ತ್ರಿಪುರಾದಲ್ಲಿ ಆಶ್ರಯ ಪಡೆದ ಬಾಂಗ್ಲಾ ಪ್ರಧಾನಿ, ಸೇನೆಯಿಂದ ಮಧ್ಯಂತರ ಸರ್ಕಾರ ರಚನೆ
ನವದೆಹಲಿ, ಆಗಸ್ಟ್ 05: ಮೀಸಲಾತಿ ವಿರೋಧಿ ಪ್ರತಿಭಟನೆ ಬಾಂಗ್ಲಾದೇಶದಲ್ಲಿ ಹಿಂಸಾಚಾರಕ್ಕೆ ಕಾರಣವಾಗಿದೆ. ಸೋಮವಾರ ಪ್ರಧಾನಿ ಶೇಖ್ ಹಸೀನಾ ರಾಜೀನಾಮೆ ನೀಡಿ, ದೇಶವನ್ನು ಬಿಟ್ಟು ಪರಾರಿಯಾಗಿದ್ದಾರೆ. ದೇಶದಲ್ಲಿ ಮಧ್ಯಂತರ ಸರ್ಕಾರ ರಚನೆ ಮಾಡಲು ಸೇನಾಪಡೆ ಮುಂದಾಗಿದ್ದು, ಜನರು ಪ್ರತಿಭಟನೆ ಕೈ ಬಿಟ್ಟು ಶಾಂತಿ ಕಾಪಾಡಬೇಕು ಎಂದು ಕರೆ ನೀಡಲಾಗಿದೆ.
ಸೋಮವಾರ ಬಾಂಗ್ಲಾದೇಶ ಪ್ರಧಾನಿ ಶೇಖ್ ಹಸೀನಾ ರಾಜೀನಾಮೆ ನೀಡಿದ್ದಾರೆ. ರಾಜಧಾನಿ ಢಾಕಾ ಬಿಟ್ಟು ಅವರು ಪರಾರಿಯಾಗಿದ್ದು, ಭಾರತದ ತ್ರಿಪುರಾದಲ್ಲಿ ಆಶ್ರಯ ಪಡೆದಿದ್ದಾರೆ. ಬಿಎಸ್ಎಫ್ ಸಿಬ್ಬಂದಿ ಕಣ್ಗಾವಲಿನಲ್ಲಿ ರಹಸ್ಯ ಸ್ಥಳಕ್ಕೆ ಅವರನ್ನು ಕರೆದುಕೊಂಡು ಹೋಗಲಾಗಿದೆ.

ಢಾಕಾ ಬಿಟ್ಟು ಹೆಲಿಕಾಪ್ಟರ್‌ನಲ್ಲಿ ಪರಾರಿಯಾಗಿದ್ದ ಶೇಖ್ ಹಸೀನಾ ಭಾರತಕ್ಕೆ ಬಂದು ಆಶ್ರಯ ಪಡೆದಿದ್ದಾರೆ. ಈ ರಾಜಕೀಯ ಬೆಳವಣಿಗೆ ಕುರಿತು ಬಿಎಸ್‌ಎಫ್ ಹಿರಿಯ ಅಧಿಕಾರಿಗಳು ಪ್ರಧಾನಿ ನರೇಂದ್ರ ಮೋದಿಗೆ ವಿವರಣೆ ನೀಡಿದ್ದಾರೆ. ಭಾರತ-ಬಾಂಗ್ಲಾದೇಶ ಗಡಿಯಲ್ಲಿ ಕಟ್ಟೆಚ್ಚರವನ್ನು ವಹಿಸುವಂತೆ ಸೂಚನೆ ನೀಡಲಾಗಿದೆ.
ಮಧ್ಯಂತರ ಸರ್ಕಾರ ರಚನೆ: ಪ್ರಧಾನಿ ಶೇಖ್ ಹಸೀನಾ ರಾಜೀನಾಮೆ ಬಳಿಕ ಬಾಂಗ್ಲಾದೇಶದಲ್ಲಿ ಮಧ್ಯಂತರ ಸರ್ಕಾರ ರಚನೆಯಾಗಲಿದೆ. ಈಗಾಗಲೇ ಈ ಕುರಿತು ಸೇನಾ ಮುಖ್ಯಸ್ಥ ವಾಕರ್-ಉಜ್ -ಜಮಾನ್ ಮಾಹಿತಿ ನೀಡಿದ್ದು, ಶೀಘ್ರವೇ ರಾಷ್ಟ್ರದ ಅಧ್ಯಕ್ಷರನ್ನು ಭೇಟಿ ಮಾಡಲಾಗುತ್ತದೆ ಎಂದು ಹೇಳಿದ್ದಾರೆ.
ಶೇಖ್ ಹಸೀನಾ ರಾಜೀನಾಮೆ ನೀಡಿ, ದೇಶ ಬಿಟ್ಟು ಪರಾರಿಯಾದ ಬಳಿಕ ಪ್ರತಿಭಟನಾ ನಿರತರು ಪ್ರಧಾನಿ ಕಛೇರಿಗೆ ಮುತ್ತಿಗೆ ಹಾಕಿದ್ದಾರೆ. ಸೇನಾ ಮುಖ್ಯಸ್ಥ ವಾಕರ್-ಉಜ್ -ಜಮಾನ್ ಜನರು ಪ್ರತಿಭಟನೆ ಕೈ ಬಿಟ್ಟು ಶಾಂತಿ ಕಾಪಾಡಿ ಎಂದು ದೇಶದ ಜನರಿಗೆ ಮಾಧ್ಯಮಗಳ ಮೂಲಕ ಕರೆ ನೀಡಿದ್ದಾರೆ.
