InnoMake Smart Shoes: ದೃಷ್ಟಿಹೀನರಿಗೆ ಸ್ಮಾರ್ಟ್ ಶೂಗಳ ಬಲ.. 4 ಮೀಟರ್ ದೂರದಲ್ಲೇ ಅಡೆತಡೆ ಪತ್ತೆಹಚ್ಚುವ ತಂತ್ರಜ್ಞಾನ
InnoMake Smart Shoes: ಕಣ್ಣು ಕಳೆದುಕೊಂಡವರು (ದೃಷ್ಟಿಹೀನರು) ಕೋಲು ಹಿಡಿದುಕೊಂಡು ಓಡಾಡುವ ಯುಗಕ್ಕೆ ಅಂತ್ಯ ಹಾಡಲು ಸಜ್ಜಾಗಿದೆ ಆಸ್ಟ್ರಿಯಾದ ಸ್ಮಾರ್ಟ್ ಶೂ ತಂತ್ರಜ್ಞಾನ. ಇದು ಹೇಗೆ ಕಾರ್ಯನಿರ್ಹಹಿಸಲಿದೆ ಹಾಗೂ ಏನೆಲ್ಲಾ ವಿಶೇಷತೆಗಳನ್ನು ಒಳಗೊಂಡಿದೆ ಎನ್ನುವ ಸಂಪೂರ್ಣ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ.
ದೃಷ್ಟಿಹೀನರಿಗೆ ಸಂಚಾರದಲ್ಲಿ ಹೊಸ ಭರವಸೆ ಮೂಡಿಸಿರುವ 'ಟೆಕ್-ಇನ್ನೋವೇಶನ್' ಸಂಸ್ಥೆಯ 'ಇನ್ನೋಮೇಕರ್' (InnoMake) ಶೂಗಳು, ಅಲ್ಟ್ರಾಸಾನಿಕ್ ಸೆನ್ಸರ್ ಹಾಗೂ ವೈಬ್ರೇಶನ್ (Vibration) ತಂತ್ರಜ್ಞಾನದ ಮೂಲಕ 4 ಮೀಟರ್ ದೂರದಲ್ಲಿರುವ ಅಡೆತಡೆಗಳನ್ನು ಹೆಜ್ಜೆಯಿಡುವ ಮುನ್ನವೇ ಪತ್ತೆಹಚ್ಚುತ್ತವೆ. ಯುರೋಪ್‌ನಲ್ಲಿ ಅಧಿಕೃತ ವೈದ್ಯಕೀಯ ಸಾಧನವಾಗಿ ಮಾನ್ಯತೆ ಪಡೆದಿರುವ ಈ ಶೂಗಳು, ಯಾರ ನೆರವಿಲ್ಲದೆ ಸ್ವತಂತ್ರವಾಗಿ ಓಡಾಡಲು ದೃಷ್ಟಿಹೀನರಿಗೆ ಹೊಸ ಶಕ್ತಿ ತುಂಬುತ್ತಿವೆ.

ಸುಮಾರು 70ಕ್ಕೂ ಹೆಚ್ಚು ವರ್ಷಗಳಿಂದ ದೃಷ್ಟಿಹೀನ ವ್ಯಕ್ತಿಗಳಿಗೆ ಕೋಲು ಪ್ರಮುಖ ಆಸರೆಯಾಗಿದೆ. ಆದರೆ ಇದೀಗ ಕೋಲು ಇಲ್ಲದೆಯೇ ದೂರದ ವಸ್ತುವನ್ನು ಗುರುತಿಸಬಹುದಾಗಿದೆ. ದೃಷ್ಟಿಹೀನರ ಸಂಚಾರವನ್ನು ಮತ್ತಷ್ಟು ಸುರಕ್ಷಿತವಾಗಿಸಲು ಆಸ್ಟ್ರಿಯಾದ 'ಟೆಕ್-ಇನ್ನೋವೇಶನ್' (Tec-Innovation) ಎಂಬ ಸಂಸ್ಥೆಯು 'ಇನ್ನೋಮೇಕರ್' (InnoMake) ಹೆಸರಿನ ವಿನೂತನ ಸ್ಮಾರ್ಟ್ ಶೂ ಅನ್ನು ಅಭಿವೃದ್ಧಿಪಡಿಸಿದೆ.
