ಜೀರೋ ರಿಸ್ಕಿನ ಸದಾನಂದಗೌಡರ ರೈಲು ಬಜೆಟ್ಟು

ಸದಾನಂದ ಗೌಡರು ಚೊಚ್ಚಲ ರೈಲು ಬಜೆಟ್ಟು ಬಿಚ್ಚಿಟ್ಟಿದ್ದಾರೆ. ಸುವಿಶಾಲ ಭಾರತದ ಜೀವನಾಡಿಯಂತಿರುವ ಭಾರತೀಯ ರೈಲಿಗೆ ಮೋದಿ ಸರ್ಕಾರದಿಂದ ಮೊದಲ ಬಜೆಟ್ಟು ಕನ್ನಡಿಗ ಸದಾನಂದಗೌಡರ ಮೂಲಕ ಬಂದಿದೆ. ಯಥಾಪ್ರಕಾರ ಆಡಳಿತ ಪಕ್ಷಗಳು ಉಘೇ ಉಘೇ ಎಂದರೆ, ವಿರೋಧ ಪಕ್ಷಗಳು ಛೀ.. ಥೂ.. ಎಂದು ಕೂಗಾಡಿ, ಚೀರಾಡಿ ಗುಲ್ಲೆಬ್ಬಿಸಿವೆ. ಇದು ನಿರೀಕ್ಷಿತವೇ. ಭಾರತದ ಪ್ರಸ್ತುತ ರಾಜಕಾರಣದಲ್ಲಿ ಆಡಳಿತ ಮತ್ತು ವಿರೋಧ ಪಕ್ಷಗಳ ಈ ವರ್ತನೆ ಖಂಡನೀಯವಾದರೂ ನಮಗೆ ಅದು ರೂಢಿಯಾಗಿಬಿಟ್ಟಿದೆ ಅನ್ನೋದೆ ಅಸಲಿ ದುರಂತ.

ಆದ್ರೆ ಬಜೆಟ್ಟಿನ ಒಳಹೊಕ್ಕು ನೋಡಿ. ಅಪರಿಮಿತ ನಿರೀಕ್ಷೆಗಳನ್ನ ಕಟ್ಟಿಕೊಟ್ಟಿರುವ ಮೋದಿ ಸರ್ಕಾರದ ಮೊದಲ ಬಜೆಟ್ಟು ವಿಶೇಷವಾಗಿರುತ್ತೇನೋ ಅಂದುಕೊಂಡವರಿಗೆ ಮಿಶ್ರ ಭಾವ ಉಂಟಾಗಿರುವುದು ಮಾತ್ರ ಸತ್ಯ. ಭಾರತೀಯ ರೈಲು ಈ ದೇಶದ ಜೀವನಾಡಿ. ಜನಸಾಮಾನ್ಯನ ಸಾರಿಗೆ ವ್ಯವಸ್ಥೆಯ ಮೂಲ ಬಿಂದು. ದೇಶದ ಪ್ರತಿಪ್ರಜೆಯ ಮನಸ್ಸಿನಲ್ಲಿ ತನ್ನದೇ ಎನ್ನುವ ಭಾವವನ್ನ ಹೊಂದಿರುವ ರಾಷ್ಟ್ರಮಟ್ಟದ ಸೇವೆ ಭಾರತೀಯ ರೈಲು.

