ರಷ್ಯಾಗೆ ಬೆಂಬಲಿಸಿದ್ರೆ ಹುಷಾರ್; ಚೀನಾಗೆ ಎಚ್ಚರಿಕೆ ನೀಡಿದ ಯುಎಸ್
ಕೀವ್, ಮಾರ್ಚ್ 14: ಉಕ್ರೇನ್ ನೆಲದಲ್ಲಿ ರಷ್ಯಾ ನಡೆಸುತ್ತಿರುವ ಯುದ್ಧವು ಸೋಮವಾರ 19ನೇ ದಿನಕ್ಕೆ ಕಾಲಿಟ್ಟಿದೆ. ಇದರ ಮಧ್ಯೆ ರಷ್ಯಾಗೆ ನೆರವು ನೀಡಿದರೆ ಹುಷಾರ್ ಎಂದು ಚೀನಾಗೆ ಯುನೈಟೆಡೆ ಸ್ಟೇಟ್ಸ್(ಯುಎಸ್) ಎಚ್ಚರಿಕೆ ಸಂದೇಶ ರವಾನಿಸಿದೆ.
ಉಕ್ರೇನ್ ರಾಜಧಾನಿ ಕೀವ್ ನಗರವನ್ನು ವಶಕ್ಕೆ ಪಡೆದುಕೊಳ್ಳುವ ನಿಟ್ಟಿನಲ್ಲಿ ರಷ್ಯಾ ಸೇನೆಪಡೆ ತಮ್ಮ ಕಾರ್ಯಾಚರಣೆ ಅನ್ನು ಮುಂದುವರಿಸಿವೆ. ಯುದ್ಧದಿಂದ ಹಾನಿಗೊಳಗಾದ ಪ್ರದೇಶದಲ್ಲಿ ರಾತ್ರಿಯಿಡೀ ವಾಯುದಾಳಿ ಮತ್ತು ಸೈರನ್‌ಗಳ ಸದ್ದು ಕೇಳಿ ಬರುತ್ತಿದೆ. ಇದರ ಮಧ್ಯೆ ಸಾವು-ನೋವುಗಳ ಸಂಖ್ಯೆ ಹೆಚ್ಚಾಗಿರುವುದರ ಬಗ್ಗೆ ವಿಶ್ವಸಂಸ್ಥೆಯು ಹೇಳಿದೆ.
ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಮತ್ತೊಂದು ವಿಡಿಯೋವನ್ನು ಪೋಸ್ಟ್ ಮಾಡುವ ಮೂಲಕ ನೈತಿಕ ಸ್ಥೈರ್ಯವನ್ನು ತುಂಬುವ ಕೆಲಸ ಮಾಡಿದ್ದಾರೆ. "ಆಕ್ರಮಣಕಾರರ ವಿರುದ್ಧ ದೇಶವನ್ನು ಒಟ್ಟುಗೂಡಿಸಲು ಮತ್ತು ರಕ್ಷಿಸಲು ದೇಶವಾಸಿಗಳಿಗೆ ಕರೆ ನೀಡಿದ್ದಾರೆ. "ಪರಸ್ಪರ ಸಹಾಯ ಮಾಡಿ! ಪರಸ್ಪರ ಬೆಂಬಲ ನೀಡಿ! ರಕ್ಷಣೆಯನ್ನು ಬೆಂಬಲಿಸಿ ಮತ್ತು ರಾಜ್ಯವನ್ನು ರಕ್ಷಿಸಿ, ಒಟ್ಟಾಗಿ ನಾವು ಗೆಲ್ಲುತ್ತೇವೆ ಎಂದು ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಹೇಳಿದ್ದಾರೆ.

