Don't Worry: ಅಪಾಯವಿಲ್ಲ ಓಮಿಕ್ರಾನ್ ರೂಪಾಂತರ ವೈರಸ್ ಹೆಚ್ಚು ಸೌಮ್ಯ
ನವದೆಹಲಿ, ಡಿಸೆಂಬರ್ 9: ಜಾಗತಿಕ ಮಟ್ಟದಲ್ಲಿ ಇದುವರೆಗೂ ದೃಢಪಟ್ಟಿರುವ ಕೊರೊನಾವೈರಸ್ ಹೊಸ ರೂಪಾಂತರ ಓಮಿಕ್ರಾನ್ ಪ್ರಕರಣಗಳು "ಹೆಚ್ಚಾಗಿ ಸೌಮ್ಯವಾಗಿವೆ" ಎಂದು ತೋರುತ್ತಿವೆ, ಆದರೆ ಈ ರೂಪಾಂತರವು ತೀವ್ರವಾದ ಕಾಯಿಲೆಯನ್ನು ಉಂಟು ಮಾಡಬಹುದೇ ಎಂಬುದರ ಬಗ್ಗೆ ಇನ್ನೂ ತನಿಖೆ ನಡೆಸಲಾಗುತ್ತಿದೆ ಎಂದು ಯುರೋಪಿಯನ್ ಮೆಡಿಸಿನ್ಸ್ ಏಜೆನ್ಸಿ ತಿಳಿಸಿದೆ. ಇದರ ಜೊತೆಗೆ ಓಮಿಕ್ರಾನ್ ಲಕ್ಷಣಗಳು ಮೊದಲ ಮೂರು ಅಲೆಗಳಿಗಿಂತ ಸೌಮ್ಯವಾಗಿರಲಿವೆ ಎಂದು ದಕ್ಷಿಣ ಆಫ್ರಿಕಾದ ತಜ್ಞರೂ ಸಹ ಮಾಹಿತಿ ನೀಡಿದ್ದಾರೆ.
ದಕ್ಷಿಣ ಆಫ್ರಿಕಾದ ಗೌಟೆಂಗ್ ಪ್ರಾಂತ್ಯದಲ್ಲಿ ಪ್ರಸ್ತುತ ನಾಲ್ಕನೇ ಅಲೆ ಶುರುವಾಗಿದೆ. ಆಸ್ಪತ್ರೆಗಳಲ್ಲಿ ದಾಖಲಾಗಿರುವ ರೋಗಿಗಳಲ್ಲಿ ಕಂಡುಬಂದಿರುವ ರೋಗ ಲಕ್ಷಣಗಳು ಕಳೆದ ಮೂರು ಅಲೆಗಳಿಗಿಂತ ಸೌಮ್ಯವಾಗಿವೆ ಎಂದು ತಿಳಿದು ಬಂದಿದೆ. ಹೆಚ್ಚಿನ ಕೋವಿಡ್ ರೋಗಿಗಳಿಗೆ ಆಮ್ಲಜನಕ ಅಥವಾ ತೀವ್ರ ನಿಗಾ ಘಟಕಗಳ ಅಗತ್ಯವಿಲ್ಲ ಎಂದು ಗೊತ್ತಾಗಿದೆ.
"ಓಮಿಕ್ರಾನ್ ಸೋಂಕಿತ ಪ್ರಕರಣಗಳು ಹೆಚ್ಚಾಗಿ ಸೌಮ್ಯವಾಗಿರುತ್ತವೆ, ಆದಾಗ್ಯೂ ಹೊಸ ರೂಪಾಂತರದಿಂದ ಉಂಟಾಗುವ ರೋಗದ ತೀವ್ರತೆಯ ವೇಗವು ಇದುವರೆಗೆ ಪತ್ತೆಯಾಗಿರುವ ಎಲ್ಲಾ ರೂಪಾಂತರಗಳಿಗಿಂತ ಭಿನ್ನವಾಗಿದೆಯೇ ಎಂಬುದನ್ನು ನಿರ್ಧರಿಸಲು ನಾವು ಹೆಚ್ಚಿನ ಪುರಾವೆಗಳನ್ನು ಸಂಗ್ರಹಿಸಬೇಕಾಗಿದೆ" ಎಂದು EMA ಮುಖ್ಯಸ್ಥ ಮಾರ್ಕೊ ಕ್ಯಾವಲೆರಿ ಹೇಳಿದ್ದಾರೆ.
ಕಳೆದ ತಿಂಗಳು ಓಮಿಕ್ರಾನ್ ರೂಪಾಂತರವು ಪತ್ತೆಯಾದ ಸಂದರ್ಭದಲ್ಲಿ ಜಾಗತಿಕ ಭೀತಿಯನ್ನು ಹುಟ್ಟುಹಾಕಿತು. ಹೊಸ ರೂಪಾಂತರವು ಹೆಚ್ಚು ಸಾಂಕ್ರಾಮಿಕವಾಗಬಹುದು, ಹೆಚ್ಚು ತೀವ್ರವಾದ ಅನಾರೋಗ್ಯವನ್ನು ಉಂಟು ಮಾಡಬಹುದು ಅಥವಾ ಲಸಿಕೆಗಳ ಪ್ರಭಾವವನ್ನು ತಗ್ಗಿಸಬಹುದು ಎಂಬ ಭಯವನ್ನು ಸೃಷ್ಟಿಸಿತ್ತು. ವಿಶ್ವ ಆರೋಗ್ಯ ಸಂಸ್ಥೆ ಕೂಡಾ ಈ ವಾರದ ಆರಂಭಿಕ ಸೂಚನೆಗಳ ಪ್ರಕಾರ, ಓಮಿಕ್ರಾನ್ ರೂಪಾಂತರವು ಹೆಚ್ಚು ಸಾಂಕ್ರಾಮಿಕವಾಗಿರಬಹುದು ಎಂದು ಎಚ್ಚರಿಕೆ ನೀಡಿತ್ತು.