ಬಸ್ಸು ಮಾಲೀಕನದ್ದು ಅಥವಾ ರಸ್ತೆ ಸಾರಿಗೆ ಕಂಪೆನಿಯದ್ದು, ಲಾರಿಗಳು ಚಾಲಕನದ್ದು ಇಲ್ಲಾ ಮಾಲೀಕನದ್ದು, ವಿಮಾನವನ್ನ ಆ ಏರ್ ಲೈನು ಕಂಪೆನಿಯದ್ದೇನೊ ಅನ್ನುವ ಹಾಗೆ ನೋಡ್ತೀವೆ ಆದ್ರೆ ರೈಲು ಮಾತ್ರ ತಮ್ಮದೇ ಅನ್ನುವ ಭಾವ ಎಲ್ಲಾ ಭಾರತೀಯರಲ್ಲಿದೆ. ಅದಕ್ಕೇ ರೈಲಿನ ಬಗ್ಗೆ ವಿಪರೀತವಾದ ಫ್ಯಾನ್ಸಿ ನಮ್ಮ ದೇಶದಲ್ಲಿದೆ. ಹದಿನೈದು ಲಕ್ಷಕ್ಕೂ ಹೆಚ್ಚು ಜನರಿಗೆ ಕೆಲಸ ಕೊಟ್ಟಿರುವ ಪ್ರಪಂಚದ ಅತಿ ದೊಡ್ಡ ಆರ್ಗನೈಸೇಶನ್ ಭಾರತೀಯ ರೈಲ್ವೆ. ಇದು ಚೆಂದವಾಗಿ ಬೆಳೆಯಲಿ. ಇದರ ಚುಕ್ಕಾಣಿ ಹಿಡಿದ ಮನುಷ್ಯ ಅದಕ್ಕೊಂದು ವಿಭಿನ್ನವಾದ ಕಾಯಕಲ್ಪ ನೀಡಲಿ ಅನ್ನೋದು ಬಹುಜನರ ನಿರೀಕ್ಷೆಯಾಗಿತ್ತು. ಆದರೆ ಆ ನಿರೀಕ್ಷೆಯನ್ನ ಗೌಡರ ರೈಲು ಬಜೆಟ್ಟು ಮುಟ್ಟಿದೆಯಾ? [ರೈಲ್ವೆ ಬಜೆಟ್ಟಿನಲ್ಲಿ ಕರ್ನಾಟಕಕ್ಕೆ ಸಿಕ್ಕಿದ್ದೇನು?]

Zero risk railway budget by Sadananda Gowda

ಅದಕ್ಕಿಂತ ಮೊದಲು ನೋಡಬೇಕಾಗಿರುವದು ಭಾರತೀಯ ರೈಲ್ವೆಯೆಂಬ ಬಕಾಸುರನ ಬಗ್ಗೆ. ಭಾರತದ ಜಿಡಿಪಿಯ 1.2% ನಷ್ಟು ಹಣಕಾಸಿನ ವ್ಯವಹಾರ ಮಾಡುವ ಭಾರತೀಯ ರೈಲಿಗೆ ಸ್ಫರ್ಧೆಯೇ ಇಲ್ಲ. ರೈಲಿನ ವ್ಯವಹಾರದಲ್ಲಿ ಇವರದ್ದು ಏಕಚಕ್ರಾಧಿಪತ್ಯ. ನೂರೈವತ್ತು ವರ್ಷಗಳಿಂದಲೂ ರೈಲು ಹಳಿಗಳ ಮೇಲೆ ಓಡುತ್ತಿವೆ. ಇಲ್ಲಿ ಉದ್ರಿ ವ್ಯವಹಾರವೂ ಇಲ್ಲ, ಬಂಡವಾಳಕ್ಕೆ ಕೊರತೆಯೇ ಇಲ್ಲ. ಈಸ್ಟ್ ಇಂಡಿಯಾ ಕಂಪೆನಿಯ ಹೆಸರಿನಲ್ಲಿ ದೇಶದ ಸಂಪತ್ತನ್ನೆಲ್ಲಾ ಲೂಟಿ ಮಾಡಿದ ಬ್ರಿಟಿಷರು ಭಾರತದಾದ್ಯಂತ ಐವತ್ತು ಸಾವಿರಕ್ಕೂ ಹೆಚ್ಚಿನ ರೈಲು ಹಳಿ ಹಾಕಿ ಐದುಸಾವಿರಕ್ಕೂ ಹೆಚ್ಚು ರೈಲ್ವೆ ಸ್ಟೇಷನ್ನುಗಳನ್ನು ಕಟ್ಟಿ ಅದಕ್ಕೊಂದು ಗಂಟೆಯನ್ನೂ ಕಟ್ಟಿ ಗಂಟೂಮೂಟೆ ಕಟ್ಟಿಕೊಂಡು ತಮ್ಮ ದೇಶಕ್ಕೆ ಓಡಿಹೋಗಿದ್ದರು. ಭಯಂಕರ ಲಾಭದಲ್ಲಿ ನಡೆಯಬೇಕಾಗಿದ್ದ ಎಲ್ಲಾ ಸಾಧ್ಯತೆಗಳೂ ಭಾರತೀಯ ರೈಲ್ವೆಗಿತ್ತು. ಲಾಭವಲ್ಲದಿದ್ದರೂ ನಷ್ಟವಾಗದಂತೆ ನಡೆಸಲಿಕ್ಕೆ, ಜನರ ಯಾತ್ರೆಗೆ ಸಹಕಾರಿಯಾಗುವಂತೆ ನಡೆಸಲೇಬೇಕಾಗಿತ್ತು. ಆದರೆ ಕಳೆದ ಅರವತ್ತೈದು ವರ್ಷಗಳಲ್ಲಿ ಹಡಾಲೆಬ್ಬಿಸಿಟ್ಟಿದ್ದಾರೆ ಭಾರತೀಯ ರೈಲನ್ನ. ತನ್ನ ಭಾರಕ್ಕೆ ತಾನೇ ಕುಸಿದು ಬೀಳುವ ಸ್ಥಿತಿಗೆ ಬಂದಿರುವ ರೈಲು ಇಲಾಖೆ, ಜನರ ಸೇವೆ ಬಿಡಿ, ಪಿಂಚಣಿ, ಸಂಬಳಕ್ಕೂ ಕೈ ಹಿಸುಕಿಕೊಳ್ಳುವ ಸ್ಥಿತಿಯಲ್ಲಿದೆ.

ಆದರೆ ನೋಡಿ, ಕಳೆದ ಅರವತ್ತೈದು ವರ್ಷದಲ್ಲಿ ಭಾರತೀಯ ರೈಲು ಬಕಾಸುರನಂತೆಯೇ ವರ್ತಿಸಿದೆ. ಬ್ರಿಟಿಷರು ಹಾಕಿದ್ದ ಹಳಿಗಳು ಐವತ್ತು ಸಾವಿರಕ್ಕೂ ಹೆಚ್ಚಿನದ್ದಾದರೆ ಕಳೆದ ಅರವತ್ತೈದು ವರ್ಷದಲ್ಲಿ ನಮ್ಮೋರು ಹಾಕಿದ್ದು ಕೇವಲ ಹದಿಮೂರು ಸಾವಿರ ಕಿಲೋಮೀಟರುಗಳಷ್ಟು ಮಾತ್ರ. ಇನ್ನು ಇರೋ ರೈಲ್ವೆಯನ್ನ ಹದಿನೇಳು ಝೋನ್ ಗಳಲ್ಲಿ ಹರಿಹಂಚಿ ಕೆಲವೇ ರಾಜ್ಯದ ಜನರಿಗೆ ಬಿಟ್ಟಿ ಉದ್ಯೋಗದಾತನಾಗಿ ನಿಂತುಬಿಟ್ಟಿತು ಭಾರತೀಯ ರೈಲು. ಹದಿನೈದು ಲಕ್ಷ ಜನಕ್ಕೆ ಕೆಲಸ ಕೊಟ್ಟು, ಅವರಿಗಾಗಿಯೇ ಆಸ್ಪತ್ರೆಗಳನ್ನು ಕಟ್ಟಿ, ಅವರದ್ದೇ ಪೋಲೀಸು ಫೋರ್ಸ್ ತಯಾರು ಮಾಡಿ, ತನ್ನ ಕೆಲಸಗಾರರಿಗೆಂದೇ ಶಾಲೆ, ಕಾಲೇಜು, ಟ್ರೇನಿಂಗ್ ಇನ್ಸ್ಟಿಟ್ಯೂಟ್, ಆಟೋಟಗಳಿಗೆ ವ್ಯವಸ್ಥೆ, ಸ್ಟೇಡಿಯಂ, ಪಿಂಚಣಿ, ಪುರಸ್ಕಾರಗಳಿಗೇ ರೊಕ್ಕ ಸುರಿದು ಬೊಕ್ಕಸಕ್ಕೆ ಕನ್ನ ಹಾಕಿ ಕುಂತಿದೆ. ಅಜಮಾಸು ವರ್ಷಕ್ಕೆ ಒಂದು ಲಕ್ಷ ಕೋಟಿಯಷ್ಟು ವ್ಯವಹಾರ ಮಾಡುವ ರೈಲ್ವೆ ಇಲಾಖೆ, ತೊಂಬತ್ನಾಲ್ಕು ಸಾವಿರ ಕೋಟಿಯನ್ನ ತಿಂದು ಹಾಕುತ್ತದೆ. ಆದಾಯದ ಕಡೆ ಯೋಚನೆಯನ್ನೇ ಮಾಡದೇ ಖರ್ಚು ಮಾಡೀ ಮಾಡಿ ಪಿಂಚಣಿಗೂ ತ್ರಾಹಿ ತ್ರಾಹಿ ಅನ್ನುವ ಮಟ್ಟಿಗೆ ಬಂದು ನಿಂತಿದೆ.

