Adani Group: ಪೆಟ್ರೋಕೆಮಿಕಲ್ ಉದ್ಯಮಕ್ಕಾಗಿ ಥೈಲ್ಯಾಂಡ್‌ನ ಇಂಡೋರಮಾ ಜೊತೆ ಅದಾನಿ ಗ್ರೂಪ್ ಪಾಲುದಾರಿಕೆ
ಗೌತಮ್ ಅದಾನಿ ಒಡೆತನದ ಅದಾನಿ ಸಮೂಹವು ಥಾಯ್ಲೆಂಡ್‌ನ ಇಂಡೋರಮಾ ರಿಸೋರ್ಸಸ್ ಲಿಮಿಟೆಡ್‌ನೊಂದಿಗೆ ಪೆಟ್ರೋಕೆಮಿಕಲ್ ವ್ಯವಹಾರಕ್ಕೆ ಕೈಹಾಕಿದೆ. ತಮ್ಮ ಪೆಟ್ರೋಕೆಮಿಕಲ್ ವಲಯದ ವಿಸ್ತರಣೆಗಾಗಿ ಅದಾನಿ ಸಮೂಹವು ಈ ಪಾಲುದಾರಿಕೆ ಮಾಡಿಕೊಂಡಿದೆ. ಇದರಿಂದಾಗಿ ಅದಾನಿ ಸಮೂಹವು ಮತ್ತಷ್ಟು ವಿಸ್ತರಣೆಗೊಳ್ಳಲಿದೆ ಎಂದು ಹೇಳಲಾಗುತ್ತಿದೆ.
ಅದಾನಿ ಎಂಟರ್‌ಪ್ರೈಸಸ್ ಲಿಮಿಟೆಡ್‌ನ ಅಂಗಸಂಸ್ಥೆಯಾದ ಅದಾನಿ ಪೆಟ್ರೋಕೆಮಿಕಲ್ಸ್ ಲಿಮಿಟೆಡ್, ಜಾಯಿಂಟ್ ವೆಂಚರ್ ಕಂಪನಿಯಾದ ವ್ಯಾಲರ್ ಪೆಟ್ರೋಕೆಮಿಕಲ್ಸ್ ಲಿಮಿಟೆಡ್ (ವಿಪಿಎಲ್) ಹಾಗೂ ಥೈಲ್ಯಾಂಡ್‌ನ ಇಂಡೋರಮಾ ರಿಸೋರ್ಸಸ್ ಲಿಮಿಟೆಡ್‌ನೊಂದಿಗೆ ಸಂಯೋಜನೆಗೊಳ್ಳುವ ಪ್ರಕ್ರಿಯೆಯನ್ನು ಈಗಾಗಲೇ ಪೂರ್ಣಗೊಳಿಸಿದೆ ಎಂದು ಅದಾನಿ ಎಂಟರ್‌ಪ್ರೈಸಸ್ ಮಾಹಿತಿ ನೀಡಿದೆ.

ಅದಾನಿ ಪೆಟ್ರೋಕೆಮಿಕಲ್ಸ್ ಮತ್ತು ಇಂಡೋರಮಾ ಜಂಟಿ ಉದ್ಯಮದಲ್ಲಿ ತಲಾ ಶೇ 50ರಷ್ಟು ಪಾಲನ್ನು ಹೊಂದಲಿವೆ. ವ್ಯಾಲರ್ ಪೆಟ್ರೋಕೆಮಿಕಲ್ಸ್ ಲಿಮಿಟೆಡ್ ಅನ್ನು ತಮ್ಮ ರೀಫೈನರಿ, ಪೆಟ್ರೋಕೆಮಿಕಲ್ ಮತ್ತು ರಾಸಾಯನಿಕ ವ್ಯವಹಾರವನ್ನು ಸ್ಥಾಪಿಸುವ ಉದ್ದೇಶದಿಂದ ಸಂಯೋಜಿಸಲಾಗಿದೆ ಎಂದು ಹೇಳಿಕೊಂಡಿದೆ.
ಈ ಪಾಲುದಾರಿಕೆಯ ಅದಾನಿ ಪೆಟ್ರೋಕೆಮಿಕಲ್ಸ್ ಸಂಸ್ಕರಣಾಗಾರಗಳು (ರೀಫೈನರಿ), ಪೆಟ್ರೋಕೆಮಿಕಲ್ಸ್ ಹಾಗೂ ವಿಶೇಷ ರಾಸಾಯನಿಕ ಘಟಕಗಳು, ಹೈಡ್ರೋಜನ್ ಮತ್ತು ಸಂಬಂಧಿತ ರಾಸಾಯನಿಕ ಘಟಕ ಸೇರಿದಂತೆ ಮತ್ತು ಇತರ ರೀತಿಯ ಘಟಕಗಳನ್ನು ಹಂತ ಹಂತವಾಗಿ ಸ್ಥಾಪಿಸಲಿದೆ ಎಂದು ಹೇಳಲಾಗುತ್ತಿದೆ.
ಅದಾನಿ ಗ್ರೂಪ್ ಅಧ್ಯಕ್ಷ ಗೌತಮ್ ಅದಾನಿ ಅವರು 2022ರಲ್ಲಿ ಗುಜರಾತಿನ ಪೆಟ್ರೋಕೆಮಿಕಲ್ ಕಾಂಪ್ಲೆಕ್ಸ್‌ನಲ್ಲಿ ನಾಲ್ಕು ಶತಕೋಟಿ ಡಾಲರ್‌ಗಿಂತ ಹೆಚ್ಚು ಹೂಡಿಕೆ ಮಾಡಲು ಸಜ್ಜಾಗಿದ್ದಾರೆ ಎಂದು ಹೇಳಲಾಗಿತ್ತು. ಸಂಸ್ಥೆಯ ಮೊದಲ ಯೋಜನೆಯು 2 ಮಿಲಿಯನ್ ಟನ್ ಪಾಲಿವಿನೈಲ್ ಕ್ಲೋರೈಡ್ (ಪಿವಿಸಿ) ಸಾಮರ್ಥ್ಯವನ್ನು ಹಂತ ಹಂತವಾಗಿ ನಿರ್ಮಿಸುವುದಾಗಿದೆ. 2026ರ ವೇಳೆಗೆ ಮೊದಲ ಹಂತದಲ್ಲಿ ಒಂದು ಮಿಲಿಯನ್ ಟನ್ ಪಿವಿಸಿ ಸ್ಥಾವರವನ್ನು ಅಭಿವೃದ್ಧಿಪಡಿಸಲು ಉದ್ದೇಶಿಸಿದೆ. ಇದೇ ಸಮಾನ ಸಾಮರ್ಥ್ಯದ ಎರಡನೇ ಹಂತವು 2027ರ ಆರಂಭದಲ್ಲಿ ಕಾರ್ಯಾರಂಭ ಮಾಡಲಿದೆ.

