ಖಾಸಗಿ ಸೈನಿಕರಿಗೆ ‘ದೇಶ ಪ್ರೇಮ’ದ ಪಾಠ ಹೇಳಲು ಹೊರಟ ಪುಟಿನ್?
ರಷ್ಯಾದಲ್ಲಿ ಖಾಸಗಿ ಸೈನಿಕ ಪಡೆಯ ಮುಖ್ಯಸ್ಥ ಯೆವ್ಗೆನಿ ಪ್ರಿಗೊಝಿನ್ ಮೃತಪಟ್ಟ ನಂತರ ಪರಿಸ್ಥಿತಿ ಮತ್ತೆ ಸೂಕ್ಷ್ಮವಾಗಿದೆ. ಹೀಗಾಗಿ ಮತ್ತೊಮ್ಮೆ ರಷ್ಯಾ ಒಳಗೆ ಸೇಡಿನ ಬೆಂಕಿ ಸಿಡಿದು, ಅಲ್ಲೋಲ ಕಲ್ಲೋಲ ಸೃಷ್ಟಿಯಾಗುವ ಭಯ ಮೂಡಿದೆ. ಹೀಗಾಗಿಯೇ ಅಲರ್ಟ್ ಆಗಿರುವ ವ್ಲಾದಿಮಿರ್ ಪುಟಿನ್ ಸರ್ಕಾರ, ಖಾಸಗಿ ಸೈನಿಕರಿಗೆ 'ದೇಶ ಪ್ರೇಮ'ದ ಪಾಠ ಮಾಡೋಕೆ ಮುಂದಾಗಿದೆ.
ಹೌದು, ರಷ್ಯಾದ ಟ್ವೆರ್ ಪ್ರಾಂತ್ಯದಲ್ಲಿ ಖಾಸಗಿ ವಿಮಾನ ಪತನವಾಗಿ, ಪ್ರಿಗೊಝಿನ್ & ಆತನ ಜೊತೆಗೆ ಇದ್ದ 10 ಜನ ಮೃತಪಟ್ಟಿದ್ದರು. ಈ ಘಟನೆ ಸಂಬಂಧ ಅಮೆರಿಕ ಸೇರಿದಂತೆ ಪುಟಿನ್ ವಿರೋಧಿಗಳು ಗಂಭೀರ ಆರೋಪ ಮಾಡುತ್ತಿದ್ದಾರೆ. ಇದೇ ಸಂದರ್ಭದಲ್ಲಿ ಹೊರ ದೇಶಗಳು ರಷ್ಯಾದಲ್ಲಿ ಮತ್ತೊಮ್ಮೆ ಖಾಸಗಿ ಸೇನೆಯ ದಂಗೆಗೆ ಯತ್ನಿಸುತ್ತಿವೆ ಎಂಬ ಆರೋಪ ಕೂಡ ಕೇಳಿಬಂದಿದೆ. ಇದೆಲ್ಲವನ್ನ ನೋಡಿ ಅಲರ್ಟ್ ಆಗಿರುವ ರಷ್ಯಾ ಅಧ್ಯಕ್ಷ ಪುಟಿನ್ ಆಡಳಿತ, ಖಾಸಗಿ ಸೈನಿಕರಿಗೆ 'ದೇಶ ಪ್ರೇಮ' ಹಾಗೂ 'ದೇಶ ನಿಷ್ಠೆ' ಕಲಿಸಲು ಮುಂದಾಗಿದೆ. ಈ ಮೂಲಕ ರಷ್ಯಾ ನಡೆ ಸಂಚಲನಕ್ಕೆ ಕಾರಣವಾಗಿದೆ.

ಖಾಸಗಿ ಸೈನಿಕರಿಗೆ 'ದೇಶ ಪ್ರೇಮ'ದ ಪ್ರತಿಜ್ಞೆ!
