ಬಾಂಗ್ಲಾದೇಶ ಚುನಾವಣೆ ಹಿಂಸಾಚಾರದಲ್ಲಿ ಹಲವರು ಸಾವು
ಢಾಕಾ (ಬಾಂಗ್ಲಾದೇಶ್), ಡಿಸೆಂಬರ್ 30: ಚುನಾವಣೆಗೆ ಸಂಬಂಧಿಸಿದ ಕಲಹದಲ್ಲಿ ಭಾನುವಾರ ಬಾಂಗ್ಲಾದೇಶದಲ್ಲಿ ಹಲವರು ಮೃತಪಟ್ಟಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ದಕ್ಷಿಣದ ಬಷ್ಖಾಲಿ ಪಟ್ಟಣದಲ್ಲಿ ಮತದಾನ ಕೇಂದ್ರದ ಮೇಲೆ ವಿರೋಧ ಪಕ್ಷದ ಕಾರ್ಯಕರ್ತರು ದಾಳಿಗೆ ಯತ್ನಿಸಿದಾಗ, ಪೊಲೀಸರು ಹಾರಿಸಿದ ಗುಂಡಿಗೆ ವ್ಯಕ್ತಿಯೊಬ್ಬರು ಸಾವಿಗೀಡಾಗಿದ್ದಾರೆ.
ಆಗ್ನೇಯ ಜಿಲ್ಲೆ ರಂಗಮತಿ ಜಿಲ್ಲೆಯಲ್ಲಿ ಆಡಳಿತಾರೂಢ ಅವಾಮಿ ಲೀಗ್ ಪಾರ್ಟಿ ಕಾರ್ಯಕರ್ತನ ಮೇಲೆ ವಿರೋಧ ಪಕ್ಷದವರು ಹಲ್ಲೆ ನಡೆಸಿದ್ದಾರೆ. ಈ ವೇಳೆ ಆತನ ತಲೆಗೆ ಬಲವಾದ ಪೆಟ್ಟು ಬಿದ್ದು, ಸಾವನ್ನಪ್ಪಿದ್ದಾನೆ. "ಆತನನ್ನು ಆಸ್ಪತ್ರೆಗೆ ಕರೆದೊಯ್ಯುವ ಮಾರ್ಗ ಮಧ್ಯೆ ಮೃತಪಟ್ಟಿದ್ದಾನೆ" ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ನಾಲ್ಕನೇ ಅವಧಿಗೆ ಪ್ರಧಾನಿಯಾಗಲು ಶೇಕ್ ಹಸೀನಾ ಜನಾದೇಶಕ್ಕೆ ಮನವಿ ಮಾಡಿದ್ದು, ಭಾನುವಾರ ನಡೆಯುತ್ತಿರುವ ಚುನಾವಣೆಯ ವೇಳೆ ಹಿಂಸಾಚಾರದಲ್ಲಿ ವಿವಿಧೆಡೆ ಆರು ಮಂದಿ ಸಾವಿಗೀಡಾಗಿರುವ ಮಾಹಿತಿ ಬಂದಿದೆ ಎಂದು ಪೊಲೀಸರು ಹೇಳಿದ್ದಾರೆ. ವಾರಗಳು ನಡೆದ ಚುನಾವಣೆ ಪ್ರಚಾರದಲ್ಲಿ ಅವಾಮಿ ಲೀಗ್ ಕಾರ್ಯಕರ್ತರು ಹಾಗೂ ಮುಖ್ಯ ವಿರೋಧ ಪಕ್ಷವಾದ ಬಾಂಗ್ಲಾದೇಶ್ ನ್ಯಾಷನಲಿಸ್ಟ್ ಪಾರ್ಟಿ (ಬಿಎನ್ ಪಿ) ಕಾರ್ಯಕರ್ತರ ಮಧ್ಯೆ ಭಾರೀ ಹೊಡೆದಾಟ ನಡೆದಿದೆ.

ಬಾಂಗ್ಲಾದೇಶದಲ್ಲಿ ಚುನಾವಣೆ ಘೋಷಣೆ ಆದಾಗಿನಿಂದ ಬಿಎನ್ ಪಿಯ ಎಂಟು ಕಾರ್ಯಕರ್ತರು ಸಾವನ್ನಪ್ಪಿದ್ದಾರೆ ಎಂದು ಆ ಪಕ್ಷವು ತಿಳಿಸಿದೆ. 1971ರಲ್ಲಿ ಬಾಂಗ್ಲಾದೇಶವು ಸ್ವತಂತ್ರಗೊಂಡಾಂಗಿನಿಂದ ಈಗ ನಡೆಯುತ್ತಿರುವುದು 11ನೇ ಸಂಸತ್ ಚುನಾವಣೆ. ಕಳೆದ ನವೆಂಬರ್ 8ರಂದು ಚುನಾವಣೆ ದಿನಾಂಕ ಘೋಷಣೆ ಮಾಡಲಾಗಿತ್ತು.












Click it and Unblock the Notifications