ಈ ಪಿವಿಸಿ ಸ್ಥಾವರ ನಿರ್ಮಾಣವು ಅಮೇರಿಕಾದ ಹಿಂಡೆನ್‌ಬರ್ಗ್ ವರದಿಯಿಂದಾಗಿ ವಿಳಂಬವಾಗಿತ್ತು. ಇದು ಅದಾನಿ ಅವರ ವಿರುದ್ಧ ಗಂಭೀರವಾಗಿ ಆರೋಪ ಮಾಡುವ ಮೂಲಕ ಅವರ ವ್ಯವಹಾರಗಳು ನೆಲಕಚ್ಚುವಂತೆಯೂ ಮಾಡಿತ್ತು. ಮಾರ್ಚ್ 2023ರಲ್ಲಿ ಸ್ಥಗಿತಗೊಂಡಿದ್ದ ಯೋಜನೆಯು ಜುಲೈನಲ್ಲಿ ಕೆಲಸವನ್ನು ಪುನರಾರಂಭಿಸಿತು. ಆದರೆ ಅದಾನಿ ಗ್ರೂಪ್ ಕಂಪನಿಗಳಲ್ಲಿ ಹಣಕಾಸು ಮತ್ತು ಲೆಕ್ಕಪತ್ರ ವಂಚನೆಯನ್ನು ಹಿಂಡನ್‌ಬರ್ಗ್ ಆರೋಪಿಸಿದ ನಂತರ ಮತ್ತೆ ಯೋಜನೆ ಸ್ಥಗಿತಗೊಂಡಿತ್ತು. ಆದರೆ ಅದಾನಿ ಸಮೂಹವು ತಮ್ಮ ಮೇಲಿನ ಎಲ್ಲ ಆರೋಪಗಳನ್ನು ನಿರಾಕರಿಸಿತ್ತು.
ಅದಾನಿ ಪೆಟ್ರೋಕೆಮಿಕಲ್ಸ್ ಗುಜರಾತಿನ ಮುಂದ್ರಾದಲ್ಲಿ ಪೆಟ್ರೋಕೆಮಿಕಲ್ ಕ್ಲಸ್ಟರ್ ಅನ್ನು ಅಭಿವೃದ್ಧಿಪಡಿಸುತ್ತಿದೆ. ಇದು ಕೂಡ ಪಿವಿಸಿ ಸ್ಥಾವರವನ್ನು ಒಳಗೊಂಡಿದ್ದು, ಇದರ ಒಟ್ಟು ವೆಚ್ಚ ಸುಮಾರು 35,000 ಕೋಟಿ ರೂಪಾಯಿ ಎಂದು ಅಂದಾಜಿಸಲಾಗಿದೆ. ಈ ಸ್ಥಾವರವು ಭಾರತದ ಅತಿ ದೊಡ್ಡ ಪಿವಿಸಿ ಉತ್ಪಾದನಾ ಘಟಕ ಎಂದೂ ಹೇಳಲಾಗಿದೆ. ಅದಾನಿ ಗ್ರೂಪ್ ಈ ಹಿಂದೆ ಗುಜರಾತ್‌ನ ಮುಂದ್ರಾದಲ್ಲಿ ರಾಸಾಯನಿಕ ಕಾರ್ಖಾನೆಯನ್ನು ಸ್ಥಾಪಿಸಲು ಜರ್ಮನ್ ರಾಸಾಯನಿಕ ದೈತ್ಯ ಬಿಎಎಸ್‌ಎಫ್‌ನೊಂದಿಗೆ ಸಹಭಾಗಿತ್ವವನ್ನು ಹೊಂದಿತ್ತು.












Click it and Unblock the Notifications