ಪಾಕಿಸ್ತಾನದ ಮಾರುಕಟ್ಟೆಯಲ್ಲಿ 1 ಕೆಜಿ ಈರುಳ್ಳಿಗೆ 300, ಟೊಮೆಟೊಗೆ 400 ರೂಪಾಯಿ!
ಇಸ್ಲಮಾಬಾದ್, ಆಗಸ್ಟ್ 29: ಪಾಕಿಸ್ತಾನದಲ್ಲಿ ಭಾರೀ ಮಳೆಯಿಂದ ಪ್ರವಾಹ ಪರಿಸ್ಥಿತಿ ಸೃಷ್ಟಿಯಾಗಿದೆ. ಪ್ರವಾಹದ ನೀರಿನಲ್ಲಿ ಭಾರೀ ಪ್ರಮಾಣದ ತರಕಾರಿ ಹಾಗೂ ಆಹಾರ ಧಾನ್ಯಗಳಿಗೆ ಹಾನಿಯಾಗಿದ್ದು, ಸಾರ್ವಜನಿಕರಿಗೆ ಬೆಲೆ ಏರಿಕೆಯ ಬಿಸಿ ಮುಟ್ಟಿಸುತ್ತಿದೆ.
ಪಾಕಿಸ್ತಾನದ ಲಾಹೋರ್‌ನಲ್ಲಿ ತರಕಾರಿಗಳ ಬೆಲೆಗಳು ಗಗನಕ್ಕೇರಿವೆ. ಒಂದೇ ಒಂದು ಕೆಜಿ ಟೊಮೆಟೊ ಬೆಲೆಯು 500 ರೂಪಾಯಿ ಆಗಿದೆ. ತರಕಾರಿ ಪೂರೈಕೆ ಸರಪಳಿಯು ಪ್ರವಾಹದಿಂದ ಅಸ್ತವ್ಯಸ್ತಗೊಂಡ ನಂತರ ಅಂಗಡಿ ವ್ಯಾಪಾರಿಗಳು ಅನಿಯಂತ್ರಿತವಾಗಿ ಬೆಲೆಗಳನ್ನು ಏರಿಸುತ್ತಿದ್ದಾರೆ ಎಂದು ವರದಿಯಾಗಿದೆ.
ಪಾಕಿಸ್ತಾನದ ನೆಲದಲ್ಲಿ ಪ್ರವಾಹ ಸೃಷ್ಟಿಸಿದ ಅಪಾಯ ಹೇಗಿದೆ?, ತರಕಾರಿಗಳ ದರದಲ್ಲಿ ಏರಿಕೆಗೆ ಪ್ರವಾಹ ಹೇಗೆ ಕಾರಣವಾಗಿದೆ? ಪಾಕಿಸ್ತಾನದಲ್ಲಿ ಈರಳ್ಳಿ ಮತ್ತು ಟೊಮೆಟೊ ಖರೀದಿಸುವುದಕ್ಕೆ ಜನರು ಬಾಯಿ ಬಾಯಿ ಬಿಡುತ್ತಿರುವುದು ಏಕೆ ಎಂಬುದನ್ನು ಈ ವರದಿಯಲ್ಲಿ ತಿಳಿದುಕೊಳ್ಳೋಣ.

