ದೇಶದಲ್ಲಿ ಮಕ್ಕಳಿಗೆ ನೀಡಲು ಅನುಮೋದನೆ ಪಡೆದಿರುವ ಝೈಕೋವ್ ಡಿ ಲಸಿಕೆ ಬೆಲೆ ಎಷ್ಟು?
ನವದೆಹಲಿ, ಅಕ್ಟೋಬರ್ 04: ದೇಶದಲ್ಲಿ ಕೊರೊನಾ ಸೋಂಕಿನ ವಿರುದ್ಧ 12- 18 ವರ್ಷದ ಮಕ್ಕಳಿಗೆ ನೀಡಲು ಅನುಮೋದನೆ ಪಡೆದಿರುವ ಝೈಕೋವ್ ಡಿ ಕೊರೊನಾ ಲಸಿಕೆ ಬೆಲೆಯನ್ನು ಲಸಿಕೆ ತಯಾರಿಕಾ ಸಂಸ್ಥೆ ಝೈಡಸ್ ಕ್ಯಾಡಿಲಾ ಪ್ರಸ್ತಾಪಿಸಿದೆ.
ಝೈಡಸ್ ಕ್ಯಾಡಿಲಾ ತನ್ನ ಕೊರೊನಾ ಲಸಿಕೆಗೆ ಬೆಲೆ ನಿಗದಿ ಮಾಡಿದ್ದು, ಈ ಸಂಬಂಧ ಕೇಂದ್ರ ಸರ್ಕಾರ ಹಾಗೂ ಝೈಡಸ್ ಕ್ಯಾಡಿಲಾ ಸಂಸ್ಥೆ ನಡುವೆ ಮಾತುಕತೆ ಮುಂದುವರೆದಿದೆ.
ಝೈಡಸ್ ಕ್ಯಾಡಿಲಾ, ಮಕ್ಕಳಿಗೆ ನೀಡುತ್ತಿರುವ ಮೂರು ಡೋಸ್‌ಗಳ ಲಸಿಕೆಗೆ 1900 ರೂ ನಿಗದಿಪಡಿಸಿರುವುದಾಗಿ ತಿಳಿದುಬಂದಿದೆ. ಸರ್ಕಾರ ಈ ಬೆಲೆಯನ್ನು ತಗ್ಗಿಸುವ ಸಂಬಂಧ ಮಾತುಕತೆ ಮುಂದುವರೆಸಿದ್ದು, ಈ ವಾರದಲ್ಲಿ ಅಂತಿಮ ನಿರ್ಧಾರ ಕೈಗೊಳ್ಳಲಾಗುವುದು ಎಂದು ಕೇಂದ್ರ ತಿಳಿಸಿದೆ.

ಕಳೆದ ಗುರವಾರವಷ್ಟೇ, ಕೇಂದ್ರ ಸರ್ಕಾರ ಶೀಘ್ರವೇ ವಿಶ್ವದ ಮೊದಲ ಡಿಎನ್‌ಎ ಆಧಾರಿತ ಸೂಜಿರಹಿತ ಝೈಡಸ್ ಕ್ಯಾಡಿಲಾದ ಕೊರೊನಾ ಲಸಿಕೆಯನ್ನು ಲಸಿಕೆಯನ್ನು ರಾಷ್ಟ್ರವ್ಯಾಪಿ ಲಸಿಕಾ ಅಭಿಯಾನದಲ್ಲಿ ಒಳಗೊಳ್ಳಲಾಗುವುದು ಎಂದು ಪ್ರಕಟಿಸಿತ್ತು.
'ಕಂಪನಿಯು ತನ್ನ ಮೂರು ಡೋಸ್ ಲಸಿಕೆಗಾಗಿ ತೆರಿಗೆ ಒಳಗೊಂಡಂತೆ 1900 ರೂ ಬೆಲೆಯನ್ನು ಪ್ರಸ್ತಾಪಿಸಿದೆ. ಈ ಸಂಬಂಧ ಮಾತುಕತೆ ನಡಸಲಾಗುತ್ತಿದೆ. ಲಸಿಕೆಯ ವೆಚ್ಚಕ್ಕೆ ಸಂಬಂಧಿಸಿದಂತೆ ಎಲ್ಲಾ ಅಂಶಗಳನ್ನು ಮರುಪರಿಶೀಲಿಸುವಂತೆ ಕಂಪನಿಗೆ ಹೇಳಲಾಗಿದೆ. ಈ ವಾರ ಲಸಿಕೆ ಬೆಲೆ ಕುರಿತು ಅಂತಿಮ ನಿರ್ಧಾರ ತೆಗೆದುಕೊಳ್ಳುವ ಸಾಧ್ಯತೆಯಿದೆ' ಎಂದು ತಿಳಿಸಿದೆ.
