ಅಮೆರಿಕ ಸಹವಾಸ ಮಾಡಬೇಡಿ ಸಾಕು: ಫ್ರಾನ್ಸ್ ಹೇಳಿಕೆಗೆ ದೊಡ್ಡಣ್ಣ ಗರಂ!
ವಾಷಿಂಗ್ಟನ್: ಅಮೆರಿಕ ಒಂದ್ಕಡೆ ಯುರೋಪ್ (Europe) ದೇಶಗಳನ್ನು ಚೀನಾ-ರಷ್ಯಾ ವಿರುದ್ಧ ಒಗ್ಗೂಡಿಸಲು ಯತ್ನಿಸುತ್ತಿದ್ದರೆ, ಮತ್ತೊಂದೆಡೆ ಫ್ರಾನ್ಸ್ ಅಧ್ಯಕ್ಷರೇ ದೊಡ್ಡಣ್ಣನಿಗೆ ಬತ್ತಿ ಇಡುವ ಕೆಲಸ ಮಾಡಿದ್ದಾರೆ. ಕೆಲದಿನಗಳ ಹಿಂದೆ ಚೀನಾಗೆ ಭೇಟಿ ನೀಡಿದ್ದ ಫ್ರಾನ್ಸ್ ಅಧ್ಯಕ್ಷ ಮ್ಯಾಕ್ರಾನ್, ಯುರೋಪ್ (Europe) ರಾಷ್ಟ್ರಗಳು ಅಮೆರಿಕ ಮೇಲಿನ ಅವಲಂಬನೆ ಬಿಡಬೇಕು ಎಂದಿದ್ದರು. ಮ್ಯಾಕ್ರಾನ್ ಹೇಳಿಕೆ ಜಾಗತಿಕವಾಗಿ ಬಿರುಗಾಳಿ ಎಬ್ಬಿಸಿದೆ.
ಚೀನಾ ಜಗತ್ತಿಗೇ ಬೇಕಾಗಿರುವ ರಾಷ್ಟ್ರ. ಚೀನಾ (China) ಪ್ರಪಂಚದ 2ನೇ ಅತಿದೊಡ್ಡ ಆರ್ಥಿಕತೆ ಹೊಂದಿರುವ ದೇಶ ಎಂಬುದು ಒಂದು ಕಡೆಯಾದರೆ, ರಷ್ಯಾ ಜೊತೆ ಚೀನಾ ಹೋಗದಂತೆ ತಡೆಯಲು ಅಮೆರಿಕ (America) ಯತ್ನಿಸುತ್ತಿದೆ. ಅದರಲ್ಲೂ ಉಕ್ರೇನ್ ವಿಚಾರಲ್ಲಿ ಚೀನಾ ತಮ್ಮ ಪರ ನಿಲ್ಲಲಿ ಎಂಬುದೇ ಅಮೆರಿಕದ ಟಾರ್ಗೆಟ್. ಹೀಗಾಗಿಯೇ ಫ್ರಾನ್ಸ್ ಮೂಲಕ ಚೀನಾ ಮನವೊಲಿಸಲು ಅಮೆರಿಕ ಮುಂದಾಗಿತ್ತು. ಆದರೆ ಅಲ್ಲಿ ನಡೆದಿದ್ದೇ ಬೇರೆ. ಅಮೆರಿಕ ಹೂಡಿದ್ದ ರಣತಂತ್ರ ಆ ದೇಶಕ್ಕೇ ಉಲ್ಟಾ ಹೊಡೆದಿದೆ.

ಅಮೆರಿಕದ ಸಹವಾಸ ಯುರೋಪ್‌ಗೆ ಬೇಡ!