ಭಾರತೀಯ ರೈಲ್ವೆ ದುಡಿಯುವ ದುಡ್ಡು ಅಜಮಾಸು ಒಂದು ಲಕ್ಷ ಕೋಟಿ. ಭಾರತದ ಟಾಪ್ ಟೂ ಸಾಫ್ಟವೇರ್ ಕಂಪೆನಿಗಳಾದ ಟಿ.ಸಿ.ಎಸ್ ಮತ್ತು ಇನ್ಫೋಸಿಸ್ ಕೂಡ ಜಂಟಿಯಾಗಿ ಇಷ್ಟೇ ಹಣವನ್ನ ದುಡಿಯುತ್ತವೆ. ಅದಕ್ಕಾಗಿ ರೈಲ್ವೆ ಇಲಾಖೆಗೆ ಬೇಕಾಗಿದ್ದು ಹದಿನೈದು ಲಕ್ಷದಷ್ಟು ಕೆಲಸಗಾರರು. ಆದರೆ ಇನ್ಫಿ ಮತ್ತು ಟಿ.ಸಿ.ಎಸ್ ಕೇವಲ ನಾಲ್ಕು ಲಕ್ಷ ಜನರಿಂದಲೇ ಇಷ್ಟು ದುಡ್ಡು ದುಡಿಯುತ್ತವೆ. ಇನ್ನು ರೈಲ್ವೆ ವಾರದ ಏಳು ದಿನವೂ ಇಪ್ಪತ್ನಾಲ್ಕು ಗಂಟೆಯೂ ದುಡಿದರೆ ಈ ಕಂಪೆನಿಗಳು ವಾರಕ್ಕೆ ಐದು ದಿನ, ದಿನಂಪ್ರತಿ ಎಂಟು ಗಂಟೆಯಂತೆ ದುಡಿಯುತ್ತವೆ. ರೈಲ್ವೆ ಇಲಾಖೆ ಹೊಸ ಸೇವೆಗಳಿಗೆ ಅಂಬೋ ಎಂದು ಸರ್ಕಾರದ ಮುಂದೆ ಬೇಡಿಕೊಂಡರೆ, ಇನ್ಫಿ, ಟಿಸಿಎಸ್ಸುಗಳು ಬ್ಯಾಂಕಿನಲ್ಲಿ ಫಿಕ್ಸೆಡ್ ಡಿಪಾಜಿಟ್ಟು ಇಟ್ಟುಕೊಂಡು ಕೂತಿವೆ. (ರೈಲ್ವೆ ಸೇವೆಯನ್ನು ಸಾಫ್ಟವೇರ್ ದಿಗ್ಗಜಗಳಿಗೆ ಹೋಲಿಸುವ ಇರಾದೆ ಲೇಖಕರದಲ್ಲ. ಆದರೆ ವ್ಯವಹಾರಗಳಲ್ಲಿರುವ ವಿಭಿನ್ನತೆಯನ್ನ ಓದುಗರ ಮುಂದಿಡುವ ಯತ್ನ ಮಾತ್ರ.)

