ರಷ್ಯಾ-ಉಕ್ರೇನ್ ಸಂಘರ್ಷ: 198 ಮಂದಿ ಸಾವು
ಕೀವ್, ಫೆಬ್ರವರಿ 26: ಉಕ್ರೇನ್ ಮೇಲೆ ರಷ್ಯಾ ಯುದ್ಧ ಸಾರಿದ್ದು, 198 ಮಂದಿ ಮೃತಪಟ್ಟಿದ್ದು, ಸಾವಿರಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ.
ಮತ್ತೊಂದೆಡೆ ಸುಮಾರು 2,800 ಸೈನಿಕರ ಜೊತೆ 80 ಯುದ್ಧ ಟ್ಯಾಂಕರ್ಗಳು, 516 ಶಸ್ತ್ರಸಜ್ಜಿತ ಯುದ್ಧ ವಾಹನಗಳು, 10 ವಿಮಾನ ಮತ್ತು ಏಳು ಹೆಲಿಕಾಪ್ಟರ್‌ಗಳನ್ನು ರಷ್ಯಾ ಕಳೆದುಕೊಂಡಿದೆ ಎಂದು ಉಕ್ರೇನ್ ಉಪ ರಕ್ಷಣಾ ಸಚಿವ ಹನ್ನಾ ಮಲ್ಯಾರ್ ಮಾಹಿತಿ ನೀಡಿದ್ದಾರೆ.
ಕಳೆದ ಎರಡು ದಿನಗಳಿಂದ ರಷ್ಯಾ ಮಿಲಿಟರಿ ಪಡೆಗಳು ಉಕ್ರೇನ್ನ ವಿವಿಧ ನಗರಗಳ ಮೇಲೆ ನಿರಂತರವಾಗಿ ದಾಳಿ ನಡೆಸಿದ್ದು, ಪರಿಣಾಮ ನೂರಾರು ಯೋಧರು ತಮ್ಮ ಪ್ರಾಣ ಕಳೆದುಕೊಂಡಿದ್ದಾರೆ. ಇದರ ಜೊತೆಗೆ ಮಕ್ಕಳು ಸೇರಿದಂತೆ ಇಷ್ಟೊಂದು ನಾಗರಿಕರು ತಮ್ಮ ಪ್ರಾಣ ಕಳೆದುಕೊಂಡಿದ್ದಾರೆಂದು ಫೇಸ್ಬುಕ್ನಲ್ಲಿ ತಿಳಿಸಿದ್ದಾರೆ.

ರಷ್ಯಾ ವಿರುದ್ಧ ತೊಡೆತಟ್ಟಿರುವ ಉಕ್ರೇನ್ ನಾಗರಿಕರು ಸಹ ಸ್ವಯಂಸೇವಕರಾಗಿ ಯುದ್ಧದಲ್ಲಿ ಪಾಲ್ಗೊಳ್ಳುತ್ತಿದ್ದು, ರಷ್ಯಾ ದಾಳಿ ಎದುರಿಸಲು ಸಜ್ಜಾಗಿದ್ದಾರೆ. ಕಳೆದ ಮೂರು ದಿನಗಳಿಂದ ನಡೆಯುತ್ತಿರುವ ಸಂಘರ್ಷದಲ್ಲಿ ಉಕ್ರೇನ್ ರಾಜಧಾನಿ ಕೀವ್ ಸೇರಿದಂತೆ ಪ್ರಮುಖ ನಗರಗಳ ಮೇಲೆ ರಷ್ಯಾ ದಾಳಿ ಮುಂದುವರೆದಿದ್ದು, ಸಾವು-ನೋವು ಮತ್ತಷ್ಟು ಹೆಚ್ಚಾಗುವ ಸಾಧ್ಯತೆ ಇದೆ.
ರಷ್ಯಾದ ಶಸ್ತ್ರ ಸಜ್ಜಿತ ಪಡೆಗಳು ಸಮುದ್ರ ಮತ್ತು ಭೂ ಆಧಾರಿತ ಕ್ರೂಸ್ ಕ್ಷಿಪಣಿಗಳೊಂದಿಗೆ ಉಕ್ರೇನ್ ಮಿಲಿಟರಿ ಉಪಕರಣಗಳನ್ನು ನಾಶಪಡಿಸುತ್ತಿವೆ ಎಂದು ರಷ್ಯಾದ ರಕ್ಷಣಾ ಸಚಿವಾಲಯದ ವಕ್ತಾರ ಮೇಜರ್ ಜನರಲ್ ಇಗೊರ್ ಕೊನಾಶೆಂಕೊವ್ ಶನಿವಾರ ತಿಳಿಸಿದ್ದಾರೆ.
