
ಕೋವಿಡ್ ಪ್ರತಿಭಟನೆ: ವರದಿ ಮಾಡುತ್ತಿದ್ದ ಬಿಬಿಸಿ ಪತ್ರಕರ್ತರನ್ನು ಬಂಧಿಸಿದ ಚೀನಾ
ದೇಶದ ಶೂನ್ಯ-ಕೋವಿಡ್ ನೀತಿಯ ವಿರುದ್ಧ ಪ್ರತಿಭಟನೆಗಳನ್ನು ವರದಿ ಮಾಡುವಾಗ ಚೀನಾದಲ್ಲಿ ತನ್ನ ಪತ್ರಕರ್ತರೊಬ್ಬರನ್ನು ಪೊಲೀಸರು ಬಂಧಿಸಿ ಥಳಿಸಿದ್ದಾರೆ ಎಂದು ಬಿಬಿಸಿ ಭಾನುವಾರ ಹೇಳಿದೆ. ಚೀನಾದ ಪ್ರಮುಖ ನಗರಗಳಲ್ಲಿ ಭಾನುವಾರ ನೂರಾರು ಜನರು ಬೀದಿಗಿಳಿದಿದ್ದು, ಶೂನ್ಯ-ಕೋವಿಡ್ ನೀತಿಯ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ. ಶಾಂಘೈ ಸೇರಿದಂತೆ ಚೀನಾದ ಅನೇಕ ನಗರಗಳಲ್ಲಿ ಪ್ರತಿಭಟನೆ ಭುಗಿಲೆದ್ದಿದೆ.
ಅಷ್ಟಕ್ಕೂ ಆಗಿದ್ದೇನು ಅಂದರೆ- ಚೀನಾದಲ್ಲಿ ಮತ್ತೆ ಕೊರೊನಾ ಪ್ರಕರಣಗಳು ಏರಿಕೆಯಾದ ಬೆನ್ನಲ್ಲೇ ಹಲವೆಡೆ ಕಠಿಣ ನಿಯಮಗಳನ್ನು ಜಾರಿಗೊಳಿಸಲಾಗಿದೆ. ಕ್ಸಿಂಜಿಯಾಂಗ್ ಪ್ರದೇಶದ ರಾಜಧಾನಿ ಉರುಂಕಿಯಲ್ಲಿನ ಬಹುಮಹಡಿ ಕಟ್ಟಡಕ್ಕೆ ಕಳೆದ ಗುರುವಾರ ಬೆಂಕಿ ಕಾಣಿಸಿಕೊಂಡಿತ್ತು. ಇದರಿಂದಾಗಿ ಅನೇಕ ಜನ ಕಟ್ಟಡದಲ್ಲಿ ಮೃತಪಟ್ಟಿದ್ದಾರೆ. ಕೊರೊನಾದಿಂದಾಗಿ ಈ ಕಟ್ಟಡವನ್ನು ಭಾಗಶ: ಲಾಕ್‌ಡೌನ್ ಮಾಡಿದ್ದರಿಂದ ಜನ ಹೊರಬರಲು ಆಗದೆ ಸಾವನ್ನಪ್ಪಿದ್ದಾರೆ. ಇದು ಸಾಮಾಜಿಕ ಮಾಧ್ಯಮದಲ್ಲಿ ಚರ್ಚೆಗೆ ಗ್ರಾಸವಾಗಿತ್ತು. ಜೊತೆಗೆ ಈ ಘಟನೆ ಜನರಲ್ಲಿ ಆಕ್ರೋಶವನ್ನು ಹುಟ್ಟುಹಾಕಿದೆ.
ಚೀನಾದ ಅತಿ ಹೆಚ್ಚು ಜನಸಂಖ್ಯೆಯ ನಗರ ಮತ್ತು ಆರ್ಥಿಕ ಹಬ್ ಶಾಂಘೈನಲ್ಲಿನ ವುಲುಮುಖಿ ರಸ್ತೆಯಲ್ಲಿ ಶನಿವಾರ ರಾತ್ರಿ ಸೇರಿಕೊಂಡ ನಿವಾಸಿಗಳು ಭಾನುವಾರ ಮುಂಜಾನೆ ಬೃಹತ್ ಪ್ರತಿಭಟನೆ ಆರಂಭಿಸಿದರು."ಚೀನಾದ ಕಮ್ಯುನಿಸ್ಟ್ ಪಕ್ಷಕ್ಕೆ ಧಿಕ್ಕಾರ, ಕ್ಸಿ ಜಿನ್‌ಪಿಂಗ್‌ಗೆ ಧಿಕ್ಕಾರ, ಉರುಂಕಿಯನ್ನು ಸ್ವತಂತ್ರಗೊಳಿಸಿ" ಎಂದೂ ದೊಡ್ಡ ಗುಂಪೊಂದು ಘೋಷಣೆ ಕೂಗಿರುವುದು ವಿಡಿಯೋದಲ್ಲಿ ದಾಖಲಾಗಿದೆ. ಸರ್ವಾಧಿಕಾರ ಆಡಳಿತದ ಚೀನಾದಲ್ಲಿ ಸರ್ಕಾರಿ ವಿರೋಧಿ ಸಾರ್ವಜನಿಕ ಪ್ರತಿಭಟನೆಗಳು ತೀರಾ ಅಪರೂಪದ್ದಾಗಿದೆ. ಪೊಲೀಸರು ಈ ಗುಂಪುಗಳನ್ನು ಚೆದುರಿಸಿ ಪ್ರತಿಭಟನೆ ವಿಫಲಗೊಳಿಸಲು ಪ್ರಯತ್ನಿಸಿದ್ದಾರೆ.
