ಚೀನಾದಲ್ಲಿ ವಿಮಾನ ಪತನ: ಎಲ್ಲಾ ಪ್ರಯಾಣಿಕರು ಮೃತ
ಬೀಜಿಂಗ್ ಮಾರ್ಚ್ 22: ಚೀನಾದಲ್ಲಿ ಸೋಮವಾರದಂದು ಸಂಭವಿಸಿದ ಭಾರಿ ವಿಮಾನ ದುರಂತದಲ್ಲಿ 132 ಪ್ರಯಾಣಿಕರು ಅಸುನೀಗಿದ್ದಾರೆನ್ನುವ ಮಾಹಿತಿ ಲಭ್ಯವಾಗಿದೆ. ಸೋಮವಾರ (ಮಾರ್ಚ್ 21) ವಿಮಾನ ಚೀನಾದ ಗುವಾಂಗ್ಸಿ ಪ್ರಾಂತ್ಯದಲ್ಲಿ ಪತನಗೊಂಡಿತ್ತು. ಚೀನಾದ ಮಾಧ್ಯಮ ಸಿಸಿಟಿವಿ ಪ್ರಕಾರ, ಈ ಅಪಘಾತದಲ್ಲಿ ಎಲ್ಲಾ ಪ್ರಯಾಣಿಕರು ಸಾವನ್ನಪ್ಪಿದ್ದಾರೆ ಮತ್ತು ವಿಮಾನದಲ್ಲಿದ್ದ ಯಾರೂ ಬದುಕುಳಿದಿಲ್ಲ. ಘಟನಾ ಸ್ಥಳದಲ್ಲಿ ವಿಮಾನದ ಅವಶೇಷಗಳು ಪತ್ತೆಯಾಗಿವೆ. ಆದರೆ ವಿಮಾನದಲ್ಲಿದ್ದ ಯಾವುದೇ ಪ್ರಯಾಣಿಕರು ಜೀವಂತವಾಗಿ ಕಂಡುಬಂದಿಲ್ಲ. ಅಪಘಾತದ ಸುಮಾರು 18 ಗಂಟೆಗಳ ನಂತರ ವಿಮಾನದ ಅವಶೇಷಗಳು ಪತ್ತೆಯಾಗಿವೆ. ವಿಮಾನದಲ್ಲಿದ್ದ ಎಲ್ಲಾ 123 ಪ್ರಯಾಣಿಕರು ಮತ್ತು 9 ಸಿಬ್ಬಂದಿ ಸಾವನ್ನಪ್ಪಿದ್ದಾರೆ.
ನಾವು ಹುಡುಕಾಟ ಮತ್ತು ಪರಿಹಾರ ಕಾರ್ಯಾಚರಣೆಯಲ್ಲಿ ಎಲ್ಲ ಪ್ರಯತ್ನಗಳನ್ನು ಮಾಡುತ್ತಿದ್ದೇವೆ ಎಂದು ಚೀನಾದ ವಿದೇಶಾಂಗ ಸಚಿವ ವಾಂಗ್ ಯಿ ಅವರು ಹೇಳಿದ್ದಾರೆ. ಈ ಅಪಘಾತ ಹೇಗೆ ಸಂಭವಿಸಿತು ಎಂಬುದನ್ನು ಶೀಘ್ರದಲ್ಲೇ ಕಂಡುಹಿಡಿಯಲು ಪ್ರಯತ್ನಿಸುತ್ತೇವೆ. ಇದರಿಂದ ವಿಮಾನಯಾನವನ್ನು ಇನ್ನಷ್ಟು ಸುರಕ್ಷಿತವಾಗಿ ಮಾಡಬಹುದು ಎಂದರು. ಸೋಮವಾರ ಮಧ್ಯಾಹ್ನ ಈ ವಿಮಾನ ಅಪಘಾತಕ್ಕೊಳಗಾಗಿದೆ. ವಿಮಾನ ಕಾನ್ಮಿಂಗ್‌ನಿಂದ ಗುವಾಂಗ್‌ಝೌಗೆ ಮಧ್ಯಾಹ್ನ 1.11 ಕ್ಕೆ ಟೇಕಾಫ್ ಆಗಿತ್ತು. ಮಧ್ಯಾಹ್ನ 3.04 ಕ್ಕೆ ಇಳಿಯಬೇಕಿತ್ತು. ಆದರೆ ಅದು ಮಧ್ಯಾಹ್ನ 2.20 ರ ಸುಮಾರಿಗೆ ಪತನಗೊಂಡಿದೆ. ಅಪಘಾತದ ಕಾರಣ ಇನ್ನೂ ತಿಳಿದುಬಂದಿಲ್ಲ.
ಈ ಅಪಘಾತದ ನಂತರ ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಈ ಬಗ್ಗೆ ತನಿಖೆಗೆ ಆದೇಶಿಸಿದ್ದಾರೆ. ಅವರು ಅಪಘಾತದ ಬಗ್ಗೆ ತಕ್ಷಣದ ತನಿಖೆಗೆ ಆದೇಶಿಸಿದರು. ಜೊತೆಗೆ ವಿಮಾನದ ಶೋಧ ಕಾರ್ಯಾಚರಣೆ ಮತ್ತು ಪರಿಹಾರ ಕಾರ್ಯವನ್ನು ಪ್ರಾರಂಭಿಸಲು ಸೂಚಿಸಿದರು. ಇದೇ ವೇಳೆ ಭಾರತದ ಪ್ರಧಾನಿ ನರೇಂದ್ರ ಮೋದಿ ಕೂಡ ಚೀನಾದಲ್ಲಿ ನಡೆದ ಈ ವಿಮಾನ ದುರಂತಕ್ಕೆ ಸಂತಾಪ ಸೂಚಿಸಿದ್ದಾರೆ. ಚೀನಾದ ಗುವಾಂಗ್ಸಿಯಲ್ಲಿ 132 ಜನರಿದ್ದ MU5735 ವಿಮಾನ ಪತನಗೊಂಡ ಬಗ್ಗೆ ತಿಳಿದು ತೀವ್ರ ಆಘಾತ ಮತ್ತು ದುಃಖವಾಗಿದೆ ಎಂದು ಪ್ರಧಾನಿ ಮೋದಿ ಟ್ವೀಟ್ ಮಾಡಿದ್ದಾರೆ.

