Tirupati Tirumala: ತಿರುಪತಿಯಲ್ಲಿ ಊಟ ಮಾಡುವಾಗ ಸಿಕ್ಕ ಜರಿ ಹುಳ: ತಪಾಸಣೆಗೆ ಒತ್ತಾಯ!
ತಿರುಪತಿಗೆ ಬೇರೆ ಬೇರೆ ರಾಜ್ಯಗಳಿಂದ ಜನ ಭೇಟಿ ನೀಡುತ್ತಾರೆ. ಕೆಲವರು ತಿಮ್ಮಪ್ಪನ ದರ್ಶನಕ್ಕಾಗಿ ತಿರುಪತಿಗೆ ಭೇಟಿ ನೀಡಿದರೆ ಇನ್ನೂ ಕೆಲವರು ಅಲ್ಲಿನ ಆಸ್ಪತ್ರೆ ಸೌಲಭ್ಯವನ್ನು ಪಡೆಯಲು ಭೇಟಿ ನೀಡುತ್ತಾರೆ. ಹೀಗೆ ತಿರುಪತಿಗೆ ತೆರಳಿದಾಗ ವ್ಯಕ್ತಿಯೊಬ್ಬರಿಗೆ ಮುಜುಗರ ಹುಟ್ಟಿಸುವಂತ ಘಟನೆಯೊಂದು ನಡೆದಿದೆ.
ಹೌದು... ವಾಸು ಎಂಬ ವ್ಯಕ್ತಿ ಮತ್ತು ಆತನ ಸ್ನೇಹಿತರು ತಿರುಪತಿಯ ಲೀಲಾಮಹಲ್ ಸೆಂಟರ್‌ನಲ್ಲಿರುವ ಪಿಎಸ್ 4 ಹೋಟೆಲ್‌ನಲ್ಲಿ ಊಟಕ್ಕಾಗಿ ಹೋಗಿದ್ದರು. ಪುತ್ತೂರು ನಿವಾಸಿಗಳಾಗಿದ್ದ ಇವರು ತಿರುಪತಿಯ ಆಸ್ಪತ್ರೆಗೆ ಬಂದಿದ್ದರು. ಆದರೆ ಹಸಿವಿನಿಂದ ಊಟಕ್ಕೆಂದು ಪಿಎಸ್ 4 ಹೋಟೆಲ್ ಗೆ ತೆರಳಿದಾಗ ಊಟದಲ್ಲಿ ಸತ್ತ ಜರಿ ಹುಳ ಪತ್ತೆಯಾಗಿದೆ.

ಹೋಟೆಲ್ ಗೆ ಹೋಗಿ ಎರಡು ಪ್ಲೇಟ್ ಊಟ ಆರ್ಡರ್ ಮಾಡಿದಾಗ ಒಂದು ತಟ್ಟೆಯಲ್ಲಿ ಜರಿ ಹುಳ ಸಿಕ್ಕಿದೆ. ಆದರೆ ಅರ್ಧ ಊಟದ ನಂತರ ಜರಿ ಹುಳ ಊಟದ ತಟ್ಟೆಯಲ್ಲಿ ಕಂಡು ವಾಸು ಹಾಗೂ ಅವರ ಸ್ನೇಹಿತರು ಬೆಚ್ಚಿಬಿದ್ದಿದ್ದಾರೆ. ತಕ್ಷಣ ಊಟ ಮಾಡುವುದನ್ನು ನಿಲ್ಲಿಸಿ ಹೋಟೆಲ್ ಸಿಬ್ಬಂದಿಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ಹಣ ಕೊಟ್ಟು ಊಟ ಮಾಡಲು ಬಂದರೆ ಇಂತಹ ಊಟ ಕೊಡುತ್ತಾರೆ ಎಂದು ಜಗಳವಾಡಿದ್ದಾರೆ. ಆದರೆ ಹೋಟೆಲ್ ಸಿಬ್ಬಂದಿ ಇವರನ್ನೇ ನಿಂದಿಸಿದ್ದರಿಂದ ವಾಸು ಹಾಗೂ ಸ್ನೇಹಿತರು ಆಹಾರ ನಿರೀಕ್ಷಕ ಅಧಿಕಾರಿಗಳಿಗೆ ದೂರು ನೀಡಿದ್ದಾರೆ.
ವಾಸು ಅವರ ದೂರಿನ ಮೇರೆಗೆ ಫೀಲ್ಡ್ ಸೇಫ್ಟಿ ಅಧಿಕಾರಿಗಳು ಪಿಎಸ್4 ಹೋಟೆಲ್‌ನಲ್ಲಿ ಪರಿಶೀಲನೆ ನಡೆಸಿದರು. ಆಹಾರದ ಗುಣಮಟ್ಟ, ಅಡುಗೆಮನೆಯ ಪರಿಸರವನ್ನು ಪರಿಶೀಲಿಸಲಾಯಿತು. ಈ ವೇಳೆ ತರಕಾರಿ ಜತೆಗೆ ಖಾದ್ಯಗಳಲ್ಲಿ ಗುಣಮಟ್ಟದ ದೋಷಗಳು ಕಂಡು ಬಂದಿವೆ.
ಅಡುಗೆ ಕೋಣೆಯನ್ನು ಪರಿಶೀಲಿಸಿದ ಬಳಿಕ ಆಹಾರ ಸುರಕ್ಷತಾ ಅಧಿಕಾರಿಗಳು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಮತ್ತೊಂದೆಡೆ ಊಟದಲ್ಲಿ ಸತ್ತ ಜರಿ ಕಾಣಿಸಿಕೊಂಡಿದ್ದರಿಂದ ವಿಚಾರ ತಿಳಿದ ಉಳಿದ ಗ್ರಾಹಕರೂ ಹೋಟೆಲ್ ಆಡಳಿತ ಮಂಡಳಿ ಜತೆ ವಾಗ್ವಾದಕ್ಕಿಳಿದರು. ಇದರಿಂದ ಹೋಟೆಲ್‌ನಲ್ಲಿ ಸ್ವಲ್ಪ ಉದ್ವಿಗ್ನತೆ ಉಂಟಾಗಿತ್ತು. ಅಧಿಕಾರಿಗಳು ಬಂದು ತಪಾಸಣೆ ನಡೆಸಿದಾಗ ಗ್ರಾಹಕರು ಸುಮ್ಮನಾದರು.












Click it and Unblock the Notifications