Greenland: ಗ್ರೀನ್‌ಲ್ಯಾಂಡ್ ಬೆನ್ನಿಗೆ ನಿಂತ ಯುರೋಪ್, ಅಮೆರಿಕ ಅಧ್ಯಕ್ಷರ ನಡೆಗೆ ವಿರೋಧ
ವೆನಿಜುಯೆಲಾ ಮೇಲೆ ದಾಳಿ ಮಾಡಿದ ನಂತರ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಕಣ್ಣು ಇನ್ನಷ್ಟು ದೇಶಗಳ ಮೇಲೆ ಬೀಳುತ್ತಿದೆ. ಅಮೆರಿಕದ ಶತ್ರು ದೇಶಗಳನ್ನು ಒಂದೊಂದಾಗಿ ವಶಕ್ಕೆ ಪಡೆಯಲು ಡೊನಾಲ್ಡ್ ಟ್ರಂಪ್ ಈ ಮೂಲಕ ಪ್ಲಾನ್ ಮಾಡಿದ್ದಾರಾ? ಎಂಬ ಪ್ರಶ್ನೆ ಕೂಡ ಉದ್ಭವಿಸುವಂತೆ ಮಾಡಿದೆ. ಇಷ್ಟೆಲ್ಲಾ ಚರ್ಚೆಗಳ ನಡುವೆಯೇ ದಿಢೀರ್ ಗ್ರೀನ್‌ಲ್ಯಾಂಡ್ ಭೂಮಿ ಅಮೆರಿಕಗೆ ಬೇಕೆ ಬೇಕು ಅನ್ನೋ ಹಠಕ್ಕೆ ಬಿದ್ದಿದ್ದಾರೆ ಟ್ರಂಪ್. ಇದೇ ಕಾರಣಕ್ಕೆ ಈಗ ಕಠಿಣ ಕ್ರಮ ಕೈಗೊಳ್ಳುವ ಸಾಧ್ಯತೆ ದಟ್ಟವಾಗಿದೆ. ಈ ವಿಚಾರವಾಗಿ ಅಮೆರಿಕ & ಯುರೋಪ್ ದೇಶಗಳ ನಡುವೆ ತಿಕ್ಕಾಟ ಶುರುವಾಗಿದೆ.
ಗ್ರೀನ್‌ಲ್ಯಾಂಡ್ ಮೇಲೆ ಡೆನ್ಮಾರ್ಕ್ ಹಿಡಿತ ಹೊಂದಿದ್ದರೂ, ಪಾಶ್ಚಿಮಾತ್ಯ ದೇಶಗಳಿಗೆ ಅಲ್ಲಿ ಅಧಿಕಾರ ಇದೆ. ಹೀಗಿದ್ದಾಗಲೇ ನೇರವಾಗಿ ಅಷ್ಟೂ ಜಾಗ ನಮಗೆ ಬೇಕು ಎಂದು ಅಮೆರಿಕದ ಅಧ್ಯಕ್ಷರು ಹಠ ಹಿಡಿದಿರುವ ರೀತಿ ನೋಡಿದರೆ ಪರಿಸ್ಥಿತಿ ಇನ್ನಷ್ಟು ಕೈಮೀರುವ ಸಾಧ್ಯತೆಗಳು ದಟ್ಟವಾಗಿವೆ. ಇದೇ ಕಾರಣಕ್ಕೆ ಯುರೋಪ್ ದೇಶಗಳು ಗ್ರೀನ್‌ಲ್ಯಾಂಡ್ ವಿಚಾರದಲ್ಲಿ ಒಗ್ಗಟ್ಟು ಪ್ರದರ್ಶನ ಮಾಡುತ್ತಿವೆ. ಅದರಲ್ಲೂ ಡೆನ್ಮಾರ್ಕ್ ಈಗಾಗಲೇ ಅಮೆರಿಕದ ನಡೆ ವಿರುದ್ಧ ತನ್ನ ಪ್ರತಿಭಟನೆ ದಾಖಲಿಸಿದೆ. ಇದರ ಜೊತೆಗೆ ಯುರೋಪ್ ಒಕ್ಕೂಟದ ದೇಶಗಳು ಕೂಡ ಬುದ್ಧಿ ಹೇಳುವ ಕೆಲಸಕ್ಕೆ ಮುಂದಾಗಿವೆ.