ಈ ಹೊಸ ತಂತ್ರಜ್ಞಾನ ಹೇಗೆ ಕೆಲಸ ಮಾಡುತ್ತದೆ?
* ಅಲ್ಟ್ರಾಸಾನಿಕ್ ಸೆನ್ಸರ್‌ಗಳು: ಶೂಗಳ ಮುಂಭಾಗದ ತುದಿಯಲ್ಲಿ ಅತ್ಯಾಧುನಿಕ ಅಲ್ಟ್ರಾಸಾನಿಕ್ (Ultrasonic) ಸೆನ್ಸರ್‌ಗಳನ್ನು ಜೋಡಿಸಲಾಗಿದೆ.
* ವ್ಯಕ್ತಿಯು ಹೆಜ್ಜೆ ಇಡುವ ಮುನ್ನವೇ, ಮುಂಭಾಗದಲ್ಲಿರುವ ಗೋಡೆ, ಮರ, ಮೆಟ್ಟಿಲು ಅಥವಾ ಇತರ ಯಾವುದೇ ಅಡೆತಡೆಗಳನ್ನು ಸುಮಾರು 4 ಮೀಟರ್ (13 ಅಡಿ) ದೂರದಿಂದಲೇ ಈ ಸೆನ್ಸರ್‌ಗಳು ಪತ್ತೆಹಚ್ಚುತ್ತವೆ.
* ಕಂಪನದ ಮೂಲಕ ಸೂಚನೆ (Vibration): ಅಡೆತಡೆ ಹತ್ತಿರ ಬಂದಂತೆ ಶೂನಲ್ಲಿ ಕಂಪನ ಹೆಚ್ಚಾಗುತ್ತದೆ. ವಸ್ತುವು ಎಷ್ಟು ಹತ್ತಿರವಿದೆಯೋ, ಅಷ್ಟು ವೇಗವಾಗಿ ಕಂಪನ ಉಂಟಾಗಿ ಬಳಕೆದಾರರಿಗೆ ಜಾಗರೂಕರಾಗಿರಲು ಮುನ್ನೆಚ್ಚರಿಕೆ ನೀಡುತ್ತದೆ.
ಇದಕ್ಕೆ ಅನುಮೋದನೆ ಸಿಕ್ಕಿದ್ದು ಯಾವಾಗ?
ಈ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸಲು ಸುಮಾರು 5 ವರ್ಷಗಳ ಸತತ ಸಂಶೋಧನೆ ಬೇಕಾಯಿತು. 2016 ರಲ್ಲಿ ಕಂಪನಿಯು 'ಗ್ರಾಜ್ ತಂತ್ರಜ್ಞಾನ ವಿಶ್ವವಿದ್ಯಾಲಯ'ದ (Graz University of Technology) ಸಂಶೋಧಕರೊಂದಿಗೆ ಕೈಜೋಡಿಸಿತು. ಸೆಪ್ಟೆಂಬರ್ 2020ರಲ್ಲಿ ಈ ಸಾಧನಕ್ಕೆ ಯುರೋಪ್‌ನಲ್ಲಿ ಅಧಿಕೃತ ವೈದ್ಯಕೀಯ ಸಾಧನ (Medical Device) ಎಂಬ ಮಾನ್ಯತೆ ಮತ್ತು ಅನುಮೋದನೆ ದೊರೆಯಿತು.
