ವಾಲಂಟಿಯರ್ ಎಕ್ಸಿಟ್ ಆಫರ್ ಚೆಕ್ ಮಾಡಲು ಮುಗಿಬಿದ್ದ 40,000 BMW ಉದ್ಯೋಗಿಗಳು, HR ಪೋರ್ಟಲ್ ಕ್ರ್ಯಾಶ್!
ಜರ್ಮನಿಯ ಪ್ರಸಿದ್ಧ ಕಾರು ತಯಾರಕ ಕಂಪನಿ ಬಿಎಂಡಬ್ಲ್ಯು (BMW) ತನ್ನ ಉದ್ಯೋಗಿಗಳಿಗೆ ದೊಡ್ಡ ಆಘಾತ ನೀಡಿದೆ. ಕಂಪನಿಯು ಮುಂದಿನ ದಿನಗಳಲ್ಲಿ ಭಾರಿ ಪ್ರಮಾಣದ ಉದ್ಯೋಗ ಕಡಿತಕ್ಕೆ ಮುಂದಾಗಿದ್ದು, ಈ ವಿಚಾರ ತಿಳಿಯುತ್ತಿದ್ದಂತೆ ಉದ್ಯೋಗಿಗಳು ತಮ್ಮ ಭವಿಷ್ಯದ ಬಗ್ಗೆ ಆತಂಕಗೊಂಡಿದ್ದಾರೆ.
2027ರ ವೇಳೆಗೆ ಜರ್ಮನಿಯಲ್ಲಿ ಸುಮಾರು 8,000 ಉದ್ಯೋಗಗಳನ್ನ ಕಡಿತಗೊಳಿಸುವ ಯೋಜನೆಯನ್ನ ಕಂಪನಿ ರೂಪಿಸಿದೆ. ಇದರ ಭಾಗವಾಗಿ ಬಿಎಂಡಬ್ಲ್ಯು ತನ್ನ ಉದ್ಯೋಗಿಗಳಿಗೆ ಸ್ವಯಂ ನಿರ್ಗಮನ ಅಂದರೆ ವಲಂಟಿಯರ್ ಎಕ್ಸಿಟ್ ಆಫರ್ ಅನ್ನಾ ಘೋಷಿಸಿದೆ.

ಗುರುವಾರ ಇದಕ್ಕೆ ಸಂಬಂಧಿಸಿದಂತೆ ಉದ್ಯೋಗಿಗಳಿಗೆ ವೈಯಕ್ತಿಕ ಆಫರ್‌ಗಳನ್ನ ಕಳುಹಿಸಲಾಗಿತ್ತು. ತಮ್ಮ ಆಫರ್ ಏನಿರಬಹುದು ಎಂದು ಒಮ್ಮೆಲೆ ಸುಮಾರು 40,000 ಉದ್ಯೋಗಿಗಳು ಕಂಪನಿಯ ಆಂತರಿಕ ಮಾನವ ಸಂಪನ್ಮೂಲ (HR) ಪೋರ್ಟಲ್‌ಗೆ ಲಾಗಿನ್ ಆಗಿದ್ದಾರೆ. ಇದರಿಂದಾಗಿ ಸರ್ವರ್‌ಗೆ ಹೆಚ್ಚಿನ ಒತ್ತಡ ಬಿದ್ದು, ಹೆಚ್‌ಆರ್ ಪೋರ್ಟಲ್ ಸಂಪೂರ್ಣವಾಗಿ ಕ್ರ್ಯಾಶ್ ಆಗಿದೆ.
ಬಿಎಂಡಬ್ಲ್ಯು ಹೆಚ್‌ಆರ್ ಪೋರ್ಟಲ್ ಕ್ರ್ಯಾಶ್ ಆಗಲು ಕಾರಣವೇನು?
