Azerbaijan Plane Crash: ಅಜರ್‌ಬೈಜಾನ್ ಅಧ್ಯಕ್ಷರ ಕ್ಷಮೆ ಕೇಳಿದ ರಷ್ಯಾ ಅಧ್ಯಕ್ಷ ಪುಟಿನ್
ಕಜಕಿಸ್ತಾನದಲ್ಲಿ ಸಂಭವಿಸಿದ ಅಜರ್‌ಬೈಜಾನ್ ಏರ್ ಲೈನ್ಸ್ ವಿಮಾನ ದುರಂತದಲ್ಲಿ 38 ಮಂದಿ ಸಾವನ್ನಪ್ಪಿದ ಘಟನೆ ಕುರಿತು ವಿಷಾದ ವ್ಯಕ್ತಪಡಿಸಿರುವ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್, ಅಜರ್‌ಬೈಜಾನ್ ಅಧ್ಯಕ್ಷರಾದ ಇಲ್‌ಹ್ಯಾಮ್ ಅಲಿಯೆವ್ ಅವರ ಬಳಿ ಕ್ಷಮೆ ಯಾಚಿಸಿದ್ದಾರೆ ಎಂದು ವರದಿಗಳು ತಿಳಿಸಿವೆ.
ರಷ್ಯಾ ವಾಯುಪ್ರದೇಶದಲ್ಲಿ ಅಜರ್‌ಬೈಜಾನ್ ಏರ್ ಲೈನ್ಸ್‌ಗೆ ಸೇರಿದ ನಾಗರಿಕರ ವಿಮಾನ ಪತನಗೊಂಡಿದ್ದು ವ್ಯಾಪಕ ಚರ್ಚೆಗೆ ಕಾರಣವಾಗಿತ್ತು. ಅಕ್ಟೌ ನಗರದ ಬಳಿ ಲ್ಯಾಂಡಿಂಗ್ ಮಾಡಲು ಪ್ರಯತ್ನಿಸುತ್ತಿದ್ದ ಸಂದರ್ಭದಲ್ಲಿ ಉಕ್ರೇನ್ ಡ್ರೋನ್‌ಗಳು ಮತ್ತು ರಷ್ಯಾ ವಾಯು ಸೇನೆ ಪರಸ್ಪರ ದಾಳಿಯಲ್ಲಿ ತೊಡಗಿದ್ದವು, ಇದರಿಂದಾಗಿಯೇ ನಾಗರಿಕರಿದ್ದ ವಿಮಾನ ಪತನವಾಗಿತ್ತು ಎಂದು ವರದಿಯಾಗಿತ್ತು.

ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರು ರಷ್ಯಾದ ವಾಯುಪ್ರದೇಶದಲ್ಲಿ ಸಂಭವಿಸಿದ ದುರಂತಕ್ಕೆ ಕ್ಷಮೆಯಾಚನೆ ಮಾಡಿದ್ದು, ಮತ್ತೊಮ್ಮೆ ಮೃತಪಟ್ಟಿರುವ ವ್ಯಕ್ತಿಗಳ ಕುಟುಂಬಗಳಿಗೆ ಸಂತಾಪ ಸೂಚಿಸಿದ್ದಾರೆ. ಅಪಘಾತದಲ್ಲಿ ಗಾಯಗೊಂಡವರು ಬೇಗ ಗುಣಮುಖರಾಗಬೇಕು ಎಂದು ಪ್ರಾರ್ಥನೆ ಮಾಡಿದ್ದಾರೆ.
ಉಕ್ರೇನ್‌ಗೆ ಸೇರಿದ ಡ್ರೋನ್‌ಗಳು ರಷ್ಯಾದ ಹಲವು ಕಡೆಗಳಲ್ಲಿ ದಾಳಿ ಮಾಡುತ್ತಿವೆ ಎಂದು ವರದಿಯಾಗುತ್ತಿದ್ದಂತೆ ದಕ್ಷಿಣ ರಷ್ಯಾದಿಂದ ಅಜರ್ ಬೈಜಾನ್ ಏರ್ ಲೈನ್ಸ್‌ಗೆ ಸೇರಿದ ವಿಮಾನವನ್ನು ಬೇರೆಡೆ ತಿರುಗಿಸಲಾಯಿತು. ಕಜಕಿಸ್ತಾನದ ಅಕ್ಟೌ ನಗರದ ಬಳಿ ಕ್ಷಿಪಣಿ ದಾಳಿಗೆ ಸಿಲುಕಿದ ಜೆ2-8243 ವಿಮಾನ ಬುಧವಾರ ಅಪಘಾತಕ್ಕೀಡಾಗಿತ್ತು. ಘಟನೆಯಲ್ಲಿ 38 ಜನ ಸಾವನ್ನಪ್ಪಿದ್ದು, 29 ಜನ ತೀವ್ರವಾಗಿ ಗಾಯಗೊಂಡಿದ್ದಾರೆ.