ಮೂರನೇ ಡೋಸ್ ಲಸಿಕೆಯು ಹೆಚ್ಚು ಪರಿಣಾಮಕಾರಿ
ಫಿಜರ್ ಮತ್ತು ಬಯೋಎನ್‌ಟೆಕ್ ಲಸಿಕೆ ತಯಾರಕರು ತಮ್ಮ ಲಸಿಕೆಯ ಮೂರನೇ ಡೋಸ್ ಓಮಿಕ್ರಾನ್ ರೂಪಾಂತರದ ವಿರುದ್ಧ ಪರಿಣಾಮಕಾರಿ ರಕ್ಷಣೆಯನ್ನು ನೀಡುತ್ತದೆ ಎಂದು ಹೇಳಿವೆ. ಅಲ್ಲದೇ ಓಮಿಕ್ರಾನ್ ರೂಪಾಂತರ ರೋಗಾಣುವಿನ ವಿರುದ್ಧ ಸಮರ್ಥವಾಗಿ ಹೋರಾಡುವುದಕ್ಕೆ ತಕ್ಕದಾದ ನಿರ್ದಿಷ್ಟ ಲಸಿಕೆಯನ್ನು 2022ರ ಮಾರ್ಚ್ ತಿಂಗಳ ಹೊತ್ತಿಗೆ ಅಭಿವೃದ್ಧಿಪಡಿಸಲಾಗುವುದು ಎಂದು ಕಂಪನಿಯು ತಿಳಿಸಿದೆ.

ಕೊವಿಡ್-19 ಲಸಿಕೆ ಪ್ರಭಾವ ಅಳಿಯಲು ಸಮಯ ಬೇಕು
"ಓಮಿಕ್ರಾನ್ ರೂಪಾಂತರ ವೈರಸ್ ವಿರುದ್ಧ ಪ್ರಸ್ತುತ ನೀಡಲಾಗುತ್ತಿರುವ ಕೊವಿಡ್-19 ಲಸಿಕೆಗಳು ಎಷ್ಟು ಚೆನ್ನಾಗಿ ಕೆಲಸ ಮಾಡುತ್ತವೆ ಎಂಬುದರ ಕುರಿತು ಹೇಳುವುದಕ್ಕೆ ಇದು ಸೂಕ್ತ ಸಮಯವಲ್ಲ. ಇಷ್ಟು ಆತುರದಲ್ಲಿ ಲಸಿಕೆಗಳ ಪ್ರಭಾವವನ್ನು ಅಳೆಯುವುದಕ್ಕೆ ಸಾಧ್ಯವಿಲ್ಲ," ಎಂದು ಕ್ಯಾವಲೆರಿ ಹೇಳಿದ್ದಾರೆ. "ಈ ಹಂತದಲ್ಲಿ ನಾವು ಅನುಮೋದಿತ ಲಸಿಕೆಗಳ ಪರಿಣಾಮಕಾರಿತ್ವದ ಮೇಲೆ ಈ ರೂಪಾಂತರದ ಪ್ರಭಾವದ ಕುರಿತು ಸಾಕಷ್ಟು ಡೇಟಾವನ್ನು ಹೊಂದಿಲ್ಲ, ಆದರೆ ಈ ನಿಟ್ಟಿನಲ್ಲಿ ಪುರಾವೆಗಳನ್ನು ಸಂಗ್ರಹಿಸಲು ನಾವು ನಿರಂತರವಾಗಿ ಹಾರಿಜಾನ್ ಅನ್ನು ಸ್ಕ್ಯಾನ್ ಮಾಡುತ್ತಿದ್ದೇವೆ," ಎಂದು ಅವರು ಹೇಳಿದ್ದಾರೆ.

