ಕೆನಡಾ ರಾಜತಾಂತ್ರಿಕ ಅಧಿಕಾರಿಗೆ ಭಾರತದಿಂದ ಗೇಟ್‌ಪಾಸ್- ಎರಡೂ ದೇಶಗಳ ಸಂಬಂಧಕ್ಕೆ ಕೊಳ್ಳಿ ಇಡುತ್ತಿದೆ ಖಲಿಸ್ತಾನ ಬೆಂಕಿ
ನವದೆಹಲಿ, ಸೆಪ್ಟೆಂಬರ್ 19: ಖಲಿಸ್ತಾನಿ ಭಯೋತ್ಪಾದಕ ಹರ್ದೀಪ್ ಸಿಂಗ್ ನಿಜ್ಜಾರ್ ಹತ್ಯೆಗೆ ಸಂಬಂಧಿಸಿದಂತೆ ಕೆನಡಾ ಪ್ರಧಾನಿ ಜಸ್ಟಿನ್ ಟ್ರುಡೊ ನೀಡಿರುವ ಹೇಳಿಕೆಯು ಎರಡೂ ದೇಶಗಳ ನಡುವಿನ ಸಂಘರ್ಷಕ್ಕೆ ಕಾರಣವಾಗಿದೆ. ನಿಜ್ಜಾರ್ ಹತ್ಯೆಯ ಹಿಂದೆ ಭಾರತ ಸರ್ಕಾರದ ಕೈವಾಡ ಇರಬಹುದು ಎಂದು ಟ್ರುಡೊ ಹೇಳಿಕೆ ನೀಡಿದ್ದಾರೆ. ಈ ಬೆಳವಣಿಗೆಯ ನಡುವೆಯೇ ಕೆನಡಾದಲ್ಲಿದ್ದ ಭಾರತದ ರಾಜತಾಂತ್ರಿಕ ಅಧಿಕಾರಿಯನ್ನು ಕೆನಡಾ ಉಚ್ಛಾಟಿಸಿತ್ತು. ಇದಕ್ಕೆ ನೇರ ಪ್ರಕ್ರಿಯೆ ನೀಡಿರುವ ಭಾರತ ಸರ್ಕಾರ ಕೆನಡಾ ರಾಜತಾಂತ್ರಿಕ ಅಧಿಕಾರಿಗೆ ಗೇಟ್‌ಪಾಸ್ ನೀಡಿದೆ.
ಕೆನಾಡದ ಸಿಖ್ ಸಾಂಸ್ಕೃತಿಕ ಕೇಂದ್ರದ ಹೊರಗೆ ಜೂನ್ 18 ರಂದು ನಿಜ್ಜಾರ್‌ನನ್ನು ಗುಂಡಿಕ್ಕಿ ಕೊಂದ ನಂತರ ದೇಶದ ಗುಪ್ತಚರ ಸಂಸ್ಥೆಗಳು ತನಿಖೆ ನಡೆಸುತ್ತಿವೆ. ಇದರ ಹಿಂದೆ ಭಾರತ ಸರ್ಕಾರದ ಕೈವಾಡ ಇರಬಹುದು ಎಂಬ ಶಂಕೆ ವ್ಯಕ್ತವಾಗಿದೆ ಎಂದು ಟ್ರಡೊ ಹೇಳಿದ್ದಾರೆ.

ಇದಕ್ಕೆ ಆಕ್ರೋಶ ವ್ಯಕ್ತಪಡಿಸಿರುವ ಭಾರತ ಸರ್ಕಾರ ಈ ಆರೋಪಗಳು ನಂಬಲರ್ಹವಲ್ಲ. ಇಂತಹ ಆರೋಪಗಳಿಂದ ಎರಡೂ ದೇಶಗಳ ಸಂಬಂಧ ಹದಗೆಡುತ್ತದೆ ಎಂದು ಹೇಳಿತ್ತು.
