ಉಕ್ರೇನ್‌ನ 11 ವಾಯುನೆಲೆ ಸೇರಿ 70ಕ್ಕೂ ಅಧಿಕ ಮಿಲಿಟರಿ ನೆಲೆ ನಾಶ: ರಷ್ಯಾ
ಕೀವ್, ಫೆಬ್ರವರಿ 24: ಉಕ್ರೇನ್‌ನಲ್ಲಿನ 11 ವಾಯುನೆಲೆಗಳು ಸೇರಿದಂತೆ 70 ಕ್ಕೂ ಹೆಚ್ಚು ಮಿಲಿಟರಿನೆಲೆಗಳನ್ನು ತನ್ನ ಮಿಲಿಟರಿ ನಾಶಪಡಿಸಿದೆ ಎಂದು ರಷ್ಯಾ ಗುರುವಾರ ಹೇಳಿದೆ. ರಷ್ಯಾ ಹಾಗೂ ಉಕ್ರೇನ್ ನಡುವೆ ಯುದ್ಧ ನಡೆಯುತ್ತಿದ್ದು ಉಭಯ ರಾಷ್ಟ್ರಗಳು ತಾನು ಮಾಡಿದ ದಾಳಿಗಳ ಬಗ್ಗೆ ಮಾಹಿತಿ ನೀಡುತ್ತಿದೆ.
"ರಷ್ಯಾದ ಸಶಸ್ತ್ರ ಪಡೆಗಳು ನಡೆಸಿದ ದಾಳಿಗಳ ಪರಿಣಾಮವಾಗಿ, 74 ಉಕ್ರೇನಿಯನ್ ಮಿಲಿಟರಿ ನೆಲದ ಸೌಲಭ್ಯಗಳು ನಾಶವಾದವು," ಎಂದು ರಕ್ಷಣಾ ಸಚಿವಾಲಯದ ವಕ್ತಾರ ಇಗೊರ್ ಕೊನಾಶೆಂಕೋವ್ ಹೇಳಿದ್ದಾರೆ. ಧ್ವಂಸಗೊಂಡ ನೆಲೆಗಳಲ್ಲಿ 11 ಏರ್‌ಫೀಲ್ಡ್‌ಗಳು, ಮೂರು ಕಮಾಂಡ್ ಪೋಸ್ಟ್‌ಗಳು ಮತ್ತು S-300 ಮತ್ತು Buk-M1 ಆಂಟಿ-ಏರ್‌ಕ್ರಾಫ್ಟ್ ಕ್ಷಿಪಣಿ ವ್ಯವಸ್ಥೆಗಳ 18 ರಾಡಾರ್ ಕೇಂದ್ರಗಳು ಸೇರಿವೆ ಎಂದು ಹೇಳಿದರು.
ಉಕ್ರೇನಿಯನ್ ಮಿಲಿಟರಿ ಹೆಲಿಕಾಪ್ಟರ್ ಮತ್ತು ನಾಲ್ಕು ಡ್ರೋನ್‌ಗಳನ್ನು ಹೊಡೆದುರುಳಿಸಲಾಗಿದೆ ಎಂದು ರಕ್ಷಣಾ ಸಚಿವಾಲಯದ ವಕ್ತಾರ ಇಗೊರ್ ಕೊನಾಶೆಂಕೋವ್ ತಿಳಿಸಿದರು. ರಷ್ಯಾದ ಸಶಸ್ತ್ರ ಪಡೆಗಳ ವಾಯು ಬೆಂಬಲದೊಂದಿಗೆ ಪ್ರತ್ಯೇಕತಾವಾದಿ ಪಡೆಗಳು ಆಕ್ರಮಣವನ್ನು ಮುಂದುವರೆಸಿದೆ ಎಂದು ಕೂಡಾ ಕೊನಾಶೆಂಕೋವ್ ಮಾಹಿತಿ ನೀಡಿದ್ದಾರೆ.

ಉಕ್ರೇನ್ ಸೈನಿಕರಿಗೆ ಗೌರವ ನೀಡಲು ಆದೇಶ
ಪ್ರಸ್ತುತ "ರಾಷ್ಟ್ರೀಯವಾದಿಗಳ ಸಶಸ್ತ್ರ ಗುಂಪುಗಳು" ಪ್ರತಿರೋಧವನ್ನು ಒಡ್ಡುತ್ತಿವೆ. ಉಕ್ರೇನಿಯನ್ ಪಡೆಗಳು ಯುದ್ಧದ ಪ್ರದೇಶವನ್ನು ತೊರೆಯಲು ಬಯಸುತ್ತಿದೆ ಎಂದು ಕೂಡಾ ಹೇಳಿಕೊಂಡಿದ್ದಾರೆ. ರಕ್ಷಣಾ ಸಚಿವ ಸೆರ್ಗೆಯ್ ಶೋಯಿಗು ಅವರು ರಷ್ಯಾದ ಪಡೆಗಳಿಗೆ "ಉಕ್ರೇನಿಯನ್ ಸೈನಿಕರನ್ನು ಗೌರವದಿಂದ ನಡೆಸಿಕೊಳ್ಳುವಂತೆ" ಆದೇಶಿಸಿದ್ದಾರೆ ಎಂದು ಕೂಡಾ ತಿಳಿಸಿದ್ದಾರೆ.