400 ರೂಪಾಯಿಗೆ 1 ಕೆಜಿ ಟೊಮೆಟೊ
ಪಾಕಿಸ್ತಾನದ ಮಾರುಕಟ್ಟೆಯಲ್ಲಿ ಈರುಳ್ಳಿ ಮತ್ತು ಟೊಮೆಟೊ ಬೆಲೆಯು ಆಕಾಶದ ಎತ್ತರಕ್ಕೆ ಮುಟ್ಟಿದೆ. ಸಾಮಾನ್ಯ ಜನರು ಈ ತರಕಾರಿಗಳನ್ನು ಖರೀದಿಸುವುದಕ್ಕೂ ಸಾಧ್ಯವಾಗದ ಮಟ್ಟಕ್ಕೆ ಬೆಲೆ ಏರಿಕೆ ಮಾಡಲಾಗಿದೆ. ಒಂದು ಕೆಜಿ ಈರುಳ್ಳಿ ಖರೀದಿಸುವುದಕ್ಕೆ ಬರೋಬ್ಬರಿ 300 ರೂಪಾಯಿ ನೀಡಬೇಕಾಗಿದೆ. ಅದೇ ರೀತಿ ಒಂದೇ ಒಂದು ಕೆಜಿ ಟೊಮೆಟೊ ಖರೀದಿ ಮಾಡಲು 400 ರೂಪಾಯಿ ಕೊಡಬೇಕಾದ ಪರಿಸ್ಥಿತಿ ಆ ಪ್ರವಾಹಪೀಡಿತ ಪಾಕಿಸ್ತಾನದ ತರಕಾರಿ ಮಾರುಕಟ್ಟೆಗಳಲ್ಲಿ ಸೃಷ್ಟಿಯಾಗಿ ಬಿಟ್ಟಿದೆ.

ತರಕಾರಿ ಬೆಲೆಯಲ್ಲಿ ಕನಿಷ್ಠ ಐದರಿಂದ ಆರು ಪಟ್ಟು ಹೆಚ್ಚಳ
ಪಾಕಿಸ್ತಾನದ ಮಾರುಕಟ್ಟೆಯಲ್ಲಿ ತರಕಾರಿಗಳ ಪೂರೈಕೆ ಸರಪಳಿ ಕತ್ತರಿಸಿದಂತೆ ಆಗಿದೆ. ಇದರ ಲಾಭ ಗಳಿಕೆಗೆ ಮುಂದಾಗಿರುವ ವ್ಯಾಪಾರಿಗಳು ತರಕಾರಿ ಬೆಲಯಲ್ಲಿ ಕನಿಷ್ಠ ಐದರಿಂದ ಆರು ಪಟ್ಟು ಹೆಚ್ಚಳ ಮಾಡಿಕೊಂಡಿದ್ದಾರೆ. ಒಂದು ಕೆಜಿ ಟೊಮೆಟೊಗೆ ಸರ್ಕಾರವು 80 ರೂಪಾಯಿ ದರ ನಿಗದಿಗೊಳಿಸಿದ್ದರೆ, ಅದನ್ನು ಸದ್ಯದ ಮಾರುಕಟ್ಟೆಯಲ್ಲಿ 300 ರೂಪಾಯಿಗೆ ಅಂದರೆ ಐದು ಪಟ್ಟು ಹೆಚ್ಚಿಸಿ ಮಾರಾಟ ಮಾಡಲಾಗುತ್ತಿದೆ. ಅದೇ ರೀತಿ ಒಂದು ಕೆಜಿ ಈರುಳ್ಳಿಗೆ ಸರ್ಕಾರವು 61 ರೂಪಾಯಿ ದರ ನಿಗದಿಗೊಳಿಸಿದ್ದರೆ, ಅದರ ದರದಲ್ಲಿ ಆರು ಪಟ್ಟು ಹೆಚ್ಚಳ ಮಾಡುವುದರ ಮೂಲಕ ಮಾರಾಟ ಮಾಡಲಾಗುತ್ತಿದೆ. ಇದರ ಜೊತೆಗೆ ಶುಂಠಿ ಮತ್ತು ಬೆಳ್ಳುಳ್ಳಿ ದರದಲ್ಲಿ ಏರಿಕೆಯಾಗಿದೆ ಎಂದು ಗೊತ್ತಾಗಿದೆ.