ಈ ಶಾಂಘೈನಲ್ಲಿ ಪ್ರತಿಭಟನೆಗಳನ್ನು ವರದಿ ಮಾಡುವಾಗ ಬಂಧಿಸಿ ಕೈಕೋಳ ಹಾಕಲ್ಪಟ್ಟ ಬಿಬಿಸಿ ಪತ್ರಕರ್ತ ಎಡ್ ಲಾರೆನ್ಸ್ ಅವರನ್ನು ಸ್ಥಳೀಯ ಪೊಲೀಸರು ಥಳಿಸಿದ್ದಾರೆ ಎನ್ನಲಾಗುತ್ತಿದೆ.
上海乌鲁木齐路 民众高喊
— 李老师不是你老师 (@whyyoutouzhele) November 26, 2022
共产党 下台!
这是迄今为止最为激进的口号。 pic.twitter.com/ijP7lxnIgH
ಪತ್ರಕರ್ತ ಎಡ್ ಲಾರೆನ್ಸ್ ಅವರ ಚಿಕಿತ್ಸೆ ಬಗ್ಗೆ ಬಿಬಿಸಿ ಅತ್ಯಂತ ಕಳವಳ ವ್ಯಕ್ತಪಡಿಸಿದೆ. ಮಾನ್ಯತೆ ಪಡೆದ ಪತ್ರಕರ್ತರಾಗಿ ದೇಶದಲ್ಲಿ ಕೆಲಸ ಮಾಡುತ್ತಿದ್ದ ಲಾರೆನ್ಸ್ ಅವರನ್ನು ಹಲವಾರು ಗಂಟೆಗಳ ಕಾಲ ಬಂಧಿಸಲಾಯಿತು. ಈ ಸಮಯದಲ್ಲಿ ಅವರನ್ನು ಪೊಲೀಸರು ಹೊಡೆದು ಒದ್ದರು ಎಂದು ಬಿಬಿಸಿ ವರದಿ ಮಾಡಿದೆ. ನಂತರ ಅವರನ್ನು ಬಿಡುಗಡೆ ಮಾಡಲಾಯಿತು ಎಂದು ಬಿಬಿಸಿ ಹೇಳುಕೊಂಡಿದೆ. ನಮ್ಮ ಪತ್ರಕರ್ತರೊಬ್ಬರ ಕರ್ತವ್ಯವನ್ನು ನಿರ್ವಹಿಸುವ ಸಂದರ್ಭದಲ್ಲಿ ಈ ರೀತಿ ಹಲ್ಲೆ ನಡೆಸಿರುವುದು ತುಂಬಾ ಕಳವಳಕಾರಿಯಾಗಿದೆ ಎಂದು ಬಿಬಿಸಿ ಹೇಳಿಕೆಯಲ್ಲಿ ತಿಳಿಸಲಾಗಿದೆ.

ಜೊತೆಗೆ ಈ ಘಟನೆಯ ಬಳಿಕ ನಾವು ಚೀನೀ ಅಧಿಕಾರಿಗಳಿಂದ ಯಾವುದೇ ಅಧಿಕೃತ ವಿವರಣೆ ಮಾಡಿರುವ ಬಗ್ಗೆ ಮಾಹಿತಿಯನ್ನು ಪಡೆದಿಲ್ಲ. ಮಾತ್ರವಲ್ಲದೆ ಕ್ಷಮೆಯಾಚಿಸುವ ಪ್ರಯತ್ನಗಳು ನಡೆದಿಲ್ಲ. ವಿನಾಕಾರಣ ನಮ್ಮ ವರದಿಗಾರರನ್ನು ಬಂಧಿಸಿದ್ದಾರೆ ಎಂದು ಅದು ದೂರಿದೆ.