Pahalgam Attack: ಭಾರತ ದಾಳಿ ಮಾಡಲು ಸಜ್ಜಾಗಿದೆ ಎಂದ ಪಾಕಿಸ್ತಾನ ಸಚಿವ
ಕಳೆದ ವಾರ ಕಾಶ್ಮೀರದ ಪಹಲ್ಗಾಮ್‌ನಲ್ಲಿ ಪ್ರವಾಸಿಗರ ಮೇಲೆ ಗುಂಡು ಹಾರಿಸಿದ್ದ ಉಗ್ರರು 26 ಜನರನ್ನು ಭಾರತೀಯರನ್ನು ಹತ್ಯೆ ಮಾಡಿದ್ದಾರೆ. ಉಗ್ರರ ದಾಳಿಯಿಂದಾಗಿ ಸಿಟ್ಟಿಗೆದ್ದಿರುವ ಭಾರತ ಪಾಕಿಸ್ತಾನದ ವಿರುದ್ಧ ಕಠಿಣ ಕ್ರಮಕ್ಕೆ ಮುಂದಾಗಿದೆ. ಎರಡೂ ದೇಶಗಳ ನಡುವೆ ಯುದ್ಧದ ಕಾರ್ಮೋಡ ಕವಿದಿದೆ. ಇದೇ ಸಂದರ್ಭದಲ್ಲಿ ಪಾಕಿಸ್ತಾನದ ಸಚಿವ ಭಾರತ ದಾಳಿಗೆ ಸಜ್ಜಾಗಿದೆ ಎಂದು ಆರೋಪಿಸಿದ್ದಾರೆ.
ಭಾರತ ಪಾಕಿಸ್ತಾನದ ಮೇಲೆ ಮಿಲಿಟರಿ ದಾಳಿ ನಡೆಸಲು ಸಜ್ಜಾಗಿದೆ ಎಂದು ಪಾಕಿಸ್ತಾನದ ರಕ್ಷಣಾ ಸಚಿವ ಖವಾಜಾ ಮುಹಮ್ಮದ್ ಆಸಿಫ್ ಸೋಮವಾರ ಹೇಳಿದ್ದಾರೆ. ಎರಡೂ ದೇಶಗಳು ಪರಮಾಣು ಶಸ್ತ್ರಾಸ್ತ್ರಗಳನ್ನು ಹೊಂದಿದ್ದು ಯುದ್ಧದ ಸನ್ನಿವೇಶ ಆತಂಕ ಮೂಡಿಸಿದೆ.

ಏಪ್ರಿಲ್ 22ರಂದು ನಡೆದ ಭಯೋತ್ಪಾದಕ ದಾಳಿಗೆ ಪಾಕಿಸ್ತಾನ ಬೆಂಬಲ ಇದೆ ಎಂದು ಭಾರತ ಆರೋಪಿಸಿದೆ. ಆದರೆ ಪಾಕಿಸ್ತಾನ ಭಾರತದ ಆರೋಪವನ್ನು ನಿರಾಕರಿಸಿದೆ. ಆದರೂ ಭಾರತ ಪಾಕಿಸ್ತಾನದ ವಿರುದ್ಧ ಕಠಿಣ ಕ್ರಮಕ್ಕೆ ಮುಂದಾಗಿದೆ.
ಭಾರತ ದಾಳಿಗೆ ಸಜ್ಜಾಗಿದೆ!
ನಮ್ಮ ಪಡೆಗಳನ್ನು ಬಲಪಡಿಸುವ ಸಮಯ ಬಂದಿದೆ. ಇಂತಹ ಪರಿಸ್ಥಿತಿಯಲ್ಲಿ ಕೆಲವು ಕಾರ್ಯತಂತ್ರದ ನಿರ್ಧಾರಗಳನ್ನು ತೆಗೆದುಕೊಳ್ಳಬೇಕಾಗುತ್ತದೆ. ನಾವು ಕೆಲವು ನಿರ್ಧಾರಗಳನ್ನು ತೆಗೆದುಕೊಂಡಿದ್ದೇವೆ ಎಂದು ರಕ್ಷಣಾ ಸಚಿವ ಖವಾಜಾ ಮುಹಮ್ಮದ್ ಆಸಿಫ್ ಇಸ್ಲಾಮಾಬಾದ್‌ನಲ್ಲಿರುವ ತಮ್ಮ ಕಚೇರಿಯಲ್ಲಿ ರಾಯಿಟರ್ಸ್‌ಗೆ ನೀಡಿದ ಸಂದರ್ಶನದಲ್ಲಿ ತಿಳಿಸಿದ್ದಾರೆ.