ಬಿಎಂಡಬ್ಲ್ಯು ಹೆಚ್‌ಆರ್ ವಿಭಾಗವು ಸ್ವಯಂ ನಿರ್ಗಮನ ಯೋಜನೆಯನ್ನ ಅಧಿಕೃತವಾಗಿ ಆರಂಭಿಸಿದ ತಕ್ಷಣ, ಅರ್ಹ ಉದ್ಯೋಗಿಗಳಿಗೆ ಇಮೇಲ್ ಮೂಲಕ ಮಾಹಿತಿಯನ್ನ ರವಾನಿಸಲಾಗಿತ್ತು. ಜರ್ಮನ್ ಮಾಧ್ಯಮಗಳ ವರದಿಗಳ ಪ್ರಕಾರ, ಇಮೇಲ್ ಸ್ವೀಕರಿಸಿದ ತಕ್ಷಣ ಸಾವಿರಾರು ಉದ್ಯೋಗಿಗಳು ತಮಗೆ ಸಿಗಬಹುದಾದ ಆರ್ಥಿಕ ಪರಿಹಾರ ಅಥವಾ ಪ್ಯಾಕೇಜ್ ಬಗ್ಗೆ ತಿಳಿದುಕೊಳ್ಳಲು ತೀವ್ರ ಕುತೂಹಲ ತೋರಿದ್ದಾರೆ.
ಹೀಗಾಗಿ, ಏಕಕಾಲದಲ್ಲಿ 40,000ಕ್ಕೂ ಹೆಚ್ಚು ಉದ್ಯೋಗಿಗಳು ಪೋರ್ಟಲ್ ಪ್ರವೇಶಿಸಲು ಪ್ರಯತ್ನಿಸಿದ್ದಾರೆ. ಈ ದಿಡೀರ್ ಟ್ರಾಫಿಕ್‌ನಿಂದಾಗಿ ಬಿಎಂಡಬ್ಲ್ಯು ಕಂಪನಿಯ ಆಂತರಿಕ ಡಿಜಿಟಲ್ ಪ್ಲಾಟ್‌ಫಾರ್ಮ್ ತಾತ್ಕಾಲಿಕವಾಗಿ ಸ್ಥಗಿತಗೊಂಡಿತು. ಉದ್ಯೋಗಿಗಳ ಆತಂಕವೇ ಈ ತಾಂತ್ರಿಕ ಅಡಚಣೆಗೆ ಮುಖ್ಯ ಕಾರಣ ಎಂದು ಕಂಪನಿಯ ವಕ್ತಾರರು ಸ್ಪಷ್ಟಪಡಿಸಿದ್ದಾರೆ.
ಬಿಎಂಡಬ್ಲ್ಯು ಉದ್ಯೋಗ ಕಡಿತ
ಕಂಪನಿಯು ಜೂನ್ ತಿಂಗಳಿನಲ್ಲಿಯೇ ತನ್ನ ವೆಚ್ಚ ಕಡಿತದ ಯೋಜನೆಯನ್ನ ಪ್ರಕಟಿಸಿತ್ತು. ಈ ಯೋಜನೆಯ ಪ್ರಮುಖ ಅಂಶವೆಂದರೆ, 2027ರ ಅಂತ್ಯದ ವೇಳೆಗೆ ಜರ್ಮನಿಯಲ್ಲಿ 8,000 ಉದ್ಯೋಗಗಳನ್ನು ಕಡಿತಗೊಳಿಸುವುದು. ಆದರೆ, ಈ ಕಡಿತವು ನೇರವಾಗಿ ಉತ್ಪಾದನಾ ವಿಭಾಗದಲ್ಲಿ ಅಂದರೆ ಪ್ರೋಡಕ್ಷನ್ ಡಿಪಾರ್ಟ್‌ಮಂಟ್‌ನಲ್ಲಿ ಕೆಲಸ ಮಾಡುವ ಕಾರ್ಮಿಕರಿಗೆ ಅನ್ವಯಿಸುವುದಿಲ್ಲ ಎಂದು ಸ್ಪಷ್ಟಪಡಿಸಲಾಗಿದೆ.
ಬದಲಾಗಿ ಆಡಳಿತ, ನಿರ್ವಹಣೆ ಮತ್ತು ಇತರ ಕಚೇರಿ ವಿಭಾಗಗಳ ಉದ್ಯೋಗಿಗಳ ಮೇಲೆ ಇದರ ನೇರ ಪರಿಣಾಮ ಬೀರಲಿದೆ. ಇದರ ಜೊತೆಗೆ, 2027ರ ಮಧ್ಯಭಾಗದ ವೇಳೆಗೆ ಕಂಪನಿಯ ವಿವಿಧ ವಿಭಾಗಗಳಲ್ಲಿನ ನಿರ್ವಹಣಾ ಹುದ್ದೆಗಳನ್ನ ಶೇಕಡಾ 20ರಷ್ಟು ಕಡಿಮೆ ಮಾಡುವ ಗುರಿಯನ್ನ ಬಿಎಂಡಬ್ಲ್ಯು ಹೊಂದಿದೆ.
