೌದು, ಅಕ್ಟೋಬರ್ 7 ರಂದು ಶುರುವಾದ ಇಸ್ರೇಲ್ & ಹಮಾಸ್ ಯುದ್ಧದಲ್ಲಿ ಈಗಾಗಲೇ 34 ಸಾವಿರಕ್ಕೂ ಹೆಚ್ಚು ಜನರ ಜೀವ ಬಲಿಯಾಗಿದ್ದು. ಗಾಜಾ ಭಾಗಶಃ ಕಟ್ಟಡಗಳು ಪೀಸ್ ಪೀಸ್ ಆಗಿ ಹೋಗಿವೆ. ಜನ ಜೀವ ಉಳಿಸಿಕೊಳ್ಳಲು ನೂರಾರು ಕಿಲೋ ಮೀಟರ್ ದೂರ ಓಡಿ ಹೋಗಿದ್ದಾರೆ. ಈ ಮೂಲಕ ಇಸ್ರೇಲ್ ದಾಳಿ ಪರಿಣಾಮ ಗಾಜಾ ಪಟ್ಟಿ ಶೇ 35ರಷ್ಟು ಕಟ್ಟಡಗಳು ಪೂರ್ತಿ ಅಥವಾ ಭಾಗಶಃ ಹಾನಿಯಾಗಿವೆ. ಗಾಜಾ ಪಟ್ಟಿಯಲ್ಲಿ 88,868 ಕಟ್ಟಡ ಪೂರ್ಣ ಅಥವಾ ಭಾಗಶಃ ಹಾನಿ ಆಗಿವೆಯಂತೆ. ಇದರ ಜೊತೆಗೆ ಜೀವ ಹಾನಿ ಕೂಡ ದೊಡ್ಡ ಮಟ್ಟದಲ್ಲೇ ಇದೆ. ಈ ವಿಚಾರ ಜಾಗತಿಕ ಮಟ್ಟದಲ್ಲಿ ದೊಡ್ಡ ಚರ್ಚೆಗೆ ವೇದಿಕೆ ಸೃಷ್ಟಿ ಮಾಡಿರುವ ಸಮಯದಲ್ಲೇ ನಾಳೆಗೆ, ಈ ವಿಚಾರದ ಬಗ್ಗೆ ಮಹತ್ವದ ತೀರ್ಪು ಹೊರಬೀಳಲಿದೆ.

ಯುದ್ಧ ನಿಲ್ಲಿಸುತ್ತಾ ಇಸ್ರೇಲ್ ಸೇನೆ?
ಅಂದಹಾಗೆ ಗಾಜಾ ಪಟ್ಟಿ ಭಾಗದ ರಫಾ ಮೇಲೆ ಇಸ್ರೇಲ್ ಸೇನೆಯು ನಡೆಸುತ್ತಿರುವ ದಾಳಿಯನ್ನು ನಿಲ್ಲಿಸುವಂತೆ ಆಗ್ರಹಿಸಿ, ಈ ಬಗ್ಗೆ ಸೂಚನೆ ನೀಡಬೇಕು ಎಂದು ಮನವಿ ಮಾಡಿ ದಕ್ಷಿಣ ಆಫ್ರಿಕಾ ಅಂತಾರಾಷ್ಟ್ರೀಯ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿತ್ತು. ಈ ಕುರಿತು ನಾಳೆ ಅಂದ್ರೆ ಶುಕ್ರವಾರ ಅಂತಾರಾಷ್ಟ್ರೀಯ ನ್ಯಾಯಾಲಯ ಮಹತ್ವದ ತೀರ್ಪು ನೀಡಲಿದೆ. ಇಸ್ರೇಲ್ ಸೇನೆ ತಕ್ಷಣವೇ ಗಾಜಾ ಪಟ್ಟಿ ಭಾಗದ ಮೇಲೆ ನಡೆಸುತ್ತಿರುವ ದಾಳಿ ನಿಲ್ಲಿಸಬೇಕು ಎಂದು ಈ ಅರ್ಜಿಯಲ್ಲಿ, ಮನವಿಯನ್ನ ಮಾಡಲಾಗಿದೆ. ಹೀಗಾಗಿ ನಾಳೆ ಕೋರ್ಟ್ ಯಾವ ತೀರ್ಪು ನೀಡಲಿದೆ? ಎಂಬ ಕುತೂಹಲ ಮೂಡಿದೆ.
1948ರಲ್ಲಿ ಮಾಡಿಕೊಂಡ ಒಪ್ಪಂದ...
ಅಷ್ಟಕ್ಕೂ ಜನಾಂಗೀಯ ಹತ್ಯಾಕಾಂಡಕ್ಕೆ ಸಂಬಂಧಿಸಿ 1948ರಲ್ಲಿ ಮಾಡಿಕೊಂಡ ಒಪ್ಪಂದವನ್ನ ಇಸ್ರೇಲ್ ಉಲ್ಲಂಘಿಸುತ್ತಿದೆ ಅಂತಾ ದಕ್ಷಿಣ ಆಫ್ರಿಕಾ ಮಾಡಿದ ಆರೋಪನ ಇಸ್ರೇಲ್ ಖಂಡಿಸಿತ್ತು. ದಕ್ಷಿಣ ಆಫ್ರಿಕಾದ ಆರೋಪ ಜನಾಂಗೀಯ ಹತ್ಯಾಕಾಂಡಗಳನ್ನ ಅಣಕಿಸುವಂತೆ ಇದ್ದು ಈ ನಡೆ ಸರಿಯಲ್ಲ ಎಂದಿತ್ತು ಇಸ್ರೇಲ್. ಹೀಗಾಗಿ ನಾಳೆ ತೀರ್ಪು ಏನಾಗಲಿದೆ? ಎಂಬ ಕುತೂಹಲ ಕೂಡ ಈಗ ಮೂಡಿದೆ. ಈಗಾಗಲೇ ಇಸ್ರೇಲ್ ಸೇನೆ ವಿರುದ್ಧ ಜಗತ್ತಿನಾದ್ಯಂತ ಆಕ್ರೋಶ ವ್ಯಕ್ತವಾಗಿದೆ. ಮತ್ತೊಂದು ಕಡೆ ಯುದ್ಧ ನಿಲ್ಲಿಸುವಂತೆ ಒತ್ತಡ ಕೂಡ ಹೆಚ್ಚಾಗುತ್ತಿದೆ.












Click it and Unblock the Notifications