ಇನ್ನು ಮುಂದೆ ಪ್ರಾನ್ಸ್‌ನಲ್ಲಿ ಉಚಿತ ಕಾಂಡೋಮ್ ಲಭ್ಯ: ವಯಸ್ಕರಿಗೆ ಭರವಸೆ ನೀಡಿದ ಪ್ರೆಂಚ್ ಅಧ್ಯಕ್ಷ
ಪ್ಯಾರಿಸ್, ಡಿಸೆಂಬರ್ 9: ಪ್ರಾನ್ಸ್ ಸರ್ಕಾರವು ವಯಸ್ಕರಿಗೆ ಉಚಿತ ಕಾಂಡೋಮ್ ನೀಡುವ ಭರವಸೆ ನೀಡಿದೆ.
ಅನಗತ್ಯ ಗರ್ಭಧಾರಣೆ ಮತ್ತು ಲೈಂಗಿಕ ರೋಗಗಳ (ಎಸ್‌ಟಿಡಿ) ಹರಡುವಿಕೆಯನ್ನು ನಿಯಂತ್ರಿಸಬೇಕಿದೆ. ಈ ಗುರಿಯನ್ನು ತಲುಪುವ ಉದ್ದೇಶದಿಂದ ಹೊಸ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ ಎಂದು ಪ್ರೆಂಚ್ ಸರ್ಕಾರ ತಿಳಿಸಿ, ಪ್ರಾನ್ಸ್ ದೇಶದಲ್ಲಿ 18 ರಿಂದ 25 ವರ್ಷ ವಯಸ್ಸಿನ ಯುವಕರಿಗೆ ಕಾಂಡೋಮ್‌ಗಳು ಶೀಘ್ರದಲ್ಲೇ ಉಚಿತವಾಗಿ ಲಭ್ಯವಾಗಲಿದೆ ಎಂದು ಫ್ರೆಂಚ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರನ್ ಹೇಳಿದ್ದಾರೆ.
ಜನವರಿ ಒಂದರಿಂದ ಔಷಧ ಅಂಗಡಿಗಳಲ್ಲಿ 18 ರಿಂದ 25 ವರ್ಷ ವಯಸ್ಸಿನವರಿಗೆ ಕಾಂಡೋಮ್‌ಗಳನ್ನು ಉಚಿತವಾಗಿ ಕೊಡಲಾಗುವುದು ಎಂದು ಎಮ್ಯಾನುಯೆಲ್ ಮ್ಯಾಕ್ರನ್ ತಿಳಿಸಿದ್ದಾರೆ.
ಪಶ್ಚಿಮ ಫ್ರಾನ್ಸ್‌ನಲ್ಲಿರುವ ಪೊಯಿಟಿಯರ್ಸ್‌ನ ಉಪನಗರವಾದ ಫಾಂಟೈನ್-ಲೆ-ಕಾಮ್ಟೆಯಲ್ಲಿ ಯುವಕರೊಂದಿಗೆ ನಡೆಸಿದ ಸಂವಾದದಲ್ಲಿ ಎಮ್ಯಾನುಯೆಲ್ ಮ್ಯಾಕ್ರನ್ ಈ ವಿಚಾರವನ್ನು ಬಹಿರಂಗಪಡಿಸಿದ್ದಾರೆ.

ಒಂದು ಸಣ್ಣ ಕ್ರಾಂತಿ ಎಂದ ಪ್ರೆಂಚ್ ಅಧ್ಯಕ್ಷ
25 ವರ್ಷಕ್ಕಿಂತ ಕಡಿಮೆ ವಯಸ್ಸಿನ ಎಲ್ಲಾ ಮಹಿಳೆಯರಿಗೆ ಉಚಿತ ಗರ್ಭ ನಿರೋಧಕ ಮಾತ್ರೆಗಳನ್ನು ಪ್ರೆಂಚ್ ಸರ್ಕಾರ ನೀಡುತ್ತಿದೆ. ಅದೇ ಮಾದರಿಯಲ್ಲಿ ಅನವಶ್ಯಕ ಗರ್ಭ ಧರಿಸುವಿಕೆಯನ್ನು ತಡೆಗಟ್ಟಲು ಉಚಿತ ಕಾಂಡೋಮ್‌ಗಳನ್ನು ನೀಡಲಾಗುವುದು ಎಂದು ಪ್ರೆಂಚ್ ಅಧ್ಯಕ್ಷ ಹೇಳಿದ್ದಾರೆ.
ಮುಂದಿನ ದಿನಗಳಲ್ಲಿ 18 ವರ್ಷಗಳಿಗಿಂತ ಕಡಿಮೆ ವಯಸ್ಸಿನವರಿಗೂ ಕಾಂಡೋಮ್‌ಗಳನ್ನು ವಿತರಿಸಲಾಗುವುದು ಎಂದು ಮ್ಯಾಕ್ರನ್ ತಿಳಿಸಿದ್ದಾರೆ.
ಯುವತಿಯರು ಗರ್ಭ ನಿರೋಧಕ ಮಾತ್ರೆಗಳನ್ನು ತೆಗೆದುಕೊಳ್ಳುವುದಿಕ್ಕಿಂತ, ಯುವಕರು ಕಾಂಡೋಮ್ ಬಳಸುವುದು ಉತ್ತಮ ಎಂದು ಅವರು ಪ್ರತಿಪಾದಿಸಿದ್ದಾರೆ.
ಲೈಂಗಿಕ ಶಿಕ್ಷಣದ ಕುರಿತು ಮಾತನಾಡಿದ ಮ್ಯಾಕ್ರನ್, 'ಸಿದ್ಧಾಂತ, ಆದರ್ಶಗಳಿಗಿಂತ ವಾಸ್ತವ ಬಹಳ ಭಿನ್ನವಾಗಿದೆ. ನಮ್ಮ ಶಿಕ್ಷಕರು ಲೈಂಗಿಕ ಶಿಕ್ಷಣ ನೀಡುವುದನ್ನು ಉತ್ತಮವಾಗಿ ನಿಭಾಯಿಸಬೇಕಿದೆ' ಎಂದು ಅವರು ಹೇಳಿದ್ದಾರೆ.
2020 ಮತ್ತು 2021 ರಲ್ಲಿ, ಫ್ರಾನ್ಸ್‌ನಲ್ಲಿ ಲೈಂಗಿಕ ರೋಗ ಹರಡುವಿಕೆಯು ಶೇ 30 ರಷ್ಟು ಹೆಚ್ಚಾಗಿದೆ ಎಂದು ಆರೋಗ್ಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.












Click it and Unblock the Notifications