ಸ್ವಂತ ಅನುಭವದಿಂದ ಮೂಡಿದ ಕಲ್ಪನೆ
ಈ ಸಂಸ್ಥೆಯ ಸಹ-ಸಂಸ್ಥಾಪಕ ಮಾರ್ಕಸ್ ರಾಫರ್ (Markus Raffer) ಅವರು ಸ್ವತಃ ದೃಷ್ಟಿಹೀನರಾಗಿದ್ದಾರೆ. 'ಈ ಶೂ ನನ್ನ ವೈಯಕ್ತಿಕ ಜೀವನದಲ್ಲೂ ದೊಡ್ಡ ಸಹಾಯ ಮಾಡಿದೆ,' ಎಂದು ಅವರು ಹೇಳಿದ್ದಾರೆ. ಸಮಸ್ಯೆಯನ್ನು ದೂರದಿಂದ ನೋಡಿ ಪರಿಹಾರ ಹುಡುಕುವುದಕ್ಕಿಂತ, ಆ ಸಮಸ್ಯೆಯನ್ನು ಸ್ವತಃ ಎದುರಿಸುತ್ತಿರುವವರೇ ಕಂಡುಕೊಂಡ ಪರಿಹಾರವು ಹೆಚ್ಚು ಪರಿಣಾಮಕಾರಿ ಆಗಿರುತ್ತದೆ ಎಂಬುದಕ್ಕೆ ಈ ಸಾಧನವೇ ಸಾಕ್ಷಿ.
ಹೆಚ್ಚುವರಿ ಸುರಕ್ಷತಾ ಸಾಧನ..
ಈ ಸೆನ್ಸರ್‌ಗಳು ಪ್ರಸ್ತುತ ತಗ್ಗುಗಳು ಅಥವಾ ಕೆಳಗಿಳಿಯುವ ಮೆಟ್ಟಿಲುಗಳನ್ನು ಪತ್ತೆಹಚ್ಚಲು ಸಂಪೂರ್ಣವಾಗಿ ಶಕ್ತವಾಗಿಲ್ಲ. ಆದ್ದರಿಂದ ಇದು ಕೋಲಿಗೆ ಸಂಪೂರ್ಣ ಪರ್ಯಾಯವಲ್ಲ. ಬದಲಿಗೆ ಕೋಲಿನೊಂದಿಗೆ ಹೆಚ್ಚುವರಿ ಸುರಕ್ಷತಾ ಸಾಧನವಾಗಿ ಕೆಲಸ ಮಾಡುತ್ತದೆ.
ಮುಂದಿನ ಹೆಜ್ಜೆ ಏನು?
ಸಂಶೋಧಕರು ಪ್ರಸ್ತುತ ಈ ಶೂಗಳಿಗೆ ಕ್ಯಾಮೆರಾ ಮತ್ತು ಎಐ (AI) ತಂತ್ರಜ್ಞಾನವನ್ನು ಅಳವಡಿಸುವ ಕೆಲಸ ಮಾಡುತ್ತಿದ್ದಾರೆ. ಇದರಿಂದ ಮುಂಭಾಗದಲ್ಲಿರುವುದು ಗೋಡೆಯೋ, ಕಾರೋ ಅಥವಾ ಮೆಟ್ಟಿಲೋ ಎಂಬುದನ್ನು ನಿಖರವಾಗಿ ಗುರುತಿಸಲು ಸಾಧ್ಯವಾಗಲಿದೆ.
ಮಾನವೀಯತೆಯ ಸೇವೆಗೆ ತಂತ್ರಜ್ಞಾನವನ್ನು ಹೇಗೆ ಧನಾತ್ಮಕವಾಗಿ ಬಳಸಿಕೊಳ್ಳಬಹುದು ಎಂಬುದಕ್ಕೆ ಈ ಇನ್ನೋಮೇಕರ್ ಶೂ ಅತ್ಯುತ್ತಮ ಉದಾಹರಣೆಯಾಗಿದೆ. ಅಪಘಾತ ಸಂಭವಿಸಿದ ನಂತರ ಎಚ್ಚರಗೊಳ್ಳುವ ಬದಲು, ಅಪಘಾತವಾಗುವ ಮುನ್ನವೇ ಮುನ್ನೆಚ್ಚರಿಕೆ ನೀಡುವುದು ನಾಯಕತ್ವ ಮತ್ತು ತಂತ್ರಜ್ಞಾನದ ನಿಜವಾದ ಲಕ್ಷಣವಾಗಿದೆ ಅಂತಲೇ ಹೇಳಬಹುದಾಗಿದೆ.


Click it and Unblock the Notifications
