ಕೋವಿಡ್ 4 ನೇ ಅಲೆ: ಆಸ್ಟ್ರಿಯಾದಲ್ಲಿ ಲಾಕ್‌ಡೌನ್, ಲಸಿಕೆ ಕಡ್ಡಾಯ
ಆಸ್ಟ್ರೀಯಾ, ನವೆಂಬರ್ 19: ಆಸ್ಟ್ರಿಯಾದಲ್ಲಿ ಕೊರೊನಾ ವೈರಸ್ ಸೋಂಕು ಮತ್ತೆ ಹೆಚ್ಚಳವಾಗುತ್ತಿದ್ದು ಈ ನಿಟ್ಟಿನಲ್ಲಿ ರಾಷ್ಟ್ರದಲ್ಲಿ ಸಂಪೂರ್ಣ ಲಾಕ್‌ಡೌನ್ ಮಾಡಲಾಗುತ್ತಿದೆ. ಕೊರೊನಾ ವೈರಸ್ ಸೋಂಕಿನ ನಾಲ್ಕನೇ ಅಲೆಯು ಆಸ್ಟ್ರಿಯಾದಲ್ಲಿ ಕಾಣಿಸಿಕೊಂಡಿದ್ದು ಈ ಹಿನ್ನೆಲೆಯಿಂದಾಗಿ ಆಡಳಿತವು ಮತ್ತೆ ಲಾಕ್‌ಡೌನ್ ಮಾಡಿದೆ.
ಇಷ್ಟು ಮಾತ್ರವಲ್ಲದೇ ಆಸ್ಟ್ರೀಯಾದಲ್ಲಿ ಕೊರೊನಾ ವೈರಸ್ ಸೋಂಕಿನ ವಿರುದ್ಧ ಲಸಿಕೆಯನ್ನು ಪಡೆಯವುದನ್ನು ಕಡ್ಡಾಯಗೊಳಿಸಲಾಗಿದೆ. ಈ ಬಗ್ಗೆ ಶುಕ್ರವಾರ ಚಾನ್ಸೆಲರ್ ಅಲೆಕ್ಸಾಂಡರ್ ಸ್ಚಾಲೆನ್‌ಬರ್ಗ್ ಘೋಷಣೆ ಮಾಡಿದ್ದಾರೆ. ಈ ಮೂಲಕ ಕೋವಿಡ್ ನಾಲ್ಕನೇ ಅಲೆಯ ಹಿನ್ನೆಲೆಯಲ್ಲಿ ಲಾಕ್‌ಡೌನ್ ಘೋಷಣೆ ಮಾಡಿದ ಮೊದಲ ಯುರೋಪಿಯನ್ ದೇಶ ಆಸ್ಟ್ರಿಯಾ ಆಗಿದೆ.
ಮಹಿಳೆ ಸಾವಿನ ಬಳಿಕ ಅಸ್ಟ್ರಾಜೆನೆಕಾ ಕೊರೊನಾ ಲಸಿಕೆ ಬಳಕೆ ನಿಲ್ಲಿಸಿದ ಆಸ್ಟ್ರಿಯಾ
"ಆಸ್ಟ್ರಿಯಾದಲ್ಲಿ ಕೋವಿಡ್ ನಾಲ್ಕನೇ ಅಲೆಯ ಹಿನ್ನೆಲೆಯಿಂದಾಗಿ ಸೋಮವಾರದಿಂದ ಲಾಕ್‌ಡೌನ್ ಜಾರಿಗೆ ಬರಲಿದ್ದು, ಹತ್ತು ದಿನಗಳ ಕಾಲ ಲಾಕ್‌ಡೌನ್ ಇರಲಿದೆ. ಹಾಗೆಯೇ ಮುಂದಿನ ವರ್ಷ ಫೆಬ್ರವರಿ 1ರಿಂದ ಕೋವಿಡ್ ಲಸಿಕೆಯನ್ನು ಪಡೆಯುವುದು ಕಡ್ಡಾಯವಾಗಲಿದೆ," ಎಂದು ಚಾನ್ಸೆಲರ್ ಅಲೆಕ್ಸಾಂಡರ್ ಸ್ಚಾಲೆನ್‌ಬರ್ಗ್ ಹೇಳಿದ್ದಾರೆ.
