ಕೆಲಸದಿಂದ ತೆಗೆದು ಹಾಕಿ ಮತ್ತೆ ಕೆಲಸಕ್ಕೆ ಸೇರಿಸಿಕೊಂಡರು: ಜನ ಇದಕ್ಕೆ ಕೊಟ್ಟ ಹೆಸರು ‘ಡ್ರಾಮಾ’!
'ಕೃತಕ ಬುದ್ಧಿಮತ್ತೆ' ಅಂದ್ರೆ ಇಂಗ್ಲಿಷ್‌ನಲ್ಲಿ 'ಆರ್ಟಿಫಿಷಿಯಲ್ ಇಂಟಲಿಜೆನ್ಸ್' ಎನ್ನಲಾಗುವ ತಂತ್ರಜ್ಞಾನದ ಬಗ್ಗೆ ಪ್ರತಿಕ್ಷಣವೂ ಚರ್ಚೆ ನಡೆಯುತ್ತಲೇ ಇರುತ್ತದೆ. ಆದರೆ ಇತ್ತೀಚೆಗೆ ಇದೇ ಕೃತಕ ಬುದ್ಧಿಮತ್ತೆ ತಂತ್ರಜ್ಞಾನ ರೂಪಿಸುತ್ತಿರುವ ಸಂಸ್ಥೆಯಿಂದ ಸಿಇಒ ಒಬ್ಬರನ್ನು ದಿಢೀರ್ ವಜಾ ಮಾಡಲಾಗಿತ್ತು. ಈ ಬಗ್ಗೆ ಆಕ್ರೋಶ ಮೊಳಗಿರುವ ಸಮಯಕ್ಕೆ, ಸಂಸ್ಥೆ ಮತ್ತೊಮ್ಮೆ ವಾಪಸ್ ಅವರನ್ನ ನೇಮಕ ಮಾಡಿಕೊಂಡಿದೆ. ಇದಕ್ಕೆ ಜನರು ಏನಂತಿದ್ದಾರೆ ಗೊತ್ತಾ?
ಆಶ್ಚರ್ಯಕರ ಘಟನೆಯಲ್ಲಿ ಕೆಲ ದಿನಗಳ ಹಿಂದಷ್ಟೇ, ಆಡಳಿತ ಮಂಡಳಿಯ ವಿರೋಧದಿಂದ ಸಿಇಒ ಸ್ಥಾನದಿಂದ ವಜಾಗೊಂಡಿದ್ದ ಸ್ಯಾಮ್ ಆಲ್ಟ್‌ಮನ್ ಕೆಲಸಕ್ಕೆ ಮರಳಿದ್ದಾರೆ. ಚಾಟ್ ಜಿಪಿಟಿ ಎಂಬ ಚಾಟ್‌ಬಾಟ್ ಸಂಸ್ಥಾಪಕ ಆಲ್ಟ್‌ಮನ್ ಅವರನ್ನ ವಜಾ ಮಾಡಲಾಗಿತ್ತು. ಇದೇ ಹಿನ್ನೆಲೆ ಆಲ್ಟ್‌ಮನ್ ಕೂಡ ಬೇರೆ ಸಂಸ್ಥೆ ಸೇರಲು ಮುಂದಾಗಿದ್ದಾರೆ ಎನ್ನುವ ನಾಟಕೀಯ ಬೆಳವಣಿಗೆ ನಡೆದಿತ್ತು. ಆದರೆ ಅವರು ದಿಢೀರ್ ತಮ್ಮ ಸಿಇಒ ಹುದ್ದೆಗೆ ಮರಳಿದ್ದಾರಂತೆ. ಹೀಗೆ ಸ್ಯಾಮ್ ಆಲ್ಟ್‌ಮನ್ ಅವರನ್ನು ಮತ್ತೆ ಕರೆತರಲು ಕಾರಣವಾಗಿದ್ದು ಏನು ಗೊತ್ತಾ?