ಚೀನಾಗೆ ಭೇಟಿ ನೀಡಿ ವಾಪಸ್ ಬರುವಾಗ ಫ್ರಾನ್ಸ್ ಅಧ್ಯಕ್ಷ ಇಮ್ಯಾನುಯೆಲ್ ಮ್ಯಾಕ್ರಾನ್ ವಿಶೇಷ ಸಂದರ್ಶನ ನೀಡಿದ್ದರು. ಈ ಸಂದರ್ಶನದಲ್ಲಿ ಮಾತನಾಡಿದ್ದ ಇಮ್ಯಾನುಯೆಲ್ ಮ್ಯಾಕ್ರಾನ್, ಯುರೋಪ್ ರಾಷ್ಟ್ರಗಳು ಅಮೆರಿಕದ ಮೇಲಿನ ಅವಲಂಬನೆ ಕಡಿಮೆ ಮಾಡಬೇಕು. ಹಾಗೇ ಮತ್ತೊಂದು ಕಡೆ ತೈವಾನ್ ವಿಚಾರದಲ್ಲಿ ನಡೆಯುತ್ತಿರುವ ಘರ್ಷಣೆಯಲ್ಲಿ ಚೀನಾ ಮತ್ತು ಯುಎಸ್ ನಡುವೆ ತಲೆಹಾಕಬಾರದು ಎಂದು ಸಲಹೆ ನೀಡಿದ್ದರು. ಇದು ಅಮೆರಿಕದ ನಿದ್ದಗೆಡಿಸಿ, ಯುರೋಪ್ ಕೂಡ ದೊಡ್ಡಣ್ಣನ ಕೈಬಿಟ್ಟು ಹೋಗುವ ಭಯ ಶುರುವಾಗಿದೆ.
ಪರೋಕ್ಷ ಎಚ್ಚರಿಕೆ ನೀಡಿದ ಅಮೆರಿಕ?
ಒಂದೆಡೆ ಫ್ರಾನ್ಸ್ ಅಧ್ಯಕ್ಷ ಮ್ಯಾಕ್ರಾನ್ ಅಮೆರಿಕದ ವಿರುದ್ಧ ಹೇಳಿಕೆ ನೀಡಿರುವುದು ವಾಷಿಂಗ್ಟನ್‌ಗೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ. ಈ ಕಾರಣಕ್ಕೆ ಈಗಿನ ಬೆಳವಣಿಗೆ ಬಗ್ಗೆ ಪ್ರತಿಕ್ರಿಯೆ ನೀಡಿರುವ ಅಮೆರಿಕ, ನಮ್ಮ ಮತ್ತು ಫ್ರಾನ್ಸ್ ಸಂಬಂಧ ಗಟ್ಟಿಯಾಗಿದೆ. ಆದರೆ ಈಗಿನ ಬೆಳವಣಿಗೆ ಬಗ್ಗೆ ತಕ್ಷಣಕ್ಕೆ ಪ್ರತಿಕ್ರಿಯೆ ನೀಡಲು ಆಗುವುದಿಲ್ಲ ಮತ್ತು ಎರಡೂ ದೇಶಗಳ ಸ್ನೇಹದಲ್ಲಿ ಯಾವುದೇ ಬಿರುಕು ಮೂಡುವ ನಿರೀಕ್ಷೆ ಇಲ್ಲ ಎಂದಿದೆ ಅಮೆರಿಕ. ಈ ಮೂಲಕ ಫ್ರಾನ್ಸ್ ಅಧ್ಯಕ್ಷರ ಹೇಳಿಕೆ ವಿಶ್ವದ ದೊಡ್ಡಣ್ಣನಿಗೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ ಎಂಬುದು ಪಕ್ಕಾ ಆಗಿದೆ.

ಯುರೋಪ್ ನೀತಿ ಬದಲಾಗುತ್ತಾ?