ಕಡ್ಡಾಯವಾಗಿ ಕೆಲಸದಿಂದ ತೆಗೆದುಹಾಕುವ ಬದಲು, ಉದ್ಯೋಗಿಗಳಿಗೆ ಆಕರ್ಷಕ ಆಫರ್ ನೀಡಿ ಸ್ವಯಂ-ಇಚ್ಛೆಯಿಂದ ಹೊರನಡೆಯಲು ಅವಕಾಶ ಕಲ್ಪಿಸುವುದು ಕಂಪನಿಯ ಉದ್ದೇಶವಾಗಿದೆ.
ಬಿಎಂಡಬ್ಲ್ಯು ಭವಿಷ್ಯದ ಯೋಜನೆ
ಒಂದೆಡೆ ಉದ್ಯೋಗ ಕಡಿತ ಮತ್ತು ವೆಚ್ಚ ಕಡಿತಕ್ಕೆ ಮುಂದಾಗಿರುವ ಬಿಎಂಡಬ್ಲ್ಯು, ಮತ್ತೊಂದೆಡೆ ಹೊಸ ತಂತ್ರಜ್ಞಾನ ಮತ್ತು ಎಲೆಕ್ಟ್ರಿಕ್ ವಾಹನಗಳ (EV) ಅಭಿವೃದ್ಧಿಯತ್ತ ಭಾರಿ ಬಂಡವಾಳ ಹೂಡಿಕೆ ಮಾಡುತ್ತಿದೆ. ವಿಶೇಷವಾಗಿ 'ನ್ಯೂ ಕ್ಲಾಸ್' (Neue Klasse) ಪ್ಲಾಟ್‌ಫಾರ್ಮ್ ಆಧಾರಿತ ಎಲೆಕ್ಟ್ರಿಕ್ ಕಾರುಗಳ ನಿರ್ಮಾಣದತ್ತ ಕಂಪನಿ ಗಮನ ಹರಿಸಿದೆ. ಇದೇ ವೇಳೆ, ಕಂಪನಿಗೆ ಹೆಚ್ಚಿನ ಲಾಭ ತಂದುಕೊಡದ ಹಳೆಯ ಕಾರುಗಳ ಉತ್ಪಾದನೆಯನ್ನು ನಿಲ್ಲಿಸುವ ಬಗ್ಗೆಯೂ ಚಿಂತನೆ ನಡೆಸಿದೆ.
ವರದಿಗಳ ಪ್ರಕಾರ, '2 ಸೀರೀಸ್ ಆಕ್ಟಿವ್ ಟೂರರ್'ನಂತಹ ಮಾಡೆಲ್‌ಗಳನ್ನ ಮುಂದಿನ ದಿನಗಳಲ್ಲಿ ಸ್ಥಗಿತಗೊಳಿಸುವ ಸಾಧ್ಯತೆಯಿದೆ. ಒಟ್ಟಾರೆಯಾಗಿ, ಆಡಳಿತಾತ್ಮಕ ವೆಚ್ಚವನ್ನ ತಗ್ಗಿಸಿ, ಭವಿಷ್ಯದ ಆಟೋಮೊಬೈಲ್ ಮಾರುಕಟ್ಟೆಯಲ್ಲಿ ಎಲೆಕ್ಟ್ರಿಕ್ ವಾಹನಗಳ ಮೂಲಕ ಪ್ರಾಬಲ್ಯ ಸಾಧಿಸುವುದು ಬಿಎಂಡಬ್ಲ್ಯು ಕಂಪನಿಯ ಪ್ರಮುಖ ಕಾರ್ಯತಂತ್ರವಾಗಿದೆ.
ಆದಾಗ್ಯೂ, ಈ ಸ್ವಯಂ ನಿರ್ಗಮನ ಯೋಜನೆಯಡಿ ಎಷ್ಟು ಉದ್ಯೋಗಿಗಳು ಆಫರ್ ಒಪ್ಪಿಕೊಂಡು ಹೊರನಡೆಯಲಿದ್ದಾರೆ ಎಂಬುದು ಮುಂದಿನ ದಿನಗಳಲ್ಲಿ ಸ್ಪಷ್ಟವಾಗಲಿದೆ.


Click it and Unblock the Notifications