ಝೈಡಸ್ ಕ್ಯಾಡಿಲಾ ಸಂಸ್ಥೆಯದ್ದು ಮೂರು ಡೋಸ್ ಹಾಗೂ ಸೂಜಿರಹಿತ ಜೆಟ್ ಇಂಜೆಕ್ಟರ್ ಲಸಿಕೆಯಾಗಿರುವ ಕಾರಣ ಕೋವ್ಯಾಕ್ಸಿನ್ ಹಾಗೂ ಕೋವಿಶೀಲ್ಡ್ ಲಸಿಕೆಗಿಂತ ಹೆಚ್ಚಿನ ಬೆಲೆ ಹೊಂದಿರುತ್ತದೆ ಎಂದು ನಿರೀಕ್ಷಿಸಲಾಗಿತ್ತು.

ಜೆಟ್ ಇಂಜೆಕ್ಟರ್‌ಗೆ 30 ಸಾವಿರ ರೂ ತಗುಲಲಿದ್ದು, ಈ ಜೆಟ್ ಇಂಜೆಕ್ಟರ್ ಅನ್ನು ಸುಮಾರು 20 ಸಾವಿರ ಡೋಸ್‌ಗಳನ್ನು ನೀಡಲು ಬಳಸಬಹುದಾಗಿದೆ. ಲಸಿಕೆಯನ್ನು 0, 28 ಹಾಗೂ 56 ದಿನಗಳ ಅಂತರದಲ್ಲಿ ನೀಡಲಾಗುವುದು.
ಝೈಡಸ್ ಕ್ಯಾಡಿಲಾ ಹಾಗೂ ಕೇಂದ್ರ ಸರ್ಕಾರದ ನಡುವೆ ಇದುವರೆಗೂ ಮೂರು ಬಾರಿ ಸಭೆ ನಡೆದಿದೆ. ಕೊನೆಯದಾಗಿ ಕಳೆದ ಗುರುವಾರ ಸಭೆ ನಡೆಸಲಾಗಿದೆ. ಈ ಮಧ್ಯೆ ಲಸಿಕಾ ಅಭಿಯಾನದಲ್ಲಿ ಝೈಕೋವ್ ಡಿ ಲಸಿಕೆಯನ್ನು ಪರಿಚಯಿಸಲು ಹಾಗೂ ಇತರೆ ಆರೋಗ್ಯ ಸಮಸ್ಯೆಗಳನ್ನು ಹೊಂದಿರುವ 12-18 ವರ್ಷದವರಿಗೆ ಆದ್ಯತೆ ನೀಡಲು ರಾಷ್ಟ್ರೀಯ ತಾಂತ್ರಿಕ ಸಲಹಾ ಸಮಿತಿಯ ಶಿಫಾರಸಿಗಾಗಿ ಸಚಿವಾಲಯ ಕಾಯುತ್ತಿದೆ.
ಲಸಿಕೆ ಬೆಲೆ ಸಂಬಂಧ ಸರ್ಕಾರ ಲಸಿಕೆ ಅಭಿವೃದ್ಧಿಪಡಿಸಿದವರೊಂದಿಗೆ ಮಾತುಕತೆಯಲ್ಲಿದೆ ಎಂದು ಕೇಂದ್ರ ಆರೋಗ್ಯ ಕಾರ್ಯದರ್ಶಿ ರಾಜೇಶ್ ಭೂಷಣ್ ಗುರುವಾರ ತಿಳಿಸಿದ್ದರು.
ಝೈಡಸ್ ಕ್ಯಾಡಿಲಾದ ಈ ಲಸಿಕೆ ಮೂರು ಡೋಸ್ ಹಾಗೂ ಸೂಜಿರಹಿತ ಲಸಿಕೆಯಾದ್ದರಿಂದ ಇದು ಸದ್ಯ ಲಸಿಕಾ ಅಭಿಯಾನದಲ್ಲಿ ವ್ಯಾಪಕವಾಗಿ ಬಳಸಲಾಗುತ್ತಿರುವ ಕೋವ್ಯಾಕ್ಸಿನ್ ಹಾಗೂ ಕೋವಿಶೀಲ್ಡ್ ಲಸಿಕೆಗಳಿಗಿಂತ ಭಿನ್ನ ಬೆಲೆ ಹೊಂದಿರುತ್ತದೆ ಎಂದು ಸೂಚನೆ ನೀಡಿದ್ದರು.