ಆಡಳಿತ ಮಂಡಳಿಯೇ ಉಡೀಸ್!
ಸ್ಯಾಮ್ ಆಲ್ಟ್‌ಮನ್ ಅವ್ರನ್ನ ಹಠಾತ್ ವಜಾಗೊಳಿಸಿದ್ದ ಹಿನ್ನೆಲೆ ಸಂಸ್ಥೆಯ ಉದ್ಯೋಗಿಗಳಲ್ಲಿ ಅಸಮಾಧಾನ ಸ್ಫೋಟಗೊಂಡಿತ್ತು. ಹೀಗಾಗಿ ಕಂಪನಿಯ ಬಹುತೇಕ ಉದ್ಯೋಗಿಗಳು ಇದನ್ನ ವಿರೋಧಿಸಿ ಪ್ರತಿಭಟನೆ ನಡೆಸುವ ಎಚ್ಚರಿಕೆ ನೀಡಿದ್ದರು. ಹೀಗಾಗಿ ಎಚ್ಚೆತ್ತುಕೊಂಡ ಸಂಸ್ಥೆ, ಸ್ಯಾಮ್ ಆಲ್ಟ್‌ಮನ್ ಮರುನೇಮಕಕ್ಕೆ ಮಾಡಿದೆ ಎನ್ನಲಾಗಿದೆ. ಓಪನ್ ಎಐ ಕಂಪನಿ ಸಿಇಒ ಆಗಿ ಸ್ಯಾಮ್ ಆಲ್ಟ್‌ಮನ್ ಮರಳಿದ್ದಾರೆ ಎಂದು ಸಂಸ್ಥೆ ತಿಳಿಸಿದೆ. ಹಾಗೇ ಈ ನಡುವೆ ಹೊಸ ಆಡಳಿತ ಮಂಡಳಿ ರಚನೆ ಮಾಡಲಾಗಿದೆ. ಬ್ರೆಟ್ ಟೇಲರ್, ಅಮೆರಿಕದ ಹಣಕಾಸು ಇಲಾಖೆ ಮಾಜಿ ಕಾರ್ಯದರ್ಶಿ ಲ್ಯಾರಿ ಸಮ್ಮರ್ಸ್ & ಆ್ಯಡಂ ಹೊಸ ಮಂಡಳಿ ಸೇರಿದ್ದಾರೆ.
ಸ್ಯಾಮ್ ಆಲ್ಟ್‌ಮನ್ ಫುಲ್ ಖುಷ್!
ಇನ್ನು ತಮ್ಮನ್ನ ಮತ್ತೆ ಸಂಸ್ಥೆಗೆ ನೇಮಕ ಮಾಡಿರುವ ಬಗ್ಗೆ ಪ್ರತಿಕ್ರಿಯೆ ನೀಡಿರುವ ಸ್ಯಾಮ್ ಆಲ್ಟ್‌ಮನ್, 'ನಾನು ಓಪನ್‌ಎಐ ಅನ್ನು ಪ್ರೀತಿಸುತ್ತೇನೆ ಮತ್ತು ಕಳೆದ ಕೆಲ ದಿನದಿಂದ ನಾನು ಮಾಡಿದ ಪ್ರಯತ್ನಗಳು ಈ ತಂಡ ಮತ್ತು ನಮ್ಮ ಗುರಿಯನ್ನು ಒಟ್ಟಿಗೆ ಇರಿಸುವ ಪ್ರಯತ್ನವೇ ಆಗಿತ್ತು. ನಾನು ಭಾನುವಾರ ಸಂಜೆ ಮೈಕ್ರೊಸಾಫ್ಟ್ ಸೇರುವ ಬಗ್ಗೆ ನಿರ್ಧಾರ ಕೈಗೊಂಡಾಗ ಅದು ವೈಯಕ್ತಿಕವಾಗಿ ನನಗೆ & ನನ್ನ ತಂಡಕ್ಕೆ ಕೂಡ ಉತ್ತಮ ಹಾದಿಯಾಗಿತ್ತು. ಇದೀಗ ಹೊಸ ಮಂಡಳಿ & ಸತ್ಯ ಅವರ ಬೆಂಬಲದಿಂದಾಗಿ ನಾನು ಓಪನ್‌ಎಐಗೆ ಮರಳುತ್ತಿದ್ದೇನೆ. ಮೈಕ್ರೊಸಾಫ್ಟ್ ಜೊತೆಗೆ ಬಲವಾದ ಪಾಲುದಾರಿಕೆ ನಿರ್ಮಿಸಲು ಎದುರು ನೋಡುತ್ತಿದ್ದೇನೆ.' ಎಂದು ಟ್ವೀಟ್ ಮಾಡಿದ್ದಾರೆ.

ಈ ಹಿಂದೆ ಸ್ಯಾಮ್ ಆಲ್ಟ್‌ಮನ್ ಅವರು ಸಂಸ್ಥೆಯ ಆಡಳಿತ ಮಂಡಳಿಗೆ ಸರಿಯಾದ ಮಾಹಿತಿ ನೀಡುತ್ತಿರಲಿಲ್ಲ ಎಂಬ ಆರೋಪ ಕೇಳಿಬಂದಿತ್ತು. ಆರೋಪದ ಬೆನ್ನಲ್ಲೇ ಸ್ಯಾಮ್ ಆಲ್ಟ್‌ಮನ್ ಅವರನ್ನ ವಜಾ ಕೂಡ ಮಾಡಲಾಗಿತ್ತು. ಹೀಗಿದ್ದಾಗ ಮೈಕ್ರೊಸಾಫ್ಟ್ ಆಲ್ಟ್‌ಮನ್ ಅವರನ್ನು ಸಂಸ್ಥೆಗೆ ಸೇರಿಸಿಕೊಳ್ಳಲು ಮುಂದಾಗಿತ್ತು. ಮತ್ತೊಂದು ಕಡೆ 'ಓಪನ್‌ಎಐ' ಉದ್ಯೋಗಿಗಳು ಕೋಪಗೊಂಡು ಆಲ್ಟ್‌ಮನ್ ವಜಾ ಬಗ್ಗೆ ಆಕ್ರೋಶ ಹೊರಹಾಕಿದ್ದರು. ಹೀಗಾಗಿ ಆಡಳಿತ ಮಂಡಳಿಯನ್ನೇ ವಜಾ ಮಾಡಿದೆ 'ಓಪನ್‌ಎಐ' ಸಂಸ್ಥೆ. ಮತ್ತೊಂದು ಕಡೆ ಈ ಕುರಿತಾಗಿ ಸೋಷಿಯಲ್ ಮೀಡಿಯಾದಲ್ಲಿ ಜನ ಆರೋಪಗಳನ್ನು ಮಾಡುತ್ತಿದ್ದು, ಇದೆಲ್ಲಾ ದೊಡ್ಡ ಡ್ರಾಮಾ ಅಂತಾ ಆರೋಪಿಸುತ್ತಿದ್ದಾರೆ.












Click it and Unblock the Notifications