Pakistan: ಅಕ್ರಮ ವಲಸಿಗರ ವಿರುದ್ಧ ಯುದ್ಧ ಸಾರಿದ ಪಾಕಿಸ್ತಾನ!
ಇಸ್ಲಾಮಾಬಾದ್: ಈಗಾಗಲೇ ಸಾಲದ ಶೂಲ ಹಾಗೂ ಉಗ್ರರ ಕಾಟಕ್ಕೆ ನಲುಗಿ ಹೋಗಿರುವ ಪಾಕಿಸ್ತಾನಕ್ಕೆ ಅಕ್ರಮ ವಲಸಿಗರು ಕೂಡ ದೊಡ್ಡ ತಲೆನೋವಾಗಿದ್ದಾರೆ. ಹೀಗಾಗಿ ವಲಸಿಗರ ವಿರುದ್ಧ ಕಠಿಣ ಕ್ರಮಕ್ಕೆ ಪಾಕಿಸ್ತಾನ ಮುಂದಾಗಿದೆ. ಅದರಲ್ಲೂ ಪಾಕ್ ನೆಲದಲ್ಲಿ ಬಾಂಬ್ ಸ್ಫೋಟ ಪ್ರಕರಣಗಳು ಹೆಚ್ಚಾಗುತ್ತಿರುವ ಕಾರಣದ ಹಿಂದೆ, ಅಕ್ರಮ ವಲಸಿಗರು ಇದ್ದಾರೆಂಬ ಆರೋಪ ಕೂಡ ಪಾಕಿಸ್ತಾನ ಸರ್ಕಾರವನ್ನು ರೊಚ್ಚಿಗೆಬ್ಬಿಸಿತ್ತು.
ಅಂದಹಾಗೆ ಉಗ್ರರನ್ನು ನಿಭಾಯಿಸುವುದೇ ಕಷ್ಟವಾಗಿದ್ದು, ಕಂಡ ಕಂಡಲ್ಲಿ ಬಾಂಬ್ ಸೌಂಡ್ ಮೊಳಗುತ್ತಿದೆ. ಸಾವಿರಾರು ಪಾಕ್ ಪ್ರಜೆಗಳು ಉಗ್ರರ ಅಟ್ಟಹಾಸಕ್ಕೆ ಬಲಿಯಾಗಿದ್ದಾರೆ. ಇದೇ ಸಂದರ್ಭದಲ್ಲಿ ಪಾಕ್ ಸರ್ಕಾರ ಅಕ್ರಮ ವಲಸಿಗರ ವಿರುದ್ಧ ತೊಡೆತಟ್ಟಿ ನಿಂತಿದೆ. ಮತ್ತೊಂದು ಕಡೆ ಕಳೆದ ಒಂದು ವಾರದಿಂದ, ಅಪಾರ ಸಂಖ್ಯೆಯಲ್ಲಿ ಅಫ್ಘಾನಿಸ್ತಾನದಿಂದ ಅಕ್ರಮವಾಗಿ ವಲಸಿಗರು ಪಾಕಿಸ್ತಾನದ ಒಳಗೆ ನುಗ್ಗುತ್ತಿದ್ದಾರೆ. ಹೀಗಾಗಿ ಅಕ್ರಮ ವಲಸಿಗರ ವಿರುದ್ಧ ಈಗ ಕಠಿಣ ಕ್ರಮಕ್ಕೆ ಪಾಕ್ ಸರ್ಕಾರ ಮುಂದಾಗಿದೆ. ಹಾಗಾದರೆ ಪಾಕಿಸ್ತಾನದಲ್ಲಿ ಇರುವ ಅಕ್ರಮ ವಲಸಿಗರ ಸಂಖ್ಯೆ ಎಷ್ಟು?

ಒಂದೇ ದೇಶದಿಂದ 17 ಲಕ್ಷ ನಿರಾಶ್ರಿತರು!
