ಇರಾಕ್‌ನಲ್ಲಿ ಇರಾನಿನ ಸೇನಾಧಿಕಾರಿಯನ್ನು ಹತ್ಯೆಗೈದ ಅಮೆರಿಕ
ಬಾಗ್ದಾದ್, ಜನವರಿ 3: ಇರಾಕಿನ ಬಾಗ್ದಾದ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಮೇಲೆ ಅಮೆರಿಕ ಕ್ಷಿಪಣಿ ದಾಳಿ ನಡೆಸಿದ್ದು, ಇರಾನ್ ಬೆಂಬಲಿತ ಸಶಸ್ತ್ರ ಪಡೆಯ ಮುಖ್ಯಸ್ಥ ಸೇರಿದಂತೆ 8 ಮಂದಿ ಮೃತಪಟ್ಟಿದ್ದಾರೆ.
ಕಳೆದ ಕೆಲ ದಿನಗಳಿಂದ ಇರಾಕಿನಲ್ಲಿ ಇರಾನ್ ಹಾಗೂ ಅಮೆರಿಕ ನಡುವೆ ಪರೋಕ್ಷ ಯುದ್ಧ ನಡೆಯುತ್ತಿದೆ. ಇರಾನ್ ಬೆಂಬಲಿತ ಕ್ಯುಡ್ಸ್ ಫೋರ್ಸ್ ಹಾಗೂ ಇತರೆ ಸಂಘಟನೆಗಳು ಅಮೆರಿಕ ಹಾಗೂ ಇರಾಕ್‌ನ ಸ್ಥಳೀಯ ಆಡಳಿತ ವಿರುದ್ಧ ಭಾರಿ ಪ್ರತಿಭಟನೆ ನಡೆಸುತ್ತಿವೆ.
ಹಾಗೆಯೇ ಅಮೆರಿಕದ ರಾಯಭಾರಿ ಕಚೇರಿ ಮೇಲೂ ಕ್ಷಿಪಣಿ ದಾಳಿ ನಡೆಸಿದ್ದವು.ಇದರಿಂದ ಆಕ್ರೋಶಗೊಂಡಿದ್ದ ಅಮೆರಿಕ ಭಾಗ್ದಾದ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಮೇಲೆ ಕ್ಷಿಪಣಿ ದಾಳಿ ನಡೆಸಿದೆ.
ಈ ದಾಳಿಯಲ್ಲಿ ಇರಾನಿನ ಜನರಲ್ ಖಾಸಿಮ್ ಸುಲೆಮಾನಿ ಸೇರಿ ಎಂಟು ಮಂದಿ ಮೃತಪಟ್ಟಿದ್ದಾರೆ. ಇವರೆಲ್ಲರೂ ಇರಾನ್ ಬೆಂಬಲಿತ ಸಂಘಟನೆಯ ಸಶಸ್ತ್ರಧಾರಿಗಳಾಗಿದ್ದಾರೆ. ಇದರಿಂದ ಅಮೆರಿಕ ಹಾಗೂ ಇರಾನ್ ನಡುವಿನ ಕಿತ್ತಾಟ ಇನ್ನಷ್ಟು ತಾರಕ್ಕಕೇರುವ ಸಾಧ್ಯತೆ ಇದೆ.
ಇರಾಕ್‌ನಲ್ಲಿನ ಅಮೆರಿಕ ಕಚೇರಿ ಮೇಲೆ ನಡೆದ ದಾಳಿ ಬಳಿಕ ಇದು ಎರಡನೇ ಪ್ರಮುಖ ಪ್ರತಿದಾಳಿಯಾಗಿದೆ.ಮೊದಲ ಏರ್‌ಸ್ಟ್ರೈಕ್‌ನಲ್ಲಿ 25ಕ್ಕೂ ಹೆಚ್ಚು ಉಗ್ರಗಾಮಿಗಳನ್ನು ಸದೆಬಡಿಯಲಾಗಿತ್ತು.
ಎರಡನೇ ದಾಳಿಯು ಪೂರ್ವನಿಯೋಜಿತವಾಗಿ ಕಂಡು ಬಂದಿದ್ದು, ಪ್ರಭಾವಿ ವ್ಯಕ್ತಿಯೋರ್ವನನ್ನು ವಿಮಾನ ನಿಲ್ದಾಣದಲ್ಲಿ ಸ್ವಾಗತಿಸಲು ಖಾಸಿಮ್ ಸುಲೆಮಾನಿ ಆಗಮಿಸಿದ ಸಂದರ್ಭದಲ್ಲಿ ಅವರನ್ನು ಹತ್ಯೆ ಮಾಡಲಾಗಿದೆ. ಆದರೆ ಈ ಪ್ರಭಾವಿ ವ್ಯಕ್ತಿ ಯಾರೆಂಬುದು ತಿಳಿದಿಲ್ಲ.