ನ್ಯಾಟೋ ಒಕ್ಕೂಟದಲ್ಲೇ ಶುರುವಾಯ್ತು ಕಿರಿಕ್
ಜಗತ್ತಿನಲ್ಲಿ ಅತಿದೊಡ್ಡ ಮಿಲಿಟರಿ ಒಕ್ಕೂಟ ಎಂಬ ಕೀರ್ತಿ ಪಡೆದಿರುವ ನ್ಯಾಟೋ ಒಕ್ಕೂಟದಲ್ಲೇ ಈಗ ಫೈಟಿಂಗ್ ಶುರುವಾಗಿದೆ. ಗ್ರೀನ್‌ಲ್ಯಾಂಡ್ ನಮಗೆ ಬೇಕು ಎಂದು ಅಮೆರಿಕ ಹಠ ಹಿಡಿದ ಬೆನ್ನಲ್ಲೇ ಇದು ಸರಿಯಾದ ಮಾರ್ಗ ಅಲ್ಲ, ಈ ರೀತಿಯ ವರ್ತನೆಗಳು ನಮ್ಮಲ್ಲೇ ಬಿರುಕನ್ನು ಮೂಡಿಸಲಿದೆ ಎಂಬ ವಿಚಾರ ಮನದಟ್ಟು ಮಾಡಲು ಮುಂದಾಗಿವೆ ಯುರೋಪ್ ದೇಶಗಳು. ಅದರಲ್ಲೂ ಟ್ರಂಪ್ ಅವರನ್ನು ಸಹಿಸಿಕೊಳ್ಳದ ಯುರೋಪ್ ಒಕ್ಕೂಟದ ಸದಸ್ಯರು ಈ ಬಗ್ಗೆ ದೊಡ್ಡದಾಗಿ ಧ್ವನಿ ಎತ್ತಿದ್ದಾರೆ.
ಅಮೆರಿಕ ಭವಿಷ್ಯಕ್ಕೆ ಗ್ರೀನ್‌ಲ್ಯಾಂಡ್ ಅನಿವಾರ್ಯ
ಜಗತ್ತಿನ ದೊಡ್ಡಣ್ಣ ಎಂಬ ಬಿರುದು ಪಡೆದಿರುವ ಅಮೆರಿಕ ಇಡೀ ಪ್ರಪಂಚದಲ್ಲೇ ಅತಿಹೆಚ್ಚು ಭೂಮಿ ಹೊಂದಿರುವ ದೇಶಗಳ ಪೈಕಿ ಒಂದಾಗಿದೆ. ಆದರೂ ತಮಗೆ ಸಮೀಪದಲ್ಲೇ ಇರುವ ಭೂಮಿ ಮೇಲೆ ಹಾಗೂ ದೇಶಗಳ ಮೇಲೆ ಕಣ್ಣು ಹಾಕುವ ಕೆಲಸ ಮಾತ್ರ ಬಿಡುತ್ತಿಲ್ಲ. ಇದೇ ರೀತಿ ಡೊನಾಲ್ಡ್ ಟ್ರಂಪ್ ಅವರು ಕೆನಡಾ ಮೇಲೆ ಕೂಡ ಕಣ್ಣು ಹಾಕಿದ್ದರು. ಅಲ್ಲದೆ ಕೆನಡಾ ದೇಶವನ್ನು ಅಮೆರಿಕದ ರಾಜ್ಯವಾಗಿ ಮಾಡಿಕೊಳ್ಳುತ್ತೇವೆ ಎಂಬ ವಿವಾದಾತ್ಮಕ ಹೇಳಿಕೆಯನ್ನು ಕೂಡ ನೀಡಿದ್ದರು. ಇದೀಗ ಗ್ರೀನ್‌ಲ್ಯಾಂಡ್ ವಿಚಾರದಲ್ಲಿ ಕಿರಿಕ್ ಬಲು ಜೋರಾಗುತ್ತಿದೆ.












Click it and Unblock the Notifications