ಇನ್ನು ಅಫ್ಘಾನಿಸ್ತಾನದಿಂದಲೇ ಬರೋಬ್ಬರಿ 17 ಲಕ್ಷ ನಿರಾಶ್ರಿತರು ಪಾಕಿಸ್ತಾನಕ್ಕೆ ನುಗ್ಗಿದ್ದಾರೆ. ಇವರೂ ಸೇರಿದಂತೆ ಅಕ್ರಮವಾಗಿ ಪಾಕ್‌ಗೆ ಬಂದಿರುವ ವಲಸಿಗರನ್ನು ಹೊರ ಹಾಕುವುದಕ್ಕೆ ಪಾಕ್ ಸರ್ಕಾರ ಮುಂದಾಗಿದೆ. ಅಲ್ಲದೆ ಪಾಕಿಸ್ತಾನದಲ್ಲಿ ಇರುವ ಎಲ್ಲಾ ಅಕ್ರಮ ವಲಸಿಗರಿಗೆ ಅಕ್ಟೋಬರ್ 31ರ ಡೆಡ್‌ಲೈನ್ ಫಿಕ್ಸ್ ಮಾಡಿದೆ. ಮತ್ತೊಂದು ಕಡೆ ಪಾಕಿಸ್ತಾನದಲ್ಲಿ ಅಕ್ರಮ ವಲಸಿಗರ ಪತ್ತೆಗೆ ತನಿಖಾ ಸಂಸ್ಥೆಗಳು ನಿರಂತರ ಶೋಧ ನಡೆಸುತ್ತಿರುವ ಸಮಯದಲ್ಲೇ, ಪಾಕ್ ಸರ್ಕಾರ ಈ ನಿರ್ಧಾರ ಕೈಗೊಂಡಿರುವುದು ಕುತೂಹಲ ಕೆರಳಿಸಿದೆ.
ಅಕ್ರಮ ವಲಸಿಗರಿಗೆ ವಾರ್ನಿಂಗ್!
ಪಾಕಿಸ್ತಾನ ವಿದೇಶಾಂಗ ಸಚಿವ ಜಲೀಲ್ ಅಬ್ಬಾಸ್ ಜಿಲಾನಿ, ಅಕ್ರಮ ವಲಸಿಗರಿಗೆ ವಾರ್ನಿಂಗ್ ಕೊಟ್ಟಿದ್ದಾರೆ. ಯುರೋಪ್ ಆಗಲಿ, ಏಷ್ಯಾ ಆಗಲಿ ಯಾವುದೇ ದೇಶವಾದರೂ ಹೀಗೆ ಅಕ್ರಮ ವಲಸಿಗರಿಗೆ ಆಶ್ರಯ ನೀಡಲ್ಲ. ಅಂತರರಾಷ್ಟ್ರೀಯ ನೀಯಮದ ಅನ್ವಯ ನಾವು ಈ ನಿರ್ಧಾರ ಕೈಗೊಂಡಿದ್ದೇವೆ ಎಂದಿದ್ದಾರೆ ಎಂದು ವರದಿಯಾಗಿದೆ. ಈ ಮೂಲಕ ಅಫ್ಘಾನಿಸ್ತಾನ ಮತ್ತು ಪಾಕಿಸ್ತಾನ ಸಂಬಂಧ ಇನ್ನಷ್ಟು ಹಳಸಿ ಹದಗೆಟ್ಟು ಹೋಗಿದೆ.