ರಾತ್ರಿ ವೇಳೆ ವಾಯು ಮತ್ತು ಸಮುದ್ರ ಆಧಾರಿತ ಕ್ರೂಸ್ ಕ್ಷಿಪಣಿ ಬಳಕೆಯೊಂದಿಗೆ ಉಕ್ರೇನ್ ಮಿಲಿಟರಿ ಮೂಲಸೌಕರ್ಯಗಳ ಮೇಲೆ ದಾಳಿ ನಡೆಸಲಾಗುತ್ತಿದೆ ಎಂದು ಸುದ್ದಿಗಾರರಿಗೆ ಅವರು ಮಾಹಿತಿ ನೀಡಿದ್ದಾರೆ. ಒಟ್ಟಾರೇಯಾಗಿ ಉಕ್ರೇನ್ ಗೆ ಸೇರಿದ 821 ಯುದ್ದೋಪಕರಣಗಳನ್ನು ನಾಶಪಡಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.
ಇದರಲ್ಲಿ 14 ಮಿಲಿಟರಿ ಏರ್ ಫೀಲ್ಡ್ ಗಳು, 19 ಕಾಮಾಂಡ್ ಪೋಸ್ಟ್ ಮತ್ತು ಕಮ್ಯೂನಿಕೇಷನ್ ಸೆಂಟರ್, 24 ಎಸ್-300 ಮತ್ತು ಒಎಸ್ ಎ ವಿಮಾನ ವಿರೋಧಿ ಕ್ಷಿಪಣಿ ವ್ಯವಸ್ಥೆ, 48 ರಡಾರ್ ನಿಲ್ದಾಣಗಳು, 7, ಯುದ್ಧ ವಿಮಾನಗಳು, 7 ಹೆಲಿಕಾಪ್ಟರ್ ಗಳು, 9 ಮಾನವ ರಹಿತ ವೈಮಾನಿಕ ವಾಹನಗಳನ್ನು ಹೊಡೆದುರುಳಿಸಲಾಗಿದೆ. 87 ಟ್ಯಾಂಕ್ ಗಳು ಮತ್ತಿತರ ಯುದ್ಧಕ್ಕೆ ಸಂಬಂಧಿಸಿದ ವಾಹನಗಳು, 28 ಬಹುಹಂತದ ರಾಕೇಟ್ ಲಾಂಚರ್ 118 ವಿಶೇಷ ಮಿಲಿಟರಿ ಘಟಕದ ವಾಹನಗಳನ್ನು ನಾಶಪಡಿಸಲಾಗಿದೆ ಎಂದು ಕೊನಾಶಂಕೂವ್ ಮಾಹಿತಿ ನೀಡಿದ್ದಾರೆ.
ಉಕ್ರೇನ್ ನ 8 ಮಿಲಿಟರಿ ದೋಣಿಗಳನ್ನು ರಷ್ಯಾದ ನೌಕ ಪಡೆ ನಾಶಪಡಿಸಿದೆ. ಮಿಲಿಟರಿ ಸೌಕರ್ಯಗಳ ಮೇಲೆ ದಾಳಿ ನಡೆಸಲಾಗುತ್ತಿದೆ. ವಸತಿ ಪ್ರದೇಶಗಳು ಮತ್ತು ಸಾಮಾಜಿಕ ಮೂಲಸೌಕರ್ಯಗಳ ಮೇಲೆ ಯಾವುದೇ ರೀತಿಯ ಹಾನಿ ಮಾಡುತ್ತಿಲ್ಲ ಎಂದು ಅವರು ಹೇಳಿದ್ದಾರೆ.
ಉಕ್ರೇನ್ ಮೇಲೆ ರಷ್ಯಾ ದಾಳಿ ಆರಂಭಿಸಿದ ನಂತರ ಪ್ರಾಣ ಉಳಿಸಿಕೊಳ್ಳುವ ಉದ್ದೇಶದಿಂದ ಇಲ್ಲಿಯವರೆಗೆ ಲಕ್ಷಕ್ಕೂ ಅಧಿಕ ನಾಗರಿಕರು ಪೋಲೆಂಡ್ ಗಡಿಗೆ ಬಂದಿದ್ದಾಗಿ ವರದಿಯಾಗಿದೆ.












Click it and Unblock the Notifications