ಪಾಕ್ ಜೈಲಿನಲ್ಲಿ ಗುಜರಾತ್ ಮೂಲದ ಮೀನುಗಾರನ ಹತ್ಯೆ
ಕರಾಚಿ, ಫೆ.4 : ಪಾಕಿಸ್ತಾನ ಜೈಲಿನಲ್ಲಿ ಭಾರತೀಯ ಸರಬ್ಜಿತ್ ಸಿಂಗ್ ಮೇಲೆ ಹಲ್ಲೆ ನಡೆದು ಅವರು ಸಾವನ್ನಪ್ಪಿದ ಪ್ರಕರಣ ನೆನಪಿನಲ್ಲಿರುವಾಗಲೇ, ಮತ್ತೋರ್ವ ಭಾರತೀಯ ಕೈದಿಯನ್ನು ಹತ್ಯೆ ಮಾಡಲಾಗಿದೆ. ಸದ್ಯ ಕೈದಿಯ ಶವವನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ರವಾನಿಸಲಾಗಿದೆ.
ಮಂಗಳವಾರ ಕರಾಚಿಯ ಲಾಂಧಿ ಜೈಲಿನಲ್ಲಿ ಕಿಶೋರ್ ಭಗವಾನ್ ಎಂಬ ಭಾರತೀಯ ಮೂಲದ ಕೈದಿಯನ್ನು ಹತ್ಯೆ ಮಾಡಲಾಗಿದೆ. ಮಂಗಳವಾರ ಬೆಳಗ್ಗೆ ಕೈದಿಗಳಿಗೆ ಉಪಾಹಾರ ನೀಡುವ ಸಮಯದಲ್ಲಿ ಕೊಲೆಯಾಗಿರುವ ವಿಷಯ ಬಹಿರಂಗವಾಗಿದೆ. ಸಹ ಕೈದಿಗಳೇ ಭಗವಾನ್ ಹತ್ಯೆಮಾಡಿರುವ ಶಂಕೆ ಇದ್ದು, ಜೈಲು ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ. [ಸರಬ್ಜಿತ್ ಸಿಂಗ್ ಇನ್ನಿಲ್ಲ]

ಗುಜರಾತ್ ಮೂಲದ ಮೀನುಗಾರರಾದ ಕಿಶೋರ್ ಭಗವಾನ್ ಕಳೆದ ವರ್ಷದ ಫೆಬ್ರವರಿಯಲ್ಲಿ ಮೀನು ಹಿಡಿಯುವಾಗ ಪಾಕಿಸ್ತಾನದ ಗಡಿಯೊಳಗೆ ಅಕ್ರಮ ಪ್ರವೇಶ ಮಾಡಿದ್ದರು. ತಕ್ಷಣ ಪಾಕಿಸ್ತಾನದ ಅಧಿಕಾರಿಗಳು ಅವರನ್ನು ಬಂಧಿಸಿದ್ದರು. 2013ರ ಡಿಸೆಂಬರ್ ನಲ್ಲಿ ಭಗವಾನ್ ಜೈಲಿನಿಂದ ತಪ್ಪಿಸಿಕೊಂಡಿದ್ದರು.
ಕರಾಚಿಯ ಲಾಂಧಿ ಜೈಲಿನ ಅಧಿಕಾರಿಗಳು ಕಾರ್ಯಚರಣೆ ನಡೆಸಿ ತಪ್ಪಿಕೊಂಡಿದ್ದ ಕಿಶೋರ್ ಭಗವಾನ್ ಅವರನ್ನು ಪುನಃ ಜೈಲಿಗೆ ಹಾಕಿದ್ದರು. ಆದರೆ, ಸೋಮವಾರ ರಾತ್ರಿ ಸಹ ಕೈದಿಗಳು ಭಗವಾನ್ ಮೇಲೆ ಹಲ್ಲೆ ನಡೆಸಿ ಅವರನ್ನು ಕೊಂದು ಹಾಕಿದ್ದಾರೆ.












Click it and Unblock the Notifications