737 ಮಾದರಿಯ ಹಲವಾರು ವಿಮಾನಗಳು ಈ ಹಿಂದೆ ಅಪಘಾತಕ್ಕೀಡಾಗಿದ್ದವು. ಬೋಯಿಂಗ್ 737 ಸಣ್ಣ ಮತ್ತು ಮಧ್ಯಮ ದೂರದ ವಿಮಾನ ಪ್ರಯಾಣಕ್ಕೆ ಉತ್ತಮ ವಿಮಾನವೆಂದು ಪರಿಗಣಿಸಲಾಗಿದೆ. ಆದರೆ ಅಪಘಾತಗಳಿಂದಾಗಿ ಈಗ ಅದನ್ನು ಹಾರುವ ಶವಪೆಟ್ಟಿಗೆ ಎಂದು ಕರೆಯಲಾಗುತ್ತದೆ. 2019 ರಲ್ಲಿ ಇಥಿಯೋಪಿಯಾದಲ್ಲಿ ಬೋಯಿಂಗ್ 737 ವಿಮಾನ ಪತನಗೊಂಡಿತ್ತು. ಈ ವೇಲೆ ವಿಮಾನದಲ್ಲಿ 157 ಜನರಿದ್ದು ಎಲ್ಲರೂ ಸಾವನ್ನಪ್ಪಿದರು. ಅಕ್ಟೋಬರ್ 2018 ರಲ್ಲಿ, ಇಂಡೋನೇಷ್ಯಾದಲ್ಲಿ ಲಯನ್ ಏರ್‌ನ ಬೋಯಿಂಗ್ 737 ಜಕಾರ್ತಾದಿಂದ ಟೇಕ್ ಆಫ್ ಆದ 13 ನಿಮಿಷಗಳ ನಂತರ ಪತನಗೊಂಡಿತು. ಅದರಲ್ಲಿದ್ದ ಎಲ್ಲಾ 189 ಜನರು ಸಾವನ್ನಪ್ಪಿದರು. 2013ರಲ್ಲಿ ಬೋಯಿಂಗ್-737 ವಿಮಾನವೂ ಪತನವಾಗಿತ್ತು. ಈ ಅಪಘಾತದಲ್ಲಿ ಸುಮಾರು 108 ಜನರು ಸಾವನ್ನಪ್ಪಿದ್ದಾರೆ.

ಅಪಘಾತಕ್ಕೆ ಸಂಬಂಧಿಸಿದ ವಿಡಿಯೋದಲ್ಲಿ ವಿಮಾನದ ಅವಶೇಷಗಳು ಚೆಲ್ಲಾಪಿಲ್ಲಿಯಾಗಿ ಬಿದ್ದಿರುವುದು ಕಂಡುಬಂದಿದೆ. ವೀಡಿಯೊದಲ್ಲಿ, ಪರಿಹಾರ ಮತ್ತು ರಕ್ಷಣಾ ತಂಡಗಳ ಜನರು ವಿಮಾನದ ಅವಶೇಷಗಳ ಬಳಿ ಹಾದು ಹೋಗುತ್ತಿರುವುದು ಕಂಡುಬಂದಿದೆ. ಇದೇ ವೇಳೆ ಕೆಲವರು ಘಟನೆಯ ವಿಡಿಯೋ ಚಿತ್ರೀಕರಣ ಕೂಡ ಮಾಡುತ್ತಿರುವುದು ಕಂಡು ಬಂದಿದೆ. ವರದಿಗಳ ಪ್ರಕಾರ, ವಿಮಾನ ಎರಡು ನಿಮಿಷಗಳಿಗಿಂತ ಕಡಿಮೆ ಅವಧಿಯಲ್ಲಿ 30,000 ಅಡಿಗಳಷ್ಟು ಮೇಲಿನಿಂದ ಕೆಳಗೆ ಬಿದ್ದಿದೆ. ಟೇಕ್ ಆಫ್ ಆದ 71 ನಿಮಿಷಗಳ ನಂತರ ಈ ವಿಮಾನ ಅಪಘಾತಕ್ಕೊಳಗಾಗಿದೆ. ವಿಮಾನ ಇಳಿಯುವ 43 ನಿಮಿಷಗಳ ಮೊದಲು ಎಟಿಸಿ ಸಂಪರ್ಕ ಕಳೆದುಕೊಂಡಿದೆ.












Click it and Unblock the Notifications