ಈಗ ವ್ಲಾದಿಮಿರ್ ಪುಟಿನ್, ಹಿಂದಿನ ತಪ್ಪು ಮರುಕಳಿಸದಂತೆ ಕ್ರಮ ಕೈಗೊಳ್ಳಲು ಖಡಕ್ ಆದೇಶ ಹೊರಡಿಸಿದ್ದಾರೆ. ರಾಜ್ಯಕ್ಕೆ ನಿಷ್ಠರಾಗಿ ಇರುವ ಕುರಿತು ರಷ್ಯಾದ ಖಾಸಗಿ ಸೈನಿಕರು ಪ್ರಮಾಣವಚನ ಸ್ವೀಕರಿಸುವಂತೆ ಆದೇಶ ನೀಡಿದ್ದಾರೆ. ಅಲ್ಲದೆ ರಷ್ಯಾ ದೇಶಕ್ಕಾಗಿ ಹಾಗೂ ರಷ್ಯಾ ಸೇನೆಗಾಗಿ ಕೆಲಸ ಮಾಡುವ ಪ್ರತಿಯೊಬ್ಬ ಸೈನಿಕನು ಈ ಪ್ರತಿಜ್ಞೆ ಸ್ವೀಕರಿಸಬೇಕಿದೆ ಎಂದು ಆದೇಶ ಹೊರಡಿಸಲಾಗಿದೆ ಎಂದು ವರದಿಯಾಗಿದೆ. ಈ ಮೂಲಕ ಮತ್ತೆ ರಷ್ಯಾಗೆ ಖಾಸಗಿ ಸೈನಿಕರಿಂದ ಯಾವುದೇ ಸಮಸ್ಯೆ ಆಗದಂತೆ ಪುಟಿನ್ ಈ ಕ್ರಮ ಕೈಗೊಂಡಿದ್ದಾರೆ ಎಂದು ವಿಶ್ಲೇಷಣೆ ಮಾಡಲಾಗುತ್ತಿದೆ.
ಒಂದೇ ವಿಮಾನ.. 10 ಜನ ಉಡೀಸ್?
ಇದೇ ಬುಧವಾರ ಸಂಭವಿಸಿದ್ದ ವಿಮಾನ ಅಪಘಾತಕ್ಕೆ ಕಾರಣವಾಗಿರುವ ಅಂಶದ ಬಗ್ಗೆ ತನಿಖೆ ಪ್ರಗತಿಯಲ್ಲಿದೆ. ರಷ್ಯಾದ ಟ್ವೆರ್ ಪ್ರಾಂತ್ಯದಲ್ಲಿ ಖಾಸಗಿ ವಿಮಾನ ಪತನವಾಗಿ, ಪ್ರಿಗೊಝಿನ್ & ಆತನ ಜೊತೆಗೆ ಇದ್ದ 10 ಜನ ಮೃತಪಟ್ಟಿದ್ದರು. ಈ ಘಟನೆ ಸಂಬಂಧ ಅಮೆರಿಕ ಸೇರಿದಂತೆ ಪುಟಿನ್ ವಿರೋಧಿಗಳು ಗಂಭೀರ ಆರೋಪ ಮಾಡುತ್ತಿದ್ದಾರೆ. ಪುಟಿನ್ ಕೈವಾಡ ಇಲ್ಲದೆಯೇ ಯೆವ್ಗೆನಿ ಪ್ರಿಗೊಝಿನ್ ಹತ್ಯೆ ಸಾಧ್ಯವಿಲ್ಲ. ಹೀಗಾಗಿ ರಷ್ಯಾ ಸರ್ಕಾರವೇ ಹತ್ಯೆಯ ಹಿಂದಿನ ಸೂತ್ರದಾರಿ ಎನ್ನಲಾಗುತ್ತಿದೆ. ಆದರೆ ಇದಕ್ಕೆ ಖಡಕ್ ಪ್ರತಿಕ್ರಿಯೆ ಕೊಟ್ಟ ರಷ್ಯಾ, ಕೃತ್ಯದಲ್ಲಿ ತನ್ನ ಪಾತ್ರವಿದೆ ಎಂಬ ವದಂತಿಯನ್ನ ತಳ್ಳಿಹಾಕಿದೆ. ಅಲ್ಲದೆ ಶತ್ರುಗಳ ವಿರುದ್ಧ ಗುಡುಗಿದೆ.