ಪಾಕಿಸ್ತಾನದ ಸೇನೆಯು ಭಾರತ ದಾಳಿ ಮಾಡುವ ಸಾಧ್ಯತೆ ಬಗ್ಗೆ ಸರ್ಕಾರಕ್ಕೆ ಮಾಹಿತಿ ಕೊಟ್ಟಿದೆ. ಶೀಘ್ರದಲ್ಲೇ ಆಕ್ರಮಣ ಮಾಡುತ್ತಾರೆ ಎಂದು ಹೇಳಿದ್ದರೂ ಅದರ ಮಾಹಿತಿಗಳನ್ನು ಆಸಿಫ್ ಬಿಟ್ಟುಕೊಟ್ಟಿಲ್ಲ. ಪಾಕಿಸ್ತಾನ ಕಟ್ಟೆಚ್ಚರ ವಹಿಸಿದೆ, ನಮ್ಮ ಅಸ್ತಿತ್ವಕ್ಕೆ ಧಕ್ಕೆ ಬಂದರೆ ಮಾತ್ರ ಪರಮಾಣು ಶಸ್ತ್ರಾಸ್ತ್ರಗಳನ್ನು ಬಳಸುತ್ತದೆ ಎಂದು ಅವರು ಹೇಳಿದ್ದಾರೆ.
ದಾಳಿ ಮಾಡಿದ ಭಯೋತ್ಪಾದಕರಿಗಾಗಿ ತೀವ್ರ ಹುಡುಕಾಟ ನಡೆಸುತ್ತಿದೆ. ದಾಳಿ ಮಾಡಿದವರಲ್ಲಿ ಇಬ್ಬರು ಪಾಕಿಸ್ತಾನಿಗಳು ಎಂದು ಗುರುತಿಸಿದೆ. ಆದರೆ ಪಾಕಿಸ್ತಾನ ಅದನ್ನು ನಿರಾಕರಿಸಿದ್ದು ತಟಸ್ಥ ತನಿಖೆ ನಡೆಸುವಂತೆ ಒತ್ತಾಯಿಸಿದೆ.
ಉಗ್ರರ ದಾಳಿಯ ನಂತರ ಭಾರತ ಪಾಕಿಸ್ತಾನದ ಜೊತೆಗಿನ ಸಿಂಧೂ ಜಲ ಒಪ್ಪಂದವನ್ನು ಮುರಿದಿದ್ದು, ಪಾಕಿಸ್ತಾನಕ್ಕೆ ಒಂದು ಹನಿ ನೀರನ್ನೂ ಬಿಡುವುದಿಲ್ಲ ಎಂದು ಹೇಳಿದೆ. ಎರಡೂ ದೇಶಗಳ ನಡುವಿನ ಗಡಿಯನ್ನು ಮುಚ್ಚುವುದಾಗಿ ತಿಳಿಸಿದ್ದು, ಪಾಕಿಸ್ತಾನ ಪ್ರಜೆಗಳ ವೀಸಾ ರದ್ದುಗೊಳಿಸಿದೆ.
ಇದಕ್ಕೆ ಉತ್ತರವಾಗಿ ಪಾಕಿಸ್ತಾನ ಕೂಡ, ಭಾರತೀಯ ರಾಜತಾಂತ್ರಿಕರು ಮತ್ತು ಮಿಲಿಟರಿ ಸಲಹೆಗಾರರನ್ನು ಗಡಿಪಾರು ಮಾಡಲು ಆದೇಶಿಸಿದೆ, ಭಾರತೀಯ ಪ್ರಜೆಗಳಿಗೆ ವೀಸಾಗಳನ್ನು ರದ್ದುಗೊಳಿಸಿದೆ ಮತ್ತು ಭಾರತೀಯ ವಿಮಾನಗಳಿಗೆ ತನ್ನ ವಾಯುಪ್ರದೇಶವನ್ನು ನಿಷೇಧಿಸಿದೆ.












Click it and Unblock the Notifications