ಇಂತಹ ರೋಗಗ್ರಸ್ತ ರೈಲ್ವೆಗೆ ಬಂದ ನರೇಂದ್ರ ಮೋದಿಯ ಕ್ಯಾಬಿನೆಟ್ಟು ಹೊಸ ಕಾಯಕಲ್ಪವನ್ನು ನೀಡುತ್ತೆ ಅನ್ನೋದು ಭಾರತೀಯರ ಆಸೆಯಾಗಿತ್ತು. ಆ ಖಾತೆಗೆ ಲಕ್ಕಿ ಗೌಡ ಅಲಿಯಾಸ್ ಸದಾನಂದಗೌಡರು ಬಂದು ಕೂತಾಗ ಅಚ್ಚರಿಯಾಗಿತ್ತಾದರೂ, ಗೌಡರು ಬಾಯಿಗಿಂತಲೂ ಕಿವಿಗೆ ಹೆಚ್ಚು ಬೆಲೆ ಕೊಡುವವರು. ರೈಲ್ವೆ ಪರಿಣಿತರೊಂದಿಗೆ ಸಮಾಲೋಚಿಸಿ ರೈಲ್ವೆಯ ಪುನರುಜ್ಜೀವನಕ್ಕೆ ಕಾಯಕಲ್ಪ ತರುತ್ತಾರೆ ಅನ್ನುವ ಭರವಸೆಗಳೂ ಹುಟ್ಟಿತ್ತು. ಆದರೆ ಬಜೆಟ್ಟಿನಲ್ಲಿ ಅದ್ಯಾವುದಕ್ಕೂ ಉತ್ತರಗಳೇ ದಕ್ಕಲಿಲ್ಲ. ಈಗಾಗಲೇ ಘೋಷಿಸಿರೋ ಯೋಜನೆಗಳನು ಮೊದಲು ಮುಗಿಸಿ ತದನಂತರ ಹೊಸಯೋಜನೆಯತ್ತ ಯೋಚಿಸಲಿದ್ದೇವೆ ಅನ್ನುವ ಗೌಡರ ಮಾತು ಪಕ್ಕಾ ಪ್ರಾಕ್ಟಿಕಲ್ ಆದರೂ ಈ ರೈಲ್ವೆ ಇಲಾಖೆಯೆಂಬ ಬಕಾಸುರನನ್ನ ಸರಿದಾರಿಗೆ ತಂದು ನಿಲ್ಲಿಸೋ ವಿಚಾರದಲ್ಲಿ ಯಾವ ಹೆಜ್ಜೆಯನ್ನೂ ಇಡದೇ ಇರುವುದನ್ನು ನೋಡಿದರೆ ಸದಾನಂದಗೌಡರದ್ದು ಜೀರೋ ರಿಸ್ಕ್ ಸ್ಟ್ರಾಟಜಿಯೆಂಬುದು ವಿದಿತವಾಗುತ್ತದೆ. ಭಾರತೀಯ ರೈಲ್ವೆಯನ್ನು ಚಿಕಚಿಕ್ಕ ವಿಭಾಗಗಳಲ್ಲಿ ನಡೆಸದೇ ಹೋದರೆ ರೈಲ್ವೆಯ ಉದ್ದಾರ ಸಾಧ್ಯವೇ ಇಲ್ಲ. ಉನ್ನತ ಸೇವೆಗಳನ್ನು ನೀಡದೇ, ಆಯಾ ಸೆಕ್ಟರ್ ಗೆ ಅನುಗುಣವಾದ ಸೇವೆ ಮತ್ತು ದರಗಳನ್ನ ನಿಗದಿಪಡಿಸದೇ ಹೋದರೆ ರೈಲ್ವೆಯ ಪುನರುತ್ಥಾನ ಅಸಾಧ್ಯ.

