ಜರ್ಮನಿಯಲ್ಲಿ ಹೆಚ್ಚುತ್ತಿದೆ ಇಸ್ಲಾಂ ವಿರೋಧಿ ಜಾಥಾ
ಬರ್ಲಿನ್, ಡಿ. 16: ಕೆಲವೇ ದಶಕಗಳ ಹಿಂದೆ ಹಿಟ್ಲರ್ ಎಂಬ ಮಾನವ ರೂಪಿ ರಾಕ್ಷಸನ ಆಡಳಿತದಲ್ಲಿ ಜನಾಂಗೀಯ ದ್ವೇಷದಿಂದ ನಲುಗಿಹೋಗಿದ್ದ ಜರ್ಮನಿ ಈಗ ಮತ್ತೆ ಅತ್ತ ಸಾಗುತ್ತಿದೆಯೇ..?
ಈ ಅನುಮಾನ ಹುಟ್ಟಲು ಕಾರಣವಾಗಿದ್ದು, ಜರ್ಮನಿಯಲ್ಲಿ ಈಗ ನಡೆಯುತ್ತಿರುವ ಇಸ್ಲಾಂ ವಿರೋಧಿ ಜಾಥಾ. ಆತಂಕಕಾರಿ ವಿಷಯವೆಂದರೆ ಈ ಜಾಥಾಕ್ಕೆ ದೇಶಾದ್ಯಂತ ಬೆಂಬಲ ಇನ್ನಷ್ಟು ಹೆಚ್ಚುತ್ತಿದೆ. ಇಸ್ಲಾಂ ಸೇರಿದಂತೆ ದೇಶದಲ್ಲಿರುವ ಇತರ ಅಲ್ಪಸಂಖ್ಯಾತರ ವಿರುದ್ಧ ಬಹುಸಂಖ್ಯಾತರ ಅಸಹನೆ ಹೆಚ್ಚುತ್ತಿದೆ. ದೇಶದ ವಲಸೆ ನೀತಿಯನ್ನು ಇನ್ನಷ್ಟು ಕಠಿಣಗೊಳಿಸಬೇಕೆಂಬ ಆಗ್ರಹ ಹೆಚ್ಚುತ್ತಿದೆ.
ಡ್ರೆಸ್ಡೆನ್ ನಗರದಲ್ಲಿ ಪ್ರತಿ ಸೋಮವಾರ ಇಸ್ಲಾಂ ವಿರೋಧಿ ಜಾಥಾ ಏರ್ಪಡಿಸಲಾಗುತ್ತಿದೆ. ದಿನ ಕಳೆದಂತೆ ಈ ಜಾಥಾ ಹೆಚ್ಚು ಜನಪ್ರಿಯತೆ ಗಳಿಸುತ್ತಿರುವ ಹಿನ್ನೆಲೆಯಲ್ಲಿ ಜರ್ಮನಿ ಛಾನ್ಸಲರ್ ಏಂಜೆಲಾ ಮರ್ಕೆಲ್ ಇಬ್ಬಂದಿ ಸ್ಥಿತಿ ಎದುರಿಸುತ್ತಿದ್ದಾರೆ. ಅವರ ಈ ಧೋರಣೆ ರಾಜಕೀಯ ವಲಯದಲ್ಲಿ ಅವರ ಸ್ನೇಹಿತರು ಹಾಗೂ ಪ್ರತಿಪಕ್ಷಗಳಿಂದ ತೀವ್ರ ಟೀಕೆಗೆ ಒಳಗಾಗಿದೆ.

ದೇಶದಲ್ಲಿ ತ್ವೇಷಮಯ ವಾತಾವರಣ : ಮುಂದಿನ ಸೋಮವಾರ ನಡೆಯಲಿರುವ ನಡಿಗೆಯಲ್ಲಿ ಕನಿಷ್ಠ ಒಂದು ಸಾವಿರ ಜನ ಭಾಗವಹಿಸಬಹುದೆಂದು ನಿರೀಕ್ಷಿಸಲಾಗಿದೆ. ಆದರೆ, ಈ ನಡಿಗೆಯಿಂದ ದೇಶದಲ್ಲಿ ಪರಸ್ಪರ ತ್ವೇಷಮಯ ವಾತಾವರಣ ನಿರ್ಮಾಣವಾಗಲಿದೆ ಎಂದು ಮರ್ಕೆಲ್ ಅವರ ಭದ್ರತಾ ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ.
"ದೇಶದಲ್ಲಿ ಈಗಾಗಲೇ ಪರಸ್ಪರ ದ್ವೇಷಿಸುವ ಸ್ಥಿತಿ ಹೆಚ್ಚುತ್ತಿದೆ. ಇದಕ್ಕೆ ಸೋಮವಾರದ ಇಸ್ಲಾಂ ವಿರೋಧಿ ನಡಿಗೆಯೇ ಕಾರಣವೆಂದು ದೇಶದ ಅನೇಕ ಪತ್ರಿಕೆಗಳು ಆರೋಪಿಸಿವೆ" ಎಂದು ಪೊಲೀಸ್ ಮುಖ್ಯಸ್ಥ ಹೋಲ್ಗರ್ ಮುವೆಕ್ ತಿಳಿಸಿದ್ದಾರೆ.
ದೇಶದಲ್ಲಿ ಮುಸ್ಲಿಂ ವಿರೋಧಿ ಮನೋಭಾವನೆ ಹೆಚ್ಚುತ್ತಿದೆ. ಸಲಫಿಸ್ಟ್ ಮುಸ್ಲಿಮರ ವಿರುದ್ಧ ಹೋರಾಡಲು ಹಾಗೂ ಜ್ಯೂಗಳ ಮೇಲೆ ದಾಳಿ ನಡೆಸಲು ಬಲಪಂಥೀಯರು ಒಂದಾಗುತ್ತಿದ್ದಾರೆ. ಆದರೆ, ದೇಶದಲ್ಲಿ ಮುಸ್ಲಿಮರು ಸೇರಿದಂತೆ ಇನ್ಯಾವುದೇ ಅಲ್ಪಸಂಖ್ಯಾತರ ವಿರುದ್ಧ ದ್ವೇಷ ಸಾಧನೆಗೆ ಅವಕಾಶವಿಲ್ಲ ಎಂದು ಹೋಲ್ಗರ್ ಸ್ಪಷ್ಟಪಡಿಸಿದ್ದಾರೆ.
ನಡಿಗೆ ವಿರೋಧಿ ಪ್ರತಿಭಟನೆ : ಗ್ರೀನ್ಸ್ ಮುಖಂಡರಾದ ಸೆಮ್ ಓಡೆಮಿರ್ ಅವರು ಡೆಸ್ಡೆನ್ ನಗರದಲ್ಲಿ ಇಸ್ಲಾಂ ವಿರೋಧಿ ನಡಿಗೆಯನ್ನು ವಿರೋಧಿಸಿ ಪ್ರತಿಭಟನೆ ಹಮ್ಮಿಕೊಂಡಿದ್ದಾರೆ. ಜರ್ಮನಿಯಲ್ಲಿ ವಲಸಿಗರಿಗೆ ರಕ್ಷಣೆಯ ಭರವಸೆ ನೀಡಬೇಕೆಂದು ಆಗ್ರಹಿಸಿದ್ದಾರೆ.












Click it and Unblock the Notifications