ಆಸ್ಟ್ರಿಯಾವು ಸೋಮವಾರದಿಂದ ಕೋವಿಡ್ ಲಸಿಕೆಯನ್ನು ಪಡೆಯದ ಜನರಿಗೆ ಮಾತ್ರ ಲಾಕ್‌ಡೌನ್ ಅನ್ನು ಘೋಷಿಸಿತ್ತು. ಆದರೆ ಈಗ ಕೊರೊನಾ ವೈರಸ್ ಸೋಂಕು ಪ್ರಕರಣಗಳು ಏರಿಕೆ ಆಗುತ್ತಿರುವ ಹಿನ್ನೆಲೆಯಲ್ಲಿ ಲಾಕ್‌ಡೌನ್ ಅನ್ನು ಎಲ್ಲಾ ಜನರಿಗೂ ವಿಸ್ತಾರ ಮಾಡಲಾಗಿದೆ. "ಸಂಪೂರ್ಣ ಲಾಕ್‌ಡೌನ್ ಅನ್ನು ಘೋಷಣೆ ಮಾಡಲಾಗಿದೆ. ಇದು ಬಹಳ ಬೇಸರದ ಸಂಗತಿ," ಎಂದು ಆಸ್ಟ್ರಿಯಾ ಚಾನ್ಸೆಲರ್ ಅಲೆಕ್ಸಾಂಡರ್ ಸ್ಚಾಲೆನ್‌ಬರ್ಗ್ ತಿಳಿಸಿದ್ದಾರೆ.
ಲಸಿಕೆ ಪಡೆಯದವರ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ ಆಸ್ಟ್ರೀಯಾ ಚಾನ್ಸೆಲರ್
ಇನ್ನು ಇದೇ ಸಂದರ್ಭದಲ್ಲಿ ಆಸ್ಟ್ರಿಯಾ ಚಾನ್ಸೆಲರ್ ಅಲೆಕ್ಸಾಂಡರ್ ಸ್ಚಾಲೆನ್‌ಬರ್ಗ್ ಕೋವಿಡ್ ವಿರುದ್ಧ ಲಸಿಕೆಯನ್ನು ಪಡೆಯದ ಜನರ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ. "ಯಾರು ಕೋವಿಡ್ ಲಸಿಕೆಯನ್ನು ಪಡೆಯಲು ಹಿಂಜರಿಯುತ್ತಿದ್ದಾರೋ ಅವರು ಈ ದೇಶದ ಆರೋಗ್ಯ ವ್ಯವಸ್ಥೆಯ ಮೇಲೆ ದಾಳಿ ನಡೆಸುತ್ತಿದ್ದಾರೆ," ಎಂದು ಆರೋಪ ಮಾಡಿದ್ದಾರೆ. ಕಳೆದ ಒಂದು ವಾರದಲ್ಲಿ ಆಸ್ಟ್ರಿಯಾದಲ್ಲಿ ಹತ್ತು ಸಾವಿರಕ್ಕೂ ಅಧಿಕ ಕೊರೊನಾ ವೈರಸ್ ಸೋಂಕು ಪ್ರಕರಣಗಳು ದಾಖಲಾಗಿದೆ. ಕೋವಿಡ್ ಸೋಂಕಿತರು ಆಸ್ಪತ್ರೆಯಲ್ಲಿ ತುಂಬಿ ಹೋಗಿದ್ದು, ಆಸ್ಪತ್ರೆಯಲ್ಲಿ ಬಿಕ್ಕಟ್ಟಿನ ಸ್ಥಿತಿ ಉದ್ಭವವಾಗಿದೆ. ಕೋವಿಡ್ ಸಾವು ಪ್ರಕರಣಗಳು ಕೂಡಾ ಈಗ ಅಧಿಕವಾಗುತ್ತಿದೆ. ಈವರೆಗೆ ಆಸ್ಟ್ರೀಯಾದಲ್ಲಿ 11,525 ಮಂದಿ ಕೋವಿಡ್ ಸೋಂಕಿನಿಂದ ಸಾವನ್ನಪ್ಪಿದ್ದಾರೆ.
