ಭಾರತ ದಿಢೀರ್ ಪ್ಯಾಲೆಸ್ತೀನ್ ಪರ ಮತ ಚಲಾಯಿಸಿದ್ದು ಏಕೆ?
ಭಾರತ ಮತ್ತು ಇಸ್ರೇಲ್ ಸಂಬಂಧ ಗಟ್ಟಿಯಾಗಿದ್ದು ಈ ಕಾರಣಕ್ಕೆ ಪ್ಯಾಲೆಸ್ತೀನ್ & ಇಸ್ರೇಲ್ ಯುದ್ಧದಲ್ಲಿ ಭಾರತವು ಇಸ್ರೇಲ್ ಪರ ಇದೆ. ಅದರಲ್ಲೂ, ಹಮಾಸ್ ಉಗ್ರರು ದಿಢೀರ್ ಇಸ್ರೇಲ್ ಮೇಲೆ ದಾಳಿ ಮಾಡಿದ ಸಮಯದಲ್ಲಿ ಪರಿಸ್ಥಿತಿ ಅವಲೋಕನ ಮಾಡಿತ್ತು ಭಾರತ. ಇಸ್ರೇಲ್ ಜೊತೆ ಮಾತನಾಡಿ ಭಾರತದ ಅಧಿಕಾರಿಗಳು ಮಾಹಿತಿ ಪಡೆದಿದ್ದರು. ಹೀಗಿದ್ದಾಗಲೇ ಇದೀಗ ದಿಢೀರ್ ಭಾರತವು ಪ್ಯಾಲೆಸ್ತೀನ್ ಪರ ವಿಶ್ವಸಂಸ್ಥೆಯಲ್ಲಿ ಮತ ಹಾಕಿದೆ, ಯಾಕೆ ಗೊತ್ತಾ?
ಅಕ್ಟೋಬರ್ 7ರ ಶನಿವಾರ, ಹಮಾಸ್ ಉಗ್ರರು ಇಸ್ರೇಲ್ ದೇಶದ ವಿರುದ್ಧ ಬರೋಬ್ಬರಿ 5,000 ರಾಕೆಟ್ ಉಡಾಯಿಸಿದ್ರು. ಹಾಗೇ ಸಾವಿರಾರು ಉಗ್ರರು ಕೈಯಲ್ಲಿ ಶಸ್ತ್ರಾಸ್ತ್ರ & ಬಾಂಬ್ ಹಿಡಿದು ಇಸ್ರೇಲ್ ಒಳಗೆ ನುಗ್ಗಿದ್ದರು. ರೊಚ್ಚಿಗೆದ್ದಿದ್ದ ಇಸ್ರೇಲ್ ಕೂಡ ಹಮಾಸ್ ಉಗ್ರರ ವಿರುದ್ಧ ಯುದ್ಧ ಘೋಷಿಸಿತ್ತು. ಹೀಗೆ ಇಬ್ಬರ ಮಧ್ಯೆ ಜಂಗಿ ಕುಸ್ತಿ ಶುರುವಾಗಿ ಇಂದಿಗೆ ಬರೋಬ್ಬರಿ 68 ದಿನ ಕಳೆದಿದೆ. ಹೀಗಿದ್ದಾಗಲೇ ಭಾರತ ಇದ್ದಕ್ಕಿದ್ದಂತೆ ಇಸ್ರೇಲ್ ವಿರುದ್ಧ ಅಥವಾ ಪ್ಯಾಲೆಸ್ತೀನ್‌ನ ಪರ ಮತ ಚಲಾಯಿಸಿದೆ. ಭಾರತ ದಿಢೀರ್ ಇಂತಹ ನಡೆ ಇಟ್ಟಿದ್ದು ಯಾಕೆ?