ಕೆನಡಾ ಅಧಿಕಾರಿ ಉಚ್ಛಾಟನೆ ಬಗ್ಗೆ ಹೇಳಿಕೆ ನೀಡಿರುವ ವಿದೇಶಾಂಗ ಸಚಿವಾಲಯ, 'ಭಾರತದಲ್ಲಿರುವ ಕೆನಡಾದ ಹೈಕಮಿಷನರ್ ಅವರನ್ನು ಇಂದು ಕರೆಸಲಾಯಿತು. ಕೆನಡಾದ ಹಿರಿಯ ರಾಜತಾಂತ್ರಿಕರನ್ನು ಹೊರಹಾಕುವ ಭಾರತ ಸರ್ಕಾರದ ನಿರ್ಧಾರದ ಬಗ್ಗೆ ತಿಳಿಸಲಾಗಿದೆ. ಸಂಬಂಧಪಟ್ಟ ರಾಜತಾಂತ್ರಿಕರಿಗೆ ಮುಂದಿನ ಐದು ದಿನಗಳಲ್ಲಿ ಭಾರತವನ್ನು ತೊರೆಯುವಂತೆ ಸೂಚಿಸಲಾಗಿದೆ' ಎಂದು ತಿಳಿಸಿದೆ.
ನಮ್ಮ ಆಂತರಿಕ ವಿಷಯಗಳಲ್ಲಿ ಕೆನಡಾದ ರಾಜತಾಂತ್ರಿಕರ ಹಸ್ತಕ್ಷೇಪ ಮಾಡುತ್ತಿದೆ. ಭಾರತ ವಿರೋಧಿ ಚಟುವಟಿಕೆಗಳಲ್ಲಿ ಅವರು ಪಾಲ್ಗೊಳ್ಳುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಭಾರತ ಸರ್ಕಾರ ಕಠಿಣ ನಿರ್ಧಾರ ತೆಗೆದುಕೊಂಡಿದೆ ಎಂದು ವಿಶಾಂಗ ಸಚಿವಾಲಯ ಹೇಳಿಕೆ ನೀಡಿದೆ..
ಗೇಟ್‌ಪಾಸ್ ನೀಡಿರುವ ರಾಜತಾಂತ್ರಿಕರ ಹೆಸರುಗಳನ್ನು ಇನ್ನೂ ಬಹಿರಂಗಪಡಿಸಿಲ್ಲ.
ಭಾರತದಲ್ಲಿರುವ ಕೆನಡಾದ ಹೈಕಮಿಷನರ್ ಕ್ಯಾಮೆರಾನ್ ಮ್ಯಾಕೆ ಅವರನ್ನು ವಿದೇಶಾಂಗ ವ್ಯವಹಾರಗಳ ಸಚಿವಾಲಯ ಕರೆಸಿ ಮಾತನಾಡಿದೆ ಎಂದು ವರದಿಯಾಗಿದೆ.
ಕೆನಡಾದ ಸರ್ರೆಯಲ್ಲಿರುವ ಗುರುನಾನಕ್ ಸಿಖ್ ಗುರುದ್ವಾರ ಸಾಹಿಬ್‌ನ ಮುಖ್ಯಸ್ಥ ನಿಜ್ಜರ್‌ನನ್ನು ಈ ವರ್ಷದ ಜೂನ್‌ನಲ್ಲಿ ಹತ್ಯೆ ಮಾಡಲಾಯಿತು. ಆತ ಪ್ರತ್ಯೇಕತಾವಾದಿ ಸಂಘಟನೆ ಖಲಿಸ್ತಾನ್ ಟೈಗರ್ ಫೋರ್ಸ್ (ಕೆಟಿಎಫ್) ಮುಖ್ಯಸ್ಥರಾಗಿದ್ದರು. 46 ವರ್ಷದ ನಿಜ್ಜರ್‌ನನ್ನು ಗುರುದ್ವಾರದ ಆವರಣದಲ್ಲಿ ಇಬ್ಬರು ಅಪರಿಚಿತ ವ್ಯಕ್ತಿಗಳು ಗುಂಡಿಕ್ಕಿ ಕೊಂದಿದ್ದರು.












Click it and Unblock the Notifications