ಕೀವ್ ನಗರ ವಶಪಡಿಸಿಕೊಳ್ಳಲು ಕಾರ್ಯಾಚರಣೆ
ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಸೇನಾ ಪಡೆಗಳು ಸೋಮವಾರ ಕೀವ್‌ನಲ್ಲಿ ತಮ್ಮ ದಾಳಿಯನ್ನು ಹೆಚ್ಚಿಸಿವೆ. ಇರ್ಪಿನ್, ಬುಚಾ ಉಪನಗರಗಳು ಮತ್ತು ಹಾಸ್ಟೊಮೆಲ್‌ನ ಹೊರಗಿನ ಪಟ್ಟಣಗಳ ಮೇಲೆ ಫಿರಂಗಿ ಮತ್ತು ಶೆಲ್‌ಗಳ ದಾಳಿ ನಡೆಸಲಾಗುತ್ತಿದೆ. ರಷ್ಯಾದ ಪಡೆಗಳು ಕೀವ್‌ನಲ್ಲಿರುವ ಏರೋಪ್ಲೇನ್ ಫ್ಯಾಕ್ಟರಿಯನ್ನು ಹೊಡೆದುರುಳಿಸಿದ್ದು, ದಾಳಿಯಲ್ಲಿ ಇಬ್ಬರು ಪ್ರಾಣ ಬಿಟ್ಟಿದ್ದರೆ, ಏಳು ಮಂದಿ ಗಾಯಗೊಂಡಿದ್ದಾರೆ ಎಂದು ಉಕ್ರೇನಿಯನ್ ಅಧಿಕಾರಿಗಳು ತಿಳಿಸಿದ್ದಾರೆ. ಉತ್ತರ ಒಬೊಲೊನ್ಸ್ಕಿ ಜಿಲ್ಲೆಯಲ್ಲಿ ಒಂಬತ್ತು ಅಂತಸ್ತಿನ ಅಪಾರ್ಟ್‌ಮೆಂಟ್ ಕಟ್ಟಡಕ್ಕೆ ರಷ್ಯಾದ ಫಿರಂಗಿ ಅಪ್ಪಳಿಸಿದೆ.

ಅಮೆರಿಕಾದಿಂದ ಚೀನಾಗೆ ಎಚ್ಚರಿಕೆ ಸಂದೇಶ ರವಾನೆ
ರಷ್ಯಾದ ಆರ್ಥಿಕತೆಯನ್ನು ಬಗ್ಗು ಬಡಿಯುವ ನಿಟ್ಟಿನಲ್ಲಿ ಜಾಗತಿಕ ಮಟ್ಟದಲ್ಲಿ ನಿರ್ಬಂಧಗಳನ್ನು ಹೇರಲಾಗುತ್ತಿದೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ರಷ್ಯಾ ಎದುರಿಸುತ್ತಿರುವ ನಿರ್ಬಂಧ ತಡೆಯುವ ನಿಟ್ಟಿನಲ್ಲಿ ಚೀನಾ ಬೆಂಬಲ ನೀಡಬಾರದು. ಮಾಸ್ಕೋಗೆ ಚೀನಾ ಯಾವುದೇ ಕಾರಣಕ್ಕೂ ಮಿಲಿಟರಿ ನೆರವು ನೀಡಬಾರದು ಎಂದು ಚೀನಾಗೆ ಅಮೆರಿಕಾ ಎಚ್ಚರಿಕೆ ನೀಡಿದರು.
ಚೀನಾದ ವಿದೇಶಾಂಗ ಸಚಿವಾಲಯದ ವಕ್ತಾರರು, "ಯುಎಸ್ ಯುಕ್ರೇನ್ ವಿಷಯದಲ್ಲಿ ಚೀನಾವನ್ನು ಗುರಿಯಾಗಿಸಿಕೊಂಡು ದುರುದ್ದೇಶಪೂರಿತ ಉದ್ದೇಶದಿಂದ ತಪ್ಪು ಮಾಹಿತಿಯನ್ನು ಹರಡುತ್ತಿದೆ," ಎಂದು ಹೇಳಿದ್ದಾರೆ.