ಶಾಂತಿಯ ತವರು ಭಾರತ ದೇಶ!
ಹೌದು, ಭಾರತ ಮತ್ತೊಮ್ಮೆ ತನ್ನ ಶಾಂತಿಯ ಘೋಷಣೆ ಎತ್ತಿ ಹಿಡಿದಿದೆ. ಇದೇ ಕಾರಣಕ್ಕೆ ಈಗ ಸಂಕಷ್ಟಕ್ಕೆ ಸಿಲುಕಿರುವ ಗಾಜಾಪಟ್ಟಿ ಜನರ ಪರ ನಿಂತಿದೆ. ಇಸ್ರೇಲ್ ಮತ್ತು ಹಮಾಸ್ ಸಂಘರ್ಷಕ್ಕೆ, ಮಾನವೀಯ ನೆಲೆಯಲ್ಲಿ ಈ ತಕ್ಷಣವೇ ಕದನ ವಿರಾಮ ಘೋಷಣೆ ಮಾಡಬೇಕು. ಒತ್ತೆಯಾಳು ಬೇಷರತ್ ಬಿಡುಗಡೆ ಮಾಡಲು ವಿಶ್ವಸಂಸ್ಥೆಗೆ ಬೆಂಬಲಿಸಿದೆ. ಈ ಹಿನ್ನೆಲೆಯಲ್ಲಿ, ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಮಂಡನೆಯಾದ ಕರಡು ನಿರ್ಣಯದ ಪರ ಭಾರತ ಮತ ಹಾಕಿದೆ. ಭಾರತ ಈ ಮೂಲಕ ಪ್ಯಾಲೆಸ್ತೀನ್‌ನ ಅಮಾಯಕ ಜನರ ಪರವಾಗಿ ನಿಂತಿದೆ.
ಒಟ್ಟು ಎಷ್ಟು ದೇಶಗಳು ಇವೆ?
ಅಷ್ಟಕ್ಕೂ ಒಟ್ಟು 193 ಸದಸ್ಯ ದೇಶಗಳನ್ನ ಒಳಗೊಂಡ ವಿಶ್ವಸಂಸ್ಥೆ ಸಾಮಾನ್ಯ ಸಭೆಯಲ್ಲಿ ನಡೆದ ತುರ್ತು ವಿಶೇಷ ಅಧಿವೇಶನದಲ್ಲಿ ಈಜಿಪ್ಟ್ ಕರಡು ನಿರ್ಣಯ ಮಂಡಿಸಿತು. ಇನ್ನು ಇದೇ ನಿರ್ಣಯದ ಪರವಾಗಿ 153 ರಾಷ್ಟ್ರಗಳು ಮತ ಹಾಕಿದರೆ, ನಿರ್ಣಯ ವಿರುದ್ಧ 10 ರಾಷ್ಟ್ರಗಳು ಮತ ಚಲಾಯಿಸಿವೆ. ಇದರ ಜೊತೆಯಲ್ಲೇ 23 ದೇಶಗಳು ಮತದಾನದಿಂದ ದೂರ ಉಳಿದವು. ಹಾಗಾದರೆ ಈ ನಿರ್ಣಯ ಬೆಂಬಲಿಸಿದ ದೇಶಗಳು ಯಾವುವು?

ನಿರ್ಣಯ ಬೆಂಬಲಿಸಿದ್ದ ದೇಶಗಳು ಇವು
ಅಂದಹಾಗೆ ಅಲ್ಜೀರಿಯಾ ಸೇರಿ ಬಹರೇನ್, ಇರಾಕ್, ಕುವೈತ್, ಒಮನ್, ಕತಾರ್, ಸೌದಿ ಅರೇಬಿಯಾ, ಯುನೈಟೆಡ್ ಅರಬ್ ಎಮಿರೇಟ್ಸ್ & ಪ್ಯಾಲೆಸ್ತೀನ್ ಬೆಂಬಲದ ಹಿನ್ನೆಲೆ ಮಂಡನೆ ಆಗಿದ್ದ ನಿರ್ಣಯ 'ನಾಗರಿಕರ ರಕ್ಷಣೆ' ಗುರಿಯನ್ನ ಪ್ರತಿಪಾದಿಸಿತ್ತು. ಗಾಜಾಪಟ್ಟಿ ನಗರದಲ್ಲಿ ತಕ್ಷಣ ಕದನ ವಿರಾಮ ಒತ್ತಾಯಿಸಲಾಗಿತ್ತು. ಎರಡು ಬಣಗಳು ಅಂತಾರಾಷ್ಟ್ರೀಯ ಕಾನೂನು ಪಾಲಿಸಬೇಕು ಎಂಬ ಬೇಡಿಕೆ ಕೂಡ ಈ ನಿರ್ಣಯದಲ್ಲಿ ಇತ್ತು.












Click it and Unblock the Notifications