ಬಾಂಗ್ಲಾದೇಶ ಸರ್ಕಾರ 1971ರಲ್ಲಿ ಬಾಂಗ್ಲಾ ಸ್ವಾತಂತ್ರ ಚಳವಳಿಯಲ್ಲಿ ಹೋರಾಡಿದವರ ಕುಟುಂಬದವರಿಗೆ ಸರ್ಕಾರಿ ಉದ್ಯೋಗದಲ್ಲಿ ಶೇ 30ರಷ್ಟು ಮೀಸಲಾತಿ ಕಲ್ಪಿಸುವ ಕಾನೂನು ರೂಪಿಸಲು ಮುಂದಾಗಿದೆ. ಇದರ ವಿರುದ್ಧ ದೇಶದಲ್ಲಿ ವಿದ್ಯಾರ್ಥಿಗಳು, ವಿವಿಧ ಸಂಘಟನೆಗಳ ಸದಸ್ಯರು ಪ್ರತಿಭಟನೆ ನಡೆಸುತ್ತಿದ್ದಾರೆ. ಈ ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿದ್ದು, ದೇಶದಲ್ಲಿ ಕರ್ಫ್ಯೂ ಜಾರಿಗೊಳಿಸಲಾಗಿದೆ.
ವಾಕರ್-ಉಜ್ -ಜಮಾನ್ ಮಾತನಾಡಿ, "ದೇಶದಲ್ಲಿ ಪರಿಸ್ಥಿತಿ ಸರಿ ಇಲ್ಲ. ನಾನು ವಿರೋಧ ಪಕ್ಷದ ನಾಯಕರನ್ನು ಭೇಟಿಯಾಗಿದ್ದೇನೆ. ದೇಶವನ್ನು ಮುನ್ನಡೆಸಲು ಮಧ್ಯಂತರ ಸರ್ಕಾರ ರಚನೆ ಮಾಡುತ್ತೇವೆ. ದೇಶದ ಜನರ ಜೀವ, ಆಸ್ತಿಯ ರಕ್ಷಣೆಯ ಜವಾಬ್ದಾರಿ ನಾನು ತೆಗೆದುಕೊಳ್ಳುತ್ತೇನೆ. ನಿಮ್ಮ ಕನಸನ್ನು ನನಸಾಗಿಸಲು ಪ್ರಯತ್ನ ನಡೆಸಲಾಗುತ್ತದೆ. ನಮಗೆ ಬೆಂಬಲಿಸಿ, ಪ್ರತಿಭಟನೆ ನಿಲ್ಲಿಸಿ, ನೀವು ನಮ್ಮೊಂದಿಗೆ ಇದ್ದರೆ ಸರಿಯಾದ ಮಾರ್ಗದಲ್ಲಿ ಮುಂದುವರೆಯಬಹುದು. ಹಿಂಸಾಚಾರದಿಂದ ನಾವು ಏನೂ ಸಾಧಿಸಲು ಸಾಧ್ಯವಿಲ್ಲ" ಎಂದರು.
76 ವರ್ಷದ ಶೇಖ್ ಹಸೀನಾ ಈ ವರ್ಷದ ಆರಂಭದಲ್ಲಿ 5ನೇ ಬಾರಿಗೆ ಬಾಂಗ್ಲಾದೇಶದ ಪ್ರಧಾನಿಯಾಗಿ ಅಧಿಕಾರ ಸ್ವೀಕಾರ ಮಾಡಿದ್ದರು. ಆದರೆ ಸೋಮವಾರ ಪ್ರಧಾನಿ ಸ್ಥಾನಕ್ಕೆ ರಾಜೀನಾಮೆ ನೀಡಿ, ಸೇನಾ ಹೆಲಿಕಾಪ್ಟರ್ ಮೂಲಕ ಢಾಕಾದಿಂದ ಸಹೋದರಿ ಶೇಖ್ ರೇಹನಾ ಜೊತೆ ಭಾರತಕ್ಕೆ ಆಗಮಿಸಿದರು.
ಪ್ರಧಾನಿ ರಾಜೀನಾಮೆ ನೀಡಿದ 45 ನಿಮಿಷಗಳಲ್ಲಿಯೇ ಸೇನಾ ಪಡೆ ದೇಶದ ಆಡಳಿತವನ್ನು ತನ್ನ ವಶಕ್ಕೆ ಪಡೆದುಕೊಂಡಿದೆ. ಭಾನುವಾರದಿಂದ ದೇಶದಲ್ಲಿ ಪ್ರತಿಭಟನೆ ಜೊತೆಗೆ ಹಿಂಸಾಚಾರ ನಡೆಯುತ್ತಿರುವ ಕಾರಣ ಅನಿರ್ದಿಷ್ಟ ಅವಧಿಗೆ ಕರ್ಫ್ಯೂ ಜಾರಿಗೊಳಿಸಿ ಆದೇಶಿಸಲಾಗಿತ್ತು.












Click it and Unblock the Notifications