ಉಗ್ರರ ದಾಳಿ: ಭಾರತೀಯ ಪ್ರಜೆಗಳಿಗೆ ರಾಯಭಾರ ಕಚೇರಿ ಎಚ್ಚರಿಕೆ
ಆಸ್ಟ್ರಿಯಾದಲ್ಲಿ ಒಟ್ಟು 8.9 ಮಿಲಿಯನ್ ಜನ ಸಂಖ್ಯೆ ಇದ್ದು, ಕೋವಿಡ್ ಲಸಿಕೆಯನ್ನು ಬಹಳ ಕಡಿಮೆ ಜನರಿಗೆ ಹಾಕಲಾಗಿರುವ ಪಶ್ಚಿಮ ಯುರೋಪ್‌ನ ದೇಶಗಳಲ್ಲಿ ಇದೂ ಒಂದಾಗಿದೆ. ಒಟ್ಟು 65.7 ಜನರು ಸಂಪೂರ್ಣವಾಗಿ ಕೋವಿಡ್ ಲಸಿಕೆಯನ್ನು ಪಡೆದುಕೊಂಡಿದ್ದಾರೆ. ಈ ನಿಟ್ಟಿನಲ್ಲಿ ದೇಶದಲ್ಲಿ ಕೋವಿಡ್ ಲಸಿಕೆಯನ್ನು ಕಡ್ಡಾಯ ಮಾಡುವ ನಿರ್ಧಾರವನ್ನು ಆಸ್ಟ್ರಿಯಾ ಚಾನ್ಸೆಲರ್ ಅಲೆಕ್ಸಾಂಡರ್ ಸ್ಚಾಲೆನ್‌ಬರ್ಗ್ ಕೈಗೊಂಡಿದ್ದಾರೆ. ಇನ್ನು ಈ ನಡುವೆ ಬೇರೆ ಯುರೋಪಿಯನ್ ರಾಷ್ಟ್ರಗಳು ಕೂಡಾ ಕೋವಿಡ್ ನಿಯಮವನ್ನು ಇನ್ನಷ್ಟು ಕಠಿಣಗೊಳಿಸುತ್ತಿದೆ.
ಇನ್ನು ನಿನ್ನೆಯಷ್ಟೇ ಆಸ್ಟ್ರಿಯಾವು ಗಡಿಯಲ್ಲಿ ಕಠಿಣ ನಿರ್ಬಂಧವನ್ನು ಕೈಗೊಳ್ಳಲು ನಿರ್ಧಾರ ಮಾಡಿದ್ದರು. ಯಾರಲ್ಲಿ ಕೋವಿಡ್ ಲಸಿಕೆ ಹಾಕಿಸಿಕೊಂಡ ಪ್ರಮಾಣ ಪತ್ರ ಇರುತ್ತದೋ ಹಾಗೂ ಯಾರಲ್ಲಿ ಕೋವಿಡ್ ನೆಗೆಟಿವ್ ವರದಿ ಇರುತ್ತದೋ ಆ ಪ್ರಯಾಣಿಕರಿಗೆ ಮಾತ್ರ ದೇಶಕ್ಕೆ ಆಗಮಿಸಲು ಅವಕಾಶ ನೀಡಲು ಆಸ್ಟ್ರೀಯಾ ಮುಂದಾಗಿತ್ತು. ಇನ್ನು ಮುಂದೆ ಕೋವಿಡ್ ಆಂಟಿಜೆನ್ ಪರೀಕ್ಷೆಯನ್ನು ನಡೆಸಿದರೆ ಅವರಿಗೆ ಪ್ರವೇಶಕ್ಕೆ ಅನುಮತಿ ನೀಡದಿರಲು ಹಾಗೂ ಕೋವಿಡ್ ಪಿಸಿಆರ್ ನೆಗೆಟಿವ್ ವರದಿಯನ್ನು ಹೊಂದಿರುವವರಿಗೆ ಮಾತ್ರ ಪ್ರವೇಶಕ್ಕೆ ಅವಕಾಶ ನೀಡಲು ನಿರ್ಧಾರ ಮಾಡಿತ್ತು.
(ಒನ್‌ಇಂಡಿಯಾ ಸುದ್ದಿ)