ಅಕ್ರಮ ವಲಸಿಗರಲ್ಲಿ ಹೆಚ್ಚಿದ ಭಯ
ಇನ್ನು ಪಾಕಿಸ್ತಾನ ಪಂಜಾಬ್ ಪ್ರಾಂತ್ಯದ ಸಿಎಂ ಮೊಹಸಿನ್ ನಕ್ವಿ ಈ ಬಗ್ಗೆ ಮಾತನಾಡಿದ್ದು ಪಂಜಾಬ್‌ನಿಂದ ಅಕ್ರಮ ವಲಸಿಗರು ತಾವಾಗಿಯೇ ಜಾಗ ಖಾಲಿ ಮಾಡಬೇಕು ಎಂದಿದ್ದಾರೆ. ಅಧಿಕಾರಿಗಳು ವಿದೇಶಿಗರ ಕುರಿತು ಮಾಹಿತಿ ಕಲೆಹಾಕುತ್ತಿದ್ದಾರೆ ಎಂದು ಎಚ್ಚರಿಸಿದ್ದಾರೆ. ಈ ಮೂಲಕ ತಾವಾಗಿ ಜಾಗ ಖಾಲಿ ಮಾಡದಿದ್ರೆ, ನಾವೇ ಹೊರಗೆ ಹಾಕುತ್ತೇವೆ ಎಂಬ ಸಂದೇಶ ನೀಡಿದ್ದಾರೆ ಮೊಹಸಿನ್ ನಕ್ವಿ. ಇದು ಅಕ್ರಮ ವಲಸಿಗರಲ್ಲಿ ಭಯ ಹೆಚ್ಚು ಮಾಡಿದೆ.

ಒಟ್ನಲ್ಲಿ ಪಾಕಿಸ್ತಾನದ ಈ ಕ್ರಮದ ಬಗ್ಗೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರಿ ಆಕ್ರೋಶವು ವ್ಯಕ್ತವಾಗುತ್ತಿದೆ. ಹಾಗೇ ಅಕ್ಟೋಬರ್ 31ರ ಒಳಗೆ ದೇಶ ತೊರೆಯಿರಿ, ಇಲ್ಲದಿದ್ದರೆ ನವೆಂಬರ್ 1ರಿಂದ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳುತ್ತೇವೆ ಎಂದು ಪಾಕಿಸ್ತಾನ ಹೇಳಿರುವುದು ತಿಕ್ಕಾಟವನ್ನ ಮತ್ತಷ್ಟು ಹೆಚ್ಚಿಸಿದೆ. ಹೀಗೆ ಪಾಕಿಸ್ತಾನ ಸರ್ಕಾರ ಮುಂದೆ ತನ್ನ ಆದೇಶ ಮರುಪರಿಶೀಲನೆ ಮಾಡುತ್ತಾ? ಜಾಗತಿಕ ಒತ್ತಡಕ್ಕೆ ಮಣಿಯುತ್ತಾ? ಅಂತಾ ಕಾದು ನೋಡಬೇಕಿದೆ.
ಎಲ್ಲಿಗೆ ಹೋಗುತ್ತಾರೆ ಅಕ್ರಮ ವಲಸಿಗರು?
ಇನ್ನೇನು ಮುಂದಿನ ವರ್ಷ ಜನವರಿ ವೇಳೆಗೆ ಚುನಾವಣೆ ಎದುರಿಸಲಿರುವ ಪಾಕಿಸ್ತಾನದಲ್ಲಿ ವಲಸಿಗರ ವಿರುದ್ಧದ ಕ್ರಮವೂ ಮಹತ್ವ ಪಡೆದಿದೆ. ಹಾಗೇ ಇದು ಕೂಡ ಚುನಾವಣೆಯಲ್ಲಿ ಹೊಸ ಅಸ್ತ್ರವಾಗಿ ಬಳಕೆಯಾಗುವ ನಿರೀಕ್ಷೆ ಇದೆ. ಆದರೆ ತಾಲಿಬಾನ್ ಉಗ್ರರ ಉಪಟಳದ ಕಾರಣಕ್ಕೆ ದೇಶ ಬಿಟ್ಟು ಬಂದಿದ್ದ ಅಕ್ರಮ ವಲಸಿಗರಿಗೆ ಈಗ ಭಯ ಶುರುವಾಗಿದೆ. ಅವರು ವಾಪಸ್ ತಮ್ಮ ದೇಶಕ್ಕೆ ಹೋಗಲು ಆಗದೆ, ಇತ್ತ ಪಾಕಿಸ್ತಾನದಲ್ಲೂ ನೆಲೆ ಸಿಗದೆ ಅತಂತ್ರ ಪರಿಸ್ಥಿತಿಯಲ್ಲಿ ನರಳುವಂತಾಗಿದೆ.












Click it and Unblock the Notifications