ಓಮಿಕ್ರಾನ್ ಸೋಂಕು ಮೂರು ಪಟ್ಟು ಅಪಾಯಕಾರಿ
ಕೊರೊನಾವೈರಸ್ ಹೊಸ ರೂಪಾಂತರ ಓಮಿಕ್ರಾನ್ ಬಗ್ಗೆ ಜಾಗತಿಕ ಮಟ್ಟದಲ್ಲಿ ಆತಂಕವನ್ನು ಹುಟ್ಟು ಹಾಕುತ್ತಿದೆ. ಈ ಹಿಂದೆ ಅಪಾಯಕಾರಿ ಎಂದು ತಜ್ಞರು ಹೇಳಿದ್ದ ಡೆಲ್ಟಾ ರೂಪಾಂತರ ರೋಗಾಣುವಿಗಿಂತ ಓಮಿಕ್ರಾನ್ ಡೇಂಜರ್ ಎಂದು ಹೇಳಲಾಗುತ್ತಿದೆ. ಓಮಿಕ್ರಾನ್ ರೂಪಾಂತರವು ಡೆಲ್ಟಾಗಿಂತ ಮೂರು ಪಟ್ಟು ಹೆಚ್ಚು ವೇಗವಾಗಿ ಹರಡುವ ಸಾಮರ್ಥ್ಯವನ್ನು ಹೊಂದಿದೆ ಎಂದು ದಕ್ಷಿಣ ಆಫ್ರಿಕಾದ ಸಾಂಕ್ರಾಮಿಕ ರೋಗಶಾಸ್ತ್ರಜ್ಞರು ಎಚ್ಚರಿಕೆ ನೀಡಿದ್ದಾರೆ.

ನಾಲ್ಕು ಕೊವಿಡ್-19 ಲಸಿಕೆಗಳಿಗೆ ಯುರೋಪ್ ಅನುಮೋದನೆ
ಯುರೋಪಿಯನ್ ಮೆಡಿಸಿನ್ಸ್ ಏಜೆನ್ಸಿಯು ಇದುವರೆಗೆ ನಾಲ್ಕು ಕೋವಿಡ್-19 ಲಸಿಕೆಗಳನ್ನು ಅನುಮೋದಿಸಿದೆ. ಫಿಜರ್/ಬಯೋಎನ್‌ಟೆಕ್ ಲಸಿಕೆ, ಮಾಡರ್ನಾ ಲಸಿಕೆ, ಜಾನ್ಸನ್ ಮತ್ತು ಜಾನ್ಸನ್ ಲಸಿಕೆ ಮತ್ತು ಅಸ್ಟ್ರಾಜೆನೆಕಾ ಲಸಿಕೆಗಳನ್ನು ವಿತರಣೆ ಮಾಡಲಾಗುತ್ತಿದೆ. ಇದರ ಜೊತೆಗೆ ಮೆರ್ಕ್‌ನ ಆಂಟಿ-ಕೋವಿಡ್ ಮಾತ್ರೆಗೆ ಹಸಿರು ನಿಶಾನೆ ತೋರಿಸಲಾಗಿದ್ದು, ಇದನ್ನು ಅದ್ಭುತ ಚಿಕಿತ್ಸೆ ಎಂದು ಪ್ರಶಂಸಿಸಲಾಗಿದೆ. ಏಕೆಂದರೆ ಇದನ್ನು ಮನೆಯಲ್ಲಿಯೇ ತೆಗೆದುಕೊಳ್ಳಬಹುದು.












Click it and Unblock the Notifications