Axiom-4 Mission: ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣ ತಲುಪಿದ ಭಾರತೀಯ ವಿಜ್ಞಾನಿ ಶುಭಾಂಶು ಶುಕ್ಲಾ ಮತ್ತು ತಂಡ!
ಬಾಹ್ಯಾಕಾಶ ಲೋಕದಲ್ಲಿ ಮತ್ತೊಂದು ಇತಿಹಾಸ ಸೃಷ್ಟಿಯಾಗಿದ್ದು, ಭಾರತೀಯ ಗಗನಯಾತ್ರಿ ಶುಭಾಂಶು ಶುಕ್ಲಾ ಅವರ ನೇತೃತ್ವದ ತಂಡ ಮಹತ್ವದ ಸಾಧನೆ ಮಾಡಿದೆ. ಶತಕೋಟಿ ಭಾರತೀಯರಿಗೆ ಮಾದರಿಯಾಗಿ ಬಾಹ್ಯಾಕಾಶಕ್ಕೆ ಹಾರಿದ್ದ ಶುಭಾಂಶು ಶುಕ್ಲಾ ಅವರ ನೇತೃತ್ವದ ತಂಡ ಈಗ ಯಶಸ್ವಿಯಾಗಿ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣ ತಲುಪಿದೆ. ಈ ಮೂಲಕ ಸತತ 28 ಗಂಟೆಗೂ ಹೆಚ್ಚು ಸಮಯದ ಯಶಸ್ವಿ ಹಾರಾಟದ ನಂತರ ಭರ್ಜರಿ ಸಕ್ಸಸ್ ಸಿಕ್ಕಂತೆ ಆಗಿದೆ.
ಅಮೆರಿಕದ ಬಾಹ್ಯಾಕಾಶ ಸಂಸ್ಥೆ ನಾಸಾ ನೇತೃತ್ವದಲ್ಲಿ ಆಕ್ಸಿಯಮ್-4 ಮಿಷನ್ ಉಡಾವಣೆ ಮಾಡಲಾಗಿತ್ತು. ಆಕ್ಸಿಯಮ್-4 ಮಿಷನ್ ಫ್ಲೊರಿಡಾದಲ್ಲಿರುವ ನಾಸಾ ಸಂಸ್ಥೆಯ ಕೆನಡಿ ಬಾಹ್ಯಾಕಾಶ ಕೇಂದ್ರದಿಂದ ಉಡಾವಣೆ ಮಾಡಲಾಗಿತ್ತು. ಆಕ್ಸಿಯಮ್-4 ಮಿಷನ್ ಮಹತ್ವದ ಸಂಶೋಧನೆಗಳು ಸೇರಿದಂತೆ ಮನುಷ್ಯರು ಭವಿಷ್ಯದಲ್ಲಿ ಬಾಹ್ಯಾಶದಲ್ಲಿ ಬದುಕುವಂತೆ ಮಾಡಲು ವೈಜ್ಞಾನಿಕ ತನಿಖೆ ನಡೆಸಲಿದೆ. ಹೀಗಾಗಿಯೇ ಇಡೀ ಬಾಹ್ಯಾಕಾಶ ಲೋಕ ಈ ಯೋಜನೆಯ ಯಶಸ್ಸಿಗೆ ಪ್ರಾರ್ಥನೆ ಮಾಡುತ್ತಿತ್ತು.

ಬಾಹ್ಯಾಕಾಶ ನಿಲ್ದಾಣದಲ್ಲಿ 4 ವಿಜ್ಞಾನಿಗಳು
ಫ್ಲೊರಿಡಾದಲ್ಲಿ ಇರುವ ನಾಸಾ ಸಂಸ್ಥೆಯ ಕೆನಡಿ ಬಾಹ್ಯಾಕಾಶ ಕೇಂದ್ರದಿಂದ ನಿನ್ನೆ ಸ್ಥಳೀಯ ಕಾಲಮಾನ ಬೆಳ್ಳಂಬೆಳಗ್ಗೆ 2.31ಕ್ಕೆ ರಾಕೆಟ್ ಉಡಾವಣೆ ಮಾಡಿದ್ದರು. ಹೀಗೆ, ಉಡಾವಣೆ ಮಾಡಿದ ಸುಮಾರು 28 ಗಂಟೆ ನಂತರ ವಿಜ್ಞಾನಿಗಳು ಇದ್ದ ಕ್ಯಾಪ್ಸಲ್ ಡಾಕಿಂಗ್ ಆಗಿದೆ. ಈ ಮೂಲಕ ಭಾರತದ ಶುಕ್ಲಾ ಅವರು ಸೇರಿ, ಒಟ್ಟು 4 ವಿಜ್ಞಾನಿಗಳು ಇದೀಗ ಬಾಹ್ಯಾಕಾಶ ನಿಲ್ದಾಣ ಸೇರಿದ್ದಾರೆ. ಇನ್ನೂ ಹಲವು ದಿನಗಳ ಕಾಲ ಅಲ್ಲೇ ಇದ್ದು ವಿಜ್ಞಾನಿಗಳು ಸಂಶೋಧನೆ ನಡೆಸಲಿದ್ದಾರೆ.
ಭಾರತದ ಸಾಧನೆಗೆ ಜಗತ್ತಿನಾದ್ಯಂತ ಹೆಮ್ಮೆ!
ಬಾಹ್ಯಾಕಾಶ ಕ್ಷೇತ್ರದಲ್ಲಿ ಭಾರತ ಸಾಲು ಸಾಲು ಸಾಧನೆಗಳನ್ನು ಮಾಡುತ್ತಿದ್ದು, ಇಡೀ ಜಗತ್ತಿನಲ್ಲಿ ಭಾರತ ಮಾಡುತ್ತಿರುವ ಈ ಸಾಧನೆ ಬಗ್ಗೆ ಹೆಮ್ಮೆ ವ್ಯಕ್ತವಾಗಿದೆ. ಅದರಲ್ಲೂ ಬಾಹ್ಯಾಕಾಶ ಸಂಶೋಧನೆಗೆ ವಿಜ್ಞಾನಿ ಕಳುಹಿಸುವ ಹಂತಕ್ಕೆ ಭಾರತ ಮುಂದುವರಿದಿರುವುದು ಭವಿಷ್ಯವನ್ನು ಮತ್ತಷ್ಟು ಉಜ್ವಲಗೊಳಿಸಿದೆ ಎಂದೇ ಹೇಳಲಾಗುತ್ತಿದೆ. ಇದಕ್ಕೂ ಮೊದಲು ಭಾರತದ ಹೆಮ್ಮೆಯ ಇಸ್ರೋ ಸಂಸ್ಥೆ ಚಂದ್ರನ ಮೇಲೆ ನೌಕೆಯನ್ನ ಇಳಿಸಿ ಸಂಶೋಧನೆ ನಡೆಸಿತ್ತು. ಇದರ ಜೊತೆಗೆ ಸಾಲು ಸಾಲು ಸಾಧನೆ ಮಾಡಿದೆ ಇಸ್ರೋ ಸಂಸ್ಥೆ.












Click it and Unblock the Notifications