ರಷ್ಯಾ ದಾಳಿ ವೇಳೆ 2500ಕ್ಕೂ ಹೆಚ್ಚು ನಾಗರಿಕರು ಬಲಿ
ಫೆಬ್ರವರಿ 24ರಂದು ರಷ್ಯಾದ ಆಕ್ರಮಣ ಪ್ರಾರಂಭವಾದಾಗಿನಿಂದ ಉಕ್ರೇನ್‌ನಲ್ಲಿ 90 ಮಕ್ಕಳು ಸೇರಿದಂತೆ ಕನಿಷ್ಠ 2500ಕ್ಕಿಂತ ಹೆಚ್ಚು ನಾಗರಿಕರು ಸಾವನ್ನಪ್ಪಿದ್ದಾರೆ ಎಂದು ತಿಳಿದು ಬಂದಿದೆ. ರಷ್ಯಾ ಪಡೆಗಳು ಖಾರ್ಕಿವ್ ಮತ್ತು ಮರಿಯುಪೋಲ್‌ನಲ್ಲಿ ನಡೆಸುತ್ತಿರುವ ನಿರಂತರ ದಾಳಿಯ ಕುರಿತು ವರದಿಗಳು ವಿಳಂಬವಾಗುತ್ತಿವೆ.
ರಷ್ಯಾದ ಪಡೆಗಳಿಂದ ಸುತ್ತುವರಿದ ನಗರದಿಂದ ನಾಗರಿಕರನ್ನು ಸ್ಥಳಾಂತರಿಸಲು "ಮಾನವೀಯ ಕಾರಿಡಾರ್" ಅನ್ನು ವ್ಯವಸ್ಥೆ ಮಾಡುವ ಮೊದಲು ಯಶಸ್ವಿ ಆಯಿತು. 160ಕ್ಕೂ ಹೆಚ್ಚು ವಾಹನಗಳಲ್ಲಿ ಮರಿಯುಪೋಲ್‌ನಿಂದ ಜನರನ್ನು ಸ್ಥಳಾಂತರಿಸಲಾಗಿದೆ ಎಂದು ಸ್ಥಳೀಯ ಅಧಿಕಾರಿಗಳು ತಿಳಿಸಿದ್ದಾರೆ. ಮರಿಯುಪೋಲ್ ನಡೆಯುತ್ತಿರುವ ಯುದ್ಧದಲ್ಲಿ ಮಾನವನ ಅತಿ ದೊಡ್ಡ ಸಂಕಟಗಳಿಗೆ ಸಾಕ್ಷಿಯಾಗಿದೆ. ಸೋಮವಾರ ಉಕ್ರೇನ್‌ನ ಉತ್ತರ ರಿವ್ನೆ ಪ್ರದೇಶದ ಟಿವಿ ಗೋಪುರದ ಮೇಲೆ ನಡೆದ ವೈಮಾನಿಕ ದಾಳಿಯಲ್ಲಿ ಕನಿಷ್ಠ ಒಂಬತ್ತು ಜನರು ಸಾವನ್ನಪ್ಪಿದ್ದಾರೆ ಮತ್ತು ಒಂಬತ್ತು ಮಂದಿ ಗಾಯಗೊಂಡಿದ್ದಾರೆ ಎಂದು ಗವರ್ನರ್ ವಿಟಾಲಿ ಕೊವಲ್ ಹೇಳಿದ್ದಾರೆ.

ಉಕ್ರೇನ್ ಮತ್ತು ರಷ್ಯಾ ಸಂಧಾನ ಚರ್ಚೆ
ಉಕ್ರೇನ್ ಮತ್ತು ರಷ್ಯಾದ ಪ್ರತಿನಿಧಿಗಳು ನಡೆಯುತ್ತಿರುವ ಯುದ್ಧವನ್ನು ಅಂತ್ಯಗೊಳಿಸುವ ನಿಟ್ಟಿನಲ್ಲಿ ಸೋಮವಾರ ಮತ್ತೊಂದು ಸುತ್ತಿನ ಮಾತುಕತೆ ನಡೆಸಲಾಯಿತು. ಆದರೆ ಉಭಯ ರಾಷ್ಟ್ರಗಳ ವಿದೇಶಾಂಗ ಸಚಿವರ ನಡುವಿನ ನಿಯೋಗ ಮಟ್ಟದಲ್ಲಿ ನಡೆಸಿದ ಮಾತುಕತೆಗಳು ಈವರೆಗೆ ಯಾವುದೇ ರೀತಿಯ ಅನುಕೂಲಕರ ಫಲಿತಾಂಶವನ್ನು ನೀಡಿಲ್ಲ. ಉಕ್ರೇನಿಯನ್ ಅಧ್ಯಕ್ಷೀಯ ಆಡಳಿತದ ಸಲಹೆಗಾರ ಮೈಖೈಲೊ ಪೊಡೊಲಿಯಾಕ್, ನಿಯೋಗಗಳು ಷರತ್ತುಗಳನ್ನು ಸ್ಪಷ್ಟಪಡಿಸಲು ವಿರಾಮ ತೆಗೆದುಕೊಂಡಿವೆ ಎಂದರು. ನಾಳೆ (ಮಾರ್ಚ್ 15) ಮತ್ತೆ ಮಾತುಕತೆ ಪುನರಾರಂಭವಾಗಲಿದೆ.












Click it and Unblock the Notifications