ಅಂತಾರಾಷ್ಟ್ರೀಯ ಮಟ್ಟದಲ್ಲಿ ರಷ್ಯಾ-ಚೀನಾ ಅತ್ಯಾಪ್ತ ರಾಷ್ಟ್ರಗಳಾಗಿ ಗುರುತಿಸಿಕೊಳ್ಳುತ್ತಿವೆ. ಉಕ್ರೇನ್ ಯುದ್ಧದ ನಂತರ ನ್ಯಾಟೋ ಸದಸ್ಯ ರಾಷ್ಟ್ರಗಳು ರಷ್ಯಾ-ಚೀನಾದಿಂದ ದೂರ ಓಡುತ್ತಿವೆ. ಆದರೆ ಇದೇ ಹೊತ್ತಲ್ಲಿ ಫ್ರಾನ್ಸ್ ಅಧ್ಯಕ್ಷ ಮ್ಯಾಕ್ರಾನ್ ವಿಶೇಷ ನಿರ್ಧಾರ ಕೈಗೊಂಡು, ಡ್ರ್ಯಾಗನ್ ರಾಜಧಾನಿಗೆ ವಿಸಿಟ್ ಕೊಟ್ಟಿದ್ದರು. ಒಂದೆಡೆ ಇಡೀ ಯುರೋಪ್ ಅಮೆರಿಕದ ಬಾಲ ಹಿಡಿದು ಹೊರಟರೆ, ಅದೇ ಯುರೋಪ್‌ನ ಮತ್ತೊಂದು ರಾಷ್ಟ್ರ ಫ್ರಾನ್ಸ್ ಬೇರೆಯದ್ದೇ ನಿರ್ಧಾರ ಕೈಗೊಂಡಿತ್ತು. ಪದೇಪದೆ ಯುರೋಪ್‌ನ ಸ್ವಾಯತ್ತತೆ ಬಗ್ಗೆ ಫ್ರಾನ್ಸ್ ಅಧ್ಯಕ್ಷ ಪ್ರಸ್ತಾಪ ಮಾಡುತ್ತಲೇ ಅಮೆರಿಕಗೆ ಆಘಾತ ನೀಡುತ್ತಿದ್ದಾರೆ.
ರಷ್ಯಾ ಕಂಡರೆ ಫ್ರಾನ್ಸ್‌ಗೂ ಭಯ
ಈಗಾಗಲೇ ರಷ್ಯಾ ವಿರೋಧ ಕಟ್ಟಿಕೊಂಡಿರುವ ಫ್ರಾನ್ಸ್, ತನ್ನ ಮೇಲೂ ಮುಂದೆ ರಷ್ಯಾ ದಾಳಿ ನಡೆಸಬಹುದು ಎಂಬ ಭಯದಲ್ಲೇ ಇದೆ. ಮತ್ತೊಂದು ಕಡೆ ಇದೇ ಭಯವನ್ನು ಬಳಸಿಕೊಂಡು ರಷ್ಯಾ ವಿರುದ್ಧ ಯುರೋಪ್ ರಾಷ್ಟ್ರಗಳನ್ನು ಅಮೆರಿಕ ಎತ್ತಿಕಟ್ಟುತ್ತಿದೆ. ಅದೇ ರೀತಿ ಫ್ರಾನ್ಸ್ ಅಧ್ಯಕ್ಷರನ್ನೂ ಹೇಗೋ ಪುಸಲಾಯಿಸಿ, ಚೀನಾ ಮನವೊಲಿಕೆಗೆ ಕಳುಹಿಸಿತ್ತು ಅಮೆರಿಕ. ಆದರೆ ದೊಡ್ಡಣ್ಣನ ಪ್ರಯತ್ನ ಉಲ್ಟಾ ಹೊಡೆದಿದೆ. ಮ್ಯಾಕ್ರಾನ್ ಚೀನಾ ಮನವೊಲಿಸುವ ಬದಲು ಚೀನಿಯರೇ ಮ್ಯಾಕ್ರಾನ್ ಮನಸ್ಸು ಬದಲಿಸಿ ಕಳಿಸಿದಂತೆ ಕಾಣುತ್ತಿದೆ.












Click it and Unblock the Notifications