ಸಾರ್ವಜನಿಕರು ಮತ್ತು ವ್ಯಾಪಾರಿಗಳು ಹೇಳುವುದೇನು?
ಈಗ ಬಡವರು ಟೊಮೆಟೊಗಳನ್ನು ನೋಡಬಹುದೇ ಮಾತ್ರ ಅವುಗಳನ್ನು ಖರೀದಿಸುವುದಿಲ್ಲ," ಎಂದು ಸಾರ್ವಜನಿಕರೊಬ್ಬರು ಹೇಳಿದ್ದಾರೆ. ಕೆಜಿಗೆ 100 ರೂ.ಗಿಂತ ಹೆಚ್ಚು ಮಾರಾಟವಾಗದ ಈರುಳ್ಳಿ ಈಗ 250 ಅಥವಾ 300 ರೂ.ಗೆ ಮಾರಾಟವಾಗುತ್ತಿದೆ ಎಂದು ಅವರು ಹೇಳಿದ್ದಾರೆ. ಸಗಟು ಮಾರುಕಟ್ಟೆಯಿಂದ ಹೆಚ್ಚಿನ ದರದಲ್ಲಿ ತರಕಾರಿಗಳನ್ನು ಖರೀದಿಸಿದ್ದೇವೆ ಎಂದು ಅಂಗಡಿ ಮಾಲೀಕರು ಹೇಳುತ್ತಿದ್ದಾರೆ.

ಆಹಾರದ ಅಭದ್ರತೆಗೆ ಪಾಕಿಸ್ತಾನದಲ್ಲಿನ ಪ್ರವಾಹ ಕಾರಣ
ಪಾಕಿಸ್ತಾನದಾದ್ಯಂತ ಸುರಿದ ಮಳೆಯಿಂದ ಹಠಾತ್ ಪ್ರವಾಹ ಪರಿಸ್ಥಿತಿ ಉಂಟಾಗಿದೆ. ಇದರಿಂದ ಬೆಳೆಗಳಿಗೆ ಹಾನಿ ಉಂಟಾಗಿದೆ. ಪ್ರಾಥಮಿಕ ಅಂದಾಜಿನ ಪ್ರಕಾರ ದೇಶವು ಈಗಾಗಲೇ 5.5 ಶತಕೋಟಿ ಡಾಲರ್ ಮೌಲ್ಯದ ಹಾನಿಯನ್ನು ಅನುಭವಿಸಿದೆ. ಸಿಂಧ್ ಮತ್ತು ಪಂಜಾಬ್ ಪ್ರಾಂತ್ಯಗಳಲ್ಲಿ ಕಬ್ಬು ಮತ್ತು ಹತ್ತಿ ಬೆಳೆಗಳು ಸಂಪೂರ್ಣವಾಗಿ ನಾಶವಾಗಿದ್ದು, ಈರುಳ್ಳಿ, ಟೊಮೆಟೊ ಮತ್ತು ಖಾರಿಫ್ ಮೆಣಸಿನಕಾಯಿ ಭಾಗಶಃ ಹಾನಿಗೊಳಗಾಗಿವೆ. ಹತ್ತಿ ಬೆಳೆಗಳ ನಷ್ಟ 2.6 ಬಿಲಿಯನ್ ಡಾಲರ್ ಎಂದು ಅಂದಾಜಿಸಲಾಗಿದೆ. ಪಾಕಿಸ್ತಾನದ ಜವಳಿ ಮತ್ತು ಸಕ್ಕರೆ ರಫ್ತು 1 ಶತಕೋಟಿ ಡಾಲರ್ ಗಳಷ್ಟು ಕುಸಿಯಬಹುದು ಎಂದು ತಜ್ಞರು ಹೇಳುತ್ತಿದ್ದಾರೆ. ಸಿಂಧ್‌ನಲ್ಲಿರುವ ಸರ್ಕಾರದ ಗೋದಾಮುಗಳಲ್ಲಿ ಕನಿಷ್ಠ 2 ಮಿಲಿಯನ್ ಟನ್ ಗೋಧಿ ಮಳೆ ಮತ್ತು ಪ್ರವಾಹದಿಂದಾಗಿ ಹಾಳಾಗಿದೆ. ಇದು ದೇಶದ ಆಹಾರ ಭದ್ರತೆಗೆ ಬೆದರಿಕೆ ಒಡ್ಡಿದೆ ಎಂದು ವರದಿಯಾಗಿದೆ.












Click it and Unblock the Notifications