ವ್ಯವ್ಯಹಾರಸ್ಥರಿಗೆಲ್ಲ ಗೊತ್ತೇ ಇರುವಂತೆ: ಹೈ ರಿಸ್ಕ್ - ಹೈ ಪ್ರಾಫಿಟ್, ಲೋ ರಿಸ್ಕ್ - ಲೊ ಪ್ರಾಫಿಟ್ (ಲಾಸ್ ಕೂಡ ಆಗಬಹುದು!). ಆದ್ರೆ ಜೀರೋ ರಿಸ್ಕ್, ಜೀರೋ ಪ್ರಾಫಿಟ್. ಸದಾನಂದಗೌಡರಿಗೆ ತೆವಳುತ್ತಿರುವ ಭಾರತೀಯ ರೈಲನ್ನ ತೆವಳಿಸಿಕೊಂಡೇ ಮುಂದುವರೆಸುವ ಅನಿವಾರ್ಯತೆ ಎದುರಾಗಿದೆಯೇ ಅನ್ನಿಸುವಂತಿದೆ ಈ ಬಾರಿಯ ಬಜೆಟ್ಟು. ಭಾರತೀಯ ರೈಲ್ವೆಯಲ್ಲಿ ಹೊಸ ವಿಚಾರಧಾರೆಗಳನ್ನ ಅವರು ಎತ್ತಲಿಕ್ಕೇ ಹೋಗಿಲ್ಲ. ಯಥಾರೀತಿಯಲ್ಲಿ ಪ್ರತಿವರ್ಷದಂತೆ ಒಂದಿಷ್ಟು ಹೊಸ ರೈಲು, ಮಾರ್ಗಗಳ ಜೋಡಣೆ, ಹೊಸ ಸರ್ವೆಗಳು, ಒಂದಷ್ಟು ಹಳಿಗಳ ವಿದ್ಯುದ್ದೀಕರಣವನ್ನು ಕೊಟ್ಟು, ನಾನು ಫಿನಾಯಿಲ್ ಹಾಕಿ ರೈಲು ತೊಳೀತೀನಿ, ತಿಗಣೆ ಔಷಧಿ ಹೊಡೀತೀನಿ, ರೈಲು ಕ್ಲೀನ್ ಆಗಿ ಇಡ್ತೀನಿ, ಸೆಕ್ಯುರಿಟಿ ಹೆಚ್ಚಿಗೆ ಮಾಡ್ತೀನಿ. ಪೊಲೀಸಪ್ಪರಷ್ಟೇ ಏಕೆ, ಪೊಲಿಸಮ್ಮರನ್ನು ರೈಲು ಹತ್ತುಸ್ತೀನಿ, ಇಂಟರ್ನೆಟ್ಟು, ಈಮೇಲು ಕೊಡ್ತೀನಿ ಅನ್ನೋ ವಿಚಾರಗಳನ್ನ ಸೇರಿಸಿ, ಡಿವಿ ಗುಂಡಪ್ಪನವರ ಮಂಕುತಿಮ್ಮನ ಕಗ್ಗವನ್ನೂ ಕೋಟ್ ಮಾಡಿ ಉಸ್ಸಪ್ಪಾ ಎಂದು ತಮ್ಮ ಬಜೆಟ್ಟು ಭಾಷಣ ಮುಗಿಸಿ ಟಿಪಿಕಲ್ ಸ್ಮೈಲು ಕೊಟ್ಟಿದ್ದರಾದರೂ, ಅವರ ಹಣೆಯಲ್ಲಿ ಹರಿದಿದ್ದ ಬೆವರು, ಭಾರತೀಯ ರೈಲಿನ ನಸೀಬು ಮುಂದಿನ ದಿನಗಳಲ್ಲಿ ಹೆಂಗಿರುತ್ತೆ ಅನ್ನೋದರ ಚಿತ್ರಣವನ್ನೂ ಸೂಕ್ಷ್ಮವಾಗಿ ತೋರಿಸಿದೆ. ಇನ್ನು ಬುಲೆಟ್ ರೈಲೆಂಬ ಕಥೆಗೆ ಅವರು ಕೊಡಮಾಡಿರುವ ನೂರು ಕೋಟಿ, ಆರು ಕಾಸಿನ ಮಜ್ಜಿಗೆಯಂತೆ. ಅದು ಯಾವುದಕ್ಕೂ ಸಾಲದು.

