ಎಂದೂ ಇಲ್ಲದಷ್ಟು ಆಪ್ತ ಸ್ನೇಹಿತರಾಗಿದ್ದೇವೆ: ಮೋದಿ ಟ್ರಂಪ್ ಮಾತುಕತೆ
ಒಸಾಕಾ, ಜೂನ್ 28: "ಭಾರತ ಮತ್ತು ಅಮೆರಿಕ ದೇಶಗಳು ಹಿಂದೆಂದೂ ಇಲ್ಲದಷ್ಟು ಆತ್ಮೀಯವಾಗಿವೆ. ಇದನ್ನು ಮುಂದುವರಿಸಿಕೊಂಡು ಹೋಗಬೇಕಾದರೆ ಪರಸ್ಪರ ಸಹಕಾರ ಅಗತ್ಯ" ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದರು.
ಜಪಾನಿನ ಒಸಾಕಾದಲ್ಲಿ ನಡೆಯುತ್ತಿರುವ ಜಿ 20 ಶೃಂಗಸಭೆಯಲ್ಲಿ ಭಾಗವಹಿಸಿರುವ ಪ್ರಧಾನಿ ನರೇಂದ್ರ ಮೋದಿ ಮತ್ತು ಡೊನಾಲ್ಡ್ ಟ್ರಂಪ್ ಇಂದು ಭೇಟಿ ಮಾಡಿ ಕೆಲವು ಮಹತ್ವದ ವಿಷಯ ಚರ್ಚಿಸಿದರು.
ಈ ಸಂದರ್ಭದಲ್ಲಿ ಲೋಕಸಭೆ ಚುನಾವಣೆಯಲ್ಲಿ ಪ್ರಧಾನಿ ಮೋದಿ ಅವರ ಗೆಲುವಿಗೆ ಟ್ರಂಪ್ ಅಭಿನಂದನೆ ಸಲ್ಲಿಸಿದರು.
"ನೀವು ಈ ಗೆಲುವಿಗೆ ಅರ್ಹರು. ನನಗೆ ಗೊತ್ತು, ನೀವು ಮೊದಲು ಅಧಿಕಾರಕ್ಕೆ ಬಂದಾಗ ಎಷ್ಟೊಂದು ಇನ್ನಾಭಿಪ್ರಾಯಗಳಿದ್ದವು. ಆದರೆ ಅವನ್ನೆಲ್ಲ ಸರಿದೂಗಿಸಿಕೊಂಡು ಆಡಳಿತ ನಡೆಸಿದ್ದೀರಿ. ಇದು ನಮ್ಮ ಸಾಮರ್ಥ್ಯ.. ನಿಮ್ಮ ಸಾಮರ್ಥ್ಯಕ್ಕೆ ಮತ್ತು ನಿಮಗೆ ನನ್ನ ಅಭಿನಂದನೆ" ಎಂದು ತುಂಬು ಮನಸ್ಸಿನಿಂದ ಟ್ರಂಪ್ ಮೋದಿಯನ್ನು ಶ್ಲಾಘಿಸಿದರು.
"ನಾನು ಭಾರತದೊಂದಿಗೆ ನಾಲ್ಕು ಮಹತ್ವದ ವಿಷಯಗಳನ್ನು ಚರ್ಚಿಸಲು ಬಯಸುತ್ತೇನೆ. ಇರಾನ್, 5ಜಿ, ನಮ್ಮ ದ್ವಿಪಕ್ಷೀಯ ಸಂಬಂಧ ಮತ್ತು ರಕ್ಷಣಾ ಸಂಬಂಧಗಳ ಬಗ್ಗೆ ಇಬ್ಬರೂ ಚರ್ಚೆ ನಡೆಸುತ್ತಿದ್ದೇವೆ" ಎಂದು ಟ್ರಂಪ್ ಹೇಳಿದರು.

ನಾವು ಆತ್ಮೀಯರಾಗಿದ್ದೇವೆ
"ನಮ್ಮ ಎರಡೂ ದೇಶಗಳು ಎಂದೂ ಇಲ್ಲದಷ್ಟು ಆತ್ಮೀಯವಾಗಿವೆ. ಎಂದಿಗೂ ಭಾರತ ಮತ್ತು ಅಮೆರಿಕ ಇಷ್ಟು ಆತ್ಮೀಯವಾಗಿರಲಿಲ್ಲ. ನಾವು ಮಿಲಿಟರಿ ಸೇರಿದಂತೆ ಹಲವು ಸಂಗತಿಗಳಲ್ಲಿ ಒಂದಾಗಿ ಕೆಲಸ ಮಾಡಬಹುದು ಎಂದು ನಾನು ಭರವಸೆ ನೀಡಬಲ್ಲೆ. ಜೊತೆಗೆ ನಾವು ಉಭಯ ದೇಶಗಳ ನಡುವಿನ ವ್ಯಾಪಾರ ವ್ಯವಹಾರದ ಬಗ್ಗೆಯೂ ಮಾತನಾಡುತ್ತೇವೆ "- ಡೊನಾಲ್ಡ್ ಟ್ರಪ್, ಅಮೆರಿಕ ಅಧ್ಯಕ್ಷ

ಆಮದು ಸುಂಕ ತಗ್ಗಿಸುವ ಬಗ್ಗೆ ಮಾತುಕತೆ
ಹಾರ್ಲೆ ಡೆವಿಡ್ಸನ್ ಮೋಟಾರ್‌ಸೈಕಲ್‌ಗಳ ಮೇಲಿನ ಆಮದು ಸುಂಕವನ್ನು ಭಾರತ ಇತ್ತೀಚೆಗೆ ಶೇ.100ರಿಂದ ಶೇ.50ಕ್ಕೆ ಇಳಿಸಿತ್ತು. ಆದರೆ ಅದೂ ತೀರಾ ಅತಿಯಾಗಿದೆ ಎಂದು ಟ್ರಂಪ್ ದೂರಿದ್ದರು. ಈ ಕುರಿತು ಗುರುವಾರ ಮಾತನಾಡಿದ್ದ ಟ್ರಂಪ್, ಇದು ಸ್ವೀಕಾರಾರ್ಹವಲ್ಲ. ಈ ಬಗ್ಗೆ ನಾನು ಭಾರತದ ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ಮಾತನಾಡುತ್ತೇನೆ' ಎಂದಿದ್ದರು. ಈ ಬಗ್ಗೆಯೂ ಮೋದಿ ಅವರೊಂದಿಗೆ ಟ್ರಂಪ್ ಮಾತನಾಡಲಿದ್ದಾರೆ.

ಮೋದಿಗೆ ಟ್ರಂಪ್ ಅಭಿನಂದನೆ
"ಇದೊಂದು ಮಹಾನ್ ವಿಜಯ. ಈ ದಿಗ್ವಿಜಯಕ್ಕೆ ನೀವು ಅರ್ಹರು. ನಿಮ್ಮ ಸಾಮರ್ಥ್ಯ ಮತ್ತು ನಿಮಗೆ ನನ್ನ ಅಭಿನಂದನೆ. ನೀವು ಎಲ್ಲರನ್ನೂ ಒಗ್ಗೂಡಿಸುವಲ್ಲಿ ಅತ್ಯುತ್ತಮ ಕೆಲಸ ಮಾಡಿದ್ದೀರಿ. ನಿಮ್ಮ ಗೆಲುವಿಗೆ ಅದೇ ಮುಖ್ಯ ಕಾರಣ" ಎಂದು ಲೋಕಸಭೆ ಚುನಾವಣೆಯಲ್ಲಿ ಗೆಲುವು ಸಾಧಿಸಿದ ಪ್ರಧಾನಿ ನರೇಂದ್ರ ಮೊದಿ ಅವರಿಗೆ ಟ್ರಂಪ್ ಅಭಿನಂದನೆ ಸಲ್ಲಿಸಿದರು.

ರಷ್ಯಾ ಬಗ್ಗೆ ಚರ್ಚೆ ಇಲ್ಲ
ಇಬ್ಬರು ನಾಯಕರು ಭಾರತ ರಷಹ್ಯಾದಿಂದ 5 ಬಿಲಿಯನ್ ಡಾಲರ್ ಮೌಲ್ಯದ ಮಿಲಿಟರಿ ಒಪ್ಪಂದ ಮಾಡಿಕೊಂಡಿರುವುದನ್ನು ಈಗಾಗಲೇ ಅಮೆರಿಕ ವಿರೊಧಿಸಿದೆ. ಈ ಬಗ್ಗೆಯೂ ಟ್ರಂಪ್ ಚರ್ಚಿಸಬಹುದು ಎನ್ನಲಾಗಿತ್ತು. ಆದರೆ ಉಭಯ ನಾಯಕರೂ ಈ ಬಗ್ಗೆ ಸೊಲ್ಲೆತ್ತಲಿಲ್ಲ.












Click it and Unblock the Notifications