ಖಾಸಗಿ ಸೇನೆ ನಿಯಂತ್ರಣಕ್ಕೆ ಯತ್ನ?
ದಿನಕ್ಕೊಂದು ವಿಡಿಯೋ ಮಾಡಿ ರಷ್ಯಾ ನಾಯಕರ ವಿರುದ್ಧ ಆಕ್ರೋಶ ಹೊರಹಾಕ್ತಿದ್ದ ಯೆವ್ಗೆನಿ ಪ್ರಿಗೊಝಿನ್. ರಷ್ಯಾ ಸೇನೆ ಅಧಿಕಾರಿಗಳು ಖಾಸಗಿ ಸೇನೆಗೆ ಸರಿಯಾಗಿ ಬುಲೆಟ್, ಬಾಂಬ್ ಸಪ್ಲೈ ಮಾಡುತ್ತಿಲ್ಲ. ಸೌಲಭ್ಯ ಸಿಗದೆ ವ್ಯಾಗ್ನರ್ ಸೈನಿಕರು ಸಾಯುತ್ತಿದ್ದಾರೆ. ಇಷ್ಟಾದ್ರೂ ರಷ್ಯಾ ಸೇನೆ ತಲೆಕೆಡಿಸಿಕೊಂಡಿಲ್ಲ ಅನ್ನೋ ಆರೋಪ ಮಾಡುತ್ತಿದ್ದ ಯೆವ್ಗೆನಿ ಪ್ರಿಗೊಝಿನ್. ಕಿತ್ತಾಟ ಇನ್ನೂ ಸಣ್ಣದಾಗಿರುವಾಗ ರಷ್ಯಾ ಅಧ್ಯಕ್ಷರು & ರಕ್ಷಣಾ ಸಚಿವ ಅದನ್ನ ಸೈಲೆಂಟ್ ಮಾಡಲಿಲ್ಲ.
ಹೀಗೆ ದಂಗೆ ಎದ್ದು ಬಂದ ರಷ್ಯಾದ ಖಾಸಗಿ ಸೇನೆ ಸಾಕಷ್ಟು ಭಯ ಮೂಡಿಸಿತ್ತು. ದಂಗೆಯನ್ನು ರಷ್ಯಾ ಅಧ್ಯಕ್ಷ ಪುಟಿನ್ ತಮ್ಮ ಸ್ನೇಹಿತ ಬೆಲಾರಸ್ ಅಧ್ಯಕ್ಷನ ಮೂಲಕ ಹಿಡಿತಕ್ಕೆ ತಂದ್ರು. ಈಗ ಖಾಸಗಿ ಸೇನೆ ಮುಖಸ್ಥ ಮೃತಪಟ್ಟಿದ್ದು, ಖಾಸಗಿ ಸೇನೆ ಮೇಲೆ ನಿಯಂತ್ರಣಕ್ಕೆ ಪುಟಿನ್ ಮುಂದಾಗಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಆದರೆ ರಷ್ಯಾ ಮಾತ್ರ ಈ ಆರೋಪಕ್ಕೆಲ್ಲ ಪ್ರತಿಕ್ರಿಯೆ ನೀಡುತ್ತಿಲ್ಲ. ಈ ನಡುವೆ ರಷ್ಯಾ ಗಡಿ ಭಾಗದಲ್ಲಿ ಮತ್ತಷ್ಟು ಸೂಕ್ಷ್ಮ ಪರಿಸ್ಥಿತಿ ನಿರ್ಮಾಣವಾಗಿದ್ದು, ಜೂನ್ ತಿಂಗಳ ಖಾಸಗಿ ಸೇನೆ ದಂಗೆ ಮರೆಯಾಗುವ ಮೊದಲೇ ಮತ್ತೆ ಆತಂಕ ಉಂಟಾಗಿದೆ.












Click it and Unblock the Notifications