ವೇಳಾಪಟ್ಟಿಯಂತೆ ಪ್ರಯಾಣ ಮಾಡುತ್ತಿದ್ದ ಅಜರ್ ಬೈಜಾನ್ ನಾಗರಿಕ ವಿಮಾನವು ಪದೇ ಒದೇ ಗ್ರೋಝ್ನಿ ವಿಮಾನ ನಿಲ್ದಾಣದಲ್ಲಿ ಪ್ರಯತ್ನ ಮಾಡುತ್ತಿದೆ ಎಂದು ಸಂಭಾಷಣೆಗಳು ತಿಳಿಸಿವೆ. ಈ ಸಂದರ್ಭದಲ್ಲಿ ಉಕ್ರೇನ್‌ನ ಡ್ರೋನ್‌ಗಳು ದಾಳಿ ಮಾಡಿದ್ದು ವಿಮಾನ ಪತನಕ್ಕೆ ಕಾರಣವಾಗಿದೆ ಎಂದು ಕ್ರೆಮ್ಲಿನ್ ವರದಿ ಮಾಡಿದೆ.
ವಿಮಾನಸೇವೆಗಳು ಸ್ಥಗಿತ
ಅಜರ್ ಬೈಜಾನ್ ವಿಮಾನ ಪತನಕ್ಕೆ ರಷ್ಯಾದ ವಿಮಾನ ವಿರೋಧಿ ಕ್ಷಿಪಣಿ ದಾಳಿ ಕಾರಣ ಎಂದು ಹಲವು ಪಾಶ್ಚಿಮಾತ್ಯ ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ವಿಶ್ವದ ಪ್ರಮುಖ ವಿಮಾನಯಾನ ಸಂಸ್ಥೆಗಳು ಘಟನೆಯಿಂದ ಆತಂಕಗೊಂಡಿದ್ದು ರಷ್ಯಾದ ಹಲವು ನಗರಗಳಿಗೆ ವಿಮಾನ ಸೇವೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿವೆ ಎಂದು ವರದಿಗಳು ತಿಳಿಸಿವೆ.
ರಷ್ಯಾ ಮತ್ತು ಉಕ್ರೇನ್ ನಡುವೆ ಯುದ್ಧ ಆರಂಭವಾಗಿ ಶನಿವಾರಕ್ಕೆ 1038 ದಿನಗಳು ಕಳೆದಿದೆ. ಪುಟ್ಟ ದೇಶ ಉಕ್ರೇನ್ ಯಾವುದೇ ಕಾರಣಕ್ಕೂ ರಷ್ಯಾಗೆ ಶರಣಾಗಲ್ಲ ಎಂದು ಹೋರಾಟ ಮಾಡುತ್ತಲೇ ಇದೆ. ಇತ್ತ ರಷ್ಯಾ ಕೂಡ ಪಟ್ಟು ಬಿಡದೆ ಉಕ್ರೇನ್ ಮೇಲೆ ಆಕ್ರಮಣ ಮಾಡುತ್ತಲೇ ಇದೆ. ಯುದ್ಧ ನಿಲ್ಲಿಸಲು ಹಲವು ರಾಷ್ಟ್ರಗಳ ನಾಯಕರು ಪ್ರಯತ್ನಪಟ್ಟರೂ ಯಾವುದೇ ಪ್ರಯೋಜನವಾಗಿಲ್ಲ.
ಇತ್ತೀಚೆಗೆ ಉಕ್ರೇನ್ ಡ್ರೋನ್ ಮೂಲಕ ರಷ್ಯಾದ ಮೇಲೆ ದಾಳಿ ಆರಂಭಿಸಿದ್ದು ಯುದ್ಧ ಮತ್ತೊಂದು ತಿರುವು ಪಡೆದುಕೊಂಡಿದೆ. ರಷ್ಯಾ ಕೂಡ ದಾಳಿಯನ್ನು ತೀವ್ರಗೊಳಿಸಿದೆ.












Click it and Unblock the Notifications