ಸ್ಥಳೀಯ ಕಾಲಮಾನ ಬೆಳಿಗ್ಗೆ 5:40 ಕ್ಕೆ ರಾಷ್ಟ್ರೀಯ ಭಾಷಣವನ್ನು ಪ್ರಸಾರ ಮಾಡಿದ ನಂತರ ಪುಟಿನ್ ಗುರುವಾರ ಮುಂಜಾನೆ ಉಕ್ರೇನ್ ಮೇಲೆ ಆಕ್ರಮಣವನ್ನು ಆರಂಭ ಮಾಡಿದ್ದಾರೆ. ಸ್ವಲ್ಪ ಸಮಯದ ನಂತರ, ಎಎಫ್‌ಪಿ ವರದಿಗಾರರ ಪ್ರಕಾರ, ಉಕ್ರೇನ್‌ನ ರಾಜಧಾನಿ ಕೀವ್ ಮತ್ತು ಇತರ ಹಲವಾರು ನಗರಗಳಲ್ಲಿ ಮೊದಲ ಬಾಂಬ್ ಸ್ಫೋಟಗಳು ಕೇಳಿಬಂದವು.
ವಿವಿಧ ಉಕ್ರೇನಿಯನ್ ಅಧಿಕೃತ ಮೂಲಗಳಿಂದ ಎಎಫ್‌ಪಿ ಲೆಕ್ಕಾಚಾರದ ಪ್ರಕಾರ, ಸೈನಿಕರು ಮತ್ತು ನಾಗರಿಕರು ಸೇರಿದಂತೆ ಕನಿಷ್ಠ 68 ಜನರು ಸಾವನ್ನಪ್ಪಿದ್ದಾರೆ. ಉಕ್ರೇನ್‌ನ ಕಪ್ಪು ಸಮುದ್ರದ ಬಂದರು ನಗರವಾದ ಒಡೆಸ್ಸಾ ಬಳಿಯ ಸೇನಾ ನೆಲೆಯಲ್ಲಿ 18 ಜನರು ಸಾವನ್ನಪ್ಪಿದ್ದಾರೆ. ರಷ್ಯಾದ ಪಡೆಗಳು ರಾಜಧಾನಿ ಕೀವ್ ಸುತ್ತಲಿನ ಪ್ರದೇಶವನ್ನು ತಲುಪಿವೆ ಎಂದು ಉಕ್ರೇನ್ ಗಡಿ ಸಿಬ್ಬಂದಿ ಹೇಳಿದ್ದಾರೆ.
"ಪೂರ್ಣ ಪ್ರಮಾಣದ ಆಕ್ರಮಣ" ನಡೆಯುತ್ತಿದೆ ಎಂದು ಉಕ್ರೇನಿಯನ್ ವಿದೇಶಾಂಗ ಸಚಿವ ಡಿಮಿಟ್ರೋ ಕುಲೆಬಾ ಹೇಳಿದರು. ಇನ್ನು ಈ ನಡುವೆ ಉಕ್ರೇನ್ ರಾಯಭಾರಿ ಮನವಿ ಮಾಡಿದ ನಂತರ ಪ್ರಧಾನಿ ನರೇಂದ್ರ ಮೋದಿ ಅವರು ಇಂದು ರಾತ್ರಿ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಜೊತೆ ಮಾತನಾಡುವ ಸಾಧ್ಯತೆಯಿದೆ ಎಂದು ಎಎನ್‌ಐ ವರದಿ ಮಾಡಿದೆ.
ವಿವಿಧ ನಾಯಕರಿಂದ ಪ್ರತಿಕ್ರಿಯೆ
ಇನ್ನು ಉಕ್ರೇನ್ ಮೇಲೆ ರಷ್ಯಾ ದಾಳಿಯು ಯುರೋಪಿಯನ್ ಇತಿಹಾಸದಲ್ಲಿ 'ಟರ್ನಿಂಗ್ ಪಾಯಿಂಟ್' ಎಂದು ಫ್ರಾನ್ಸ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರನ್ ಬಣ್ಣಿಸಿದ್ದಾರೆ. ರಷ್ಯಾದ ದಾಳಿ ಖಂಡನೀಯ. ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಇಡೀ ವಿಶ್ವದ ಶಾಂತಿಗೆ ಬೆದರಿಕೆ ಹಾಕಿದ್ದಾರೆ ಎಂದು ರೊಮೇನಿಯಾದ ಅಧ್ಯಕ್ಷರು ಹೇಳಿದ್ದಾರೆ. ಉಕ್ರೇನ್‌ನ ರಷ್ಯಾದ ಆಕ್ರಮಣವನ್ನು ಖಂಡಿಸಿ ನಾವು ಉಕ್ರೇನ್ ಜೊತೆ ನಿಲ್ಲುತ್ತೇವೆ. ಅಂತರಾಷ್ಟ್ರೀಯ ಆದೇಶದ ಕ್ರೂರ ಉಲ್ಲಂಘನೆಯನ್ನು ನಾವು ಎಂದಿಗೂ ಒಪ್ಪಿಕೊಳ್ಳುವುದಿಲ್ಲ ಎಂದು ನ್ಯಾಟೋ ಪ್ರಧಾನ ಕಾರ್ಯದರ್ಶಿ ಜೆನ್ಸ್ ಸ್ಟೋಲ್ಟೆನ್ಬರ್ಗ್ ಹೇಳಿದ್ದಾರೆ. (ಒನ್‌ಇಂಡಿಯಾ ಸುದ್ದಿ)












Click it and Unblock the Notifications