ಇಂಡೋನೇಷ್ಯಾದಲ್ಲಿ ಮರು ಆಯ್ಕೆಯಾದ ರಾಷ್ಟ್ರಾಧ್ಯಕ್ಷ ವಿಡೊಡೊ
ಜಕಾರ್ತ, ಮೇ 21:ಭಾರತದ ಪ್ರಧಾನಿ ನರೇಂದ್ರ ಮೋದಿ ಮರು ಆಯ್ಕೆಯ ಕುತೂಹಲ ಏರ್ಪಟ್ಟಿರುವ ಬೆನ್ನಲ್ಲೇ ಇಂಡೋನೇಷ್ಯಾ ಮತದಾರರು ಹಾಲಿ ಅಧ್ಯಕ್ಷ ಜೋಕೊ ವಿಡೊಡೊ ಅವರನ್ನು ಎರಡನೇ ಅವಧಿಗೆ ಆಯ್ಕೆ ಮಾಡಿದ್ದಾರೆ.
ಇಂಡೋನೇಷ್ಯಾದಲ್ಲಿ ಮತದಾನವಾಗಿರುವುದರಲ್ಲಿ ಶೇ.55.5 ಮತಗಳನ್ನು ಪಡೆದು ಜೋಕೊ ಎರಡನೇ ಬಾರಿಗೆ ರಾಷ್ಟ್ರಾಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ ಎಂದು ಸ್ಥಳೀಯ ಚುನಾವಣಾ ಆಯೋಗ ತಿಳಿಸಿದೆ.
ಪ್ರತಿಸ್ಪರ್ಧಿ ನಿವೃತ್ತ ಜನರಲ್ ರೊಬೊವೊ ಸುಬಿಯಾಂಟೊ ಶೇ.44.5 ಮತಗಳನ್ನು ಪಡೆದಿದ್ದಾರೆ. ವಿಶ್ವದ ಮೂರನೇ ಅತಿದೊಡ್ಡ ಪ್ರಜಾಪ್ರಭುತ್ವ ಎಂದೆನಿಸಿಕೊಂಡಿರುವ ಇಂಡೋನೇಷ್ಯಾದಲ್ಲಿ ಏಪ್ರಿಲ್ 17ರಂದು 15.4 ಕೋಟಿ ಮಂದಿ ಮತದಾನ ಮಾಡಿದ್ದಾರೆ.

ಇವರಲ್ಲಿ 8.5ಕೋಟಿ ಜನರು ಹಾಲಿ ಅಧ್ಯಕ್ಷರ ಪರ ಮತದಾನ ಮಾಡಿದ್ದಾರೆ. ಆದರೆ ಚುನಾವಣಾ ಪ್ರಕ್ರಿಯೆಯನ್ನು ನಕಲಿ ಹಾಗೂ ದೋಷಪೂರಿತ ಎಂದು ಪ್ರತಿಸ್ಪರ್ಧಿ ರೊಬೊವೊ ಆರೋಪಿಸಿದ್ದಾರೆ.
ಈ ಬಗ್ಗೆ ತನಿಖೆ ನಡೆಸಿ ಹಾಲಿ ರಾಷ್ಟ್ರಾಧ್ಯಕ್ಷರ ವಿರುದ್ಧ ಕ್ರಮ ತೆಗೆದುಕೊಳ್ಳಬೇಕೆನ್ನುವುದು ಅವರ ಆಗ್ರಹವಾಗಿದೆ. ಈ ಆರೋಪವನ್ನು ಜೋಕೊ ಅಲ್ಲಗಳೆದಿದ್ದಾರೆ. ಸ್ವತಂತ್ರ ವೀಕ್ಷಕರೂ ಕೂಡ ಇಂಡೋನೇಷ್ಯಾದಲ್ಲಿ ಪಾರದರ್ಶಕ ಚುನಾವಣೆ ನಡೆದಿದೆ ಎಂದು ಅಭಿಪ್ರಾಯ ಪಟ್ಟಿದ್ದಾರೆ.












Click it and Unblock the Notifications