ಭಾರತೀಯ ರೈಲನ್ನ ಬೇಕಾಬಿಟ್ಟಿಯಾಗಿ (ಆಡ್-ಹಾಕ್) ನಡೆಸಲಿಕ್ಕಾಗಲ್ಲ, ಆ ಹೆಜ್ಜೆಯಲ್ಲಿ ನಾವು ದಿಟ್ಟ ಹೆಜ್ಜೆಯಿಡಲಿದ್ದೇವೆ ಅಂದಿದ್ದು ಮೋದಿಯೆಂಬ ಜಾದೂಗಾರ. ಎಂತಹ ಸೂಕ್ತವಾದ ಮಾತಿದು. ಆದರೆ ಸದಾನಂದಗೌಡರ ಬಜೆಟ್ಟಿನಲ್ಲಿ ಆ ರೀತಿಯ ಯಾವ ದಿಟ್ಟ ಹೆಜ್ಜೆಯೂ ಕಾಣಸಿಗಲಿಲ್ಲ. ಬಕಾಸುರನಂತೆ ಬೆಳೆದಿರುವ ರೈಲ್ವೆಗೆ ಯಾವ ಕಾಯಕಲ್ಪವನ್ನಾಗಲೀ ಈ ಬಾರಿಯ ಬಜೆಟ್ಟು ತೋರಿಸಿಲ್ಲ. ನಡೆಯಲಾರದಷ್ಟು ಹೆಚ್ಚಿನ ಗಾತ್ರಕ್ಕೆ ಏರಿ ಕೂತಿರುವ ರೈಲ್ವೆ ಇಲಾಖೆಗೆ ಭರ್ಜರಿ ಸರ್ಜರಿಯ ಅವಶ್ಯಕತೆಯಿದೆ. ಆದು ಮೋದಿಗೂ ಗೊತ್ತು ಮತ್ತು ಸದಾನಂದಗೌಡರಿಗೂ ಗೊತ್ತು. ಆದರೆ ಅವರು ಅದಕ್ಕ್ಯಾಕೆ ಕೈ ಹಾಕಿಲ್ಲ ಎಂದು ಯೋಚಿಸಿದರೆ ಉತ್ತರ ಹೊಳೆಯೋದು ಕಷ್ಟವಲ್ಲ.

ಹದಿನೈದು ಲಕ್ಷಕ್ಕೂ ಹೆಚ್ಚಿನ ಉದ್ಯೋಗಿಗಳಿರುವ ಭಾರತೀಯ ರೈಲ್ವೆಯಲ್ಲಿ ಕಾರ್ಮಿಕರ ಯೂನಿಯನ್ (ಸಂಘ) ಗಳ ಮಾಫಿಯಾ ಮೊದಲ ಕಾರಣವಾದರೆ, ಎರಡನೆಯದು ರಾಜ್ಯಸಭೆಯಲ್ಲಿರೋ ಅಲ್ಪಮತ. ಹಾಗಾಗಿ ರೈಲ್ವೆಗೆ ಕಾಯಕಲ್ಪ ಕೊಡುವ ವಿಚಾರದಲ್ಲಿ. ರೈಲ್ವೆ ಇಲಾಖೆಯನ್ನು ವಿಭಿನ್ನ ರೀತಿಯಲ್ಲಿ ಮುಂದೊಯ್ಯುವ ಪ್ರಯತ್ನಕ್ಕೇ ಕೈ ಹಾಕಿಲ್ಲ. ಕಲರ್ ಕಲರ್ ಬಾವುಟಗಳನ್ನ ಹಿಡಿದಿರೋ ಅನೇಕ ಕಾರ್ಮಿಕರ ಯೂನಿಯನ್ನುಗಳು ಭಾರತೀಯ ರೈಲ್ವೆಯಲ್ಲಿವೆ. ರೈಲ್ವೆ ದುಡಿದ ಪ್ರತಿ ರೂಪಾಯಿಯೂ ರೈಲ್ವೆಯ ಕೆಲಸಗಾರರಿಗೆ ಖರ್ಚಾಗುತ್ತಿರುವದರಿಂದ ರೈಲ್ವೆ ಸೇವೆಯ ಉನ್ನತೀಕರಣಕ್ಕೆ ದುಡ್ಡಿಲ್ಲ. ತಮ್ಮ ಸವಲತ್ತುಗಳಿಗೆ ಕುಂದುಬರುತ್ತೆ ಅಂದ್ರೆ ಕೆರಳಿ ನಿಲ್ಲುವ ರೈಲ್ವೆ ಯೂನಿಯನ್ನುಗಳು ಮುಷ್ಕರಕ್ಕಿಳಿದರೆ, ಸದಾನಂದಗೌಡರ ತಲೆದಂಡ ಗ್ಯಾರಂಟಿ. ಅದಕ್ಕೇ ಗೌಡರದ್ದು ಜೀರೋ ರಿಸ್ಕ್. ಇನ್ನು ರೈಲ್ವೆಯಲ್ಲಿ ಪಾಲಿಸಿ ಮಟ್ಟದ ಬದಲಾವಣೆಗಳಾಗಬೇಕಂದರೆ ರೈಲ್ವೆ ಕಾನೂನನ್ನು ಬದಲಿಸಬೇಕಾಗುತ್ತೆ. ರೈಲ್ವೆಯ ಬೋರ್ಡ್ ಬದಲಿಸಿ, ರೈಲ್ವೆಯನ್ನು ಇಲಾಖೆಗಿಂತಲೂ ಒಂದು ಲಾಭದಾಯಕವಾದ ಕಂಪೆನಿಯನ್ನಾಗಿ ಮಾಡಲಿಕ್ಕೆ, ಕಾನೂನಿನ ತಿದ್ದುಪಡಿಗಳ ಅವಶ್ಯಕತೆಯಿದೆ. ಆದರೆ ಈ ಕಾನೂನು ರಾಜ್ಯಸಭೆಗೆ ಬಂದರೆ ಬಕ್ಕಬಾರಲು ಬಿದ್ದು, ಸರಕಾರದ ಮಾನ ಹರಾಜಾಗುತ್ತೆ. ಹಾಗಾಗಿ ಮತ್ತೆ ಜೀರೋ ರಿಸ್ಕ್ ಸ್ಟ್ರಾಟಜಿಯನ್ನು ಗೌಡರು ಮುಂದಿಟ್ಟಿದ್ದಾರೆ.

ಅರವತ್ತೈದು ಸಾವಿರ ಕಿಲೋಮೀಟರುಗಳ ಹಳಿಯನ್ನು ಜನರ ಪಾಯಿಖಾನೆಯಾಗಿಸಿರುವ ರೈಲ್ವೆ ಬೋರ್ಡು ರದ್ದಾಗಿ, ರೈಲ್ವೆ ಇಲಾಖೆ ಸರಕಾರದ ಹಿಡಿತ ಬಿಟ್ಟು ಸ್ವತಂತ್ರ ಚಿಕ್ಕ ಚಿಕ್ಕ ಕಂಪೆನಿಗಳಾಗಿ ನಡೆದಾಗಲೇ ಭಾರತೀಯ ರೈಲು ಇತರ ದೇಶಗಳ ರೈಲಿನಂತೆ ಸುಸಜ್ಜಿತವಾಗಬಲ್ಲವು. ಆದರೆ ಆ ಬದಲಾವಣೆಗಳಿಗೆ ಬಿಜೆಪಿ ಸರ್ಕಾರ ಮನಸ್ಸು ಮಾಡಿದ್ದರೂ ಪರಿಸ್ಥಿತಿ ಅವರಿಗೆ ಅನುಗುಣವಾಗುವಂತೆ ಇಲ್ಲ. ಕಾದು ನೋಡೋಣ ಮುಂದಿನ ವರ್ಷಗಳಲ್ಲಾದರೂ ಭಾರತೀಯ ರೈಲು ಸರಿಯಾದ ದಾರಿಯಲ್ಲಿ ನಡೆಯುತ್ತಾ?

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+