ಅಮೆರಿಕದಲ್ಲಿ ಸಿಖ್ ಹಿರಿಯ ನಾಗರಿಕನ ಮೇಲೆ ಹಲ್ಲೆ
ಶಿಕಾಗೋ, ಸೆ. 10: ಹಿರಿಯ ಸಿಖ್ ನಾಗರಿಕರೊಬ್ಬರನ್ನು ಥಳಿಸಿ ನೀನು ಭಯೋತ್ಪಾದಕ, ಬಿನ್ ಲಾಡೆನ್ ಎಂದು ದ್ವೇಷಪೂರಿತ ಹಲ್ಲೆ ನಡೆಸಿದ ಘಟನೆ ನಡೆದಿದೆ. ಸೆಪ್ಟೆಂಬರ್ 11ರ ಕರಾಳ ನೆನಪಿನ ದಿನಕ್ಕೂ ಮುನ್ನ ಈ ಘಟನೆ ನಡೆದಿರುವುದು ಆತಂಕಕ್ಕೀಡುಮಾಡಿದೆ.
ಇತ್ತ ಭಾರತದಲ್ಲೂ 60 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರು ಸಾಮಾಜಿಕವಾಗಿ ಮತ್ತು ಆರ್ಥಿಕ ಸ್ವಾತಂತ್ರ್ಯೊಂದಿಗೆ ನೆಮ್ಮದಿಯ ಬದುಕು ನಡೆಸಲು ಭಾರತದಲ್ಲಿ ಸೂಕ್ತ ವಾತಾವರಣವಿಲ್ಲ ಎಂದು ಸಮೀಕ್ಷಾ ವರದಿಯೊಂದು ತಿಳಿಸಿದೆ.
ಶಿಕಾಗೋದಲ್ಲಿ ಇಂದ್ರಜಿತ್ ಸಿಂಗ್ ಮಕ್ಕರ್ ಅವರ ಕಾರಿನ ಬಳಿ ತೆರಳಿದ ಕಿಡಿಗೇಡಿ, 'ಭಯೋತ್ಪಾದಕ, ನಿನ್ನ ದೇಶಕ್ಕೆ ಹಿಂದಿರುಗು, ಬಿನ್ ಲಾಡೆನ್!' ಎಂದು ಕರೆದು, ಜನಾಂಗೀಯ ನಿಂದನೆ ಮಾಡಿ ಹಲ್ಲೆ ನಡೆಸಿದ ಘಟನೆ ಮಂಗಳವಾರ ಸಂಭವಿಸಿದೆ. ಮಕ್ಕರ್ ಅವರು ಯುಎಸ್ ನಾಗರಿಕರಾಗಿದ್ದು, ಇಬ್ಬರು ಮಕ್ಕಳ ತಂದೆಯಾಗಿದ್ದಾರೆ. ಸಮೀಪದ ದಿನಸಿ ಅಂಗಡಿಗೆ ಕಾರಿನಲ್ಲಿ ತೆರಳುತ್ತಿದ್ದಾಗ ಈ ಘಟನೆ ನಡೆದಿದೆ.

ಕಿಡಿಗೇಡಿಗಳು ಮಕ್ಕರ್ ಅವರ ವಾಹನಕ್ಕೆ ಅಡ್ಡವಾಗಿ ತಮ್ಮ ವಾಹನವನ್ನು ನಿಲ್ಲಿಸಿದ್ದಲ್ಲದೆ ಬಳಿ ಬಂದು ಮುಖಕ್ಕೆ ತೀವ್ರವಾಗಿ ಗುದ್ದಿದ್ದಾರೆ. ತೀವ್ರ ರಕ್ತಸ್ರಾವದಿಂದ ಮಕ್ಕರ್ ಪ್ರಜ್ಞೆ ಕಳೆದುಕೊಂಡಿದ್ದಾರೆ. ಮಕ್ಕರ್ ಅವರನ್ನು ಸಮೀಪದ ಆಸ್ಪತ್ರೆಗೆ ಸೇರಿಸಿ, ಚಿಕಿತ್ಸೆ ಕೊಡಿಸಲಾಗಿದೆ. ಮುಖಕ್ಕೆ ಆರು ಹೊಲಿಗೆ ಹಾಕಲಾಗಿದೆ. ಈಗ ಶಂಕಿತನ್ನು ಬಂಧಿಸಲಾಗಿದ್ದು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಯಾವ ಅಮೇರಿಕನ್ನನೂ ತನ್ನ ಧರ್ಮವನ್ನು ಪಾಲಿಸುವುದರಿಂದ ಹಿಂಜರಿಯಬಾರದು, ಅಮೆರಿಕದ ಅಧಿಕಾರಿಗಳಿಗೆ ನನ್ನ ಧನ್ಯವಾದಗಳು ಎಂದು ಮಕ್ಕರ್ ಪ್ರತಿಕ್ರಿಯಿಸಿದ್ದಾರೆ.
ಈ ಘಟನೆ ಸಿಖ್ ಸಂಘಟನೆಗಳು ತೀವ್ರವಾಗಿ ಖಂಡಿಸಿವೆ. ಈ ಹಿಂದೆ 2012ರಲ್ಲಿ ಸಿಖ್ ಕುಟುಂಬವೊಂದರ ಮೇಲೆ ನಡೆದ ಗುಂಡಿನ ದಾಳಿ ನಡೆದಿದ್ದು ಬಿಟ್ಟರೆ, ಸಿಖ್ ಸಮುದಾಯದ ನಾಗರಿಕರಿಗೆ ನೆಮ್ಮದಿಯ ಬದುಕನ್ನು ಅಮೆರಿಕ ಕಟ್ಟುಕೊಟ್ಟಿದೆ. ಆದರೆ, ಕಳೆದ ಆಗಸ್ಟ್ ತಿಂಗಳಿನಲ್ಲಿ ಸಂದೀಪ್ ಸಿಂಗ್ ಎಂಬುವರ ಮೇಲೆ ಹಲ್ಲೆ ನಡೆದಿತ್ತು. (ಪಿಟಿಐ)












Click it and Unblock the Notifications