12 ವರ್ಷ ಮೇಲ್ಪಟ್ಟ ಮಕ್ಕಳಿಗೆ ನೀಡಲು ಅನುಮೋದನೆ ಪಡೆದುಕೊಂಡಿರುವ ವಿಶ್ವದ ಮೊದಲ ಡಿಎನ್‌ಎ ಕೊರೊನಾ ಲಸಿಕೆ ಕ್ಯಾಡಿಲಾ ಸಂಸ್ಥೆಯ ಝೈಕೋವ್ ಡಿ ಲಸಿಕೆಗೆ ಭಾರತದಲ್ಲಿ ಆಗಸ್ಟ್ ತಿಂಗಳಿನಲ್ಲಿ ತುರ್ತು ಬಳಕೆಗೆ ಅನುಮೋದನೆ ನೀಡಲಾಗಿದೆ.
ಆಗಸ್ಟ್ 20ರಂದು ಔಷಧ ನಿಯಂತ್ರಕ ಸಂಸ್ಥೆ ಝೈಡಸ್ ಕ್ಯಾಡಿಲಾದ ಲಸಿಕೆಯ ತುರ್ತು ಬಳಕೆಗೆ ಅನುಮೋದನೆ ನೀಡಿತು. ಆದರೆ ಈ ಲಸಿಕೆಯ ಬೆಲೆ ಕುರಿತು ಎಲ್ಲೂ ಮಾಹಿತಿ ಕೇಳಿಬಂದಿರಲಿಲ್ಲ.
ಝೈಡಸ್ ಕ್ಯಾಡಿಲಾದ ಕೊರೊನಾ ಲಸಿಕೆಗಳ ಒಂದು ಕೋಟಿ ಡೋಸ್‌ಗಳು ಅಕ್ಟೋಬರ್‌ನಲ್ಲಿ ಲಭ್ಯವಿರಲಿವೆ ಎಂದು ಕಂಪನಿ ತಿಳಿಸಿದೆ.
ಮೊದಲ ಪ್ಲಾಸ್ಮಿಡ್ ಡಿಎನ್ಎ ಲಸಿಕೆ ಎಂದು ಕರೆಸಿಕೊಂಡಿರುವ ಝೈಕೋವ್-ಡಿ ಮೂರು ಡೋಸ್‌ಗಳ ಲಸಿಕೆಯಾಗಿದೆ. ಗುಜರಾತ್‌ನ ಅಹಮದಾಬಾದ್‌ನಲ್ಲಿನ ಕ್ಯಾಡಿಲಾ ಹೆಲ್ತ್ ಕೇರ್ ಸಂಸ್ಥೆ ಅಭಿವೃದ್ಧಿಪಡಿಸಿರುವ ಝೈಕೋವ್-ಡಿ ಕೊರೊನಾ ಲಸಿಕೆ ದಕ್ಷತೆಯು ಶೇ.66.60ರಷ್ಟಿದೆ ಎಂದು ಕಂಪನಿ ಹೇಳಿಕೊಂಡಿದೆ. ಇದು ಡೆಲ್ಟಾ ಪ್ರಭೇದದ ವಿರುದ್ಧವೂ ಪರಿಣಾಮಕಾರಿಯಾಗಿದೆ ಎಂದು ಸಂಸ್ಥೆ ಹೇಳಿಕೊಂಡಿದೆ.
ZyCov-D ಅನ್ನು ಕೇಂದ್ರ ಸರ್ಕಾರದ ಜೈವಿಕ ತಂತ್ರಜ್ಞಾನ ಇಲಾಖೆ ಮತ್ತು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ಐಸಿಎಂಆರ್) ಬೆಂಬಲದೊಂದಿಗೆ ಅಭಿವೃದ್ಧಿಪಡಿಸಲಾಗಿದೆ. ಜೆಟ್ ಇಂಜೆಕ್ಟರ್ ಬಳಸಿ ದೇಹದ ಚರ್ಮದ ಕೋಶಗಳಿಗೆ ಚುಚ್ಚುವ ಲಸಿಕೆ ಇದಾಗಿರುವುದು ವಿಶೇಷವೆನಿಸಿದೆ.












Click it and Unblock the Notifications